Redmi Note 13 Pro Plus: 2024ರ ಜನವರಿಯಲ್ಲಿ ಭಾರತದಲ್ಲಿ ಲಾಂಚ್ ಆಗಲಿದೆ ರೆಡ್ಮಿ ನೋಟ್ 13 ಪ್ರೋ ಪ್ಲಸ್; ಬೆಲೆ, ವೈಶಿಷ್ಟ್ಯಗಳು ಹೀಗಿವೆ
Technology: ಸ್ಮಾರ್ಟ್ಫೋನ್ಗಳು ಮುಂದಿನ ವರ್ಷ ಜನವರಿ ತಿಂಗಳಲ್ಲಿ ಭಾರತದಲ್ಲಿ ಪಾದಾರ್ಪಣೆ ಮಾಡಲಿವೆ ಎನ್ನಲಾಗಿದೆ. ಭಾರತದಲ್ಲಿ ಈ ಸ್ಮಾರ್ಟ್ ಫೋನ್ಗಳ ಬೆಲೆ ಎಷ್ಟಿರಬಹುದು? ಈ ಸ್ಮಾರ್ಟ್ ಫೋನ್ಗಳ ವೈಶಿಷ್ಟ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
2023 ಕೊನೆಗೊಳ್ಳಲು ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿದೆ. ಹೊಸ ವರ್ಷವು ಹೊಸತನಗಳನ್ನು ತರುವ ಜೊತೆಯಲ್ಲಿ ಹೊಸ ಮಾಡೆಲ್ನ ಸ್ಮಾರ್ಟ್ಫೋನ್ಗಳನ್ನೂ ತರುತ್ತದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಈಗಾಗಲೇ ಅನೇಕ ಮೊಬೈಲ್ ತಯಾರಕ ಕಂಪನಿಗಳು 2024ರ ಆರಂಭದಲ್ಲಿ ತಮ್ಮ ಕಂಪನಿಯ ಹೊಸ ಮಾಡೆಲ್ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿವೆ. ಸ್ಯಾಮ್ಸಂಗ್ ಮುಂದಿನ ತಿಂಗಳು ಜನವರಿ ಎರಡನೇ ವಾರದಲ್ಲಿ ಗ್ಯಾಲಕ್ಸಿ ಎಸ್ 24ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಜನವರಿ 24ರ ಸುಮಾರಿಗೆ ಒನ್‌ಪ್ಲಸ್ 12 ಗ್ರಾಹಕರಿಗೆ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ. ಇತ್ತ ರೆಡ್ಮಿ ಕೂಡ ರೆಡ್ಮಿ ನೋಟ್ 13 ಪ್ರೋ ಪ್ಲಸ್‌ನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಅಧಿಕೃತ ಮಾಹಿತಿ ನೀಡಿದೆ.
ರೆಡ್ಮಿ ನೋಟ್ 13 ಪ್ರೋ ಪ್ಲಸ್‌ನ ವೈಶಿಷ್ಟ್ಯಗಳು
ನೋಟ್ 13 ಪ್ರೋ ಪ್ಲಸ್ ಸ್ಮಾರ್ಟ್ಫೋನ್ಗಳು ಚೈನೀಸ್ ವೇರಿಯಂಟ್ಗಳಾಗಿದ್ದು, ಇವುಗಳು 6.67-ಇಂಚಿನ 1.5K OLED ಸ್ಕ್ರೀನ್ಗಳನ್ನು ಹೊಂದಿವೆ. ಇದು 120 Hz ರಿಫ್ರೆಶ್ ದರ ಹೊಂದಿರಲಿದೆ. ಇದೇ ರೀತಿಯ ಮಾದರಿಯು ಭಾರತದಲ್ಲಿಯೂ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಮಾರುಕಟ್ಟೆಗೆ ಬರಲಿರುವ ನೋಟ್ 13 ಪ್ರೋ ಪ್ಲಸ್ ಸ್ಮಾರ್ಟ್ ಫೋನ್ಗಳು 4nm ಆಕ್ಟಾ-ಕೋರ್ ಡೈಮೆನ್ಸಿಟಿ 7200 ಅಲ್ಟ್ರಾ ಚಿಪ್ ಪ್ರೊಸೆಸ್ಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು G610 ಗ್ರಾಫಿಕ್ಸ್‌ನ ಸಪೋರ್ಟ್ ಹೊಂದಿರಲಿದೆ ಎನ್ನಲಾಗಿದೆ.
ಬ್ಯಾಟರಿ ಮತ್ತು ಕ್ಯಾಮರಾ
ಇನ್ನು ಈ ಸ್ಮಾರ್ಟ್ಫೋನ್ಗಳು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 120W ಚಾರ್ಜಿಂಗ್ನ್ನು ಬೆಂಬಲಿಸುತ್ತವೆ ಹಾಗೂ ಪೂರ್ತಿ ಒಂದು ದಿನ ಕಾರ್ಯನಿರ್ವಹಿಸಬಲ್ಲದು ಎಂದು ಹೇಳಲಾಗಿದೆ. ಕ್ಯಾಮರಾದ ವಿಚಾರಕ್ಕೆ ಬರುವುದಾದರೆ 200ಎಂಪಿ ಪ್ರೈಮೆರಿ ಲೆನ್ಸ್, 8ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಹಾಗೂ 2 ಮೆಗಾಪಿಕ್ಸೆಲ್ ಮ್ಯಾಕ್ರೋ ರಿಯರ್ ಲೆನ್ಸ್ಗಳನ್ನು ಹೊಂದಿದೆ. ಇವುಗಳು ಒಳ್ಳೆಯ ಗುಣಮಟ್ಟದ ಫೋಟೋಗಳನ್ನು ಕ್ಲಿಕ್ಕಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಸೆಲ್ಪಿ ಕ್ಯಾಮರಾವು 16 ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿರುತ್ತದೆ.
ಚೀನಿ ವೇರಿಯಂಟ್ಗಳು ಆಕರ್ಷಕ ಕನೆಕ್ಟಿವಿಟಿ ಆಯ್ಕೆಗಳನ್ನು ಸಹ ಗ್ರಾಹಕರಿಗೆ ನೀಡುತ್ತದೆ. ಇವುಗಳಲ್ಲಿ ವೈ-ಫೈ 6, ಬ್ಲೂಟೂತ್ 5.3, ಎನ್‌ಎಫ್‌ಸಿ, ಮತ್ತು ಯುಎಸ್ಬಿ ಟೈಪ್ ಸಿ ಪೋರ್ಟ್ಗಳು ತ್ವರಿತ ಚಾರ್ಜಿಂಗ್ ಹಾಗೂ ಡೇಟಾ ವರ್ಗಾವಣೆಗೆ ಸಹಕಾರಿಯಾಗುವಂತಹ ಅಂಶಗಳಿವೆ. ಈ ಎಲ್ಲ ಆಯ್ಕೆಗಳು ಭಾರತದಲ್ಲಿ ಮುಂದಿನ ವರ್ಷ ಸಿಗಲಿರುವ ನೋಟ್ 13 ಪ್ರೋ ಪ್ಲಸ್ ಮೊಬೈಲ್ಗಳಲ್ಲಿ ಇರಲಿವೆ ಎಂದು ಮೂಲಗಳು ತಿಳಿಸಿವೆ.
ಬೆಲೆ
ಚೀನಾದಲ್ಲಿ ರೆಡ್ಮಿ ನೋಟ್ 13 ಪ್ರೋ ಪ್ಲಸ್ 5ಜಿ ಶ್ರೇಣಿಗಳು 1,999 ಯುವಾನ್ಗಳಿಂದ ಆರಂಭಗೊಳ್ಳುತ್ತದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯದ ರೂಪದಲ್ಲಿ ಹೇಳುವುದಾದರೆ ಸುಮಾರು 23 ಸಾವಿರ ರೂಪಾಯಿಗಳಿಗಿಂತಲೂ ಅಧಿಕ. ಭಾರತದಲ್ಲಿ ಈ ಸ್ಮಾರ್ಟ್ಫೋನ್ಗಳ ಬೆಲೆ 30,000 ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಮುಂದಿನ ವರ್ಷ ಜನವರಿ ತಿಂಗಳಲ್ಲಿ ಭಾರತದಲ್ಲಿ ರೆಡ್ಮಿ ನೋಟ್ 13 ಪ್ರೋ ಪ್ಲಸ್ 5ಜಿ ಸ್ಮಾರ್ಟ್ ಫೋನ್ಗಳ ಅಧಿಕೃತ ಬೆಲೆ ಘೋಷಣೆಯಾಗಲಿದೆ ಎಂದು ಕಂಪನಿಯು ತಿಳಿಸಿದೆ.