ವೈಎನ್ ಮಧು ಲೇಖನ: ಇಂಟರ್‌ನೆಟ್‌ಗೆ ಚಾಟ್‌ಜಿಪಿಟಿ ದ್ರೋಹ ಮಾಡುತ್ತಿದ್ದೆಯೇ? ಓಪನ್ ಎಐನ ಮಾಜಿ ಉದ್ಯೋಗಿ ಸುಚಿರ್ ಸಾವಿನ ಸುತ್ತ
Openai Suchir Balaji Death: ಜಗತ್ತು ಇಲ್ಲಿತನಕ ತಲೆಕೆಡಿಸಿಕೊಂಡಿರದ ಹೊಸದೊಂದು ಪ್ರಾಬ್ಲಂ ಸೃಷ್ಟಿಯಾಗಿದೆ. ಅದಕ್ಕೆ ಹೊಸ ನೀತಿ ರೂಪಿಸುವುದು ಅವಶ್ಯವಾಗಿದೆ ಎಂದು "ಓಪನ್‌ಎಐನ ಮಾಜಿ ಉದ್ಯೋಗಿ ಸುಚಿರ್ ಸಾವಿನ ಸುತ್ತ" ಎಂಬ ಲೇಖನದಲ್ಲಿ ಲೇಖಕ ವೈಎನ್ ಮಧು ಅಭಿಪ್ರಾಯಪಟ್ಟಿದ್ದಾರೆ.
ವೈಎನ್ ಮಧು ಲೇಖನ: ಇತ್ತೀಚೆಗೆ ಓಪನ್‌ಎಐನಲ್ಲಿ(ಚಾಟ್‌ಜಿಪಿಟಿ) ಕೆಲಸ ಮಾಡುತ್ತಿದ್ದ ಭಾರತೀಯ ಸುಚಿರ್ ಎಂಬ ಹುಡುಗ (26ರ ಹರೆಯ) ಕಂಪನಿ ತೊರೆದಿದ್ದ. 2020-2024ರವರೆಗೆ ಅಲ್ಲಿದ್ದ. ಕೆಲಸ ಬಿಟ್ಟನಂತರ ನ್ಯೂಯಾರ್ಕ್ ಟೈಮ್ಸ್‌ಗೆ ಒಂದು ಸಂದರ್ಶನ ಕೊಟ್ಟಿದ್ದ. ಅದರಲ್ಲಿ ಓಪನ್‌ಎಐ ಕಂಪನಿ ಕಾಪಿರೈಟ್ ಉಲ್ಲಂಘನೆ ಮಾಡುತ್ತಿದೆ ಎಂದು ವಾದಿಸಿದ್ದ. ಕೆಲವು ದಿವಸಗಳಲ್ಲಿ ಅವನ ಸಾವಾಯಿತು. ಅಮೆರಿಕಾ ಪೊಲೀಸರು ಅದನ್ನು ಆತ್ಮಹತ್ಯೆ ಎಂದು ಷರಾ ಬರೆದಿದ್ದರು. ಆತನ ತಂದೆತಾಯಿ ಖಾಸಗಿ ಇನ್ವೆಸ್ಟಿಗೇಟರುಗಳಿಂದ ಪರಿಶೀಲಿಸಿದಾಗ ಇದು ಆತ್ಮಹತ್ಯೆಯಲ್ಲ ಕೊಲೆ ಎಂಬುದಾಗಿ ಪ್ರಾಥಮಿಕ ವರದಿ ಬಂದಿದೆ. ಆತನ ಅಮ್ಮ ಇದೀಗ ಸಾರ್ವಜನಿಕವಾಗಿ ನ್ಯಾಯಕ್ಕಾಗಿ ಹೋರಾಟಕ್ಕಿಳಿದಿದ್ದಾರೆ. ಎಲಾನ್ ಮಸ್ಕ್ ಸಹ ಬಹಿರಂಗವಾಗಿ ಹೌದು ಇದು ಆತ್ಮಹತ್ಯೆ ಅನ್ನುವ ಹಾಗೆ ಕಾಣುತ್ತಿಲ್ಲ ಎಂದು ಬೆಂಬಲ ಸೂಚಿಸಿದ್ದಾರೆ. ಇದರ ಸುತ್ತ ರಾಜಕೀಯ ಬದಿಗಿಟ್ಟು ತಾಂತ್ರಿಕವಾಗಿ ಏನಿದು ಎಂದು ನೋಡೋಣ.
ಅವನ ಆರೋಪಗಳ ಒಟ್ಟು ತಾತ್ಪರ್ಯ ಇಷ್ಟು: ಓಪನ್‌ಎಐ ಕಂಪನಿ ಕಾಪಿರೈಟ್ ಇರುವ ಕಂಟೆಂಟನ್ನು ಉಪಯೋಗಿಸಿಕೊಂಡು ಚಾಟ್‌ಜಿಪಿಟಿಗೆ ಟ್ರೈನಿಂಗ್ ಕೊಡಲಾಗಿದೆ. ಇದು ಇಂಟರ್ನೆಟ್ಟಿನ ಮೂಲಭೂತ ತತ್ವಕ್ಕೆ ಎಸಗಿರುವ ದ್ರೋಹ.
ಅವನು ನಾಲ್ಕು ವರುಷ ಅಲ್ಲೇ ಇದ್ದನಲ್ಲ, ಈಗ್ಯಾಕೆ ತಕರಾರು?- ಅವನು ಅಂದುಕೊಂಡಿದ್ದು ಉಚಿತ ಡೇಟಾದಿಂದ ತಯಾರಾದ ಚಾಟ್‌ಜಿಪಿಟಿಯನ್ನು ಜನರಿಗೆ ಉಚಿತವಾಗಿ ಬಳಸಲು ಕೊಡಲಾಗುತ್ತದೆ. ತಾನೊಂದು ಲೋಕಕಲ್ಯಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು.
ಆಮೇಲೆ ಆದದ್ದೇನು?: ಓಪನ್‌ಎಐ ಇದ್ದಕ್ಕಿದ್ದಂತೆ ನಾನ್‌ಪ್ರಾಫಿಟ್‌ನಿಂದ ಪ್ರಾಫಿಟ್ ಕಂಪನಿಯಾಗಿ ಬದಲಾಯಿತು. ಉದ್ದೇಶ ಲಾಭಕ್ಕೆ ತಿರುಗಿತು.
ಸರಿ ಇದರಿಂದೇನು ತೊಂದರೆ, ಅವರೇನು ಯಾರದೋ ವೆಬ್‌ಸೈಟ್‌ಗೆ ಕನ್ನ ಹಾಕಿ ಮಾಹಿತಿ ಕದ್ದು ಚಾಟ್‌ಜಿಪಿಟಿ ತಯಾರಿಸಿಲ್ಲ ತಾನೆ? ಇಂಟರ್‌ನೆಟ್‌ನಲ್ಲಿ ಉಚಿತವಾಗಿ ಲಭ್ಯವಿದ್ದುದನ್ನು ಬಳಸಿಕೊಂಡಿದ್ದಾರೆ. ಸಾರ್ವಜನಿಕವಾಗಿ ಲಭ್ಯವಿರುವುದನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದು ತಾನೇ?
ಅವನ ವಾದ: ಹೌದು ಸಾರ್ವಜನಿಕವಾಗಿದ್ದ ಮಾಹಿತಿ ಸಾರ್ವಜನಿಕರ ಬಳಕೆಗೆಂದೇ ಇರುವುದು, ಆದರೆ ಇದನ್ನು ಬಳಸಿಕೊಂಡು ಲಾಭಯುಕ್ತ ಕಂಪನಿ ಹೊಸ ಉಪಕರಣ ತಯಾರಿಸಿ ತಾನು ಲಾಭ ಮಾಡುವುದಕ್ಕಲ್ಲ ಎಂದು.
ಸುಚಿರ್ ವಾದ ಹತ್ತಿರತ್ತಿರ ಜನರಲ್ ಪಬ್ಲಿಕ್ ಲೈಸೆನ್ಸಿಗೆ ಬರುತ್ತದೆ. ಜಿಪಿಎಲ್ ಏನು ಹೇಳುತ್ತೆ ಎಂದರೆ ನಾವು ಉಚಿತವಾಗಿ ಹಂಚಿದ್ದನ್ನು ನಿಮ್ಮ ಉಪಯೋಗಕ್ಕೆ ಬಳಸಿಕೊಳ್ಳಬಹುದು, ಅದನ್ನು ಬದಲಾಯಿಸಿ ಮರು ಮಾರುವಂತಿಲ್ಲ ಎಂದು.
ಪ್ರಾಬ್ಲಂ ಇಷ್ಟೇ ಅಲ್ಲ!
ಓಪನ್‌ಎಐ ಕೇವಲ ತಾನು ಲಾಭ ಮಾಡಿಕೊಳ್ತಿಲ್ಲ. ಬದಲಾಗಿ ತನಗೆ ಡೇಟಾ ಒದಗಿಸಿದ ಮಾಹಿತಿ ಮೂಲಗಳನ್ನೇ ಎತ್ತಂಗಡಿ ಮಾಡುತ್ತಿದೆ ಎಂದು. ಕನ್ನಡ ಭಾಷೆಯಲ್ಲಿ ಅನ್ನ ಹಾಕಿದ ಮನೆಗೆ ಕನ್ನ ಹಾಕುವುದು ಅಥವಾ ಉಂಡ ತಟ್ಟೆಯಲ್ಲಿ **ವುದು ಅಂತಾರಲ್ಲ ಅದು. ಹೇಗೆ?
ಸ್ಟಾಕ್‌ಓವರ್‌ಫ್ಲೋ ಎಂಬ ಒಂದು ವೆಬ್‌ಸೈಟ್ ಇತ್ತು. ನಮ್ಮಂತಹ ಎಂಜಿನಿಯರ್‌ಗಳು ಪ್ರೋಗ್ರಾಮಿಂಗಿನ ಕ್ಲಿಷ್ಟ ಸಮಸ್ಯೆಗಳಿಗೆ ಉತ್ತರ ಸಿಗದಿದ್ದಲ್ಲಿ ಅಲ್ಲಿ ಪೋಸ್ಟ್ ಮಾಡುತ್ತಿದ್ದೆವು. ಜಗತ್ತಿನಾದ್ಯಂತ ಹಬ್ಬಿರುವ ನಮ್ಮಂತ ಅಥವಾ ನಮಗಿಂತ ಬುದ್ಧಿವಂತ ಎಂಜಿನಿಯರ್‌ಗಳು ಅದಕ್ಕೆ ಉತ್ತರಿಸಿ ಸಹಾಯ ಮಾಡುತ್ತಿದ್ದರು. ಈ ಪ್ರಶ್ನೆ-ಉತ್ತರಗಳನ್ನು ಯಾರು ಬೇಕಾದರೂ ಓದಿಕೊಂಡು ತನ್ನ ಕೆಲಸ ಸುಗಮಗೊಳಸಿಕೊಳ್ಳಬಹುದಿತ್ತು. ಓಪನ್‌ಎಐ ಈ ವೆಬ್‌ಸೈಟ್‌ನ ಡೇಟಾವನ್ನು ಬಳಸಿಕೊಂಡು ಚಾಟ್‌ಜಿಪಿಟಿಯನ್ನು ಟ್ರೈನ್ ಮಾಡಿದೆ. ನಮ್ಮಂತ ಎಂಜಿನಿಯರ್‌ಗಳು ಈಗ ನೇರವಾಗಿ ಚಾಟ್‌ಜಿಪಟಿಯನ್ನೇ ಕೇಳಿಬಿಡುತ್ತೇವೆ. ಅದು ತಕ್ಷಣ ಉತ್ತರ ಕೊಡುತ್ತದೆ. ಸ್ಟಾಕ್‌ಓವರ್‌ಫ್ಲೋನಲ್ಲಿ ಹಾಕಿದ್ದರೆ ಕನಿಷ್ಠ ಒಂದು ದಿವಸ ಅಥವಾ ವಾರ ಕಾಯಬೇಕಿತ್ತು. ಯಾರಾದರೂ ನೋಡಿ ಅವರಿಗೆ ಉತ್ತರ ಗೊತ್ತಿದ್ದು ಉತ್ತರಿಸುವ ಆಸಕ್ತಿ ಸಮಯಗಳಿದ್ದರೆ ಉತ್ತರಿಸುತ್ತಿದ್ದರು. ಇದರಿಂದಾಗಿ ಈಗ ಸ್ಟಾಕ್‌ಓವರ್‌ಫ್ಲೋ ವೆಬ್‌ಸೈಟ್‌ಗೆ ಹೋಗುವ ಟ್ರಾಫಿಕ್ಕು ಇಳಿದುಬಿಟ್ಟಿದೆ. ಅಲ್ಲಿಗೆ ರಿಜಿಸ್ಟರ್ ಆಗುತ್ತಿದ್ದ ಹೊಸ ಬಳಕೆದಾರರ ಸಂಖ್ಯೆಯೂ ಇಳಿಮುಖವಾಗಿದೆ.
ಒಬ್ಬ ವಿಮರ್ಶಕ ಒಂದು ಪುಸ್ತಕದ ಪ್ಯಾರಾವನ್ನು ತನ್ನ ಪುಸ್ತಕದಲ್ಲಿ ಹಾಕಿಕೊಂಡು ವಿಮರ್ಶೆ ಮಾಡಬಹುದು. ತನ್ನ ವಿಮರ್ಶೆಯ ಪುಸ್ತಕವನ್ನು ಹಣಕ್ಕೆ ಮಾರಬಹುದು. ಇದು ನ್ಯಾಯಬದ್ಧವಾಗಿದೆ. ಆದರೆ ಚಾಟ್‌ಜಿಪಿಟಿ ಇಲ್ಲಿ ವಿಮರ್ಶಕನೋ ಅಥವಾ ಒಂದು ಪುಸ್ತಕ ಓದಿಕೊಂಡು ಪದಗಳನ್ನು ಅತ್ತಿತ್ತ ಜೋಡಿಸಿ ಹೊಸ ಪುಸ್ತಕ ರಚಿಸುತ್ತಿರುವ ಕಳ್ಳ ಲೇಖಕನೋ ಎಂಬುದು. ನೀವು ಸ್ಟಾಕ್‌ಓವರ್‌ಫ್ಲೋಗೆ ಕೇಳಿದ ಪ್ರಶ್ನೆಯನ್ನೇ ಚಾಟ್‌ಜಿಪಿಟಿಗೆ ಕೇಳಿದರೆ ಚಾಟ್‌ಜಿಪಿಟಿ ಹೊಸದಾಗಿ ಉತ್ತರ ಬರೆಯುತ್ತದೆ. ಆದರೆ ಉತ್ತರದ ಮೂಲಾಂಶ ಅದೇ ಆಗಿರುತ್ತದೆ. ಇದನ್ನೇ ಕಾಪಿರೈಟ್ ಡಿಲೇಮ್ಮಾ(ದ್ವಂದ್ವ) ಅನ್ನುತ್ತಿರುವುದು. ಈ ಆಂಗಲ್‌ನಿಂದ ನೋಡಿದಾಗ ಚಾಟ್‌ಜಿಪಿಟಿ ಹೆಚ್ಚೂ ಕಮ್ಮಿ ಇಂಟರ್‌ನೆಟ್‌ಗೆ ದ್ರೋಹ ಮಾಡ್ತಿದೆ ಅಂದುಕೊಳ್ಳಬಹುದು.
ಆದರೆ, ಇದನ್ನೇ ನಾವು ಫೇಸ್ಬುಕ್ಕು ಗೂಗಲ್‌ಗೆ ವಿಸ್ತರಿಸಿದರೆ ಸ್ವಲ್ಪ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ತೇವೆ. ನಾವು ನಮ್ಮೆಲ್ಲ ಮಾಹಿತಿಯನ್ನು ಗೂಗಲ್ಲಿಗೆ ಕೊಡುವುದರಿಂದಲೇ ಅದು ನಮಗೆ ಕ್ಷಮತೆಯುಳ್ಳ ಮ್ಯಾಪು, ಸರ್ಚ್ ಎಂಜಿನ್ನು ಮುಂತಾದ ತನ್ನ ಲಾಭದಾಯಕ ಉತ್ಪನ್ನಗಳನ್ನು ಕೊಡುತ್ತಿರುವುದು!
ಇಂಟರ್‌ನೆಟ್‌ನಲ್ಲಿ ಮೂರು ಬಗೆಯಿದೆ. ಸರ್ಫೇಸ್ ವೆಬ್, ಡೀಪ್ ವೆಬ್ ಮತ್ತು ಡಾರ್ಕ್ ವೆಬ್. ಲಾಗಿನ್ ಇಲ್ಲದೇ ಎಲ್ಲರಿಗೂ ತೆರೆದುಕೊಂಡಿರುವುದು ಸರ್ಫೇಸ್ ವೆಬ್. ಲಾಗಿನ್ ಬೇಕಿರುವುದು ಡೀಪ್ ವೆಬ್. ಡೀಪ್ ವೆಬ್‌ನಲ್ಲಿಯೇ ಒಂದು ಹಿಡಿ ಭಾಗ ವಿಶೇಷ ಸಾಫ್ಟವೇರುಗಳ ಮೂಲಕ ತೆರೆದುಕೊಳ್ಳುವುದು ಡಾರ್ಕ್‌ವೆಬ್.
ಸುಚಿರ್ ಹೇಳುತ್ತಿರುವುದು ಈ ಸರ್ಫೇಸ್ ವೆಬ್‌ನಲ್ಲಿರುವದೂ ಕಾಪಿರೈಟ್ ಮಾಹಿತಿಯೇ ಎಂದು. ಕೊನೆಯದಾಗಿ ಅವನು ಕೊಡುವ ಇನ್ನೊಂದು ಉದಾಹರಣೆ ಏನಂದರೆ ಶೇಕ್ಸ್‌ಪಿಯರಿನ ಒಂದು ನಾಟಕ ತೆಗೆದುಕೊಂಡು ಜಿಪಿಟಿಗೆ ತರಬೇತಿ ಕೊಟ್ಟು ಆನಂತರ ಶೇಕ್ಸ್‌ಪಿಯರಿನಂತಹ ಪಠ್ಯ ಬರೆದುಕೊಂಡು ಎಂದು ಕೇಳಿದಾಗ ಅದು ಉತ್ಪಾದಿಸುವ ಪಠ್ಯ ಹೊಸದೇ ಆಗಿದ್ದರೂ ಅದರಲ್ಲಿನ ಪದಗಳು ಒಂಥರಾ ಮಗು ಮನೆಯಲ್ಲಿ ಪುಸ್ತಕ ಓದಿ ಮೆಮೊರೈಜ್ ಮಾಡಿಕೊಂಡು ಬಂದು ಕ್ಲಾಸಲ್ಲಿ ತನ್ನದೇ ವರ್ಶನ್ನಾಗಿ ಹೇಳಿದಂತೆ ಎಂದು. ಮಗು ಹೊಸದಾಗಿಯೇ ಹೇಳಿದರೂ ಅದರ ಮೂಲ ಕಾಪಿರೈಟ್ ವಸ್ತುವೇ ಆಗಿರುತ್ತದೆ ಎಂದು.
ಒಟ್ಟಾರೆ ಇದೆಲ್ಲ ಏನು ಸೂಚಿಸುತ್ತದೆ ಎಂದರೆ- ಜಗತ್ತು ಇಲ್ಲಿತನಕ ತಲೆಕೆಡಿಸಿಕೊಂಡಿರದ ಹೊಸದೊಂದು ಪ್ರಾಬ್ಲಂ ಸೃಷ್ಟಿಯಾಗಿದೆ. ಅದಕ್ಕೆ ಹೊಸ ನೀತಿ ರೂಪಿಸುವುದು ಅವಶ್ಯವಾಗಿದೆ. ಇಲ್ಲವಾದರೆ ಸಮುದಾಯ ಸೃಷ್ಟಿಸಿದ ಜ್ಞಾನವನ್ನು ಒಟ್ಟುಗೂಡಿಸಿಕೊಂಡು ತಾನು ಬಲಶಾಲಿಯಾಗಿ ಆನಂತರ ಅದೇ ಸಮುದಾಯವನ್ನು ನಾಶ ಮಾಡುವ ರಾಕ್ಷಸನಾಗಿ ಎಐ ಪರಿವರ್ತನೆಗೊಳ್ಳುತ್ತದೆ ಎಂದು ರುಚಿರ್‌ನಂತಹವರ ವಾದ.
ಲೇಖನ: ವೈಎನ್ ಮಧು