How to use ChatGPT: ಚಾಟ್‌ಜಿಪಿಟಿ ಬಳಕೆ ಮಾಡುವುದು ಹೇಗೆ? ಓಪನ್‌ಎಐ ಚಾಟ್‌ಜಿಪಿಟಿ ಕಲಿಯಲು ಬಯಸುವ ಆರಂಭಿಕರಿಗೆ ಇಲ್ಲಿದೆ ಮಾಹಿತಿ
How to use ChatGPT: ಓಪನ್‌ಎಐ ಚಾಟ್‌ಜಿಪಿಟಿಯ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸುವುದು ಹೇಗೆ? ಉಚಿತವಾಗಿ ಚಾಟ್‌ಜಿಪಿಟಿ ಮೂಲಕ ಉತ್ತರಗಳನ್ನು ಪಡೆಯುವುದು ಹೇಗೆ? ಸೇರಿದಂತೆ ನಿಮಲ್ಲಿರುವ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಈಗ ಎಲ್ಲೆಡೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಥವಾ ಎಐ ಸುದ್ದಿಯಲ್ಲಿದೆ. ಇದೇ ಸಮಯದಲ್ಲಿ ಚಾಟ್‌ಜಿಪಿಟಿ ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ. ಚಾಟ್‌ಜಿಪಿಟಿ ಬಳಸುವುದು ಹೇಗೆ ಎಂದು ಕಲಿಯಬಯಸುವವರಿಗೆ ಇಲ್ಲೊಂದಿಷ್ಟು ಉಪಯುಕ್ತ ಮಾಹಿತಿಗಳನ್ನು ನೀಡಲಾಗಿದೆ. ಟ್ವಿಟ್ಟರ್, ಗೂಗಲ್, ಅಮೆಜಾನ್, ಮೈಕ್ರೊಸಾಫ್ಟ್, ಮೆಟಾ ಸೇರಿದಂತೆ ಹಲವು ಕಂಪನಿಗಳು ಈಗ ಎಐ ಬಳಸುತ್ತಿವೆ. ನೀವು ಬಳಸುವ ಸ್ನಾಪ್‌ಚಾಟ್‌ನಲ್ಲಿಯೂ ಎಐ ಆಗಮಿಸಿದೆ. ಎಲ್ಲೆಡೆ ಎಐ ಬಳಕೆ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಈಗಷ್ಟೇ ಚಾಟ್‌ಜಿಪಿಟಿ ಕುರಿತು ಆಸಕ್ತಿ ವಹಿಸುವವರಿಗಾಗಿ ಇಲ್ಲೊಂದಿಷ್ಟು ವಿವರಗಳಿವೆ.
ಚಾಟ್‌ಜಿಪಿಟಿ ಬಳಸುವುದು ಹೇಗೆ?
ದಯವಿಟ್ಟು ಮೊಬೈಲ್ ಆಪ್ ಸ್ಟೋರ್‌ಗೆ ಹೋಗಿ ಚಾಟ್‌ಜಿಪಿಟಿ ಎಂದು ಹುಡುಕಬೇಡಿ. ಆಪ್ ಮಾದರಿಯಲ್ಲಿ ಚಾಟ್‌ಜಿಪಿಟಿ ಲಭ್ಯವಿಲ್ಲ. ಆದರೆ, ಮೊಬೈಲ್‌ನಲ್ಲಿರುವ ಕ್ರೋಮ್ ಇತ್ಯಾದಿ ಬ್ರೌಸರ್‌ಗಳ ಮೂಲಕ ಪ್ರಯತ್ನಿಸಬಹುದು. ಕಂಪ್ಯೂಟರ್‌ನಲ್ಲಿ ಇನ್ನಷ್ಟು ಸುಲಭವಾಗಿ ಬಳಸಬಹುದು.
ಮೊದಲಿಗೆ chat.openai.com ವೆಬ್ ಲಿಂಕ್ ಪ್ರವೇಶಿಸಿ. ನಿಮ್ಮ ಇಮೇಲ್ ಖಾತೆ ನೀಡಿ ಅಕೌಂಟ್ ರಚಿಸಿ. ಗೂಗಲ್ ಅಥವಾ ಮೈಕ್ರೊಸಾಫ್ಟ್ ಖಾತೆ ಇದ್ದರೆ ಅದರ ಮೂಲಕವೂ ಸೈನ್ ಅಪ್ ಆಗಬಹುದು. ಓಪನ್‌ಎಪಿಐ ಚಾಟ್‌ಜಿಪಿಟಿಯಲ್ಲಿ ಖಾತೆ ತೆರಲು ಒಂದು ವ್ಯಾಲಿಡ್ ಆಗಿರುವ ಫೋನ್ ನಂಬರ್ ಬೇಕು. ಫೋನ್ ಸಂಖ್ಯೆ ಮೂಲಕವೇ ವೇರಿಫಿಕೇಷನ್ ಮಾಡಬೇಕು.
ಉಚಿತವಾಗಿ ಚಾಟ್‌ಜಿಪಿಟಿ ಬಳಸಿ
ಈ ರೀತಿ ಲಾಗಿನ್ ಆದ ಬಳಿಕ ನಿಮಗೆ ಡಿಸ್‌ಕ್ಲೈಮರ್ ಪುಟ ಕಾಣಿಸುತ್ತದೆ. ಅಲ್ಲೆಲ್ಲ ಅನುಮತಿಗಳಿಗೆ ಟಿಕ್ ಮಾಡಿದ ಬಳಿಕ ಮುಂದುವರೆಯಿರಿ. ಅಂದಹಾಗೆ, ಚಾಟ್‌ಜಿಪಿಟಿಯನ್ನು ಉಚಿತವಾಗಿ ಬಳಸಬಹುದು. ಹಣ ಪಾವತಿಸುವ ಅಗತ್ಯವಿಲ್ಲ.
ಚಾಟ್‌ಜಿಪಿಟಿ ಬಳಸುವುದನ್ನು ಕಲಿಯಿರಿ
ನ್ಯೂ ಚಾಟ್ ಮತ್ತು ಹೈಡ್ ಸೈಡ್‌ಬಾರ್ ಬಟನ್ ಎಡಬದಿಯಲ್ಲಿ ಇರುತ್ತದೆ. ಅಲ್ಲಿ ನ್ಯೂ ಚಾಟ್ ಎಂಬ ಆಯ್ಕೆಯನ್ನು ಆಯ್ಕೆ ಮಾಡುವ ಮೂಲಕ ಹೊಸದಾಗಿ ಸಂವಹನ ಆರಂಭಿಸಬಹುದು.
ಇಲ್ಲಿ ಕೇಳುವ ಮಾಹಿತಿಯು ಹೆಚ್ಚು ಸ್ಪಷ್ಟವಾಗಿದ್ದಷ್ಟು ಹೆಚ್ಚು ಉತ್ತಮವಾದ ಉತ್ತರ ದೊರಕುತ್ತದೆ. ಉದಾಹರಣೆಗೆ ನೀವು ಕೆಟ್ಟ ಇಂಗ್ಲಿಷ್‌ನಲ್ಲಿ ಒಂದು ಪುಟ ಟೈಪ್ ಮಾಡಿರಬಹುದು. ಅದನ್ನು ಅಲ್ಲಿಗೆ ಪೇಸ್ಟ್ ಮಾಡಿ, ಇದನ್ನು ಚೆನ್ನಾಗಿರುವ ಇಂಗ್ಲಿಷ್‌ನಲ್ಲಿ ಬರೆದು ಕೊಡು ಎಂದು ತಿಳಿಸಿದರೆ ಅದು ನಿಮಗೆ ಆಶ್ಚರ್ಯವಾಗುವಷ್ಟು ಅಂದವಾಗಿ ಬರೆದುಕೊಡುತ್ತದೆ, ಮತ್ತೆ ಅದಕ್ಕೆ ಇನ್ನಷ್ಟು ಸರಳ ಭಾಷೆಯಲ್ಲಿ ಬರೆದುಕೊಡು ಎಂದರೆ ಅದು ಇನ್ನಷ್ಟು ಸರಳವಾಗಿ ಬರೆಯುತ್ತದೆ
ಚಾಟ್ ಇತಿಹಾಸ: ಎಡಬದಿಯ ಸೈಡ್‌ಬಾರ್‌ನಲ್ಲಿ ನೀವು ಈ ಹಿಂದೆ ಮಾಡಿದ ಚಾಟ್‌ನ ಇತಿಹಾಸವೂ ಇರುತ್ತದೆ. ಹಳೆಯ ಸಂವಹನ ಬೇಕಿದ್ದರೆ ಅದನ್ನೂ ನೋಡಬಹುದು.
ಅಕೌಂಟ್: ನಿಮ್ಮ ಇಮೇಲ್ ವಿಳಾಸ ಅಥವಾ ಹೆಸರು ಇರುವಲ್ಲಿ ಕ್ಲಿಕ್ ಮಾಡಿದರೆ ನಿಮಗೆ ನಿಮ್ಮ ಅಕೌಂಟ್ ಕಾಣಿಸುತ್ತದೆ.
ಯುವರ್ ಪ್ರಾಂಪ್ಟ್ಟ್: ಇಲ್ಲಿ ಪ್ರಶ್ನೆಗೆ ಪ್ರಾಂಪ್ಟ್ ಎಂದು ಹೇಳಲಾಗುತ್ತದೆ. Your prompts ಆಯ್ಕೆಯನ್ನು ಕ್ಲಿಕ್ ಮಾಡಿ ಅದನ್ನು ಬಳಸಬಹುದು.
ರಿಜನರೇಟರ್ ರೆಸ್ಪಾನ್ಸ್: ಚಾಟ್‌ಜಿಪಿಟಿ ನಿಮಗೆ ನೀಡಿದ ಮಾರುತ್ತರ ಪೂರ್ತಿಯಾಗಿ ದೊರಕದೆ ಇದ್ದರೆ ಅಥವಾ ಅದು ನೀಡಿದ ಉತ್ತರ ನಿಮಗೆ ತೃಪ್ತಿ ನೀಡದೆ ಇದ್ದರೆ ರಿಜನರೇಟ್ ರೆಸ್ಪಾನ್ಸ್ ಅನ್ನು ಕ್ಲಿಕ್ ಮಾಡಬಹುದು.
ಚಾಟ್‌ಜಿಪಿಟಿಯನ್ನು ಅತ್ಯುತ್ತಮವಾಗಿ ಬಳಸಿ
ಕನ್ನಡದಲ್ಲಿಯೂ ಚಾಟ್‌ಜಿಪಿಟಿ ಉತ್ತರ ನೀಡುತ್ತದೆ. ಆದರೆ, ಅದಿನ್ನೂ ಕನ್ನಡ ಕಲಿಯುತ್ತಿದೆ ಅಷ್ಟೇ. ಹೀಗಾಗಿ, ಹೆಚ್ಚು ಉತ್ತಮವೆನಿಸುವ ಉತ್ತರಗಳು ಅಥವಾ ಭಾಷೆ ಶೈಲಿ ಈಗ ದೊರಕದು. ಇಂಗ್ಲಿಷ್‌ನಲ್ಲಿ ಅತ್ಯುತ್ತಮವಾಗಿ ಇದು ಮಾಹಿತಿ ನೀಡುತ್ತದೆ.
- ಚಾಟ್‌ಜಿಪಿಟಿಯಲ್ಲಿ ಸರಳವಾಗಿ ಕೇಳಿ. ಪ್ರಶ್ನೆ ನೇರವಾಗಿ ಕೇಳಿ. ಸುತ್ತುಬಳಸಿ ಪ್ರಶ್ನೆ ಕೇಳಬೇಡಿ.
- ಪ್ರಶ್ನೆ ನಿರ್ದಿಷ್ಟವಾಗಿರಲಿ. ಸ್ಪೆಸಿಫಿಕ್ ಪ್ರಶ್ನೆಗಳಿಗೆ ಚಾಟ್‌ಜಿಪಿಟಿ ಹೆಚ್ಚು ನಿಖರವಾಗಿ ಉತ್ತರ ನೀಡುತ್ತದೆ.
- ವಿಶೇಷ ಮತ್ತು ಕ್ರಿಯೆಟಿವ್ ಆಗಿ ಅದರಲ್ಲಿ ಪ್ರಶ್ನೆ ಕೇಳಬಹುದು. ಒಟ್ಟಾರೆ, ಹಲವು ರೀತಿಯಲ್ಲಿ ಪ್ರಶ್ನೆ ಕೇಳಿ ನಿಮಗೆ ತೃಪ್ತಿದಾಯಕವಾದ ಉತ್ತರ ಪಡೆಯಲು ಯತ್ನಿಸಿ.
ನೆನಪಿಡಿ, ಯಂತ್ರಗಳು ನಮಗಿಂತ ಚೆನ್ನಾಗಿ ಯೋಚಿಸಬಲ್ಲದು, ನಮಗಿಂತ ಹೆಚ್ಚು ಬುದ್ಧಿವಂತಿಕೆ ತೋರಬಹುದು. ಮನುಷ್ಯರು ಸೃಷ್ಟಿಸಿದ ಯಂತ್ರ, ತಂತ್ರಜ್ಞಾನ ಮನುಷ್ಯರನ್ನೇ ಮೀರಿಸಬಹುದು. ಆದರೆ, ಚಾಟ್‌ಜಿಪಿಟಿಯಂತಹ ತಂತ್ರಜ್ಞಾನವೇ ಎಲ್ಲಾ ಅಲ್ಲ. ಪ್ರತಿನಿತ್ಯ ಪುಸ್ತಕ ಓದಲು, ಇಂಟರ್‌ನೆಟ್‌ನಲ್ಲಿ ಮಾಹಿತಿ ಓದಲು ಮರೆಯಬೇಡಿ. ಕೆಲವೊಂದು ಪ್ರಶ್ನೆಗಳಿಗೆ ನಿಮ್ಮ ಮಿದುಳಿಗಿಂತ ಅತ್ಯುತ್ತಮವಾಗಿ ಉತ್ತರ ನೀಡುವ ತಂತ್ರಜ್ಞಾನ ಇನ್ನೂ ಯಾವುದೂ ಬಂದಿಲ್ಲ ಎನ್ನುವುದು ಸದಾ ನೆನಪಿರಲಿ. ಹೀಗಾಗಿ, ಶಾಲಾ ಕಾಲೇಜುಗಳ ಅವಶ್ಯಕತೆಗಳಿಗೆ ಇಂತಹ ಚಾಟ್‌ಜಿಪಿಟಿಯನ್ನು ಬಳಸದೆ ನಿಮ್ಮ ಮಿದುಳು, ಬುದ್ಧಿವಂತಿಕೆ, ಪ್ರತಿಭೆಯನ್ನು ಬಳಸಿ.
