Digital Jagathu: ಸೋಷಿಯಲ್ ಎಂಜಿನಿಯರಿಂಗ್ ವಿರಾಟ್ ಲೋಕ, ಫಿಶಿಂಗ್ ಬೈಟಿಂಗ್ ಎಂದೆಲ್ಲ ಥರೇವಾರಿ ಹೆಸರು, ಎಚ್ಚರ ತಪ್ಪದಿರಿ ಹುಷಾರು
Digital Jagathu: ಸೋಷಿಯಲ್ ಎಂಜಿನಿಯರಿಂಗ್ ಎಂದರೆ ಯಾವುದೋ ಸಾಫ್ಟ್‌ವೇರ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಎಂದುಕೊಳ್ಳಬೇಡಿ. ಆನ್‌ಲೈನ್ ಜಗತ್ತಿನಲ್ಲಿ ಬೈಟಿಂಗ್, ಫಿಶಿಂಗ್, ಪ್ರಿಟೆಕ್ಸ್ಟಿಂಗ್ ಇತ್ಯಾದಿ ವಂಚನೆ ಮಾಡುವ ಸೋಷಿಯಲ್ ಎಂಜಿನಿಯರಿಂಗ್‌ನ ಪರಿಚಯ ಇಲ್ಲಿದೆ.
ಡಿಜಿಟಲ್ ಜಗತ್ತಿನಲ್ಲಿ ಪ್ರತಿನಿತ್ಯ ಹ್ಯಾಕಿಂಗ್, ಫಿಶಿಂಗ್, ಸ್ಕ್ಯಾಮ್ ಇತ್ಯಾದಿ ಸುದ್ದಿಗಳನ್ನು ಪ್ರತಿನಿತ್ಯ ಕೇಳುತ್ತ ಇರುತ್ತೇವೆ. ಆನ್‌ಲೈನ್ ವಂಚನೆಗೆ ಒಳಗಾಗಿ ಹತ್ತು ಲಕ್ಷ ರೂಪಾಯಿ ಕಳೆದುಕೊಂಡರಂತೆ ಎಂಬ ಸುದ್ದಿ ಓದಿದಾಗ "ಅಷ್ಟೂ ಜಾಗೃತೆ ಇಲ್ವ?ʼ" ಎಂದುಕೊಳ್ಳುತ್ತೇವೆ. ಈ ಹ್ಯಾಕರ್‌ಗಳು ಸಾಕಷ್ಟು ಅಪ್‌ಡೇಟ್ ಆಗಿದ್ದು, ಬುದ್ಧಿವಂತರೆಂದುಕೊಳ್ಳುವವರೂ ಕೂಡ ಇವರ ವಂಚನೆಗೆ ಒಳಗಾಗಬಹುದು. ಗೊತ್ತೇ ಆಗದಂತೆ ನಮ್ಮ ಡೇಟಾ, ಬ್ಯಾಂಕ್ ಮಾಹಿತಿ ಕದಿಯುವಂತಹ ಕಲೆ ಅವರಿಗೆ ಕರಗತ. ಇವತ್ತಿನ ಡಿಜಿಟಲ್ ಜಗತ್ತಿನಲ್ಲಿ ಸೋಷಿಯಲ್ ಎಂಜಿನಿಯರಿಂಗ್ ಕುರಿತು ತಿಳಿದುಕೊಳ್ಳೋಣ. ಇದ್ಯಾವುದೋ ಮೆಕ್ಯಾನಿಕಲ್ ಎಂಜಿನಿಯರಿಂಗ್ ರೀತಿ ಒಂದು ಎಂಜಿನಿಯರಿಂಗ್ ಎಂದುಕೊಳ್ಳಬೇಡಿ. ಸೋಷಿಯಲ್ ಎಂಜಿನಿಯರಿಂಗ್ ಎಂದರೆ ಹಲವು ಬಗೆಯ ಆನ್‌ಲೈನ್ ವಂಚನೆಗಳನ್ನು ಒಳಗೊಂಡಿರುವ ಒಂದು ವಿಭಾಗ.
ಸೋಷಿಯಲ್ ಎಂಜಿನಿಯರಿಂಗ್ ಎಂದರೆ ಮಾನವರ ಪರಸ್ಪರ ಚಟುವಟಿಕೆ ಮೂಲಕ ನಡೆಯುವ ದುರುದ್ದೇಶಪೂರಿತ ಚಟುವಟಿಕೆ. ನಾವು ಆನ್‌ಲೈನ್ ಮಾಡುವ ಭದ್ರತಾ ತಪ್ಪುಗಳನ್ನು ಬಳಸಿಕೊಂಡು ನಮ್ಮ ಆನ್‌ಲೈನ್ ಖಾತೆಗೆ ಕನ್ನ ಹಾಕುವುದು ಆಗಿರಬಹುದು, ಸೂಕ್ಷ್ಮ ಮಾಹಿತಿಯನ್ನು ನೀಡುವಂತೆ ಬಳಕೆದಾರರನ್ನು ಜಾಣತನದಿಂದ ಪುಸಲಾಯಿಸುವಂತಹ ಮಾನಸಿಕ ಕುಶಲತೆ ಇದಾಗಿದೆ. ಸೋಷಿಯಲ್ ಎಂಜಿನಿಯರಿಂಗ್ ಎನ್ನುವುದು ಒಂದು ಅಥವಾ ಹಲವು ಹಂತಗಳಲ್ಲಿ ನಡೆಯುವ ಪ್ರಕ್ರಿಯೆ. ಮೊದಲಿಗೆ ಯಾರ ಕಂಪ್ಯೂಟರ್, ಯಾರ ಮೊಬೈಲ್ ಭದ್ರತೆ ಹೊಂದಿಲ್ಲ ಎಂದು ವಂಚಕರು ಮೊದಲಿಗೆ ತಿಳಿದುಕೊಳ್ಳುತ್ತಾರೆ. ಬಳಿಕ ಇಂತಹ ಆನ್‌ಲೈನ್ ಬಳಕೆದಾರರ ವಿಶ್ವಾಸವನ್ನು ಗಳಿಸಲು ಪ್ರಯತ್ನಿಸಲಾಗುತ್ತದೆ. "ನಿಮ್ಮ ಮೊಬೈಲ್ ಭದ್ರತೆ ತೊಂದರೆ ಹೊಂದಿದೆ, ಈಗಲೇ ಈ ಭದ್ರತಾ ಸಾಫ್ಟ್ವೇರ್ ಹಾಕಿಕೊಳ್ಳಿ" ಎಂಬ ನೋಟಿಫಿಕೇಶನ್ ಬಂದರೆ ಸಾಕಷ್ಟು ಜನರು ಇನ್‌ಸ್ಟಾಲ್ ಮಾಡಿಕೊಳ್ಳುತ್ತಾರೆ. ವಂಚಕರು ಈ ಮೂಲಕ ನಿಮ್ಮಲ್ಲಿ ನಂಬಿಕೆ ಹುಟ್ಟುವಂತೆ ಮಾಡುವ ವಿಧಾನಗಳ ಮೂಲಕ ನಿಮ್ಮ ಕಂಪ್ಯೂಟರ್‌ಗೆ ಪ್ರವೇಶಿಸುತ್ತಾರೆ.
ಸೋಷಿಯಲ್ ಎಂಜಿನಿಯರಿಂಗ್ ಮೂಲಕ ದಾಳಿ ನಡೆಸುವುದು ಹೇಗೆ?
ಮೊದಲನೆಯದಾಗಿ ಬಲಿಪಶುಗಳನ್ನು ಹುಡುಕಲಾಗುತ್ತದೆ. ಈ ಹಂತಕ್ಕೆ ಇನ್ವೆಸ್ಟಿಗೇಷನ್ ಅಥವಾ ತನಿಖೆ ಎಂದು ಕರೆಯುತ್ತಾರೆ. ಯಾರ ಸೋಷಿಯಲ್ ಮೀಡಿಯಾ ಹ್ಯಾಕ್ ಮಾಡಬಹುದು, ಯಾರ ವೆಬ್‌ಸೈಟ್, ಯಾರ ಇಮೇಲ್ ಹ್ಯಾಕ್ ಮಾಡಬಹುದು ಎಂದು ಮೊದಲಿಗೆ ಯೋಚಿಸುತ್ತಾರೆ. ಉದಾಹರಣೆಗೆ ಸುಲಭ ಪಾಸ್‌ವರ್ಡ್ ಬಳಸಿರುವವರು, ಭದ್ರತಾ ಸಾಫ್ಟ್‌ವೇರ್‌ಗಳನ್ನು ಹೊಂದಿಲ್ಲದೆ ಇರುವವರು ಮೊದಲ ಟಾರ್ಗೆಟ್ ಆಗುತ್ತಾರೆ. ಬಳಿಕ ಆ ಬಲಿಪಶುವಿನ ಹಿನ್ನೆಲೆ ಮಾಹಿತಿ ಕಲೆ ಹಾಕುತ್ತಾರೆ. ಬಳಿಕ ಈ ವ್ಯಕ್ತಿ ಮೇಲೆ ಯಾವ ವಿಧಾನದಲ್ಲಿ ದಾಳಿ ಮಾಡಬಹುದು ಎಂದು ಯೋಜಿಸುತ್ತಾರೆ.
ಸೋಷಿಯಲ್ ಎಂಜಿನಿಯರಿಂಗ್‌ನ ಎರಡನೇ ಹಂತಕ್ಕೆ ಹುಕ್ ಎನ್ನುತ್ತಾರೆ. ಮಿಕವನ್ನು ಕೆಡವುವ ಎರಡನೇ ಪ್ರಮುಖ ಇದಾಗಿದೆ. ಟಾರ್ಗೆಟ್ ಬಲಿಪಶುವಿನ ಜತೆ ವಂಚಕರು ಎಂಗೇಜ್ ಆಗುವಂತಹ ಪ್ರಕ್ರಿಯೆ. ಸುಳ್ಳು ಕತೆ ಹೇಳುವಂತಹ ಸಮಯವಿದು. ಈ ಸಂವಹನ ಹಂತದಲ್ಲಿ ಬಲಿಪಶುವಿನ ಜತೆಗೆ ವಿವಿಧ ಸಂವಹನ ನಡೆಸಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಲಾಗುತ್ತದೆ (ಇದು ಸಾಮಾನ್ಯವಾಗಿ ಬಲಿಪಶುವಿಗೆ ಸುಲಭವಾಗಿ ತಿಳಿಯುವುದೇ ಇಲ್ಲ).
ಮೂರನೇ ಹಂತ ಆಟದ ಸಮಯ. ಒಂದು ನಿರ್ದಿಷ್ಟ ಸಮಯದವರೆಗೆ ಬಲಿಪಶುವಿನ ಮಾಹಿತಿ ತೆಗೆದುಕೊಳ್ಳುವುದು, ಅಟ್ಯಾಕ್ ಆರಂಭಿಸುವುದು, ಬಲಿಪಶುವಿನ ಬಿಸ್ನೆಸ್ ಹಾಳು ಮಾಡುವುದು, ಡೇಟಾ ಹಾಳು ಮಾಡುವುದನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸಾಕಷ್ಟು ಡೇಟಾ ಅಥವಾ ಪ್ರಮುಖ ಮಾಹಿತಿಗಳನ್ನು ತೆಗೆದುಕೊಳ್ಳಲಾಗುತ್ತದೆ.
ನಂತರದ ಕೊನೆಯ ಹಂತದಲ್ಲಿ ಸಂವಹನ ನಿಲ್ಲಿಸಲಾಗುತ್ತದೆ. ಇದು ಬಲಿಪಶುವಿಗೆ ಗೊತ್ತಾಗುವುದಿಲ್ಲ. ಮಾಲ್‌ವೇರ್ ತೆಗೆಯಲಾಗುತ್ತದೆ. ನಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಏನೂ ನಡೆದೇ ಇಲ್ಲದಂತೆ ನಮಗೆ ಕಾಣಿಸುತ್ತದೆ, ನಮಗೆ ತಿಳಿಯದಂತೆ ನಮ್ಮ ಪ್ರಮುಖ ಮಾಹಿತಿಗಳು ಕಳ್ಳರ ಪಾಲಾಗಿರುತ್ತದೆ.
ಸೋಷಿಯಲ್ ಎಂಜಿನಿಯರಿಂಗ್ ದಾಳಿಯ ತಂತ್ರಗಳು
ಎಲ್ಲಿ ಮನುಷ್ಯರ ಇಂಟಾರಾಕ್ಷನ್ ಅಥವಾ ಚಟುವಟಿಕೆಗಳು (ಪಾಸ್‌ವರ್ಡ್ ನಮೂದಿಸುವುದು, ವೈಯಕ್ತಿಕ ಮಾಹಿತಿ ನಮೂದಿಸುವುದು ಇತ್ಯಾದಿ) ಡಿಜಿಟಲ್ ಸಾಧನದಲ್ಲಿ ನಡೆಯುತ್ತದೆಯೋ ಅಲ್ಲೆಲ್ಲ ಸೋಷಿಯಲ್ ಎಂಜಿನಿಯರಿಂಗ್‌ನ ವಿವಿಧ ವಿಧಾನಗಳ ಮೂಲಕ ಧಾಳಿ ಮಾಡಲು ಪ್ರಯತ್ನಿಸಲಾಗುತ್ತದೆ. ಕೆಲವೊಂದು ಡಿಜಿಟಲ್ ಸೋಷಿಯಲ್ ಎಂಜಿನಿಯರಿಂಗ್ ವಿಧಾನಗಳು ಈ ಮುಂದಿನಂತೆ ಇವೆ.
ಬೈಟಿಂಗ್ ಅಥವಾ ಕಚ್ಚುವುದು
ನೀವು ಯಾವುದಾದರೂ ಫ್ಲಾಷ್ ಡ್ರೈವ್ ಅನ್ನು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗೆ ಬಳಸಿದಾಗ ಆ ಫ್ಲಾಷ್ ಡ್ರೈವ್ ಮೂಲಕ ನಿಮ್ಮ ಸಾಧನವನ್ನು ಪ್ರವೇಶಿಸಬಹುದು. ನಿಮ್ಮ ಮೊಬೈಲ್‌ಗೆ "ಕಂಗ್ರಾಜ್ಯುಲೇಷನ್, ನೀವು ಐಫೋನ್ 14 ಲಕ್ಕಿ ವಿನ್ನರ್, ಈ ಬಹುಮಾನ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ" "ಅಡಾಬ್ ಫೋಟೋಶಾಪ್ ಸಾಪ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಿ, ಉಚಿತವಾಗಿ ಡೌನ್‌ಲೋಡ್ ಮಾಡಲು ಎರಡು ಗಂಟೆಗಳು ಮಾತ್ರ ಉಳಿದಿವೆ" ಇತ್ಯಾದಿ ಆಕರ್ಷಕ ಲಿಂಕ್‌ಗಳ ಮೂಲಕ ನಿಮ್ಮ ಕಂಪ್ಯೂಟರ್/ಮೊಬೈಲ್ ಸಾಧನವನ್ನು ಪ್ರವೇಶಿಸಲು ಪ್ರಯತ್ನಿಸಲಾಗುತ್ತದೆ. ಇನ್ಮುಂದೆ ಈ ರೀತಿ ಆಮೀಷದ ಲಿಂಕ್‌ಗಳು ಬಂದರೆ ಕ್ಲಿಕ್ ಮಾಡಬೇಡಿ ಅಥವಾ ಇತರರಿಗೆ ಕಳುಹಿಸಬೇಡಿ.
ಸ್ಕೇರ್‌ವೇರ್
ಸ್ಕೇರ್ ಎಂದರೆ ಭಯ. ಹೆಸರಿನಂತೆ ಬಲಿಪಶುವಿಗೆ ಭಯ ಹುಟ್ಟಿಸಿ ದಾಳಿ ನಡೆಸುವುದು. ನಿಮ್ಮ ಮೊಬೈಲ್‌ಗೆ ವೈರಸ್ ಅಟ್ಯಾಕ್ ಆಗಿದೆ, ಈಗಲೇ ಈ ಸಾಫ್ಟ್‌ವೇರ್ ಅಳವಡಿಸಿ ವೈರಸ್ ಕ್ಲೀನ್ ಮಾಡಿ ಎಂಬರ್ಥದ ಸಂದೇಶವನ್ನು ಬಲಿಪಶುವಿಗೆ ಕಳುಹಿಸುವುದು. ಈ ಮೂಲಕ ಡಿಜಿಟಲ್ ಬಳಕೆದಾರರಿಗೆ ಭಯ ಹುಟ್ಟಿಸಿ ದಾಳಿ ನಡೆಸಲಾಗುತ್ತದೆ. ಇಂತಹ ಸಂದೇಶಗಳು ಕಾಣಿಸಿದಾಗ ಹೆಚ್ಚಿವನರು ಅಲ್ಲಿ ಕಂಡ ಸಾಫ್ಟ್‌ವೇರ್, ಆಪ್ ಇನ್‌ಸ್ಟಾಲ್ ಮಾಡಿಕೊಳ್ಳುತ್ತಾರೆ. ಇಂತಹ ಸಾಫ್ಟ್‌ವೇರ್‌ಗಳಿಂದ ಏನೂ ಪ್ರಯೋಜನ ಇರುವುದಿಲ್ಲ, ಬದಲಾಗಿ ಆ ಮಾಲ್‌ವೇರ್ ನಮ್ಮ ಸಾಧನಗಳನ್ನು ಪ್ರವೇಶಿಸುತ್ತದೆ. ಯಾವುದಾದರೂ ವೆಬ್‌ಸೈಟ್ ಪ್ರವೇಶಿಸಿದಾಗ ಅಥವಾ ಸ್ಪಾಮ್ ಇಮೇಲ್ ಮೂಲಕವೂ ಇಂತಹ ಸ್ಕೇರ್‌ವೇರ್ ನಿಮ್ಮ ಕಂಪ್ಯೂಟರ್, ಮೊಬೈಲ್ ಪ್ರವೇಶಿಸಬಹುದು.
ಸಂದೇಶ ಕಳುಹಿಸುವುದು
ಜಾಣತನದ ಸಂದೇಶ ಕಳುಹಿಸಿ ಬಳಕೆದಾರರ ಮಾಹಿತಿ ಕದಿಯುವುದಕ್ಕೆ ಪ್ರಿಟೆಕ್ಸ್ಟ್ರಿಂಗ್ ಎನ್ನಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ಎಂಬ ಸಂದೇಶ ಮಾಡಿದರೆ ನೂರರಲ್ಲಿ ಒಬ್ಬರಾದರೂ ಕ್ಲಿಕ್ ಮಾಡಿ ತಮ್ಮ ವೈಯಕ್ತಿಕ ಮಾಹಿತಿ ನೀಡದೆ ಇರುತ್ತಾರೆಯೇ? ನಿಮ್ಮ ಆದಾಯ ತೆರಿಗೆ ರಿಫಂಡ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ಎಂಬ ಸಂದೇಶವೂ ಇಂತಹ ಮೋಸದ ಸಂದೇಶಕ್ಕೆ ಉದಾಹರಣೆಯಾಗಿದೆ.
ಫಿಶಿಂಗ್
ವಂಚಕರು ಫಿಶಿಂಗ್ ಎಂಬ ವಿಧಾನದ ಮೂಲಕ ಬಲಿಪಶುಗಳನ್ನು ಹೆಚ್ಚಾಗಿ ಹುಡುಕುತ್ತಾರೆ. ಇದು ಮೀನಿಗೆ ಗಾಳ ಹಾಕುವ ಪ್ರಕ್ರಿಯೆ. ಗಾಳಕ್ಕೆ ನಾವು ಸಿಕ್ಕಿ ಹಾಕಿಕೊಳ್ಳದಂತೆ ಎಚ್ಚರವಹಿಸಬೇಕು. ನಿಮ್ಮ ಇಮೇಲ್‌ನ ಪಾಸ್‌ವರ್ಡ್ ತಕ್ಷಣ ಬದಲಾಯಿಸಿ ಎಂಬ ಸಂದೇಶ ಕಳುಹಿಸುವುದು, ಆನ್‌ಲೈನ್ ನಿಯಮ ಉಲ್ಲಂಘಣೆಯಾಗಿದೆ, ನಿಮ್ಮ ವಿವರವನ್ನು ಮತ್ತೆ ನಮೂದಿಸಿ ಎಂಬ ಇಮೇಲ್ ಕಳುಹಿಸುವುದು ಇಂತಹ ಫಿಶಿಂಗ್‌ಗೆ ಕೆಲವು ಉದಾಹರಣೆ. ಇಮೇಲ್‌ನಲ್ಲಿ ಅನುಮಾನಸ್ಪದವಾಗಿ ಬರುವ ಯಾವುದೇ ಲಿಂಕ್ ಕ್ಲಿಕ್ ಮಾಡದೆ ಇರುವುದು ಜಾಣತನ.
ಸ್ಪಿಯರ್ ಫಿಶಿಂಗ್ ಇನ್ನೂ ಹೆಚ್ಚು ಅಪಾಯಕಾರಿ. ಉದ್ಯೋಗಾವಕಾಶದ ಲಿಂಕ್ ಕಳುಹಿಸುವುದು, ಲಾಟರಿ ಬಹುಮಾನ ಬಂದಿದೆ ಎಂಬ ಲಿಂಕ್ ಕಳುಹಿಸುವುದು, ಐಟಿ ಕನ್ಸಲ್ಟೆಂಟ್ ಎಂದು ಸಂದೇಶ ಕಳುಹಿಸುವುದು ಇತ್ಯಾದಿಗಳು ಇದಕ್ಕೆ ಉದಾಹರಣೆಯಾಗಿದೆ. ಇವು ಸುಲಭವಾಗಿ ಸಂದೇಹ ಬರದಂತೆ ಇರುತ್ತದೆ. ಸರಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ ಎಂಬ ಲಿಂಕ್ ಕಳುಹಿಸುವುದು ಇದರಲ್ಲಿ ಸೇರಿದೆ, ನೀವು ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ವೆಬ್‌ಸೈಟ್‌ಗಳು ಅಸಲಿ ವೆಬ್‌ಸೈಟ್‌ನಂತೆಯೇ ಇರುತ್ತದೆ.
ಇದು ಸೋಷಿಯಲ್ ಎಂಜಿನಿಯರಿಂಗ್ ಎಂದರೇನು, ಯಾವೆಲ್ಲ ರೀತಿ ಕೆಲಸ ಮಾಡುತ್ತದೆ ಎಂಬ ಮಾಹಿತಿ. ಆನ್‌ಲೈನ್ ಜಗತ್ತಿನಲ್ಲಿ ಬಲಿಪಶುಗಳನ್ನು ಆನ್‌ಲೈನ್ ವಂಚಕರು, ಆನ್‌ಲೈನ್ ಅಪರಾಧಿಗಳು, ಆನ್‌ಲೈನ್ ಕಿರಾತಕರು ಹುಡುಕುತ್ತ ಇರುತ್ತರೆ. ಆನ್‌ಲೈನ್ ಬಳಸುವಾಗ ಸದಾ ಎಚ್ಚರಿಕೆಯಿಂದ ಇರುವುದೇ ಡಿಜಿಟಲ್ ಜಗತ್ತಿನಲ್ಲಿ ನಮ್ಮನ್ನು ಸುರಕ್ಷಿತವಾಗಿಡಬಲ್ಲದು.
ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ಡಿಜಿಟಲ್ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in , ht.kannada@htdigital.in