ಕನ್ನಡ ಸುದ್ದಿ  /  ಜೀವನಶೈಲಿ  /  ಆಧಾರ್ ಕಾರ್ಡ್‌ ಅಪ್ಡೇಟ್‌ಗೆ ಗಡುವು; ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್ಡೇಟ್ ಮಾಡುವ ಸರಳ ಹಂತ ಇಲ್ಲಿದೆ

ಆಧಾರ್ ಕಾರ್ಡ್‌ ಅಪ್ಡೇಟ್‌ಗೆ ಗಡುವು; ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್ಡೇಟ್ ಮಾಡುವ ಸರಳ ಹಂತ ಇಲ್ಲಿದೆ

ಆಧಾರ್‌ ಕಾರ್ಡ್‌ ಅಪ್ಡೇಟ್‌ ಮಾಡಿಸಿಕೊಳ್ಳಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಗಡುವು ನೀಡಿದೆ. ಈ ದಿನಕ್ಕೂ ಮುನ್ನ ಅಪ್ಡೇಟ್‌ ಮಾಡದಿದ್ದರೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಆನ್‌ಲೈನ್‌ ಅಪ್ಡೇಟ್‌ ಪ್ರಕ್ರಿಯೆಗೆ ಸರಳ ಪ್ರಕ್ರಿಯೆ ಇಲ್ಲಿದೆ.

ಆನ್‌ಲೈನ್‌ನಲ್ಲಿ ಉಚಿತವಾಗಿ ಆಧಾರ್ ಕಾರ್ಡ್‌ ಅಪ್ಡೇಟ್‌ ಮಾಡುವ ಸರಳ ಹಂತ
ಆನ್‌ಲೈನ್‌ನಲ್ಲಿ ಉಚಿತವಾಗಿ ಆಧಾರ್ ಕಾರ್ಡ್‌ ಅಪ್ಡೇಟ್‌ ಮಾಡುವ ಸರಳ ಹಂತ

ಭಾರತೀಯರ ಪ್ರಮುಖ ಗುರುತಿನ ಚೀಟಿ ಆಧಾರ್ ಕಾರ್ಡ್‌ಗೆ (Aadhaar Card) ಬಳಕೆದಾರರ ವಿವರಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್‌ಡೇಟ್ ಮಾಡಲು ಜೂನ್ 14ರ ಶುಕ್ರವಾರ ಕೊನೆಯ ದಿನವಾಗಿದೆ. ಇದಾದ ಬಳಿಕ, ಆನ್‌ಲೈನ್‌ ಮೂಲಕ ಅಪ್ಡೇಟ್‌ ಮಾಡಲು ಶುಲ್ಕ ಪಾವತಿಸಬೇಕಾಗುತ್ತದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಅಪ್ಡೇಟ್‌ ಪ್ರಕ್ರಿಯೆಯನ್ನು ಸರಳವಾಗಿಸಿದ್ದು, ಇಂದು ಸಂಜೆಯ ಒಳಗೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಅಪ್ಡೇಟ್ ಪ್ರಕ್ರಿಯೆ ಪೂರ್ಣಗೊಳಿಸಬಹುದು. ನಾಳೆಯಿಂದ ಯಾವುದೇ ರೀತಿಯ ವೈಯಕ್ತಿಕ ಮಾಹಿತಿ ಅಪ್‌ಡೇಟ್‌ ಮಾಡಬೇಕಿದ್ದರೂ ಶುಲ್ಕ ಪಾವತಿಸಬೇಕಾಗುತ್ತದೆ.

ಈ ಹಿಂದೆ ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್ಡೇಟ್‌ ಮಾಡಲು ಮಾರ್ಚ್ 14ರವರೆಗಿನ ಗಡುವು ನೀಡಲಾತ್ತು. ಆ ಬಳಿಕ, ಅವಧಿಯನ್ನು ಜೂನ್ 14ಕ್ಕೆ ವಿಸ್ತರಿಸಲಾಯ್ತು. 10 ವರ್ಷಕ್ಕೂ ಹೆಚ್ಚು ಹಳೆಯ ಆಧಾರ್ ಹೊಂದಿರುವವರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಇದರಲ್ಲಿ ಹೆಸರು ಬದಲಾವಣೆ, ಜನ್ಮದಿನಾಂಕ ಬದಲಾವಣೆ, ಫೋಟೋ ಬದಲಾವಣೆ ಅಥವಾ ವಿಳಾಸ ಬದಲಾಯಿಸಲು ಇಚ್ಛಿಸಿದರೆ, ನೀವು ಅದನ್ನು ಅಪ್ಡೇಟ್ ಮಾಡಬಹುದು.

ನೀವು ಆಧಾರ್‌ ಕಾರ್ಡ್‌ ಪಡೆದು ಅಥವಾ, ಅಪ್ಡೇಟ್‌ ಮಾಡದೆ 10 ವರ್ಷಗಳಿಗಿಂತ ಹೆಚ್ಚು ಸಮಯವಾಗಿದ್ದರೆ, ಅಪ್ಡೇಟ್ ಮಾಡುವುದು ಅವಶ್ಯಕವಾಗಿದೆ. ಸರ್ಕಾರದ ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ನೀಡಿ, ಇಲ್ಲಿ ಉಚಿತವಾಗಿ ಈ ಪ್ರಕ್ರಿಯೆಯನ್ನು ಮಾಡಬಹುದು. ಹಾಗಿದ್ರೆ, ಉಚಿತವಾಗಿ ಆಧಾರ್ ಅಪ್ಡೇಟ್‌ ಹೇಗೆ ಮಾಡಬಹುದು ಎಂಬ ಸರಳ ವಿಧಾನವನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಟ್ರೆಂಡಿಂಗ್​ ಸುದ್ದಿ

ಸರ್ಕಾರದ ಸುತ್ತೋಲೆಯ ಪ್ರಕಾರ ಕಾರ್ಡ್‌ ಪಡೆದು 10ಕ್ಕೂ ಹೆಚ್ಚು ವರ್ಷಗಳಾಗಿದ್ದು ಅದನ್ನು ಅಪ್ಡೇಟ್ ಮಾಡದೇ ಇರುವವರು, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಹಲವರು ಕಾರ್ಡ್ ಮಾಡಿಸಿದಾಗಿನಿಂದ ಅದನ್ನು ಅಪ್ಡೇಟ್ ಮಾಡಿಸಿಲ್ಲ. ಸಣ್ಣ ವಯಸ್ಸಿನಲ್ಲಿ ಕಾರ್ಡ್‌ ಮಾಡಿಸಿದ್ದರೆ, ಈಗ ಬೆರಳಚ್ಚು ಗುರುತು ಮಾಸಿರಬಹುದು. ಅಥವಾ ಮೊದಲಿನಂತೆ ಸರಿಯಾಗಿ ಮೂಡದಿರಬಹುದು. ಹೀಗಾಗಿ, ಕಾರ್ಡ್‌ಗೆ ಬಳಕೆದಾರರ ಬಯೋಮೆಟ್ರಿಕ್ ಮಾಹಿತಿ ಅಪ್ಡೇಟ್ ಮಾಡಿಸುವುದು ಅಗತ್ಯ.

ಆಧಾರ್‌ ಕಾರ್ಡ್ ಅಪ್ಡೇಟ್‌ ಮಾಡುವ ವಿಧಾನ

  • ಹಂತ 1: ಮೊದಲಿಗೆ UIDAIನ https://uidai.gov.in/ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಹಂತ 2: ವೆಬ್‌ಸೈಟ್‌ನಲ್ಲಿ 'My Aadhaar' ಮೇಲೆ ಕ್ಲಿಕ್ ಮಾಡಿ, ಈ ಮೆನುವಿನಿಂದ 'Update Your Aadhaar' ಆಯ್ಕೆ ಮೇಲೆ ಕ್ಲಿಕ್ ಮಾಡಿ. ‌
  • ಹಂತ 3: ಇಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ರಿಜಿಸ್ಟರ್‌ಡ್‌ ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ಲಾಗಿನ್ ಆಗಿ.
  • ಹಂತ 4: ಮುಂದಿನ ಪೇಜ್‌ನಲ್ಲಿ ನೀವು ಆಧಾರ್ ಕಾರ್ಡ್ ಅಪ್ಡೇಟ್‌ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  • ಹಂತ 5: ಇಲ್ಲಿ ನೀವು ಅಪ್ಡೇಟ್‌ ಮಾಡಬೇಕಾದ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. (ಹೆಸರು, ಫೋಟೋ, ಮೊಬೈಲ್ ಸಂಖ್ಯೆ, ವಿಳಾಸ ಬದಲಾಯಿಸಬೇಕಿದ್ದರೆ ಆ ಆಯ್ಕೆಯನ್ನು ಆಯ್ಕೆ ಮಾಡಿ).
  • ಹಂತ 6: ನಂತರ, ಆಧಾರ್ ಅಪ್ಡೇಟ್‌ ಮಾಡಲು ಮುಂದುವರಿಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ಹಂತ 7: ಅಪ್ಡೇಟ್ ಮಾಡಬೇಕಾದ ಆಯ್ಕೆಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಎಲ್ಲವೂ ಸರಿ ಇದ್ದರೆ ಸಬ್ಮಿಟ್ ಮಾಡಬಹುದು.
  • ಹಂತ 8: ಈ ವೇಳೆ ನಿಮಗೆ ಒಂದು ವಿನಂತಿ ಸಂಖ್ಯೆ ಬರುತ್ತದೆ. ಈ ನಂಬರ್‌ ಸೇವ್ ಮಾಡಿ ಇಟ್ಟುಕೊಳ್ಳಿ.
  • ಹಂತ 9: ಅಪ್ಡೇಟ್ ಮಾಡಿದ ಕೆಲವೇ ದಿನಗಳಲ್ಲಿ ಅಪ್ಡೇಟೆಟ್ ಆಧಾರ್ ಕಾರ್ಡ್ ನಿಮ್ಮ ವಿಳಾಸಕ್ಕೆ ಬರುತ್ತದೆ.

ಆನ್‌ಲೈನ್‌ ಅಪ್ಡೇಟ್‌ ಆಗದಿದ್ದರೆ ಏನು ಮಾಡಬೇಕು?

ಒಂದು ವೇಳೆ ನಿಮಗೆ ಆನ್‌ಲೈನ್‌ನಲ್ಲಿ ಅಪ್ಡೇಟ್‌ ಮಾಡಲು ಸಾಧ್ಯವಾಗದಿದ್ದರೆ, ಆಧಾರ್ ಕೇಂದ್ರಗಳಿಗೆ ಹೋಗಿ ಅಪ್ಡೇಟ್‌ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇಲ್ಲಿ ಅಪ್ಡೇಟ್‌ ಪ್ರಕ್ರಿಯೆಗೆ 50 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.