Digital Jagathu: ಪ್ರೈವೆಸಿ ಬಗ್ಗೆ ಬೇಡ ಅಸಡ್ಡೆ; ಡಿಜಿಟಲ್‌ ಜಗತ್ತಿನಲ್ಲಿ ವೈಯಕ್ತಿಕ ದತ್ತಾಂಶ ರಕ್ಷಣೆ ಹೇಗೆ? ಶ್‌... ಬನ್ನಿ ಅಡಗಿಕೊಳ್ಳೋಣ
ಕನ್ನಡ ಸುದ್ದಿ  /  ಜೀವನಶೈಲಿ  /  Digital Jagathu: ಪ್ರೈವೆಸಿ ಬಗ್ಗೆ ಬೇಡ ಅಸಡ್ಡೆ; ಡಿಜಿಟಲ್‌ ಜಗತ್ತಿನಲ್ಲಿ ವೈಯಕ್ತಿಕ ದತ್ತಾಂಶ ರಕ್ಷಣೆ ಹೇಗೆ? ಶ್‌... ಬನ್ನಿ ಅಡಗಿಕೊಳ್ಳೋಣ

Digital Jagathu: ಪ್ರೈವೆಸಿ ಬಗ್ಗೆ ಬೇಡ ಅಸಡ್ಡೆ; ಡಿಜಿಟಲ್‌ ಜಗತ್ತಿನಲ್ಲಿ ವೈಯಕ್ತಿಕ ದತ್ತಾಂಶ ರಕ್ಷಣೆ ಹೇಗೆ? ಶ್‌... ಬನ್ನಿ ಅಡಗಿಕೊಳ್ಳೋಣ

How to protect your privacy online: ಡಿಜಿಟಲ್‌ ವೈಯಕ್ತಿಕ ದತ್ತಾಂಶ ಕಾಯಿದೆಯನ್ನು ಸರಕಾರ ಅಪ್‌ಡೇಟ್‌ ಮಾಡುತ್ತಿದೆ. ಆದರೆ, ಆನ್‌ಲೈನ್‌ನಲ್ಲಿ ಖಾಸಗಿ ಮಾಹಿತಿ, ಪ್ರೈವೆಸಿ ಕಾಪಾಡಿಕೊಳ್ಳುವುದು ಸುಲಭವಲ್ಲ. ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಬಹುದು. ಈ ಕುರಿತು ಎಚ್ಚರವಹಿಸೋದು ಹೇಗೆ?

ಆನ್‌ಲೈನ್‌ ಪ್ರೈವೆಸಿ, ಡಿಜಿಟಲ್‌ ದತ್ತಾಂಶ ರಕ್ಷಣೆ ಕುರಿತು ಇರಲಿ ಎಚ್ಚರ
ಆನ್‌ಲೈನ್‌ ಪ್ರೈವೆಸಿ, ಡಿಜಿಟಲ್‌ ದತ್ತಾಂಶ ರಕ್ಷಣೆ ಕುರಿತು ಇರಲಿ ಎಚ್ಚರ

1960ರಲ್ಲಿ ಅಮೆರಿಕದ ಚಿತ್ರನಿರ್ದೇಶಕ ಆಲ್ಫ್ರೆಡ್ ಹಿಚ್‌ಕಾಕ್ ಅವರು ಸೈಕೋ ಎಂಬ ಸಿನಿಮಾ ಬಿಡುಗಡೆ ಮಾಡಿದ್ದರು. ಆ ಸಿನಿಮಾದಲ್ಲಿ ಟಾಯ್ಲೆಟ್‌ ಫ್ಲಶ್‌ ಮಾಡೋ ಸೀನ್‌ ಇತ್ತು. ಈ ಸಿನಿಮಾದಲ್ಲಿ ಟಾಯ್ಲೆಟ್‌ ತೋರಿಸಿರುವುದಕ್ಕೆ ಸಾಕಷ್ಟು ಚರ್ಚೆಯಾಗಿತ್ತು. ಸೈಕೊ ಸಿನಿಮಾದಲ್ಲಿ ಶವರ್‌ ತೋರಿಸಿರುವುದಕ್ಕೆ ಆ ಸಮಯದಲ್ಲಿ ಸಾಕಷ್ಟು ಆಘಾತ ವ್ಯಕ್ತವಾಗಿತ್ತು. ಇದಕ್ಕೂ ಮೊದಲು 1928ರ ಅಮೆರಿಕ ಮೂಕಿ ಚಿತ್ರ ದಿ ಕ್ರೌಡ್‌ನಲ್ಲೂ ಟಾಯ್ಲೆಟ್‌ ಕಾಣಿಸಿತ್ತು ಎನ್ನುವುದು ಬೇರೆ ವಿಷಯ. ಬಾತ್‌ರೂಂ, ಟಾಯ್ಲೆಟ್‌ ಇತ್ಯಾದಿಗಳು ನಮ್ಮ ನೆಮ್ಮದಿಯ ತಾಣ. ಅದು ನಮ್ಮ ಖಾಸಗಿ ತಾಣವೂ ಹೌದು. ಅಲ್ಲಿಗೂ ಸಿನಿಮಾ ಪ್ರವೇಶಿಸಿರುವುದು "ಖಾಸಗಿತನ"ದ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಇದೀಗ ಸುಮಾರು 63 ವರ್ಷದ ಬಳಿಕ ಪರಿಸ್ಥಿತಿ ಏನಾಗಿದೆ?

ಈಗ ಆನ್‌ಲೈನ್‌ ಖಾಸಗಿತನ ರಕ್ಷಣೆಯೇ ದೊಡ್ಡ ಸವಾಲು. ರಶ್ಮಿಕಾ ಮಂದಣ್ಣರ ಮುಖವನ್ನು ಬೇರೆ ದೇಹಕ್ಕೆ ಜೋಡಿಸಿ ಸಹಜವೆಂಬಂತೆ ತೋರಿಸಲು ಸಾಧ್ಯವಿರುವ ಡೀಪ್‌ಫೇಕ್‌ ಸವಾಲಿನ ಕಾಲದಲ್ಲಿದ್ದೇವೆ. ನಮ್ಮ ಸೋಷಿಯಲ್‌ ಮೀಡಿಯಾ ಪ್ರೊಫೈಲ್‌ಗಳು, ಮೊಬೈಲ್‌ ಆಪ್‌ಗಳು, ಇಮೇಲ್‌ಗಳು ಸೇರಿದಂತೆ ನಮ್ಮ ಆನ್‌ಲೈನ್‌ ಹಾದಿಯಲ್ಲಿ ಪ್ರತಿನಿತ್ಯ "ಖಾಸಗಿತನ" ಸೋರಿಕೆಯಾಗುತ್ತಲೇ ಇರುತ್ತವೆ. ಈ ರೀತಿ ಸೋರಿಕೆಯಾದ ಮಾಹಿತಿಗಳು ಮುಂದೊಂದು ದಿನ ನಮ್ಮ ಪಾಲಿಗೂ ದುಸ್ವಪ್ನವಾದರೆ ಅಚ್ಚರಿಯಿಲ್ಲ. ಇದನ್ನು ಓದಿ: ಆನ್‌ಲೈನ್‌ ವಂಚಕರಿಗೆ ಹಣ ಕಳುಹಿಸಿದ್ದೀರಾ, ಕಳೆದುಕೊಂಡ ಹಣ ರಿಕವರಿ ಮಾಡುವುದು ಹೇಗೆ, ಈ 5 ಕ್ರಮ ಅನುಸರಿಸಿ

ಡಿಜಿಟಲ್‌ ವೈಯಕ್ತಿಕ ದತ್ತಾಂಶ ರಕ್ಷಣೆ (ಡಿಪಿಡಿಪಿ) ಕಾಯಿದೆಯಡಿ ಸರಕಾರ ಹೊಸ ಹೊಸ ನಿಯಮಗಳನ್ನು ಸೇರಿಸಿ ಜನರ ಖಾಸಗಿತನ, ಆನ್‌ಲೈನ್‌ ಸುರಕ್ಷತೆ ಕಾಪಾಡಲು ಪ್ರಯತ್ನಿಸುತ್ತಿದೆ. ಸರಕಾರ ಇಂತಹ ನಿಯಮಗಳ ಮೂಲಕ ನಮ್ಮ ರಕ್ಷಣೆಗೆ ಪ್ರಯತ್ನಿಸಬಹುದು. ಆದರೆ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವುದು ಸುಲಭವೇ. ನಾವು ನಮ್ಮ ಈ ಆಧುನಿಕ ಜಗತ್ತಿನ ವ್ಯವಹಾರಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡುತ್ತಲೇ ಇರುತ್ತೇವೆ. ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂನಲ್ಲಿ ನಮ್ಮೆಲ್ಲ ವಿವರ ನೀಡಿರುತ್ತೇವೆ. ಆನ್‌ಲೈನ್‌ ವಂಚಕರಿಗೆ ಈಗ ನಮ್ಮ ವೈಯಕ್ತಿಕ ಮಾಹಿತಿ ಹುಡುಕುವುದು ಕಷ್ಟವೇ ಅಲ್ಲ. ಹೀಗಾಗಿ, ನಮ್ಮ ದತ್ತಾಂಶ ರಕ್ಷಣೆ ನಮ್ಮ ಹೊಣೆಯೂ ಹೌದು.

ಸೋಷಿಯಲ್‌ ಮೀಡಿಯಾದಲ್ಲಿ ನಾವು ಸೇಫ್‌ ಆಗಿದ್ದೇವೆ, ಹಾಗೆಲ್ಲ ವೈಯಕ್ತಿಕ ಮಾಹಿತಿ ನೀಡುವುದಿಲ್ಲ ಎಂದುಕೊಂಡರೂ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿರುವ ನಮ್ಮ ವಿವರ ಹೇಗೋ ಬೇರೆಯವರ ಪಾಲಾಗಬಹುದು. ನಮ್ಮ ಆಧಾರ್‌ ಕಾರ್ಡ್‌ ಅಥವಾ ಇಂತಹ ಪ್ರಮುಖ ದತ್ತಾಂಶ ವಿವರವನ್ನು ಕದಿಯುವುದು ಇ-ಕಾಲದಲ್ಲಿ ಕಷ್ಟವೆನ್ನುವಂತೆ ಕಾಣಿಸುತ್ತಿಲ್ಲ. ನಮ್ಮ ಫೋನ್‌ ನಂಬರ್‌, ನಮ್ಮ ವೈಯಕ್ತಿಕ ಮಾಹಿತಿ ಮಾರಾಟದ ಬೃಹತ್‌ ಜಾಲವೇ ಸಕ್ರಿಯವಾಗಿರುವುದು ಸುಳ್ಳಲ್ಲ. ನಾವು ನಂಬಿದವರೇ (ಕಂಪನಿಗಳು, ಬ್ಯಾಂಕ್‌ಗಳು, ಇಮೇಲ್‌ ಪ್ರೊವೈಡರ್‌ಗಳು ಇತ್ಯಾದಿ) ನಮ್ಮ ವೈಯಕ್ತಿಕ ಮಾಹಿತಿಯನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿರುವುದಿಲ್ಲ ಎಂದು ನಂಬುವುದಾದರೂ ಹೇಗೆ? ಇದನ್ನು ಓದಿದ್ದೀರಾ?: ಸ್ಮಾರ್ಟ್‌ವಾಚ್‌ ಮೂಲಕ ಜೀವ ಉಳಿಸಿಕೊಂಡವರ ಸತ್ಯಕತೆಗಳು, ನಿಮ್ಮ ಕೈಯಲ್ಲೂ ಇರಲಿ ಸ್ಮಾರ್ಟ್‌ ಕೈಗಡಿಯಾರ

ಇಂತಹ ಸಮಯದಲ್ಲಿ ಡಿಜಿಟಲ್‌ ಜಗತ್ತಿನಲ್ಲಿ ನಮ್ಮನ್ನು ನಾವು ಸಂಪೂರ್ಣ ಕಾಪಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮೈಮರೆಯುವ ಬದಲು ಸಾಧ್ಯವಿರುವಷ್ಟು ಖಾಸಗಿತನ ರಕ್ಷಣೆಗೆ ಪ್ರಯತ್ನಿಸುವುದು ಉತ್ತಮ. ಪ್ರತಿನಿತ್ಯ ಆನ್‌ಲೈನ್‌ ಬಳಸುವಾಗ ತುಸು ಎಚ್ಚರವಹಿಸುವುದು ಉತ್ತಮ.

ಆನ್‌ಲೈನ್‌ನಲ್ಲಿ ಖಾಸಗಿತನದ ರಕ್ಷಣೆ ಹೇಗೆ?

ಆಂಡ್ರಾಯ್ಡ್‌ ಫೋನ್‌ಗೂ ಐಫೋನ್‌ಗೂ ಇರುವ ವ್ಯತ್ಯಾಸ ನಿಮಗೆ ಗೊತ್ತಿರಬಹುದು. ಆಂಡ್ರಾಯ್ಡ್‌ನಲ್ಲಿ ನಮ್ಮ ವೈಯಕ್ತಿಕ ಮಾಹಿತಿಗಳ ಮೇಲೆ ಅಷ್ಟೊಂದು ನಿಗಾ ಇರುವುದಿಲ್ಲ. ಸುರಕ್ಷತೆಯೂ ಇರುವುದಿಲ್ಲ. ಸಿಕ್ಕ ಸಿಕ್ಕ ಆಪ್‌ಗಳನ್ನು ಡೌನ್‌ಲೋಡ್‌ ಮಾಡ್ತಿವಿ. ಆಪ್‌ ಕೇಳಿದ ಅನುಮತಿಗಳಿಗೆಲ್ಲ ಉದಾರವಾಗಿ ಓಕೆ ಕೊಡ್ತಿವಿ. ಈ ರೀತಿ ನಾವು ಮಾಡುವ ಟಿಕ್‌ಗಳು ನಮ್ಮ ವೈಯಕ್ತಿಕ ಮಾಹಿತಿಯನ್ನು ಅವರಿಗೆ ನೀಡುವ ಅನುಮತಿ ಎಂದು ಬಹುತೇಕ ಜನರಿಗೆ ತಿಳಿದಿರುವುದಿಲ್ಲ. ಹೀಗಾಗಿ, ಇಂತಹ ಅನುಮತಿ ನೀಡುವ ಮೊದಲು ಎಚ್ಚರವಹಿಸಿ.

ಈಗ ಸದೃಢ ಪಾಸ್‌ವರ್ಡ್‌ ಬಳಸಿದರೆ ಸಾಕಾಗದು. ಎರಡು ಹಂತದ ಅನುಮತಿ ನೀಡುವ ಟು ಫ್ಯಾಕ್ಟರ್‌ ಅಥೆಂಟಿಕೇಷನ್‌ ಈಗಿನ ತುರ್ತು. ಅಂದರೆ, ಪಾಸ್‌ವರ್ಡ್‌ ಹಾಕಿ ಲಾಗಿನ್‌ ಕೊಟ್ಟಾಗ ಕಂಪ್ಯೂಟರ್‌/ಮೊಬೈಲ್‌ ಕೋಡ್‌ವರ್ಡ್‌ ಅಥವಾ ಅನುಮತಿ ಕೇಳುತ್ತದೆ. ನೀವು ಕಂಪ್ಯೂಟರ್‌ನಲ್ಲಿ ಲಾಗಿನ್‌ ಕೊಟ್ಟಾಗ ಮೊಬೈಲ್‌ನಲ್ಲಿ ಓಕೆ ಕೊಡಬೇಕು. ಇದರಿಂದ ಹೆಚ್ಚು ಸುರಕ್ಷಿತವಾಗಿರಬಹುದು.

ಸೋಷಿಯಲ್‌ ಮೀಡಿಯಾವು ರೆಸ್ಯುಮೆ ರೀತಿ ಇರಬೇಕು ಎಂದುಕೊಂಡು ಅದರಲ್ಲಿನ "ನನ್ನ ಬಗ್ಗೆ" ವಿಭಾಗದಲ್ಲಿ ಎಲ್ಲಾ ವಿಷಯ ಬರೆಯುವ ಅಭ್ಯಾಸ ನಿಮಗಿರಬಹುದು. ನೀವು ಎಲ್ಲಿ ಹುಟ್ಟಿದ್ದೀರಿ ಎಂದು ಅಪರಿಚಿತರಿಗೆ ತಿಳಿಯುವ ಅಗತ್ಯವಿದೆಯೇ? ಯಾರಾದರೂ ನಿಮ್ಮ ಫೋನ್‌ ಅನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡು (ಒಂದು ಸ್ಪ್ಯಾಮ್‌ ಲಿಂಕ್‌ ಮೂಲಕ ಸಾಧ್ಯವಿದೆ) ನಿಮ್ಮ ಸೋಷಿಯಲ್‌ ಮೀಡಿಯಾದಲ್ಲಿರುವ ಮಾಹಿತಿಯ ಆಧಾರದಲ್ಲಿ ಹೊಸ ಸಿಮ್‌ ತೆಗೆದುಕೊಳ್ಳಬಹುದು, ಬ್ಯಾಂಕ್‌ ವ್ಯವಹಾರ ಮಾಡಬಹುದು, ಲೋನ್‌ ತೆಗೆದುಕೊಳ್ಳಬಹುದು. ಈಗಲೇ ನಿಮ್ಮ ಸೋಷಿಯಲ್‌ ಮೀಡಿಯಾ ಪ್ರೊಫೈಲ್‌ನಲ್ಲಿರುವ ವಿವರಗಳ ಕುರಿತು ಗಮನ ಹರಿಸಿ.

ಕಂಪ್ಯೂಟರ್‌ ಅಥವಾ ಮೊಬೈಲ್‌ ನಮ್ಮ ಸರ್ಚ್‌ ಇತಿಹಾಸಗಳನ್ನು ಉಳಿಸಿಕೊಳ್ಳುತ್ತದೆ. ಮುಂದಿನ ಬಾರಿ ಆನ್‌ಲೈನ್‌ ಸರ್ಚ್‌ ಮಾಡಿದಾಗ ಉಪಯೋಗಕ್ಕೆ ಬರಲಿ ಎನ್ನುವುದು ಇದರ ಉದ್ದೇಶ. ಜತೆಗೆ ನಾವು ಭೇಟಿ ನೀಡಿದ ವೆಬ್‌ಸೈಟ್‌ಗಳ ಟೆಂಪರರಿ ಇಂಟರ್‌ನೆಟ್‌ ಫೈಲ್‌ಗಳನ್ನು ರಚಿಸುತ್ತದೆ. ಇಂಟರ್‌ನೆಟ್‌ನಲ್ಲಿ ಕುಕ್ಕಿ, ಕ್ಯಾಚೆ ಇತ್ಯಾದಿ ಹಲವು ಆಯ್ಕೆಗಳು ಇರುತ್ತವೆ. ನಿಮ್ಮ ಪ್ರತಿಯೊಂದು ಚಟುವಟಿಕೆಯು ಈ ರೀತಿ ದಾಖಲಾಗುವುದು ಬೇಡ. ಆನ್‌ಲೈನ್‌ ಬ್ಯಾಂಕಿಂಗ್‌ ಅಥವಾ ಇತರೆ ಸುರಕ್ಷತೆ ಬಯಸುವ ವಿಷಯಗಳನ್ನು ಇನ್‌ಕಾಂಗ್ನಿಟೊ ಮೋಡ್‌ನಲ್ಲಿ(ಇದೇನು ಎಂದು ತಿಳಿಯದೆ ಇದ್ದರೆ Incognito Mode ಎಂದು ಗೂಗಲ್‌ನಲ್ಲಿ ಹುಡುಕಿ ತಿಳಿಯಿರಿ) ಮಾಡಿ.

ಸರ್ಚ್‌ ಮಾಡಲು ಗೂಗಲ್‌ ಮಾತ್ರ ಇರೋದಲ್ಲ. ಇದಕ್ಕಿಂತಲೂ ಹೆಚ್ಚು ಸುರಕ್ಷತೆ ನೀಡುವ ಸರ್ಚ್‌ ಎಂಜಿನ್‌ಗಳು ಇವೆ. ಹೀಗಾಗಿ, ಹಲವು ಸರ್ಚ್‌ ಎಂಜಿನ್‌ಗಳಲ್ಲಿ ಕಾರ್ಯನಿರ್ವಹಿಸುವ ಅಭ್ಯಾಸ ಬೆಳೆಸಿಕೊಳ್ಳಿ.

ನಿಮಗೆ ತಾಂತ್ರಿಕ ಜ್ಞಾನ ಇದ್ದರೆ ವಿಪಿಎನ್‌ ಅಥವಾ ವರ್ಚ್ಯುಯಲ್‌ ಪ್ರೈವೇಟ್‌ ನೆಟ್‌ವರ್ಕ್‌ ಬಳಸಬಹುದು.

ಉಚಿತ ವೈಫೈ ಮೋಹ ಬಿಡಿ. ಕಾಫಿಶಾಪ್‌, ಮಾಲ್‌ ಮುಂತಾದ ಕಡೆ ಉಚಿತವಾಗಿ ವೈಫೈ ನೀಡುತ್ತಿದ್ದಾರೆ ಎಂದು ಬಳಸಬೇಡಿ. ಇಂತಹ ವೈಫೈ ನೆಟ್‌ವರ್ಕ್‌ ಮೂಲಕವೂ ನಿಮ್ಮ ಖಾಸಗಿ ಮಾಹಿತಿಗೆ ಕನ್ನ ಹಾಕಲು ಸಾಧ್ಯವಿದೆ.

ಈ ಹಿಂದಿನ ಡಿಜಿಟಲ್‌ ಜಗತ್ತು ಅಂಕಣಗಳಲ್ಲಿ ಹಲವು ಬಾರಿ ಹೇಳಲಾಗಿದೆ. ದಯವಿಟ್ಟು ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ. ವಾಟ್ಸಪ್‌ ಮುಂತಾದ ಕಡೆ ಬರುವ ಸ್ಪಿನ್‌ ಆಂಡ್‌ ವಿನ್‌, ಕಡಿಮೆ ದರಕ್ಕೆ ಐಫೋನ್‌ ಇತ್ಯಾದಿ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ. ನಿಮ್ಮ ಮೊಬೈಲ್‌ಗೆ ಕಳ್ಳರು ನುಗ್ಗಲು ಈ ಲಿಂಕ್‌ಗಳು ದಾರಿಗಳಾಗಿವೆ. ಎಚ್ಚರದಿಂದ ಇರಿ. ಇದೇ ರೀತಿ, ಇಮೇಲ್‌ ಮುಂತಾದ ಕಡೆ ಫಿಶಿಂಗ್‌ ಸ್ಪ್ಯಾಮ್‌ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ. ಮೊಬೈಲ್‌ನಲ್ಲಿ ಸಿಕ್ಕಸಿಕ್ಕ ಆಪ್‌ಗಳನ್ನು, ಫೈಲ್‌ಗಳನ್ನು ಡೌನ್‌ಲೋಡ್‌ ಮಾಡಬೇಡಿ. ಆಂಟಿ ವೈರಸ್‌ ಸಾಫ್ಟ್‌ವೇರ್‌ಗಳನ್ನು ಬಳಸಿ. ಇದನ್ನು ಓದಿ: ಡಿಜಿಟಲ್‌ ವಂಚಕರು ಅನ್ಯ ಭಾಷೆಯಲ್ಲೇ ಮಾತನಾಡಬೇಕೆಂದಿಲ್ಲ, ಕನ್ನಡ ತುಳುವಿನಲ್ಲೂ ಯಾಮಾರಿಸಬಹುದು

ನಿಮ್ಮ ಮೊಬೈಲ್‌, ಕಂಪ್ಯೂಟರ್‌, ಸೋಷಿಯಲ್‌ ಮೀಡಿಯಾ ಮುಂತಾದ ಕಡೆ ಇರುವ ಪ್ರೈವೆಸಿ ಸೆಟಪ್‌ಗಳನ್ನು ಇನ್ನೊಮ್ಮೆ ಪರಿಶೀಲಿಸಿ. ಯಾವುದಕ್ಕೆ ಅನುಮತಿ ನೀಡಬೇಕು, ಯಾವುದಕ್ಕೆ ಅನುಮತಿ ನೀಡಬಾರದು ಎಂಬ ಜ್ಞಾನ ಇರಲಿ. ಡಿಜಿಟಲ್‌ ಜಗತ್ತು ಈಗ ನಮ್ಮ ಆಲೋಚನೆಗೆ ನಿಲುಕದಷ್ಟು ನಿಗೂಢವಾಗಿದೆ. ಯಾವ ರೀತಿಯಲ್ಲಿ ಬೇಕಾದರೂ ಆನ್‌ಲೈನ್‌ ವಂಚನೆಗಳು ನಡೆಯಬಹುದು. ಕೆಲವು ಸೆಕೆಂಡ್‌ ಮೈಮರೆತರೂ ದೊಡ್ಡ ಹೊಡೆತ ಬೀಳಬಹುದು. ಹೀಗಾಗಿ, ಪ್ರತಿನಿತ್ಯ ಆನ್‌ಲೈನ್‌ ಜಗತ್ತಿನಲ್ಲಿ ತುಸು ಹೆಚ್ಚೇ ಎಚ್ಚರ ಇರಲಿ.

  • ಪ್ರವೀಣ್‌ ಚಂದ್ರ ಪುತ್ತೂರು

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್‌ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in, ht.kannada@htdigital.in

 

Whats_app_banner