ಎಕ್ಸ್ ಪ್ಲಾಟ್‌ಫಾರ್ಮ್ 3.0 ದ್ವಿಚಕ್ರವಾಹನ ಪರಿಚಯಿಸಿದ ಪ್ಯೂರ್ ಇವಿ; ಥ್ರಿಲ್ ಮೋಡ್, ಎಐ ತಂತ್ರಜ್ಞಾನದ ಜತೆಗೆ ಇನ್ನಷ್ಟು ವೈಶಿಷ್ಟ್ಯ
ಎಕ್ಸ್ ಪ್ಲಾಟ್‌ಫಾರ್ಮ್ 3.0 ದ್ವಿಚಕ್ರ ವಾಹನವು ಆರಂಭದಲ್ಲಿ ಪ್ಯೂರ್ ಇವಿಯ ಪ್ರೀಮಿಯಂ ಮಾದರಿಗಳಾದ ಇಪ್ಲುಟೊ 7ಜಿ ಮ್ಯಾಕ್ಸ್ ಮತ್ತು ಇಟ್ರಿಸ್ಟ್ ಎಕ್ಸ್ ಮಾದರಿಯಲ್ಲಿ ಲಭ್ಯವಿರಲಿದೆ. 2025ರ ಅಂತ್ಯದ ವೇಳೆಗೆ ಎಲ್ಲಾ ಇತರ ಮಾದರಿಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಚೆನ್ನೈ: ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಪ್ಯೂರ್ ಇವಿ (PURE EV), ತನ್ನ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಮಹತ್ವದ ಅಪ್‌ಗ್ರೇಡ್ ಮಾಡಿರುವ ಬಗ್ಗೆ ಘೋಷಿಸಿದೆ. ಅದುವೇ ಎಕ್ಸ್ ಪ್ಲಾಟ್‌ಫಾರ್ಮ್ 3.0 (X Platform 3.0). ಸುಧಾರಿತ ಎಐ ತಂತ್ರಜ್ಞಾನದ ನೆರವಿಂದ ಓಡುವ ಈ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಬಳಕೆದಾರರ ರೈಡಿಂಗ್ ಅನುಭವವನ್ನು ಸುಧಾರಿಸಲಿದೆ ಎಂದು ಕಂಪನಿ ಭರವಸೆ ನೀಡಿದೆ. ಎಕ್ಸ್ ಪ್ಲಾಟ್‌ಫಾರ್ಮ್ 3.0 ಬೈಕ್‌ನ ವೈಶಿಷ್ಟ್ಯವೆಂದರೆ ಥ್ರಿಲ್ ಮೋಡ್ ಅನ್ನು ಪರಿಚಯಿಸಿರುವುದು. ಇದು ಟಾರ್ಕ್ ಮತ್ತು ಒಟ್ಟಾರೆ ಕಾರ್ಯಕ್ಷಮತೆಯನ್ನು 25 ಶೇಕಡದಷ್ಟು ಹೆಚ್ಚಿಸುತ್ತದೆ. ಇದು ಬಳಕೆದಾರರಿಗೆ ಹೆಚ್ಚು ರೋಮಾಂಚಕ ಸವಾರಿ ಅನುಭವವನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ.
ಈ ಪ್ಲಾಟ್‌ಫಾರ್ಮ್‌ನಲ್ಲಿ ಸುಧಾರಿತ AI ತಂತ್ರಜ್ನಾನವನ್ನು ಸಂಯೋಜಿಸಲಾಗಿದೆ. ಅದುವೇ ಪ್ರೆಡಿಕ್ಟಿಬ್ ಎಐ. ಇದು ಸವಾರರ ನಡವಳಿಕೆಯನ್ನು ತಿಳಿದುಕೊಂಡು ವಿಭಿನ್ನ ಸವಾರಿಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ವ್ಯವಸ್ಥೆಯಾಗಿದೆ. ಈ ವೈಶಿಷ್ಟ್ಯವು ಸಂಭಾವ್ಯ ಸಮಸ್ಯೆಗಳು ಉದ್ಭವಿಸುವ ಮೊದಲೇ ಅವುಗಳನ್ನು ಗುರುತಿಸುವ ಮತ್ತು ಪರಿಹರಿಸುವ ವ್ಯವಸ್ಥೆಯಾಗಿದೆ. ಇದೇ ವೇಳೆ ಕ್ಲೌಡ್ ಎಐ ಜೊತೆಗೆ, ವಾಹನದ ಸಾಫ್ಟ್‌ವೇರ್ ಅನ್ನು ನವೀಕೃತವಾಗಿರಿಸುತ್ತದೆ. ಆ ಮೂಲಕ ಕಾರ್ಯಕ್ಷಮತೆಯನ್ನು ಅತ್ಯುತ್ತಮವಾಗಿಸುತ್ತದೆ.
ದ್ವಿಚಕ್ರ ವಾಹನದ ಬಿಡುಗಡೆ ಕುರಿತು ಪ್ರತಿಕ್ರಿಯೆ ನೀಡಿರುವ ಪ್ಯೂರ್ ಇವಿ ಇದರ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶರಾದಕ ಡಾ.ನಿಶಾಂತ್ ಡೊಂಗರಿ, “ಎಕ್ಸ್ ಪ್ಲಾಟ್‌ಫಾರ್ಮ್ 3.0 ಪರಿಚಯದೊಂದಿಗೆ, ನಾವು ಸುಧಾರಿತ ಎಐ ತಂತ್ರಜ್ಞಾನಗಳನ್ನು ಸಂಯೋಜಿಸುವ ಮೂಲಕ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಯ ಮುಂದಿನ ಹಂತಕ್ಕೆ ಕಾಲಿಡುತ್ತಿದ್ದೇವೆ. ಈ ಪ್ಲಾಟ್‌ಫಾರ್ಮ್ ವಿಶಿಷ್ಟವಾಗಿದ್ದು, ಭಾರತೀಯ ನಾವೀನ್ಯತೆಯನ್ನು ಜಾಗತಿಕ ಹಂತಕ್ಕೆ ಕೊಂಡೊಯ್ಯುವ ನಮ್ಮ ಮಹತ್ವಾಕಾಂಕ್ಷೆಯಾಗಿದೆ. ಇದು ನಮ್ಮ ಗ್ರಾಹಕರಿಗೆ ಅಸಾಧಾರಣ ರೈಡಿಂಗ್ ಅನುಭವವನ್ನು ಒದಗಿಸುತ್ತದೆ,” ಎಂದು ಹೇಳಿದ್ದಾರೆ.
ಟಿಎಫ್‌ಟಿ ಡ್ಯಾಶ್‌ಬೋರ್ಡ್
ಎಕ್ಸ್ ಪ್ಲಾಟ್‌ಫಾರ್ಮ್ 3.0 ಇದರ ಮತ್ತೊಂದು ಪ್ರಮುಖ ಅಂಶವೆಂದರೆ ಟಿಎಫ್‌ಟಿ ಡ್ಯಾಶ್‌ಬೋರ್ಡ್. ಇದು ಐಒಎಸ್ ಮತ್ತು ಆಂಡ್ರಾಯ್ಡ್ ಸಾಧನಗಳೊಂದಿಗೆ ಸಂಪರ್ಕಗೊಳ್ಳುತ್ತದೆ. ಈ ಆಧುನಿಕ ಡ್ಯಾಶ್‌ಬೋರ್ಡ್ ನೈಜ-ಸಮಯದ ನ್ಯಾವಿಗೇಷನ್ ಮ್ಯಾಪ್, ಬ್ಯಾಟರಿ ಆರೋಗ್ಯದ ಅಪ್ಡೇಟ್ ಸೇರಿದಂತೆ ಹಲವಾರು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಸವಾರರು ತಮ್ಮ ಬೆರಳ ತುದಿಯಲ್ಲಿ ಎಲ್ಲಾ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ.
ಆರಂಭದಲ್ಲಿ ಎರಡು ಮಾದರಿಗಳಲ್ಲಿ ಲಭ್ಯ
ಆರಂಭದಲ್ಲಿ ಎಕ್ಸ್ ಪ್ಲಾಟ್‌ಫಾರ್ಮ್ 3.0 ದ್ವಿಚಕ್ರ ವಾಹನವು ಪ್ಯೂರ್ ಇವಿಯ ಪ್ರೀಮಿಯಂ ಮಾದರಿಗಳಾದ ಇಪ್ಲುಟೊ 7ಜಿ ಮ್ಯಾಕ್ಸ್ ಮತ್ತು ಇಟ್ರಿಸ್ಟ್ ಎಕ್ಸ್‌ಗಳಲ್ಲಿ ಲಭ್ಯವಿರುತ್ತದೆ. ಇದು 2025ರ ಅಂತ್ಯದ ವೇಳೆಗೆ ಎಲ್ಲಾ ಇತರ ಮಾದರಿಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಇದು ಹೊಸ ಜನರೇಷನ್ ಸ್ಮಾರ್ಟ್ ಎಐ ಆಧಾರಿತ ವಾಹನ ನಿಯಂತ್ರಣ ಘಟಕ, ಎಲೆಕ್ಟ್ರಿಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಹೆಚ್ಚು ಪರಿಣಾಮಕಾರಿ ಪವರ್‌ಟ್ರೇನ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಉದ್ಯಮದಲ್ಲಿ ಗ್ರಾಹಕರ ಅನುಭವವನ್ನು ಮರು ವ್ಯಾಖ್ಯಾನಿಸಲು ಎಕ್ಸ್ ಪ್ಲಾಟ್‌ಫಾರ್ಮ್ 3.0 ಸಿದ್ಧವಾಗಿದೆ ಎಂದು ಕಂಪನಿ ಭರವಸೆ ವ್ಯಕ್ತಪಡಿಸಿದೆ.
ಆಟೊಮೊಬೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
