YouTube Shorts: ಯೂಟ್ಯೂಬ್ ಶಾರ್ಟ್ಸ್ ಇನ್ಮುಂದೆ ಚಿಕ್ಕದ್ದಲ್ಲ; ಶಾರ್ಟ್ಸ್ ಅವಧಿ 60 ಸೆಕೆಂಡ್‌ನಿಂದ 3 ನಿಮಿಷಕ್ಕೆ ವಿಸ್ತರಣೆ
ಇನ್‌ಸ್ಟಾಗ್ರಾಂ ರೀಲ್ಸ್‌ಗೆ ಹೋಲಿಸಿದರೆ ಯೂಟ್ಯೂಬ್ ಶಾರ್ಟ್‌ಗೆ ಒಂದು ನಿಮಿಷದ ಅವಧಿಯ ಮಿತಿ ಇತ್ತು. ವಿಡಿಯೋವನ್ನು ಇಷ್ಟು ಸಮಯದೊಳಗೆ ಮುಗಿಸುವ ಅನಿವಾರ್ಯತೆ ಇತ್ತು. ಆದರೆ, ಆಕ್ಟೋಬರ್ 15ರಿಂದ ಯೂಟ್ಯೂಬ್‌ನಲ್ಲಿ 3 ನಿಮಿಷದ ಶಾರ್ಟ್ಸ್ ವಿಡಿಯೋ ಅಪ್ಲೋಡ್ ಮಾಡಲು ಸಾಧ್ಯವಿದೆ.
ಬೆಂಗಳೂರು: ಇನ್‌ಸ್ಟಾಗ್ರಾಂ ರೀಲ್ಸ್, ಟಿಕ್‌ಟಾಕ್ ವಿಡಿಯೋ (ಈ ಹಿಂದೆ ಭಾರತದಲ್ಲಿತ್ತು)ಗಳಿಗೆ ಹೋಲಿಸಿದರೆ ಯೂಟ್ಯೂಬ್‌ನ ಶಾರ್ಟ್ಸ್‌ಗಳಿಗೆ ಒಂದು ನಿಮಿಷದ ಮಿತಿ ಇತ್ತು. ಏನು ಶಾರ್ಟ್ಸ್ ಮಾಡೋದಿದ್ರೂ ಒಂದು ನಿಮಿಷದೊಳಗೆ ಮಾಡಬೇಕಿತ್ತು. ಆದರೆ, ಇದೇ ಅಕ್ಟೋಬರ್ 15ರಿಂದ ಈ ಮಿತಿಯನ್ನು ತೆಗೆದುಹಾಕಲು ಗೂಗಲ್ ನಿರ್ಧರಿಸಿದೆ. ಒಂದು ನಿಮಿಷದ ಬದಲು 3 ನಿಮಿಷದವರೆಗಿನ ಯೂಟ್ಯೂಬ್ ಶಾರ್ಟ್ಸ್ ಅಪ್ಲೋಡ್ ಮಾಡಲು ಬಳಕೆದಾರರಿಗೆ ಸಾಧ್ಯವಾಗಲಿದೆ.
ಕೆಲವೊಮ್ಮೆ ಕಂಟೆಂಟ್ ಕ್ರಿಯೆಟರ್‌ಗಳಿಗೆ ತಾವು ಹೇಳಬೇಕಾದ ವಿಷಯವನ್ನು ಶಾರ್ಟ್ಸ್‌ನಲ್ಲಿ ಒಂದು ನಿಮಿಷದಲ್ಲಿ ಹೇಳಿ ಮುಗಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಒಂದೇ ನಿಮಿಷದಲ್ಲಿ ಹೇಳಿ ಮುಗಿಸಬೇಕಾದ ಒತ್ತಡದಲ್ಲಿ ಮಾಹಿತಿಯನ್ನು ಸಮರ್ಪಕವಾಗಿ ನೀಡಲು ಒದ್ದಾಡುತ್ತಾರೆ. ಲಂಬ ಆಕಾರದ ವಿಡಿಯೋದಲ್ಲಿ ಒಂದು ನಿಮಿಷಕ್ಕಿಂತ ಹೆಚ್ಚು ಅವಧಿಯ ಶಾರ್ಟ್ಸ್‌ಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗುವುದು ದೊಡ್ಡಮಟ್ಟದ ಸುಧಾರಣೆಯಾಗಿದೆ ಎಂದು ಟೆಕ್ ವಿಶ್ಲೇಷಕರು ಹೇಳಿದ್ದಾರೆ.
ಯೂಟ್ಯೂಬ್ ಶಾರ್ಟ್ಸ್ ಇನ್ಮುಂದೆ ಚಿಕ್ಕದ್ದಲ್ಲ
ಯೂಟ್ಯೂಬ್ ಕಂಟೆಂಟ್ ಕ್ರಿಯೆಟರ್‌ಗಳು ದೊಡ್ಡ ಗಾತ್ರದ ಶಾರ್ಟ್ಸ್ ಅಪ್ಲೋಡ್ ಮಾಡಲು ಸಾಧ್ಯವಾಗಲಿದೆ ಎಂದು ಯೂಟ್ಯೂಬ್ ತಿಳಿಸಿದೆ. ಈಗಿನ ಒಂದು ನಿಮಿಷದ ಮಿತಿಗೆ ಬದಲಾಗಿ 3 ನಿಮಿಷದವರೆಗಿನ ವಿಡಿಯೋ ಅಪ್ಲೋಡ್ ಮಾಡಲು ಸಾಧ್ಯವಾಗಲಿದೆ. ಸಾಕಷ್ಟು ಕ್ರಿಯೆಟರ್‌ಗಳ ವಿನಂತಿ ಮೇರೆಗೆ ಈ ವಿಸ್ತರಣೆ ಮಾಡಿರುವುದಾಗಿ ಕಂಪನಿ ತಿಳಿಸಿದೆ. ಆದರೆ, ಇದು ಅಕ್ಟೋಬರ್ 15ರ ಬಳಿಕ ಜಾರಿಗೆ ಬರಲಿದೆ. ಅದಕ್ಕಿಂತ ಮೊದಲು ಅಪ್ಲೋಡ್ ಮಾಡುವ ವಿಡಿಯೋಗಳಿಗೆ ಇದು ಅನ್ವಯಿಸದು ಎಂದು ಗೂಗಲ್ ತಿಳಿಸಿದೆ.
ದೊಡ್ಡ ಗಾತ್ರದ ಶಾರ್ಟ್ಸ್‌ಗಳನ್ನು ರೆಕಮೆಂಡ್ ಮಾಡಲು ರೆಕಮೆಂಡೇಷನ್ ಅನ್ನು ಇಂಪ್ರೂವ್ ಮಾಡಲಾಗುತ್ತದೆ ಎಂದು ಯೂಟ್ಯೂಬ್ ಶಾರ್ಟ್ಸ್ ಪ್ರಾಡಕ್ಟ್ ಮ್ಯಾನೇಜ್‌ಮೆಂಟ್ ನಿರ್ದೇಶಕರದ ಟಾಡ್ ಶರ್ಮನ್ ಹೇಳಿದ್ದಾರೆ.
ಯೂಟ್ಯೂಬ್‌ನಲ್ಲಿ ಇನ್ನಷ್ಟು ಅಪ್‌ಡೇಟ್‌ಗಳು
ಶಾರ್ಟ್ಸ್ ಕ್ರಿಯೆಟರ್‌ಗಳಿಗಾಗಿ ಯೂಟ್ಯೂಬ್ ಇನ್ನಷ್ಟು ಫೀಚರ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ ರಚಿಸಿರುವ ಶಾರ್ಟ್ಸ್‌ಗಳ ಟೆಂಪ್ಲೆಂಟ್ ಅನ್ನು ಬಳಸಿ ಮತ್ತೊಂದು ವಿಡಿಯೋ ರಚಿಸುವ ಅವಕಾಶ ದೊರಕಲಿದೆ. ಇದರೊಂದಿಗೆ ಟ್ರೆಂಡ್ಸ್, ಸೌಂಡ್ ಟ್ರ್ಯಾಕ್‌ಗಳಿಗೆ ಸಂಬಂಧಪಟ್ಟಂತೆಯೂ ಹೊಸ ಫೀಚರ್‌ಗಳನ್ನು ಮುಂದಿನ ದಿನಗಳಲ್ಲಿ ತರಲಾಗುತ್ತದೆ. ಇದರೊಂದಿಗೆ ತಮ್ಮ ಫೇವರಿಟ್ ವಿಡಿಯೋಗಳ ಜತೆಗೆ ಶಾರ್ಟ್ಸ್ ರಿಮಿಕ್ಸ್ ಮಾಡಲು ಬಳಕೆದಾರರಿಗೆ ಸಾಧ್ಯವಗಲಿದೆ. ಮಿಕ್ಸ್‌ಗೆ ಎಐ ಫೀಚರ್‌ಗಳು ಸೇರ್ಪಡೆಯಾಗಲಿವೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಶಾರ್ಟ್ಸ್ ಇನ್ನಷ್ಟು ಸ್ವೀಟ್ ಆಗಲಿದೆ.