ಕನ್ನಡ ಸುದ್ದಿ  /  Lifestyle  /  Technology News New Oneplus Series Yet To Be Release Oneplus 12 Teaser Video Shows New Colors And Design New Phone Rst

OnePlus 12: ಮಾರುಕಟ್ಟೆಗೆ ಬರಲು ಸಜ್ಜಾಗಿದೆ ಒನ್‌ಪ್ಲಸ್‌ 12; ಟೀಸರ್‌ ವಿಡಿಯೊದಲ್ಲಿ ಕಂಡ ಹೊಸ ಫೋನ್‌ನ ವೈಶಿಷ್ಟ್ಯವಿದು

ಒನ್‌ಪ್ಲಸ್‌ನ ಹೊಸ ಆವೃತ್ತಿಯ ಫೋನ್‌ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಒನ್‌ಪ್ಲಸ್‌ 12 ಸದ್ಯ ಆಸಕ್ತಿ ಹೆಚ್ಚಿಸಿದ್ದು, ಈ ಫೋನ್‌ ಹೇಗಿರಲಿದೆ ಎಂಬ ಕುತೂಹಲ ಒನ್‌ಪ್ಲಸ್‌ ಪ್ರೇಮಿಗಳಲ್ಲಿರುವುದು ಸಹಜ. ಚೀನಾದ ಸಾಮಾಜಿಕ ಜಾಲತಾಣದಲ್ಲಿ ಇದರ ಟೀಸರ್‌ ವಿಡಿಯೊವೊಂದು ರಿಲೀಸ್‌ ಆಗಿದ್ದು, ಬಣ್ಣ, ವಿನ್ಯಾಸ ಸೇರಿದಂತೆ ವೈಶಿಷ್ಟ್ಯಗಳು ಹೀಗಿವೆ.

ಒನ್‌ಪ್ಲಸ್‌ 12
ಒನ್‌ಪ್ಲಸ್‌ 12 (CNET )

ಮೊಬೈಲ್‌ ಫೋನ್‌ ಕ್ಷೇತ್ರದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವುದು ಆಪಲ್‌, ಎರಡನೇ ಸ್ಥಾನ ಹಾಗೂ ಹೆಚ್ಚು ಬೇಡಿಕೆ ಇರುವ ಫೋನ್‌ ಎಂದರೆ ಒನ್‌ಪ್ಲಸ್‌ ಎಂದರೆ ತಪ್ಪಾಗಲಿಕ್ಕಿಲ್ಲ. ಒನ್‌ಪ್ಲಸ್‌ ಫೋನ್‌ ತನ್ನ ಹೊಸ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದೀಗ ಒನ್‌ಪ್ಲಸ್‌ 12ರ ಆವೃತ್ತಿ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಟೀಸರ್‌ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ ಕಂಪನಿ.

ಸದ್ಯ ಬಿಡುಗಡೆಯಾಗುತ್ತಿರುವ ಫೋನ್‌ ಒನ್‌ಪ್ಲಸ್‌ ಕಂಪನಿಯ ಪ್ರಮುಖ ಫೋನ್‌ ಆಗಿರುವುದು ಸುಳ್ಳಲ್ಲ. ಇದು ಒನ್‌ಪ್ಲಸ್‌ ಕಡೆಯಿಂದ 2023ರಲ್ಲಿ ಬಿಡುಗಡೆಯಾಗುತ್ತಿರುವ ಕೊನೆಯ ಉಪಕರಣವಾಗಿದೆ. ಒನ್‌ಪ್ಲಸ್‌ ಇತ್ತೀಚೆಗೆ ಚೀನಾದ ಸಾಮಾಜಿಕ ಜಾಲತಾಣವಾದ Weibo ದಲ್ಲಿ ಇನ್ನಷ್ಟೇ ಮಾರುಕಟ್ಟೆಗೆ ಬರಲಿರುವ ಹೊಸ ಫೋನ್‌ ಟೀಸರ್‌ ವಿಡಿಯೊವನ್ನು ಪೋಸ್ಟ್‌ ಮಾಡಿದೆ. ಡಿಸೆಂಬರ್‌ 5 ರಂದು ಚೀನಾದಲ್ಲಿ ಬಿಡುಗಡೆಯಾಗಲಿರುವ ಹೊಸ ಒನ್‌ಪ್ಲಸ್‌ 12ನ ಕೆಲವು ತುಣುಕುಗಳನ್ನು ತೋರಿಸಿದೆ.

ಈ ವಿಡಿಯೊ ತುಣುಕಿನಲ್ಲಿ ಫೋನ್‌ನ ಹಿಂಭಾಗ ಮಾತ್ರ ತೋರಿಸುತ್ತದೆಯಾದರೂ, ಕಳೆದ ವರ್ಷ ಬಿಡುಗಡೆಯಾದ ಒನ್‌ಪ್ಲಸ್‌ 11 ಗಿಂತ ಹೆಚ್ಚು ಭಿನ್ನವಾಗಿಲ್ಲ ಎಂದು ತೋರುತ್ತಿದೆ ಎಂದು ಸಿಎನ್‌ಇಟಿ ವರದಿ ಮಾಡಿದೆ. ಮ್ಯೂಟ್‌, ವೈಬ್ರೇಟ್‌, ರಿಂಗರ್‌ ಸೆಟ್ಟಿಂಗ್‌ಗಳನ್ನು ಬಲಭಾಗದಿಂದ ಎಡಭಾಗಕ್ಕೆ ಶಿಫ್ಟ್‌ ಮಾಡಿರುವುದನ್ನು ಗಮನಿಸಬಹುದಾಗಿದೆ. ಮೊಬೈಲ್‌ ಅದರಲ್ಲೂ ಒನ್‌ಪ್ಲಸ್‌ ಪ್ರೇಮಿಗಳಿಗೆ ಈ ಬದಲಾವಣೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಹ್ಯಾಂಡ್‌ಸೆಟ್‌ನಲ್ಲಿ ಟು-ಬೈ-ಟು ಗ್ರಿಡ್‌ನಲ್ಲಿ ಕ್ಯಾಮೆರಾಗಳನ್ನು ಹೊಂದಿಸಲಾಗಿದೆ. ಹತ್ತಿರದಿಂದ ಗಮನಿಸಿದಾಗ ನಾಲ್ಕು ಕ್ಯಾಮೆರಾಗಳಿರುವುದನ್ನು ಗಮನಿಸಬಹುದಾಗಿದೆ. ಕೆಳಗಿನ ಬಲ ವಿಭಾಗದಲ್ಲಿ ಕಳೆದ ವರ್ಷ ಫ್ಲ್ಯಾಷ್‌ ಇತ್ತು. ಆದರೆ ಒನ್‌ಪ್ಲಸ್‌ 12 ಲೈಟ್‌ ಅಥವಾ ಸಣ್ಣ ಫ್ಲ್ಯಾಷ್‌ನಂತೆ ತೋರುವ ಪಕ್ಕದಲ್ಲಿ ಸಣ್ಣ ಲೆನ್ಸ್ ಅನ್ನು ಹೊಂದಿರುವಂತೆ ತೋರುತ್ತಿದೆ.

ಕ್ಯಾಮೆರಾವನ್ನು ಸುತ್ತುವರಿದಿರುವ ವೃತ್ತಾಕಾರದ ಡಿಸ್ಕ್‌ ಒನ್‌ಪ್ಲಸ್‌ 11ನಲ್ಲಿನ ಗಾತ್ರದಂತೆಯೇ ಕಾಣುತ್ತದೆ. ಒನ್‌ಪ್ಲಸ್‌ 12 ಬಿಳಿ ಹಾಗೂ ಟೀಲ್‌ ಬಣ್ಣಗಳನ್ನು ಹೊಂದಿದೆ.

ಒನ್‌ಪ್ಲಸ್‌ ಸಂಸ್ಥೆ ಅಧಿಕೃತವಾಗಿ ತನ್ನ ಹೊಸ ಫೋನ್‌ ಆವೃತ್ತಿ ಬಗ್ಗೆ ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲ.