ಒಂದಲ್ಲ, ಎರಡಲ್ಲ ಭಾರತದಲ್ಲಿ ಒಂದೇ ದಿನ 3 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ರೆಡ್‌ಮಿ; ದರ ಎಷ್ಟು, ವೈಶಿಷ್ಟ್ಯಗಳೇನು?
ಶವೋಮಿಯ ಸಬ್‌ಬ್ರ್ಯಾಂಡ್ ರೆಡ್‌ಮಿ ಭಾರತದಲ್ಲಿ ಹೊಸದಾಗಿ ತನ್ನ ಬಹುನಿರೀಕ್ಷಿತ ರೆಡ್‌ಮಿ ನೋಟ್ 14 Pro+, ರೆಡ್‌ಮಿ ನೋಟ್ 14 ಪ್ರೊ ಮತ್ತು ರೆಡ್‌ಮಿ ನೋಟ್ 14 ಸ್ಮಾಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಫೋನ್‌ನಲ್ಲಿ ದೊಡ್ಡ ಬ್ಯಾಟರಿ, ಆಕರ್ಷಕ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಬೆಲೆ ಹಾಗೂ ಇನ್ನಿತರ ವೈಶ್ಯಿಷ್ಟ್ಯಗಳ ಕುರಿತ ಮಾಹಿತಿ ಇಲ್ಲಿದೆ (ವರದಿ: ವಿನಯ್ ಭಟ್)
ಚೀನಾ ಮೂಲದ ಶವೋಮಿ ಒಡೆತನದ ಸಬ್-ಬ್ರ್ಯಾಂಡ್ ರೆಡ್‌ಮಿ ಭಾರತದಲ್ಲಿ ಒಂದೇ ದಿನ ಮೂರು ಸ್ಮಾಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ರೆಡ್‌ಮಿ ನೋಟ್ 14 Pro+, ರೆಡ್‌ಮಿ ನೋಟ್ 14 ಪ್ರೊ ಮತ್ತು ರೆಡ್‌ಮಿ ನೋಟ್ 14 ದೇಶದಲ್ಲಿ ಅನಾವರಣಗೊಂಡಿದೆ. ಈ ಹೊಸ ನೋಟ್ ಸರಣಿಯ ಸ್ಮಾರ್ಟ್‌ಫೋನ್‌ಗಳು 6.67-ಇಂಚಿನ OLED ಡಿಸ್‌ಪ್ಲೇಗಳನ್ನು 120Hz ರಿಫ್ರೆಶ್ ರೇಟ್ ಮತ್ತು 3000nits ಗರಿಷ್ಠ ಬ್ರೈಟ್ಸ್‌ನೊಂದಿಗೆ. 90W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,200mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತವೆ. ಈ ಫೋನ್‌ನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ರೆಡ್‌ಮಿ ನೋಟ್ 14 ಸರಣಿಯ ಬೆಲೆ
ರೆಡ್‌ಮಿ ನೋಟ್ 14 Pro+ ಬೆಲೆ 8GB + 128GB ಗೆ 29,999 ರೂ. ಇದೆ. ಅಂತೆಯೆ 8GB + 256GB ಮತ್ತು 12GB + 512GB ರೂಪಾಂತರಗಳ ಬೆಲೆ ಕ್ರಮವಾಗಿ ರೂ. 31,999 ಮತ್ತು ರೂ. 34,999 ನಿಗದಿ ಮಾಡಲಾಗಿದೆ.
ರೆಡ್‌ಮಿ ನೋಟ್ 14 Pro ಬೆಲೆ 8GB + 128GB ಸ್ಟೋರೇಜ್ ಆಯ್ಕೆಗೆ ರೂ. 23,999 ರಿಂದ ಪ್ರಾರಂಭವಾಗುತ್ತದೆ. 8GB + 256GB ಆಯ್ಕೆಯ ಬೆಲೆ ರೂ. 25,999. ಇನ್ನು ರೆಡ್‌ಮಿ ನೋಟ್ 14 ನ ಆರಂಭಿಕ ಬೆಲೆ 8GB + 128GB ಆವೃತ್ತಿಗೆ 17,999 ರೂ., 8GB + 128GB ಮತ್ತು 8GB + 256GB ಮಾದರಿಗಳ ಬೆಲೆ ಕ್ರಮವಾಗಿ 18,999 ರೂ. ಮತ್ತು 20,999 ರೂ. ಆಗಿದೆ.
ಎಲ್ಲಾ ಮೂರು ಮಾದರಿಗಳು ಡಿಸೆಂಬರ್ 13 ರಿಂದ ಮಧ್ಯಾಹ್ನ 12 ಗಂಟೆಗೆ Mi.com, ಫ್ಲಿಪ್ಕಾರ್ಟ್ ಮತ್ತು ಇತರ ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟವಾಗಲಿದೆ.
ರೆಡ್‌ಮಿ ನೋಟ್ 14 Pro+ ಫೀಚರ್ಸ್
ಡ್ಯುಯಲ್ ಸಿಮ್ (ನ್ಯಾನೋ) ರೆಡ್‌ಮಿ ನೋಟ್ 14 Pro+ ಫೋನ್ 6.67-ಇಂಚಿನ 1.5K (1,220x2,712 ಪಿಕ್ಸೆಲ್‌ಗಳು) ರೆಸಲ್ಯೂಶನ್ ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, ಅಡಾಪ್ಟಿವ್ HDR10+ ಬೆಂಬಲದೊಂದಿಗೆ ಬರುತ್ತದೆ. ಇದು 4nm ಸ್ನಾಪ್‌ಡ್ರಾಗನ್ 7s Gen 3 ಚಿಪ್‌ಸೆಟ್‌ನಲ್ಲಿ 12GB RAM ಮತ್ತು 512GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಕಾರ್ಯನಿರ್ವಹಿಸುತ್ತದೆ.
ಇದರಲ್ಲಿ 50-ಮೆಗಾಪಿಕ್ಸೆಲ್ ಲೈಟ್ ಹಂಟರ್ 800 ಸಂವೇದಕದಿಂದ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ. ಮುಖ್ಯ ಸಂವೇದಕವು 1/1.55-ಇಂಚಿನ ಗಾತ್ರದಲ್ಲಿದೆ ಮತ್ತು ಇದು ಶವೋಮಿಯ HyperOIS ತಂತ್ರಜ್ಞಾನದಿಂದ ಕೂಡಿದೆ. ಕ್ಯಾಮೆರಾ ಸೆಟಪ್ 8-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಸೆನ್ಸಾರ್ ಮತ್ತು 2.5x ಆಪ್ಟಿಕಲ್ ಜೂಮ್‌ನೊಂದಿಗೆ 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಮುಂಭಾಗದಲ್ಲಿ, 20-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. 90W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ 6,200mAh ಬ್ಯಾಟರಿ ಕೂಡ ಇದೆ.
ರೆಡ್‌ಮಿ ನೋಟ್ 14 ಪ್ರೊ, ನೋಟ್ 14 ಫೀಚರ್ಸ್
ಈ ಎರಡೂ ಫೋನುಗಳು 6.67-ಇಂಚಿನ ಡಿಸ್‌ಪ್ಲೇಗಳನ್ನು ಹೊಂದಿವೆ. ನೋಟ್ 14 Pro ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ ಪ್ರೊಸೆಸರ್ನಿಂದ ಚಾಲಿತವಾಗಿದೆ, ಆದರೆ ಮೂಲ ಮಾದರಿಯು ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಪ್ರೊಸೆಸರ್ ಹೊಂದಿದೆ. ರೆಡ್‌ಮಿ ನೋಟ್ 14 Pro ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಮುಖ್ಯ ಸಂವೇದಕ, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ. 20-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.
ರೆಡ್‌ಮಿ ನೋಟ್ 14 ಫೋನ್ 50-ಮೆಗಾಪಿಕ್ಸೆಲ್ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕವನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ. 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ರೆಡ್‌ಮಿ ನೋಟ್ 14 Pro ಫೋನ್ 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಬ್ಯಾಟರಿಯನ್ನು ಹೊಂದಿದ್ದರೆ, ರೆಡ್‌ಮಿ ನೋಟ್ 14, 45W ಚಾರ್ಜಿಂಗ್ ಬೆಂಬಲದೊಂದಿಗೆ 5,110mAh ಅನ್ನು ಹೊಂದಿದೆ.