ಕನ್ನಡ ಸುದ್ದಿ  /  ಜೀವನಶೈಲಿ  /  Sim Portability: ಮೊಬೈಲ್ ಸಂಖ್ಯೆ ಪೋರ್ಟ್ ಮಾಡುವವರಿಗೆ ಇಲ್ಲಿದೆ ಪ್ರಮುಖ ಮಾಹಿತಿ; ಇಂದಿನಿಂದ ಬದಲಾಗಿದೆ ನಿಯಮ, ಗಮನಿಸಿ

Sim Portability: ಮೊಬೈಲ್ ಸಂಖ್ಯೆ ಪೋರ್ಟ್ ಮಾಡುವವರಿಗೆ ಇಲ್ಲಿದೆ ಪ್ರಮುಖ ಮಾಹಿತಿ; ಇಂದಿನಿಂದ ಬದಲಾಗಿದೆ ನಿಯಮ, ಗಮನಿಸಿ

ಬಳಕೆದಾರರ ಸುರಕ್ಷತೆ ಹೆಚ್ಚಿಸಲು ಜುಲೈ 1 ರಿಂದ, ಅಂದರೆ ಇಂದಿನಿಂದ ಸಿಮ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಇದರ ಭಾಗವಾಗಿ, ಮೊಬೈಲ್ ಸಂಖ್ಯೆ ಪೋರ್ಟೆಬಿಲಿಟಿಗೆ ಸಂಬಂಧಿಸಿದ ನಿಬಂಧನೆಯನ್ನು ಬದಲಾಯಿಸಲು ಟ್ರಾಯ್ ನಿರ್ಧರಿಸಿದೆ. ಸಿಮ್ ಸ್ವಾಪ್ ಹಗರಣಗಳನ್ನು ತಡೆಯುವುದು ಈ ನಿರ್ಧಾರದ ಹಿಂದಿನ ಪ್ರಮುಖ ಉದ್ದೇಶವಾಗಿದೆ. (ಬರಹ: ವಿನಯ್‌ ಭಟ್‌)

ಮೊಬೈಲ್ ಸಂಖ್ಯೆ ಪೋರ್ಟ್ ಮಾಡುವವರಿಗೆ ಇಲ್ಲಿದೆ ಪ್ರಮುಖ ಮಾಹಿತಿ; ಇಂದಿನಿಂದ ಬದಲಾಗಿದೆ ನಿಯಮ
ಮೊಬೈಲ್ ಸಂಖ್ಯೆ ಪೋರ್ಟ್ ಮಾಡುವವರಿಗೆ ಇಲ್ಲಿದೆ ಪ್ರಮುಖ ಮಾಹಿತಿ; ಇಂದಿನಿಂದ ಬದಲಾಗಿದೆ ನಿಯಮ (PC: Canva)

ಬದಲಾದ ತಂತ್ರಜ್ಞಾನದ ಜೊತೆಗೆ ಅಪರಾಧ ಕೃತ್ಯಗಳೂ ಹೆಚ್ಚುತ್ತಿವೆ. ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರೂ ಸೈಬರ್ ವಂಚನೆಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಈ ರೀತಿಯ ವಂಚನೆಗಳು ಸಿಮ್ ಕಾರ್ಡ್‌ಗಳಿಗೂ ಸಂಬಂಧಿಸಿವೆ. ಇತ್ತೀಚೆಗೆ ಸಿಮ್ ಸ್ವಾಪ್ ಹೆಸರಿನಲ್ಲಿ ವಂಚನೆಗಳು ಹೆಚ್ಚಾಗುತ್ತಿವೆ. ಇದೀಗ ಇಂತಹ ವಂಚನೆಗಳಿಗೆ ಕಡಿವಾಣ ಹಾಕಲು ಟೆಲಿಕಾಂ ಕಂಪನಿ ಟ್ರಾಯ್ (TRAI) ಮಹತ್ವದ ನಿರ್ಧಾರ ಕೈಗೊಂಡಿದೆ.

ನಿಮ್ಮ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡುವುದು ಇನ್ನು ಮುಂದೆ ಕಷ್ಟವಾಗಲಿದೆ ಅಥವಾ ನಿಮಗೆ ಇಷ್ಟವಾದಾಗ ಸಂಖ್ಯೆಯನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಮೊಬೈಲ್ ಸಂಖ್ಯೆಗಳನ್ನು ಪೋರ್ಟ್ ಮಾಡುವ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮವು ಇಂದಿನಿಂದ ಅಂದರೆ ಜುಲೈ 1, 2024 ರಿಂದ ದೇಶಾದ್ಯಂತ ಜಾರಿಗೆ ಬಂದಿದೆ.

ಈ ಹೊಸ ನಿಯಮಗಳ ಪ್ರಕಾರ, ನೀವು ಸಿಮ್ ಕಾರ್ಡ್ ಕಳೆದುಕೊಂಡರೆ ಅಥವಾ ಹಾನಿಗೊಳಗಾದರೆ ತಕ್ಷಣವೇ ಹೊಸ ಸಿಮ್ ಪಡೆಯಲು ಸಾಧ್ಯವಾಗುವುದಿಲ್ಲ. ಪ್ರಸ್ತುತ, ನೀವು ನಿಮ್ಮ ಸಿಮ್ ಕಾರ್ಡ್ ಕಳೆದುಕೊಂಡರೆ, ತಕ್ಷಣ ಅಂಗಡಿಯಿಂದ ಹೊಸ ಸಿಮ್ ಅನ್ನು ಪಡೆಯಬಹುದು. ಆದರೆ, ಈಗ ಹೊಸ ಸಿಮ್ ಕಾರ್ಡ್ ಪಡೆಯಲು ಕನಿಷ್ಠ 7 ದಿನ ಕಾಯಬೇಕು. ಏಳು ದಿನಗಳ ಲಾಕಿಂಗ್ ಅವಧಿಯನ್ನು ಜಾರಿಗೊಳಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಹೊಸ ನಿಯಮವನ್ನು ಏಕೆ ಜಾರಿಗೆ ತರಲಾಯಿತು?

ಮೊಬೈಲ್ ಫೋನ್ ಸಂಖ್ಯೆಗಳ ಆಧಾರದ ಮೇಲೆ ವಂಚನೆಯನ್ನು ತಡೆಯಲು ಟ್ರಾಯ್ ಹೊಸ ನಿಯಮವನ್ನು ಜಾರಿಗೆ ತಂದಿದೆ. ಸಿಮ್ ಕಾರ್ಡ್ ವಿನಿಮಯದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ಈ ನಿಯಮ ತರಲಾಗಿದೆ. ಇದೀಗ ನೀವು ಒಂದು ಸಿಮ್ ಕಾರ್ಡ್ ಕಳೆದುಕೊಂಡರೆ, ಅದೇ ಸಂಖ್ಯೆಯ ಮತ್ತೊಂದು ಸಿಮ್ ಕಾರ್ಡ್ ಅನ್ನು ಸಕ್ರಿಯಗೊಳಿಸಲು ಕನಿಷ್ಠ ಏಳು ದಿನಗಳವರೆಗೆ ಕಾಯಬೇಕಾಗುತ್ತದೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ 15 ಮಾರ್ಚ್ 2024 ರಂದು ಈ ಹೊಸ ನಿಯಮಗಳ ಬಗ್ಗೆ ಮಾಹಿತಿ ನೀಡಿತ್ತು. ಇದೀಗ ಜುಲೈ 1, 2024 ರಿಂದ ದೇಶಾದ್ಯಂತ ಜಾರಿಗೆ ಬಂದಿದೆ.

ಹೊಸ ನಿಯಮ ಹೇಗೆ ಕೆಲಸ ಮಾಡುತ್ತದೆ?

ಮೊಬೈಲ್ ನಂಬರ್ ಪೋರ್ಟ್‌ಗಾಗಿ 7 ದಿನಗಳೊಳಗೆ ವಿನಂತಿಯನ್ನು ತಿರಸ್ಕರಿಸುವ ಆಯ್ಕೆಯನ್ನು ಟ್ರಾಯ್ ನೀಡಿದೆ. ಈ ಕಾರಣಕ್ಕಾಗಿ, ಯುನಿಕ್ ಪೋರ್ಟಿಂಗ್ ಕೋಡ್ ಅಂದರೆ UPC ನೀಡುವಲ್ಲಿ ವಿಳಂಬವಾಗಲಿದೆ. ಹೊಸ ನಿಯಮದ ಪ್ರಕಾರ, ಸಿಮ್ ಕಾರ್ಡ್ ವಿನಿಮಯ ಮತ್ತು ಸಿಮ್ ಬದಲಾಯಿಸಿದ 7 ದಿನಗಳಲ್ಲಿ UPC ಕೋಡ್ ಕಳುಹಿಸಲಾಗುವುದಿಲ್ಲ. ಇದರರ್ಥ ಈಗ ನಿಮ್ಮ ಸಿಮ್ ಕಾರ್ಡ್ ಅನ್ನು ತಕ್ಷಣವೇ ವಿತರಿಸುವ ಮೂಲಕ ಯಾರೂ ಅದನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂದರೆ ನಕಲಿ ಹೊಸ ಸಿಮ್ ನೀಡಿ ಅದನ್ನು ದುರ್ಬಳಕೆ ಮಾಡಿಕೊಳ್ಳಲು ಇಲ್ಲಿ ಅವಕಾಶ ಇರುವುದಿಲ್ಲ.

ಮೊಬೈಲ್ ನಂಬರ್ ಪೋರ್ಟಿಂಗ್ ಎಂದರೇನು?

ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಅಂದರೆ MNP ಎಂಬುದು ಟೆಲಿಕಾಂ ಸೇವಾ ಪೂರೈಕೆದಾರರು ನೀಡುವ ಸೇವೆಯಾಗಿದ್ದು, ಇದರ ಮೂಲಕ ಬಳಕೆದಾರರು ತಮ್ಮ ಸಿಮ್ ಅನ್ನು ಮತ್ತೊಂದು ಟೆಲಿಕಾಂ ಸೇವೆಗೆ ಬದಲಾಯಿಸಬಹುದು. ಈ ಪ್ರಕ್ರಿಯೆಯಲ್ಲಿ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾವಣೆ ಮಾಡಬೇಕಿಲ್ಲ.