ಒಂದು ದೇಶ, ಒಂದೇ ಚಾರ್ಜರ್; ಭಾರತದಲ್ಲಿ ಬರಲಿದೆ ನೂತನ ನಿಯಮ, ಟೆಕ್ ಲೋಕದಲ್ಲಿ ಪ್ರಮುಖ ಬದಲಾವಣೆ
ಕನ್ನಡ ಸುದ್ದಿ  /  ಜೀವನಶೈಲಿ  /  ಒಂದು ದೇಶ, ಒಂದೇ ಚಾರ್ಜರ್; ಭಾರತದಲ್ಲಿ ಬರಲಿದೆ ನೂತನ ನಿಯಮ, ಟೆಕ್ ಲೋಕದಲ್ಲಿ ಪ್ರಮುಖ ಬದಲಾವಣೆ

ಒಂದು ದೇಶ, ಒಂದೇ ಚಾರ್ಜರ್; ಭಾರತದಲ್ಲಿ ಬರಲಿದೆ ನೂತನ ನಿಯಮ, ಟೆಕ್ ಲೋಕದಲ್ಲಿ ಪ್ರಮುಖ ಬದಲಾವಣೆ

ಸ್ಮಾರ್ಟ್​ಫೋನ್ ಕಂಪನಿಗಳ ಚಾರ್ಜರ್ ಮತ್ತು ಚಾರ್ಜಿಂಗ್ ಪೋರ್ಟ್​ಗೆ ಸಂಬಂಧಿಸಿದಂತೆ ಬಂದಿರುವ ನಿಯಮಗಳು ಅನಿಯಂತ್ರಿತವಾಗಿವೆ. ಆದರೆ ಇದೀಗ ಭಾರತ ಸರ್ಕಾರವು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹೊರಟಿದೆ. ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಗೆ ಯುಎಸ್‌ಬಿ ಟೈಪ್- ಸಿ ಚಾರ್ಜರ್ ಅನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ.

ಭಾರತದಲ್ಲಿ ಬರಲಿದೆ ನೂತನ ನಿಯಮ, ಟೆಕ್ ಲೋಕದಲ್ಲಿ ಪ್ರಮುಖ ಬದಲಾವಣೆ
ಭಾರತದಲ್ಲಿ ಬರಲಿದೆ ನೂತನ ನಿಯಮ, ಟೆಕ್ ಲೋಕದಲ್ಲಿ ಪ್ರಮುಖ ಬದಲಾವಣೆ (pexel)

ಯುರೋಪಿಯನ್ ಯೂನಿಯನ್‌ನಲ್ಲಿರುವಂತೆ, ಭಾರತದಲ್ಲಿಯೂ ಚಾರ್ಜರ್ ನಿಯಮವನ್ನು ಜಾರಿಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ. ವರದಿಗಳ ಪ್ರಕಾರ, ಕಾಮನ್ ಚಾರ್ಜಿಂಗ್ ಪೋರ್ಟ್ ನಿಯಮವನ್ನು ಜಾರಿಗೆ ತರಲು ಸರ್ಕಾರ ಯೋಚಿಸುತ್ತಿದೆ. ಈ ನಿಯಮವನ್ನು ಜಾರಿಗೆ ತಂದರೆ, ಎಲ್ಲಾ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳಿಗೆ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಇರಲಿದೆ. ಸರ್ಕಾರವು ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಸಾಮಾನ್ಯಗೊಳಿಸಬಹುದು ಎನ್ನಲಾಗಿದೆ. ಯುರೋಪಿಯನ್ ಒಕ್ಕೂಟವು 2022ರಲ್ಲಿ ಈ ನಿಯಮವನ್ನು ಅಳವಡಿಸಿಕೊಂಡಿದೆ. ನಂತರ ಆ್ಯಪಲ್ ಐಫೋನ್‌ನಲ್ಲಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಸಹ ಒದಗಿಸಬೇಕಾಗಿತ್ತು. ಈ ವರ್ಷಾಂತ್ಯದೊಳಗೆ ಸರ್ಕಾರ ಈ ಬಗ್ಗೆ ಘೋಷಣೆ ಮಾಡಲಿದೆ.

ಸರ್ಕಾರವು ಒಂದು ದೇಶ ಒಂದು ಚಾರ್ಜರ್ ನಿಯಮವನ್ನು ಜಾರಿಗೆ ತಂದರೆ ಗ್ರಾಹಕರು ತಮ್ಮ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ಒಂದೇ ಚಾರ್ಜರ್‌ನಿಂದ ಚಾರ್ಜ್ ಮಾಡಬಹುದು. ಅಲ್ಲದೆ ಮುಂದಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳಿಗೆ ಕೂಡ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಸರ್ಕಾರ ಕಡ್ಡಾಯಗೊಳಿಸುತ್ತದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಗೆ ಒಂದೇ ಚಾರ್ಜಿಂಗ್ ಪೋರ್ಟ್ ಅನ್ನು ಬಳಸಬೇಕೆಂದು ಬಯಸುತ್ತಿದೆ. ಲ್ಯಾಪ್‌ಟಾಪ್‌ಗಳಿಗೆ ಈ ನಿಯಮವನ್ನು 2026 ರಲ್ಲಿ ಜಾರಿಗೆ ತರಲಾಗುತ್ತದೆ. ಆದರೆ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೆ ಸದ್ಯದಲ್ಲೇ ಈ ನಿಯಮ ಜಾರಿಗೆ ಬರಲಿದೆಯಂತೆ. ಸರ್ಕಾರದ ಈ ಕ್ರಮದ ಹಿಂದೆ ಬಲವಾದ ಕಾರಣವಿದೆ. ಎಲ್ಲಾ ಎಲೆಕ್ಟ್ರಿಕ್ ಸಾಧನಗಳಿಗೆ ಒಂದೇ ಚಾರ್ಜರ್​ನಿಂದ ಚಾರ್ಜ್ ಮಾಡುವ ಮೂಲಕ ಬಳಕೆದಾರರ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರ ಬಯಸಿದೆ. ಹಾಗೆಯೆ ವಿವಿಧ ಚಾರ್ಜರ್‌ಗಳಿಂದ ಉಂಟಾಗುವ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಇದು ಬಯಸುತ್ತದೆ.

“ಎಲ್ಲಾ ಫೋನ್ ತಯಾರಕರು ಈ ನಿಯಮಗಳನ್ನು ಅನುಸರಿಸಲು ಕಾನೂನುಬದ್ಧವಾಗಿ ಬದ್ಧರಾಗಿರುತ್ತಾರೆ ಮತ್ತು ಈ ಮಾನದಂಡಗಳ ಉಲ್ಲಂಘನೆಯು ಗ್ರಾಹಕ ಸಂರಕ್ಷಣಾ ಕಾಯ್ದೆಯ ಪ್ರಕಾರ ದಂಡವನ್ನು ವಿಧಿಸಲಾಗುತ್ತದೆ,” ಎಂದು ಸರ್ಕಾರದ ಮೂಲಗಳು ಹೇಳಿವೆ. ಈಗಾಗಲೇ ಶವೋಮಿ ಮತ್ತು ಒಪ್ಪೋನಂತಹ ಫೋನ್ ತಯಾರಕರು ಈ ನಿಯಮಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಆ್ಯಪಲ್ ವಿರೋಧ

ಯುರೋಪಿಯನ್ ಒಕ್ಕೂಟವು 2022ರಲ್ಲಿ ಈ ನಿಬಂಧನೆಯನ್ನು ಅಳವಡಿಸಿಕೊಂಡಿತ್ತು. ಆದರೆ, ಆ ಸಮಯದಲ್ಲಿ ಆ್ಯಪಲ್ ಇದನ್ನು ವಿರೋಧಿಸಿತು. ಕಂಪನಿಯು ಲೈಟ್ನಿಂಗ್ ಪೋರ್ಟ್‌ಗಾಗಿ ಸಾಕಷ್ಟು ವಾದ ನಡೆಸಿತ್ತು. ಆದರೆ, ಅಂತಿಮವಾಗಿ ಕಳೆದ ವರ್ಷ ಕಂಪನಿಯು ತನ್ನ ಫೋನ್‌ಗಳಲ್ಲಿ ಲೈಟ್ನಿಂಗ್ ಪೋರ್ಟ್ ಬದಲಿಗೆ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಬಳಸಲು ಪ್ರಾರಂಭಿಸಿತು.

ವಿಶೇಷ ಎಂದರೆ ಆ್ಯಪಲ್ ಟೈಪ್-ಸಿ ಪೋರ್ಟ್​ಗೆ ತನ್ನದೇ ಆದ ಚಾರ್ಜರ್ ಬಿಡುಗಡೆ ಮಾಡಿತು. ಐಫೋನ್ ಬಳಕೆದಾರರು ಎಲ್ಲಾದರು ಬೇರೆ ಬ್ರಾಂಡ್ ಚಾರ್ಜರ್‌ನೊಂದಿಗೆ ಚಾರ್ಜ್ ಮಾಡಿದಾಗ ಫೋನ್ ಹೀಟಿಂಗ್ ಸಮಸ್ಯೆಯನ್ನು ಎದುರಿಸುತ್ತದೆ.

ಇನ್ನಷ್ಟು ಟೆಕ್ನಾಲಜಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ