ವಾಟ್ಸ್ಆ್ಯಪ್ನಲ್ಲಿ ಬಂತು ಫೇಸ್ಬುಕ್, ಇನ್‌ಸ್ಟಾಗ್ರಾಂನಲ್ಲಿದೆ ಬಂಪರ್ ಫೀಚರ್: ಬಳಕೆದಾರರು ಫಿದಾ
ಇದೀಗ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಅಪ್‍ಡೇಟ್ ಬಿಡುಗಡೆ ಮಾಡಿದೆ.ಮೆಟಾ ಕಂಪನಿಯು ವಾಟ್ಸ್ಆ್ಯಪ್ನಲ್ಲಿ ಡಬಲ್ ಟ್ಯಾಪ್ ರಿಯಾಕ್ಷನ್ ವೈಶಿಷ್ಟ್ಯವನ್ನು ಪರಿಚಯಿಸಿದೆ.ಈ ವೈಶಿಷ್ಟ್ಯವನ್ನು ಆರಂಭದಲ್ಲಿ ನೇರವಾಗಿ ಆಂಡ್ರಾಯ್ಡ್ ಬಳಕೆದಾರರಿಗೆ ನೀಡಲಾಗುವುದು ಎಂದು ಕಂಪನಿ ಹೇಳಿದೆ. (ಬರಹ:ವಿನಯ್ ಭಟ್)

ಮೆಟಾ ಒಡೆತನದ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಇಂದು ವಿಶ್ವದಾದ್ಯಂತ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಕೋಟ್ಯಾಂತರ ಜನರು ಇದನ್ನು ಬಳಸುತ್ತಿದ್ದಾರೆ. ಆರಂಭದಲ್ಲಿ ಕೇವಲ ಚಾಟ್ಗೆ ಮಾತ್ರ ಸೀಮಿತವಾಗಿದ್ದ ಆ್ಯಪ್ನಲ್ಲಿ ಇಂದು ಆಡಿಯೋ ಕಾಲ್, ವಿಡಿಯೋ ಕಾಲ್, ಫೋಟೊ ಕಳುಹಿಸುವುದು, ಟೆಕ್ಸ್ಟ್ ಮೆಸೇಜ್ ಕಳುಹಿಸುವ ಫೀಚರ್ ಸೇರಿಸಿ ತುಂಬಾ ಸುಲಭವಾಗಿದೆ. ಇದಲ್ಲದೇ ವಾಟ್ಸ್ಆ್ಯಪ್ ತನ್ನ ಬಳಕೆದಾರರ ಅನುಕೂಲಕ್ಕಾಗಿ ಕಾಲಕಾಲಕ್ಕೆ ಅನೇಕ ಹೊಸ ನವೀಕರಣಗಳನ್ನು ಬಿಡುಗಡೆ ಮಾಡುತ್ತಿದೆ. ಆ ನಿಟ್ಟಿನಲ್ಲಿ ಇದೀಗ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಅಪ್ ಡೇಟ್ ಬಿಡುಗಡೆ ಮಾಡಿದೆ.
ವಾಟ್ಸ್ಆ್ಯಪ್ನಲ್ಲಿ ಡಬಲ್ ಟ್ಯಾಪ್ ವೈಶಿಷ್ಟ್ಯ
ಮೆಟಾ ಕಂಪನಿಯು ವಾಟ್ಸ್ಆ್ಯಪ್ನಲ್ಲಿ ಡಬಲ್ ಟ್ಯಾಪ್ ರಿಯಾಕ್ಷನ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಹಿಂದೆ, ಬಳಕೆದಾರರು ವಾಟ್ಸ್ಆ್ಯಪ್ ಚಾಟ್‌ನಲ್ಲಿ ಕಳುಹಿಸಲಾದ ಸಂದೇಶಗಳಿಗೆ ಪ್ರತಿಕ್ರಿಯಿಸಲು ಪ್ರತಿ ಮೆಸೇಜ್ ಅನ್ನು ಒತ್ತಿ ಹಿಡಿಯಬೇಕಾಗಿತ್ತು, ಆದರೆ ಈಗ ಅದನ್ನು ಸುಲಭಗೊಳಿಸಲಾಗಿದೆ. ಪಠ್ಯ ಸಂದೇಶಗಳನ್ನು ಡಬಲ್ ಟ್ಯಾಪ್ ಮಾಡುವ ಮೂಲಕ ಸುಲಭವಾಗಿ ಪ್ರತಿಕ್ರಿಯಿಸಬಹುದು.
ನೀವು ವಾಟ್ಸ್ಆ್ಯಪ್ನ ಈ ಡಬಲ್ ಟ್ಯಾಗ್ ಪ್ರತಿಕ್ರಿಯೆಯನ್ನು ಬಳಸಿದಾಗ, ಸ್ವಯಂಚಾಲಿತವಾಗಿ ಹೃದಯದ ಎಮೋಜಿಯನ್ನು ತೋರಿಸುತ್ತದೆ. ಆದಾಗ್ಯೂ, ನಿಮಗೆ ಹೃದಯದ ಎಮೋಜಿಯ ಹೊರತಾಗಿ ಬೇರೆ ಎಮೋಜಿ ಬೇಕಾದರೆ, ನೀವು ಹಳೆಯ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಈ ಫೀಚರ್ ಈಗಾಗಲೇ ಮೆಟಾ ಒಡೆತನದ ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ಲಭ್ಯವಿದೆ. ಇದೀಗ ವಾಟ್ಸ್ಆ್ಯಪ್ಗೂ ಇದನ್ನು ವಿಸ್ತರಿಸಿದೆ.
ಸದ್ಯ ವಾಟ್ಸ್ಆ್ಯಪ್ನ ಈ ಡಬಲ್ ಟ್ಯಾಪ್ ವೈಶಿಷ್ಟ್ಯವನ್ನು ನೇರವಾಗಿ ಆಂಡ್ರಾಯ್ಡ್ ಬಳಕೆದಾರರಿಗೆ ಪರಿಚಯಿಸಲಾಗುವುದು ಎಂದು ಕಂಪನಿ ಹೇಳಿದೆ. ಕೆಲ ಬಳಕೆದಾರರಿಗೆ ಈ ಆಯ್ಕೆ ಲಭ್ಯವಾಗಿದೆ. ಆದರೆ ಎಲ್ಲಾ ಬಳಕೆದಾರರಿಗೆ ಈ ಫೀಚರ್ ಯಾವಾಗ ಬಿಡುಗಡೆ ಮಾಡಲಿದೆ ಎಂದು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.
ವಾಟ್ಸ್ಆ್ಯಪ್ನಲ್ಲಿ ರೀ-ಶೇರ್ ಫೀಚರ್:
ವಾಟ್ಸ್ಆ್ಯಪ್ ಸದ್ಯದಲ್ಲೇ ಮತ್ತೊಂದು ಫೀಚರ್ ಹೊರತರಲಿದ್ದು, ಇದರ ಮೂಲಕ ಬಳಕೆದಾರರು ಸ್ಟೇಟಸ್ ಅನ್ನು ರೀ-ಶೇರ್ ಮಾಡುವ ಆಯ್ಕೆ ಪಡೆಯಲಿದ್ದಾರೆ. ಅಂದರೆ ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ಸ್ಟೇಟಸ್ ಅನ್ನು ಪುನಃ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಇನ್ಸ್ಟಾಗ್ರಾಮ್ನಲ್ಲಿ ಇದೇ ರೀತಿಯ ವೈಶಿಷ್ಟ್ಯವು ಈಗಾಗಲೇ ಇದೆ. ವಾಟ್ಸ್ಆ್ಯಪ್ ಆಂಡ್ರಾಯ್ಡ್ ಬೀಟಾ ಆವೃತ್ತಿ 2.24.1.6.4 ನಲ್ಲಿ ಸ್ಟೇಟಸ್ ಮರುಹಂಚಿಕೆ ವೈಶಿಷ್ಟ್ಯದ ಕುರಿತು ಮಾಹಿತಿ ಲಭ್ಯವಿದ್ದು, ಅದರ ಪ್ರಕಾರ ಸ್ಟೇಟಸ್ ಅನ್ನು ಮರು-ಹಂಚಿಕೊಳ್ಳಲು ಶಾರ್ಟ್‌ಕಟ್ ಬಟನ್ ಅನ್ನು ಒದಗಿಸಲಾಗುತ್ತದೆ. ಎರಡನೇ ಬಾರಿ ಹಂಚಿಕೊಳ್ಳುವಾಗ, ಬಳಕೆದಾರರು ಅದರಲ್ಲಿ ಶೀರ್ಷಿಕೆಯನ್ನು ಬರೆಯಲು ಸಾಧ್ಯವಾಗುತ್ತದೆ. ಇದಲ್ಲದೆ, ಎಮೋಜಿಯನ್ನು ಶೀರ್ಷಿಕೆಯಾಗಿ ಬಳಸುವ ಆಯ್ಕೆಯನ್ನು ಸಹ ನೀಡಲಾಗುತ್ತದೆ.

ವಿಭಾಗ