iPhone 16 India price: ಆಪಲ್‌ ಟೆಕ್‌ತೋಟದ ಹೊಸ ಹಣ್ಣು ಐಫೋನ್‌ 16 ದರ ಎಷ್ಟಿರಬಹುದು? ಕ್ಯಾಮೆರಾ, ಪ್ರೊಸೆಸರ್‌ ಬೊಂಬಾಟ್‌ ಅಂತೆ-technology news iphone 16 launch today iphone 16 india price design camera processor and everything expected pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Iphone 16 India Price: ಆಪಲ್‌ ಟೆಕ್‌ತೋಟದ ಹೊಸ ಹಣ್ಣು ಐಫೋನ್‌ 16 ದರ ಎಷ್ಟಿರಬಹುದು? ಕ್ಯಾಮೆರಾ, ಪ್ರೊಸೆಸರ್‌ ಬೊಂಬಾಟ್‌ ಅಂತೆ

iPhone 16 India price: ಆಪಲ್‌ ಟೆಕ್‌ತೋಟದ ಹೊಸ ಹಣ್ಣು ಐಫೋನ್‌ 16 ದರ ಎಷ್ಟಿರಬಹುದು? ಕ್ಯಾಮೆರಾ, ಪ್ರೊಸೆಸರ್‌ ಬೊಂಬಾಟ್‌ ಅಂತೆ

iPhone 16 India price: ಆಪಲ್‌ ಟೆಕ್‌ತೋಟದಲ್ಲಿ ಬೆಳೆದ ಹೊಸ ಐಫೋನ್‌ 16 ಸರಣಿಗಳು ಇಂದು ಬಿಡುಗಡೆಯಾಗುತ್ತಿವೆ. ಕಳೆದ ವರ್ಷ 129 ಜಿಬಿ ಆವೃತ್ತಿಯ ಐಫೋನ್‌ಗಳಿಗೆ 799 ಡಾಲರ್‌ ಮತ್ತು 899 ಡಾಲರ್‌ ದರವಿತ್ತು. ಇದೇ ದರದಲ್ಲಿಯೇ ಐಫೋನ್‌ 16 ಆರಂಭಿಕ ದರ ಇರುವ ಸೂಚನೆಗಳಿವೆ.

ಐಫೋನ್‌ 16ರ ಬಣ್ಣಗಳ ಕುರಿತು ಸೋರಿಕೆಯಾದ ಚಿತ್ರ
ಐಫೋನ್‌ 16ರ ಬಣ್ಣಗಳ ಕುರಿತು ಸೋರಿಕೆಯಾದ ಚಿತ್ರ (X: Sonny Dickson)

Apple iPhone 16 series India Price: ಆಪಲ್‌ಗೆ ಇದು ಹೊಳೆಯುವ ಸಮಯ. ಅಂದ್ರೆ, ಗ್ಲೋಟೈಮ್‌. ಸೆಪ್ಟೆಂಬರ್‌ 9ರಂದು ಆಪಲ್‌ನ ಇಟ್ಸ್‌ ಗ್ಲೋಟೈಮ್‌ ಕಾರ್ಯಕ್ರಮ ನಡೆಯಲಿದೆ. ಪ್ರತಿವರ್ಷದಂತೆ ಆಪಲ್‌ನ ಈ ವರ್ಷದ ಕಾರ್ಯಕ್ರಮ ಸಾಕಷ್ಟು ನಿರೀಕ್ಷೆ, ಕುತೂಹಲ ಹುಟ್ಟುಹಾಕಿದೆ. ಆಪಲ್‌ ಅಭಿಮಾನಿಗಳು ಹೊಸ ಉತ್ಪನ್ನಗಳ ಕುರಿತು ರೋಮಾಂಚನಗೊಂಡಿದ್ದಾರೆ. ಆಪಲ್‌ ಟೆಕ್‌ ತೋಟದಲ್ಲಿ ಬೆಳೆಯುವ ಹಣ್ಣುಗಳಿಗೆ ಜಗತ್ತಿನಾದ್ಯಂತ ಸಖತ್‌ ಡಿಮ್ಯಾಂಡ್‌. ಈ ಹಣ್ಣುಗಳು ದುಬಾರಿಯಾಗಿರುವುದರಿಂದ ಎಲ್ಲರ ಕೈಗೆ ಸುಲಭವಾಗಿ ಎಟಕುವಂತೆ ಇಲ್ಲ. ಖರೀದಿಸಲಾಗದವರು ದ್ರಾಕ್ಷಿ ಹುಳಿ ಎಂದ ನರಿಯಂತೆ ಅದರ ಸಹವಾಸಕ್ಕೆ ಹೋಗದೆ ಇರಬಹುದು. ಕಡಿಮೆ ದರದ ಆಂಡ್ರಾಯ್ಡ್‌ ಫೋನ್‌ಗಳಿಗೆ ತೃಪ್ತಿ ಪಡಬಹುದು. ಆದರೆ, ಆಪಲ್‌ ಪ್ರಾಡಕ್ಟ್‌ಗಳ ಹುಚ್ಚಿಗೆ ಬಿದ್ದವರು ಅದರ ಮೋಹದಿಂದ ತಪ್ಪಿಸಿಕೊಳ್ಳುವಂತೆ ಇಲ್ಲ. ಆಪಲ್‌ ಗುಣಗಾನ ಎಷ್ಟು ಮಾಡಿದರೂ ಕಡಿಮೆಯೇ. ಇರಲಿ, ಆಪಲ್‌ ಇವೆಂಟ್‌ 2024ರಲ್ಲಿ ಲಾಂಚ್‌ ಆಗಲಿರುವ ಐಫೋನ್‌ 16 ಸರಣಿಗಳ ಕುರಿತು ಹೆಚ್ಚಿನ ವಿವರ ಪಡೆದುಕೊಳ್ಳೋಣ. ಅಂದ್ರೆ, ಭಾರತದಲ್ಲಿ ಹೊಸ ಐಫೋನ್‌ ದರ ಎಷ್ಟಿರಲಿದೆ? ಹೊಸ ಐಫೋನ್‌ನ ವಿನ್ಯಾಸ ಹೇಗಿರಲಿದೆ? ಪ್ರೊಸೆಸರ್‌, ಪವರ್‌, ಆಪರೇಟಿಂಗ್‌ ಸಿಸ್ಟಮ್‌, ಕ್ಯಾಮೆರಾ ಫೀಚರ್ಸ್‌, ಎಐ ಫೀಚರ್ಸ್‌ ಇತ್ಯಾದಿಗಳ ಕುರಿತು ಸಾಕಷ್ಟು ಜನರಿಗೆ ಕುತೂಹಲ ಇದೆ. ಬನ್ನಿ ಹೆಚ್ಚಿನ ವಿವರ ತಿಳಿಯೋಣ.

ಐಫೋನ್‌ 16ಗೆ ಭಾರತದಲ್ಲಿ ದರ ಎಷ್ಟಿರಲಿದೆ? (iPhone 16 India price)

ಟಿಪ್‌ಸ್ಟೆರ್‌ ಆಪಲ್‌ ಐಫೋನ್‌ ಹಬ್‌ ಎಕ್ಸ್‌ (ಹಳೆಯ ಟ್ವಿಟ್ಟರ್‌)ನಲ್ಲಿ ಮಾಡಿದ ಟ್ವೀಟ್‌ ಪ್ರಕಾರ "ಕಳೆದ ವರ್ಷದ ಆರಂಭಿಕ ದರದಂತೆಯೇ ಐಫೋನ್‌ 16 ಮತ್ತು ಐಫೋನ್‌ 16 ಪ್ಲಸ್‌ ದರಗಳು ಇರಲಿವೆ. ಅಂದರೆ, ಕಳೆದ ವರ್ಷ 129 ಜಿಬಿ ಆವೃತ್ತಿಯ ಐಫೋನ್‌ಗಳಿಗೆ 799 ಡಾಲರ್‌ ಮತ್ತು 899 ಡಾಲರ್‌ ದರವಿತ್ತು. ಇತ್ತೀಚೆಗೆ ಭಾರತ ಸರಕಾರವು ಮೊಬೈಲ್‌ ಫೋನ್‌ಗಳಿಗೆ ಅಬಕಾರಿ ಸುಂಕ ಕಡಿತ ಮಾಡಿರುವುದರಿಂದ ಐಫೋನ್‌ 16 ಸರಣಿಗಳ ದರ ಭಾರತದಲ್ಲಿ ಇಳಿಕೆ ಕಾಣುವ ಸೂಚನೆಯಿದೆ. ಕಳೆದ ವರ್ಷ ಭಾರತದಲ್ಲಿ 79,990 ರೂಪಾಯಿಗೆ ಐಫೋನ್‌ 15 ಬಿಡುಗಡೆ ಮಾಡಲಾಗಿತ್ತು.

ಐಫೋನ್‌ 16 ವಿನ್ಯಾಸ (iPhone 16 design)

ವದಂತಿಗಳು ನಿಜವಲ್ಲ. ಹಾಗಂತ, ಎಲ್ಲಾ ವದಂತಿಗಳು ಸುಳ್ಳಾಗದು ಎನ್ನುವುದು ನಂಬಿಕೆ. ಬೆಂಕಿ ಇಲ್ಲದೆ ಹೊಗೆ ಬರೋದಿಲ್ಲ. ಅದೇ ರೀತಿ ಐಫೋನ್‌ ವಿಷಯದಲ್ಲಿ ಕೆಲವೊಂದು ವದಂತಿಗಳು ಈ ಹಿಂದೆ ನಿಜವಾಗಿವೆ. ಸದ್ಯ ಐಫೋನ್‌ 16ನ ವಿನ್ಯಾಸದಲ್ಲಿ ಕೆಲವು ಹೊಸ ಮಾರ್ಪಾಡುಗಳನ್ನು ನಿರೀಕ್ಷಿಸಲಾಗಿದೆ. ಈ ಬಾರಿ ಐಫೋನ್‌ 16ಗೆ ಕ್ಯಾಮೆರಾಗಳನ್ನು ಲಂಬವಾಗಿ ಜೋಡಿಸುವ ನಿರೀಕ್ಷೆಯಿದೆ. ಈಗಾಗಲೇ ಐಫೋನ್‌ ಎಕ್ಸ್‌ ಅಥವಾ ಐಫೋನ್‌ 12ನಲ್ಲಿ ಲಂಬ ವಿನ್ಯಾಸದಲ್ಲಿ ಕ್ಯಾಮೆರಾ ವಿನ್ಯಾಸವಿದೆ. ಈ ವಿನ್ಯಾಸದಿಂದಾಗಿ ಐಫೋನ್‌ 16 ಮತ್ತು ಐಫೋನ್‌ 16 ಪ್ಲಸ್‌ನಲ್ಲಿ ವಿಡಿಯೋ ರೆಕಾರ್ಡಿಂಗ್‌ ಅನುಭವ ಇನ್ನಷ್ಟು ಉತ್ತಮವಾಗಲಿದೆ.

ಐಫೋನ್‌ 16 ಮಾಡೆಲ್‌ಗಳಲ್ಲಿ ಮ್ಯೂಟ್‌ ಬಟನ್‌ ಬದಲು ಆಕ್ಷನ್‌ ಬಟನ್‌ ಜೋಡಿಸುವುದಾಗಿ ಈಗಾಗಲೇ ಆಪಲ್‌ ತಿಳಿಸಿದೆ. ಈಗಾಗಲೇ ಕಳೆದ ವರ್ಷ ಬಿಡುಗಡೆಯಾದ ಐಫೋನ್‌ 15ನಲ್ಲಿ ಈ ಫೀಚರ್‌ ಇತ್ತು. ಇದೇ ಸಮಯದಲ್ಲಿ ಕ್ಯಾಪ್ಚರ್‌ ಬಟನ್‌ ಅನ್ನು ಅಳವಡಿಸಲಿದೆ. ಇದರಿಂದ ವಿಡಿಯೋ ರೆಕಾರ್ಡಿಂಗ್‌, ಝೂಮ್‌ ಇನ್‌ ಮತ್ತು ಝೂಮ್‌ ಔಟ್‌ ಅಥವಾ ನಿರ್ದಿಷ್ಟ ಸಬ್ಜೆಕ್ಟ್‌ ಮೇಲೆ ಫೋಕಸ್‌ ಮಾಡುವುದು ಸುಲಭವಾಗಲಿದೆ.

ಟೆಕ್‌ ವಿಶ್ಲೇಷಕ ಮಿಂಗ್‌ ಛಿ ಕುವೋ ಅವರು ಐಫೋನ್‌ 16 ಬಣ್ಣಗಳು ಹೇಗಿರಬಹುದು ಎಂದು ಊಹಿಸಿದ್ದಾರೆ. ಅವರ ಪ್ರಕಾರ ಹೊಸ ಐಫೋನ್‌ 16 ಸರಣಿಗಳು ಕಪ್ಪು, ಹಸಿರು, ಗುಲಾಬಿ, ನೀಲಿ ಮತ್ತು ಬಿಳಿ ಎಂಬ ಐದು ಬಣ್ಣಗಳಲ್ಲಿ ದೊರಕಲಿದೆಯಂತೆ. ಅವರ ಊಹೆ, ಅಂದಾಜು ನಿಜವಾದರೆ ಆಪಲ್‌ ಕಂಪನಿಯ ನೀಲಿ ಮತ್ತು ಹಸಿರು ಬಣ್ಣದ ಫೋನ್‌ಗಳು ಮರೆಯಾಗಲಿವೆ.

ಪ್ರೊಸೆಸರ್‌ ಹೇಗಿರಬಹುದು?

ತನ್ನ ಎಲ್ಲಾ ಐಫೋನ್‌ 16 ಸರಣಿಗಳಿಗೆ ಆಪಲ್‌ ಕಂಪನಿಯು ಎ18 ಚಿಪ್‌ಸೆಟ್‌ ಅಳವಡಿಸಲಿದೆ ಎನ್ನುವುದು ಹಲವು ವರದಿಗಳ ಅಂಬೋಣ. ಇಷ್ಟು ಮಾತ್ರವಲ್ಲ, ಐಫೋನ್‌ನಲ್ಲಿ ಎಐ ಟಾಸ್ಕ್‌ಗಳನ್ನು ನೇರವಾಗಿ ಡಿವೈಸ್‌ನಿಂದಲೇ ಮಾಡಬಹುದಂತೆ. ಅಂದ್ರೆ, ಅದಕ್ಕೆ ಪ್ರತ್ಯೇಕ ಆಪ್‌ ಬೇಡ. ಇದೇ ಸಮಯದಲ್ಲಿ ಐಫೋನ್‌ 16 ಪ್ರೊ ಮತ್ತು ಪ್ರೊ ಮ್ಯಾಕ್ಸ್‌ನ ಜಿಪಿಯು ಪರ್ಫಾಮೆನ್ಸ್‌ ಮತ್ತು ಸ್ಪೀಡ್‌ ಇನ್ನಷ್ಟು ಹೆಚ್ಚಿರುವ ನಿರೀಕ್ಷೆಯಿದೆ.

ಇದೇ ಸಮಯದಲ್ಲಿ ಐಫೋನ್‌ 16 ಸರಣಿಗಳ ರಾಮ್‌ ಕೂಡ ಅಪ್‌ಗ್ರೇಡ್‌ ಆಗುವ ನಿರೀಕ್ಷೆಯಿದೆ. ಅಂದ್ರೆ, ಈಗಿನ 6 ಜಿಬಿಯ ಬದಲು 8ಜಿಬಿ ರಾಮ್‌ ಇರುವ ಸೂಚನೆಯಿದೆ.

ಕ್ಯಾಮೆರಾ ಹೇಗಿರಲಿದೆ?

ಆಪಲ್‌ ಇನ್‌ಸೈಡರ್‌ ವರದಿ ಪ್ರಕಾರ ಐಫೋನ್‌ 16 ಮತ್ತು ಐಫೋನ್‌ 16 ಪ್ಲಸ್‌ಗಳಲ್ಲಿ ಕಳೆದ ವರ್ಷ ಬಿಡುಗಡೆಯಾದ ಐಫೋನ್‌ 15ನಲ್ಲಿದ್ದಂತಹ ಕ್ಯಾಮೆರಾ ಸೆಟಪ್‌ಗಳು ಇರಲಿವೆ. 48 ಮೆಗಾಫಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾವು f/1.6 ಅಪಾರ್ಚರ್‌ ಮತ್ತು 2x ಆಪ್ಟಿಕಲ್‌ ಟೆಲಿಸ್ಕೋಪ್‌ ಝೂಮ್‌ ಮತ್ತು ಆಲ್ಟ್ರಾ ವೈಡ್‌ ಆಂಗಲ್‌ ಲೆನ್ಸ್‌ ಹೊಂದಿರಲಿದೆ. ಇದರಿಂದಾಗಿ 0.5xನಲ್ಲಿ ಫೋಟೋಗಳನ್ನು ತೆಗೆಯಲು ಸಾಧ್ಯವಾಗಲಿದೆ. ಇದೇ ಸಮಯದಲ್ಲಿ ಅಲ್ಟ್ರಾ ವೈಡ್‌ ಆಂಗಲ್‌ ಶೂಟರ್‌ ಕೊಂಚ ಅಪ್‌ಗ್ರೇಡ್‌ ಆಗಿರಲಿದೆ. ಐಫೋನ್‌ 15ನಲ್ಲಿರುವ f/2.4 ಅಪಾರ್ಚರ್‌ ಬದಲು ಹೊಸ ಐಫೋನ್‌ 16ನಲ್ಲಿ f/2.2 ಅಪಾರ್ಚರ್‌ ಇರುವ ನಿರೀಕ್ಷೆಗಳಿವೆ. ಇದರಿಂದಾಗಿ ಕಡಿಮೆ ಬೆಳಕಿನಲ್ಲೂ ಹೆಚ್ಚು ಗುಣಮಟ್ಟದ ಚಿತ್ರಗಳನ್ನು ತೆಗೆಯಲು ಸಾಧ್ಯವಾಗಲಿದೆ.

ವರದಿಗಳ ಪ್ರಕಾರ ಐಫೋನ್‌ 16 ಮತ್ತು ಐಫೋನ್‌ 16 ಪ್ಲಸ್‌ಗಳಲ್ಲಿ ಇದೇ ಮೊದಲ ಬಾರಿಗೆ ಮ್ಯಾಕ್ರೋ ಫೋಟೋಗ್ರಫಿ ಬೆಂಬಲ ಇರಲಿದೆ. ಎಲ್ಲಾದರೂ ಈ ಫೀಚರ್‌ ಇದ್ದರೆ ಮ್ಯಾಕ್ರೋ ಫೋಟೋಗ್ರಾಫರ್‌ಗಳಿಗೆ ಖುಷಿಯಾಗಲಿದೆ.

ಡಿಸ್‌ಪ್ಲೇ ಮತ್ತು ದರ ವಿವರ

ನೂತನ ಐಫೋನ್‌ 16 ಸರಣಿಗಳಲ್ಲಿ 6.1 ಮತ್ತು 6.7 ಇಂಚಿನ ಒಲೆಡ್‌ ಡಿಸ್‌ಪ್ಲೇ ಮುಂದುವರೆಯಲಿದೆ. ಐಫೋನ್‌ 16 ಮತ್ತು ಐಫೋನ್‌ 16 ಪ್ಲಸ್‌ಗಳಲ್ಲಿ ಒಲೆಡ್‌ ಪರದೆಗಳ ರಿಫ್ರೆಶ್‌ ರೇಟ್‌ ಸುಮಾರು 60Hz ಇರಲಿದೆ. ಈಗಾಗಲೇ ಹೇಳಿದಂತೆ ಕಳೆದ ವರ್ಷ ಬಿಡುಗಡೆ ಮಾಡಿರುವ ಐಫೋನ್‌ನಂತೆ ನೂತನ ಐಫೋನ್‌ಗಳ ಆರಂಭಿಕ ದರ ಇರಲಿದೆ. ಹೈಎಂಡ್‌ಗಳ ದರ ತುಸು ದುಬಾರಿಯಾಗಿರಬಹುದು. ಐಫೋನ್‌ 16ನ ವಿದ್ಯುತ್‌ ಬಳಕೆಯನ್ನು ಇನ್ನಷ್ಟು ತಗ್ಗಿಸಲು ಈ ಬಾರಿ ಮೈಕ್ರೊ ಲೆನ್ಸ್‌ ಟೆಕ್ನಾಲಜಿ ಬಳಸಿರಬಹುದು ಎಂದು ಟೆಕ್‌ ವರದಿಗಳು ಊಹಿಸಿವೆ.

mysore-dasara_Entry_Point