ವಾಟ್ಸಪ್ ಬಳಕೆದಾರರಿಗೆ ಶೀಘ್ರದಲ್ಲಿ ಹೊಸ ಚಾಟ್ ಥೀಮ್‌ಗಳು ಲಭ್ಯ; ನಿಮ್ಮ ಅಭಿರುಚಿ, ಆಸಕ್ತಿಗೆ ತಕ್ಕಂತೆ ಅಂದಗೊಳಿಸಿ
WhatsApp chat themes: ವಾಟ್ಸಪ್‌ನಲ್ಲಿ ಶೀಘ್ರದಲ್ಲಿ ಹೊಸ ಚಾಟ್ ಥೀಮ್‌ಗಳು ಬಿಡುಗಡೆಯಾಗಲಿವೆ. ಒಮ್ಮೆ ಈ ಚಾಟ್ ಥೀಮ್‌ಗಳು ರಿಲೀಸ್ ಆದ ಬಳಿಕ ಬಳಕೆದಾರರು ತಮ್ಮ ಚಾಟ್‌ಗಳ ಲುಕ್ ಮತ್ತು ಫೀಲ್ ಅನ್ನು ವೈಯಕ್ತಿಕ ಅಭಿರುಚಿಗೆ ತಕ್ಕಂತೆ ಅಂದಗೊಳಿಸಬಹುದು.
ಬೆಂಗಳೂರು: ಜಗತ್ತಿನಾದ್ಯಂತ ಅತ್ಯಧಿಕ ಸಂಖ್ಯೆಯಲ್ಲಿ ಜನರು ವಾಟ್ಸ್‌ಆಪ್ (ವಾಟ್ಸಪ್) ಬಳಸುತ್ತಿದ್ದಾರೆ. ಪ್ರತಿದಿನ ಹಲವು ದಶಲಕ್ಷ ಜನರು ವಾಟ್ಸಪ್ ಮೂಲಕ ತಮ್ಮ ಆತ್ಮೀಯರಿಗೆ ಸಂದೇಶ ಕಳುಹಿಸುತ್ತಾ ಇರುತ್ತಾರೆ. ಮೆಟಾ ಮಾಲೀಕತ್ವದ ಮೆಸೆಂಜರ್ ಆಪ್ ಆಗಾಗ ಹೊಸ ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡುತ್ತಾ ಇರುತ್ತದೆ. ಕೆಲವು ವರ್ಷಗಳ ಹಿಂದಿನ ವಾಟ್ಸಪ್‌ಗೆ ಹೋಲಿಸಿದರೆ ಈಗ ವಾಟ್ಸಪ್ ಸಾಕಷ್ಟು ಬದಲಾಗಿದೆ. ದೊಡ್ಡ ಮಟ್ಟದಲ್ಲಿ ವಾಟ್ಸಪ್‌ನಲ್ಲಿ ಬದಲಾವಣೆ ಮಾಡದೆ ಸಾಕಷ್ಟು ದಿನಗಳಾಗಿವೆ. ಇದೀಗ ಹೊಸ ಥೀಮ್ ಫೀಚರ್ (WhatsApp chat themes) ಶೀಘ್ರದಲ್ಲಿ ವಾಟ್ಸಪ್‌ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ವಾಬೀಟಾಇನ್ಪೋ ಎಂಬ ತಾಣದಲ್ಲಿ ಈ ಕುರಿತು ಚರ್ಚಿಸಲಾಗಿದೆ. ಈ ಫೀಚರ್ ಬಂದ ಬಳಿಕ ವಾಟ್ಸಪ್ ಬಳಕೆದಾರರು ಚಾಟ್ ಬಬಲ್‌ಗಳಿಗೆ ತಮಗೆ ಬೇಕಾದ ಬಣ್ಣದ ಥೀಮ್‌ಗಳನ್ನು ಹಾಕಿಕೊಳ್ಳಬಹುದು. ಪ್ರೀ ಇನ್‌ಸ್ಟಾಲ್ ಮಾಡಿರುವ ಥೀಮ್‌ಗಳಿಂದ ವಾಲ್‌ಪೇಪರ್‌ಗಳನ್ನೂ ಹಾಕಿಕೊಳ್ಳಬಹುದು.
ಆಂಡ್ರಾಯ್ಡ್ ಬಳಕೆದಾರರಿಗೆ ಮೊದಲು ವಾಟ್ಸಪ್ ಥೀಮ್ ಲಭ್ಯ
ವಾಟ್ಸಪ್‌ನ ನೂತನ ಥೀಮ್ ಫೀಚರ್ ಆಂಡ್ರಾಯ್ಡ್ 2.24.20.12 ಅಪ್‌ಡೇಟ್‌ನಲ್ಲಿ ಕಾಣಿಸಿಕೊಂಡಿದೆ. ಆಂಡ್ರಾಯ್ಡ್‌ನ ಬೀಟಾ ಅಪ್‌ಡೇಟ್‌ನಲ್ಲಿ ಇದು ಕಾಣಿಸಿಕೊಂಡಿದೆ. ಇದರಲ್ಲಿ 11 ಡಿಫಾಲ್ಟ್ ಆಗಿರುವ 11 ಚಾಟ್ ಥೀಮ್‌ಗಳಿವೆ. ಈ ಥೀಮ್‌ಗಳನ್ನು ಬಳಕೆದಾರರು ಕೊಂಚ ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವ ಅವಕಾಶವಿದೆ.
ಈ ಫೀಚರ್ ಬಿಡುಗಡೆಯಾದ ಬಳಿಕ ಒಬ್ಬರೊಬ್ಬರ ವಾಟ್ಸಪ್ ಒಂದೊಂದು ರೀತಿ ಕಾಣಿಸಲಿದೆ. ಬಳಕೆದಾರರು ತಮಗೆ ಬೇಕಾದಂತೆ ಚಾಟ್‌ಗಳನ್ನು ಕಸ್ಟಮೈಜ್ ಮಾಡಿಕೊಳ್ಳಲು ಅವಕಾಶವಿದೆ. ಡಾರ್ಕ್ ಥೀಮ್ ಬಳಸುವ ಬಳಕೆದಾರರು ಬ್ರೈಟ್‌ನೆಸ್ ಲೆವೆಲ್ ಮಾರ್ಪಾಡು ಮಾಡುವ ಅವಕಾಶವನ್ನೂ ಪಡೆಯಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬಳಕೆದಾರರು ಒಂದು ಥೀಮ್ ಅನ್ನು ಆಯ್ಕೆ ಮಾಡಿಕೊಂಡಾಗ ವಾಲ್‌ಪೇಪರ್ ಮತ್ತು ಚಾಟ್ ಬಬಲ್ ಬಣ್ಣಗಳು ಕೂಡ ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗಲಿದೆ. ಯಾವ ಸ್ಟೈಲ್ ಆಯ್ಕೆ ಮಾಡಿಕೊಂಡಿರುವಿರೋ ಅದಕ್ಕೆ ತಕ್ಕಂತೆ ಬಣ್ಣ ಮತ್ತು ವಾಲ್‌ಪೇಪರ್‌ಗಳು ಬದಲಾಗಲಿವೆ. ಇದೇ ಸಮಯದಲ್ಲಿ ಹೊಸ ಬಬಲ್ ಬಣ್ಣವನ್ನು ಉಳಿಸುತ್ತಲೇ ವಾಲ್‌ಪೇಪರ್ ಬದಲಾಯಿಸುವ ಅವಕಾಶವೂ ಬಳಕೆದಾರರಿಗೆ ದೊರಕಲಿದೆ. ಇದರಿಂದ ಒಟ್ಟಾರೆ ಮೆಸೆಜಿಂಗ್ ಅನುಭವ ಉತ್ತಮಗೊಳ್ಳಲಿದೆ.
ಸದ್ಯ ವಾಟ್ಸಪ್ ನೂತನ ಅಪ್‌ಡೇಟ್ ಯಾವಾಗ ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಿಲ್ಲ. ನೀವು ನಿಮ್ಮ ವಾಟ್ಸಪ್ ಅಪ್‌ಡೇಟ್ ಮಾಡಿಲ್ಲದಿದ್ದರೆ ಈಗಲೇ ಗೂಗಲ್ ಪ್ಲೇ ಸ್ಟೋರ್ ಅಥವಾ ಅಮೆಜಾನ್ ಪ್ಲೇಗೆ ಹೋಗಿ ಆಪ್ ಅಪ್‌ಡೇಟ್ ಮಾಡಿ. ನೂತನ ಚಾಟ್ ಥೀಮ್‌ಗಳು ಸದ್ಯದಲ್ಲಿಯೇ ಎಲ್ಲರ ಫೋನ್‌ಗೆ ಆಗಮಿಸುವ ಸೂಚನೆಯಿದೆ.