Edge vs Chrome: ಮೈಕ್ರೊಸಾಫ್ಟ್ ಎಡ್ಜ್- ಗೂಗಲ್ ಕ್ರೋಮ್‌ಗಳಲ್ಲಿ ಯಾವ ಬ್ರೌಸರ್ ಉತ್ತಮ? ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ
Microsoft Edge vs Google Chrome: ಮೈಕ್ರೊಸಾಫ್ಟ್ ಎಡ್ಜ್ ಮತ್ತು ಗೂಗಲ್ ಕ್ರೊಮ್ ಬ್ರೌಸರ್‌ಗಳಲ್ಲಿ ಯಾವ ಬ್ರೌಸರ್ ಉತ್ತಮವಾಗಿದೆ? ಕ್ರೋಮ್ ಕುರಿತು ಜನರ ದೂರುಗಳೇನು? ಎಡ್ಜ್ ಕುರಿತು ಬಳಕೆದಾರರ ತಕರಾರು ಏನು? ಫೇಸ್‌ಬುಕ್‌ನಲ್ಲಿ ನಡೆದ ಚರ್ಚೆಯ ಸಾರಾಂಶ ಇಲ್ಲಿದೆ.
ಸೋಷಿಯಲ್ ಮೀಡಿಯಾದಲ್ಲಿ ರಾಜಕೀಯ, ಎಡಬಲ ಚರ್ಚೆಗಳ ನಡುವೆ ಕೆಲವೊಂದು ಟೆಕ್ ಚರ್ಚೆಗಳು ಗಮನ ಸೆಳೆಯುತ್ತಿವೆ. ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ವಿಕ್ರಂ ಜೋಶಿ ಎಂಬವರು ಮೈಕ್ರೊಸಾಫ್ಟ್ ಎಡ್ಜ್ ಕುರಿತು ತಮ್ಮ ನೋವು ತೋಡಿಕೊಂಡಿದ್ದರು. "ಮೈಕ್ರೊಸಾಫ್ಟ್ ಅಂತ ಇದೆ. ಅದನ್ನು ಡೆವಲಪ್ ಮಾಡಿದವರು ಯಾರೋ ಗೊತ್ತಿಲ್ಲ. ಇದಕ್ಕಿಂತ ಕಳಪೆ ವೆಬ್ ಬ್ರೌಸರ್ ಮಾಡಬಹುದಾ? ಕ್ರೋಮ್ ಇವತ್ತಿಗೂ ಬೆಸ್ಟ್ ಬ್ರೌಸರ್!" ಎಂದು ಜೋಶಿ ಬರೆದಿದ್ದರು. ಈ ಸಂದರ್ಭದಲ್ಲಿ ಎಡ್ಜ್ ಚೆನ್ನಾಗಿದೆ ಎನ್ನುವವರು ಮತ್ತು ಎಡ್ಜ್ ಚೆನ್ನಾಗಿಲ್ಲ ಎನ್ನುವವರು, ಕ್ರೋಮ್ ಪರವಹಿಸುವವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಮೈಕ್ರೊಸಾಫ್ಟ್ ಎಡ್ಜ್ ಮತ್ತು ಗೂಗಲ್ ಕ್ರೋಮ್ ಬ್ರೌಸರ್‌ಗಳಲ್ಲಿ ಯಾವುದು ಉತ್ತಮ ಎಂದು ಆಲೋಚಿಸುವವರಿಗೂ ಈ ಚರ್ಚೆ ಅನುಕೂಲವಾಗಬಹುದು.
ಮೈಕ್ರೊಸಾಫ್ಟ್ ಎಡ್ಜ್ ಉತ್ತಮ
"ನಾನು ಬಹುಸಮಯದಿಂದ ಗೂಗಲ್ ಕ್ರೋಮ್ ಬಳಸುತ್ತಿದ್ದೆ. ಬಳಿಕ ಎಡ್ಜ್‌ಗೆ ವಲಸೆ ಬಂದೆ. ಅದ್ಭುತವಾಗಿ ಕೆಲಸ ಮಾಡುತ್ತದೆ. ಕ್ಯಾಶೆ ಕ್ಲೀನ್ ಮಾಡಲು ಸಿಕ್ಲೀನರ್ ಬಳಸುತ್ತಿದ್ದೇನೆ" ಎಂದು ಶ್ರೀನಿ ರಾವ್ ಅಭಿಪ್ರಾಯವ್ಯಕ್ತಪಡಿಸಿದ್ದರು. "ಯಾವುದನ್ನೂ ಖರೀದಿಸಬೇಡಿ,, ಎಲ್ಲವನ್ನೂ ಬಳಸಿ ನೀಡಿದೆ. ಎಐ ಬಾಟ್‌ನಿಂದ ಕಿರಿಕಿರಿಯಾಗುತ್ತದೆ" ಎಂದು ಜೋಷಿ ಹೇಳಿದ್ದಾರೆ. ಆದರೆ ನಮ್ಮ ಕೆಲಸಕ್ಕೆ ಎಡ್ಜ್ ಉತ್ತಮವಾಗಿದೆ ಎಂದು ಶ್ರೀನಿ ಹೇಳಿದ್ದಾರೆ. "ಈಗ ಎಡ್ಜ್ ಅತ್ಯುತ್ತಮವಾಗಿದೆ. ಕನ್ನಡ ಬರಹ ಸಾಫ್ಟ್‌ವೇರ್ ಲಾಂಚ್ ಮಾಡಿದಾಗ ಕ್ರೋಮ್ ಕ್ರಾಶ್ ಆಗುತ್ತದೆ. ಗೂಗಲ್ ಡಾಕ್ಸ್ ಅನ್ನೂ ನಾನೀಗ ಎಡ್ಜ್‌ನಲ್ಲೇ ಬಳಸುವೆ. ಬರಹ ಹೆಲ್ಪ್‌ಲೈನ್‌ನವರೂ ನನಗೆ ಎಡ್ಜ್‌ಗೆ ವಲಸೆ ಹೋಗುವಂತೆ ಹೇಳಿದ್ದರು" ಎಂದು ನಾಗೇಶ್ ಕುಮಾರ್ ಸಿಎಸ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಎಡ್ಜ್‌ನಲ್ಲಿ ಪ್ರಾಬ್ಲಂ ಇದೆ
ಸಾಕಷ್ಟು ಜನರು ಜೋಶಿ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. "ಮೈಕ್ರೊಸಾಫ್ಟ್‌ನವರು ಟೀಮ್ ಅಪ್‌ಗ್ರೇಡ್ ಮಾಡೋದ್ರಲ್ಲಿಯೇ ಬಿಝಿ ಇದ್ದಾರೆ. ಎಡ್ಜ್ ಬಗ್ಗೆ ಗಮನ ನೀಡಬೇಕು" ಎಂದು ಸೀಮಾ ಹೇಳಿದ್ದಾರೆ. ಕೆಲವು ಅಪ್ಲಿಕೇಷನ್‌ಗಳು ಎಡ್ಜ್‌ನಲ್ಲಿ ಮಾತ್ರವೇ ಕೆಲಸ ಮಾಡೋದು ಎಂದು ರವಿ ಮಡೋಡಿ ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಕಂಪನಿಯಲ್ಲಿ ಕ್ರೋಮ್ ಡಿಸೇಬಲ್ ಮಾಡಿ ಎಡ್ಜ್ ಕಂಪಲ್ಸರಿ ಮಾಡಿದ್ದಾರೆ ಎಂದು ಒಬ್ಬರು ನೋವು ವ್ಯಕ್ತಪಡಿಸಿದ್ದಾರೆ. "ಕ್ರೋಮ್ ಡೌನ್‌ಲೋಡ್ ಮಾಡಿಕೊಳ್ಳಲು ಎಡ್ಜ್ ಉಪಯುಕ್ತ" ಎಂದು ದೀಕ್ಷಿತ್ ಶೆಟ್ಟಿಗಾರ್ ಕಾಮಿಡಿ ಮಾಡಿದ್ದಾರೆ. "ಎಡ್ಜ್ ಡಬ್ಬಾ, ಚೆನ್ನಾಗಿಲ್ಲ" ಎಂದು ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ.
ಕ್ರೋಮ್ ವರ್ಸಸ್ ಎಡ್ಜ್
"ಎಡ್ಜ್ ಬಗ್ಗೆ ಇಷ್ಟೊಂದು ಜನರು ನಕಾರಾತ್ಮಕ ಅಭಿಪ್ರಾಯ ಹೊಂದಿರುವುದನ್ನು ತಿಳಿದು ಅಚ್ಚರಿಯಾಯ್ತು. ನಾನು ಕ್ರೋಮ್ ಅನ್ನು ತೀರ ಸೀಮಿತ ಬಳಕೆಗೆ ಉಳಿಸಿಕೊಂಡು ಎಂ ಎಸ್ ಎಡ್ಜ್ ಅನ್ನು ವ್ಯಾಪಕವಾಗಿ ಬಳಸತೊಡಗಿ ಬಹಳ ಕಾಲವಾಯ್ತು. ಬಹಳ ಚೆನ್ನಾಗಿದೆ ಎಡ್ಜ್" ಎಂದು ನವೀನ್ ಗಂಗೋತ್ರಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. "ಕ್ರೋಮ್ ಮೇಲೆ ಎಷ್ಟು ಆಪಾದನೆಗಳು ಕೇಳಿಬಂದರೂ ಇಷ್ಟರ ತನಕ ಕ್ರೋಮ್ ಬಿಟ್ಟು ಬೇರೆ ಯಾವುದೇ ಬ್ರೌಸರ್ ಬಳಸಿಲ್ಲ" ಎಂದು ಹರಿಪ್ರಸಾದ್ ಹೇಳಿದ್ದಾರೆ. "ಎಡ್ಜ್ ಸಾಕಷ್ಟು ಸಮಯದಿಂದ ಬಳಸುತ್ತಿದ್ದೀನಿ. ತೀರಾ ಚೆನ್ನಾಗಿಲ್ಲದೇ ಇದ್ದರೂ ಕಿತ್ತಾಕಬೇಕು ಎನ್ನಿಸಿಲ್ಲ. ಮುಖ್ಯವಾಗಿ ನನಗೆ ಪಿಡಿಎಫ್ ಫೈಲ್ ಓಪನ್ ಮಾಡಿದರೆ ಅದರಲ್ಲಿ ಕರೆಕ್ಷನ್ ಹಾಕಿ ಸೇವ್ ಮಾಡಲು ಆಫೀಸ್ ಕೆಲಸದಲ್ಲಿ ಬಹಳ ಉಪಯೋಗ ಆಗಿದೆ. ಈ ಆಪ್ಷನ್ ಕ್ರೋಮ್‌ನಲ್ಲಿ ಇಲ್ಲ" ಎಂದು ರಮೇಶ್ ದೊಡ್ಡಪುರ ಹೇಳಿದ್ದಾರೆ.
ಒಟ್ಟಾರೆ ಮೈಕ್ರೊಸಾಫ್ಟ್ ಎಡ್ಜ್ ಮತ್ತು ಗೂಗಲ್ ಕ್ರೋಮ್ ಎಂಬ ಎರಡು ಜನಪ್ರಿಯ ಬ್ರೌಸರ್‌ಗಳ ಕುರಿತು ಕನ್ನಡಿಗರು ಬಿಸಿಬಿಸಿ ಚರ್ಚೆ ಮಾಡುತ್ತಿದ್ದಾರೆ. ಸಾಕಷ್ಟು ಜನರು ದಿನದ ಬಹುತೇಕ ಸಮಯ ಇಂಟರ್‌ನೆಟ್‌ನಲ್ಲಿ ಕಳೆಯುವುದರಿಂದ ಖಂಡಿತವಾಗಿಯೂ ಯಾವುದಾದರೂ ಒಂದು ಬ್ರೌಸರ್ ಬಳಸಿಯೇ ಬಳಸಿರುತ್ತಾರೆ. ಆದರೆ, ಆಂಡ್ರಾಯ್ಡ್ ಬಳಕೆದಾರರು ಹೆಚ್ಚಾಗಿ ಕ್ರೋಮ್ ಬಳಸುತ್ತಾರೆ. ಈಗಾಗಲೇ ಆ ಬ್ರೌಸರ್ ಇನ್‌ಸ್ಟಾಲ್ ಆಗಿರುವುದು ಕಾರಣ. ಕೆಲವೊಮ್ಮೆ ಜಿಮೇಲ್ ಇತ್ಯಾದಿ ಗೂಗಲ್ ಪ್ರಾಡಕ್ಟ್ ಬಳಸುವವರಿಗೆ ಕ್ರೋಮ್ ಆಪ್ತವಾಗಿ ಕಾಣಿಸುತ್ತದೆ. ಎಡ್ಜ್‌ನಂತಹ ಬ್ರೌಸರ್‌ಗಳು ಅಪರಿಚಿತವಾಗಿ ಕಾಣಿಸುತ್ತವೆ. ಕ್ರೋಮ್‌ಗೆ ಸರಿಸಮವಾಗಿ, ಕೆಲವೊಂದು ಸಂದರ್ಭಗಳಲ್ಲಿ ಕ್ರೋಮ್‌ಗಿಂತ ಉತ್ತಮವಾಗಿ ಮೈಕ್ರೊಸಾಫ್ಟ್ ಎಡ್ಜ್ ಕೆಲವರಿಗೆ ಅನುಕೂಲ ಎನಿಸಬಹುದು. ಇನ್ನು ಕೆಲವರಿಗೆ ಗೂಗಲ್ ಕ್ರೋಮ್ ಅಪ್ಯಾಯಮಾನವೆನಿಸಬಹುದು.
ಗೂಗಲ್ ಕ್ರೋಮ್ ಮತ್ತು ಎಡ್ಜ್ ಅನ್ನು ಹಲವು ಸಾಧನಗಳಲ್ಲಿ ಒಂದೇ ಖಾತೆ ಮೂಲಕ ಬಳಸಬಹುದು. ಕ್ರೋಮ್‌ನಲ್ಲಿ ಹಾರಿಜಾಂಟಲ್ ಟ್ಯಾಬ್‌ಗಳು ಮಾತ್ರ ಇವೆ. ಕ್ರೋಮ್‌ನಲ್ಲಿ ಹಾರಿಜಾಂಟಲ್ ಮತ್ತು ವರ್ಟಿಕಲ್ ಟ್ಯಾಬ್‌ಗಳಿವೆ. ಕ್ರೋಮ್‌ನಲ್ಲಿ ಟ್ಯಾಬ್‌ಗ್ರೂಪ್ಸ್, ಬುಕ್‌ಮಾರ್ಕ್ಸ್, ರೀಡಿಂಗ್ ಲಿಸ್ಟ್, ಬ್ರೌಸರ್ ಹಿಸ್ಟರಿ, ಎಕ್ಸ್‌ಟೆನ್ಷನ್, ಥೀಮ್ಸ್, ಪಾಸ್‌ವರ್ಡ್ ಮ್ಯಾನೇಜರ್, ಟಾಸ್ಕ್ ಮ್ಯಾನೇಜರ್, ಪ್ರೈವೇಟ್ ಬ್ರೌಸರ್ ಇತ್ಯಾದಿ ಫೀಚರ್‌ಗಳಿವೆ. ಈ ಎಲ್ಲಾ ಫೀಚರ್‌ಗಳು ಎಡ್ಜ್‌ನಲ್ಲೂ ಇವೆ. ಫೇವರಿಟ್, ಕಲೆಕ್ಷನ್, ಬ್ರೌಸರ್ ಹಿಸ್ಟರಿ, ಎಕ್ಸ್‌ಟೆನ್ಷನ್, ಮಲ್ಟಿಪಲ್ ಪ್ರೈವೇಸಿ ಲೆವೆಲ್, ಪಾಸ್‌ವರ್ಡ್ ಮ್ಯಾನೇಜರ್, ರೀಡರ್, ಪ್ರೈವೇಟ್ ಬ್ರೌಸಿಂಗ್ ಇತ್ಯಾದಿ ಫೀಚರ್‌ಗಳು ಎಡ್ಜ್‌ನಲ್ಲಿವೆ.