ಅಕ್ಷಯ ತೃತೀಯದಂದು ಕೇದಾರನಾಥ ಕ್ಷೇತ್ರದ ಬಾಗಿಲು ಓಪನ್; ದೇವಾಲಯ ಕುರಿತು ನಿಮಗೆ ತಿಳಿದಿರಬೇಕಾದ 6 ವಿಷಯಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ಅಕ್ಷಯ ತೃತೀಯದಂದು ಕೇದಾರನಾಥ ಕ್ಷೇತ್ರದ ಬಾಗಿಲು ಓಪನ್; ದೇವಾಲಯ ಕುರಿತು ನಿಮಗೆ ತಿಳಿದಿರಬೇಕಾದ 6 ವಿಷಯಗಳಿವು

ಅಕ್ಷಯ ತೃತೀಯದಂದು ಕೇದಾರನಾಥ ಕ್ಷೇತ್ರದ ಬಾಗಿಲು ಓಪನ್; ದೇವಾಲಯ ಕುರಿತು ನಿಮಗೆ ತಿಳಿದಿರಬೇಕಾದ 6 ವಿಷಯಗಳಿವು

Kedarnath Dham: ಅಕ್ಷಯ ತೃತೀಯದ ಶುಭದಿನದಂದು ಭಕ್ತರಿಗೆ ಕೇದಾರನಾಥನ ದರ್ಶನ ಸಿಕ್ಕಿದೆ. ಕಳೆದ ವರ್ಷ ಚಳಿಗಾಲಕ್ಕೂ ಮುನ್ನ ಮುಚ್ಚಲಾಗಿದ್ದ ದೇವಾಲಯದ ಬಾಗಿಲನ್ನು ಮತ್ತೆ ಭಕ್ತರ ದರ್ಶನಕ್ಕಾಗಿ ತೆರೆಯಲಾಗಿದೆ. ದೇಗುಲದ ಕುರಿತು ನಿಮಗೆ ತಿಳಿದಿರಬೇಕಾದ ಆರು ಅಂಶಗಳು ಇಲ್ಲಿವೆ.

ಕೇದಾರನಾಥ ಕ್ಷೇತ್ರದ ಕುರಿತು ನಿಮಗೆ ತಿಳಿದಿರಬೇಕಾದ 6 ವಿಷಯಗಳಿವು
ಕೇದಾರನಾಥ ಕ್ಷೇತ್ರದ ಕುರಿತು ನಿಮಗೆ ತಿಳಿದಿರಬೇಕಾದ 6 ವಿಷಯಗಳಿವು (Pixel)

ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇವಾಲಯದ ದ್ವಾರಗಳನ್ನು ಅಕ್ಷಯ ತೃತೀಯದ ಶುಭದಿನವಾದ ಶುಕ್ರವಾರ (ಶುಕ್ರವಾರ 10, 2024) ಭಕ್ತರ ದರ್ಶನಕ್ಕೆ ತೆರೆಯಲಾಗಿದೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ದೇವಾಲಯದ ದ್ವಾರವನ್ನು ತೆರೆಯುವ ಸಮಯದಲ್ಲಿ ಹಾಜರಿದ್ದರು. ಕಳೆದ ಚಳಿಗಾಲದ ಅವಧಿಯಲ್ಲಿ 2023ರ ನವೆಂಬರ್ 15ರಂದು ಮುಚ್ಚಲ್ಪಟ್ಟ ನಂತರ, ಶಿವನ ದರ್ಶನಕ್ಕೆ ಹಾತೊರೆಯುತ್ತಿದ್ದ ದೇಶದ ಹಲವಾರು ಯಾತ್ರಾರ್ಥಿಗಳು ಈ ಸುಸಂದರ್ಭದಲ್ಲಿ ಪವಿತ್ರ ದೇವಾಲಯದಲ್ಲಿ ಹಾಜರಿದ್ದರು.

ಕೇದಾರನಾಥ ಕ್ಷೇತ್ರದ ಆವರಣದಲ್ಲಿ ಶಿವನಾಮಸ್ಮರಣೆ ಮೊಳಗಿದವು. ಭಕ್ತರು ಭಜನೆಗಳೊಂದಿಗೆ 'ಹರ ಹರ ಮಹಾದೇವ್' ಮಂತ್ರ ಜಪಿಸಿದರು. ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರ ಮೇಲೆ ಹೆಲಿಕಾಪ್ಟರ್‌ಗಳ ಮೂಲಕ ಹೂಮಳೆ ಸುರಿಯಲಾಯಿತು. ಕೇದಾರನಾಥ ಧಾಮದ ಜೊತೆಗೆ, ಯಮುನಾ ನದಿಯ ಮೂಲವಾದ ಯಮುನೋತ್ರಿ ದೇವಾಲಯ ಮತ್ತು ಗಂಗೋತ್ರಿ ದೇವಾಲಯದ ದ್ವಾರಗಳನ್ನು ಕೂಡಾ ಅಕ್ಷಯ ತೃತೀಯದ ಶುಭದಿನಲ್ಲಿ ತೆರೆಯಲಾಗುತ್ತದೆ.

ಕೇದಾರನಾಥ ಧಾಮದ ಎಲ್ಲಿದೆ?

ಸಮುದ್ರ ಮಟ್ಟದಿಂದ ಸುಮಾರು 3,500 ಮೀಟರ್ ಎತ್ತರದಲ್ಲಿ ನೆಲೆಸಿರುವ ಕೇದಾರನಾಥ ದೇವಾಲಯವು, ಉತ್ತರಾಖಂಡ ರಾಜ್ಯದ ಗರ್ವಾಲ್ ಹಿಮಾಲಯದಲ್ಲಿ ಬರುವ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ಮಂದಾಕಿನಿ ನದಿ ಇರುವ ಭವ್ಯ ದೇವಾಲಯವು ಹಿಂದೂಗಳ ಪವಿತ್ರ ಸ್ಥಳ. ಸಮುದ್ರ ಮಟ್ಟದಿಂದ ಸರಿಸುಮಾರು 11,755 ಅಡಿ ಎತ್ತರದ ದೇವಾಲಯದ ಸುತ್ತಲೂ ಎತ್ತರದ ಶಿಖರಗಳನ್ನು ಕಾಣಬಹುದು. ಪ್ರಶಾಂತವಾದ ನೈಸರ್ಗಿಕ ಸೌಂದರ್ಯಕ್ಕೆ ದೇಗುಲ ಹೆಸರುವಾಸಿ.

ಕೇದಾರನಾಥ ಧಾಮಕ್ಕೆ ತೆರಳುವುದು ಹೇಗೆ?

ಯಾತ್ರಾರ್ಥಿಗಳು ಗೌರಿಕುಂಡ್‌ಗೆ ಬಂದು ಅಲ್ಲಿಂದ ಚಾರಣದ ಮೂಲಕ ಕೇದಾರನಾಥವನ್ನು ತಲುಪಬಹುದು. ವಾಹನಗಳ ಮೂಲಕ ಗೌರಿಕುಂಡ್‌ವರೆಗೆ ಮಾತ್ರವೇ ಹೋಗಬಹುದು. ಇದನ್ನು ಹೊರತುಪಡಿಸಿ ಹತ್ತಿರದ ಸ್ಥಳಗಳಾದ ಫಾಟಾ, ಗುಪ್ತಕಾಶಿ ಅಥವಾ ಸೀತಾಪುರದಿಂದ ಹೆಲಿಕಾಪ್ಟರ್ ಮೂಲಕವೂ ಕೇದಾರನಾಥ ತಲುಪಬಹುದು. ಗೌರಿಕುಂಡ್‌ನಿಂದ ಕೇದಾರನಾಥಕ್ಕೆ ಸರಿಸುಮಾರು 16 ಕಿಲೋಮೀಟರ್‌ ದೂರವನ್ನು ಚಾರಣದ ಮೂಲಕವೇ ಕ್ರಮಿಸಬೇಕು. ಇದು ದೂರ ಎನಿಸಿದರೂ, ಸುಂದರವಾದ ಪರ್ವತದ ಹಾದಿಯು ಕಣ್ಣಿಗೆ ಹಬ್ಬ ನೀಡುತ್ತವೆ. ಇದು ಕ್ರಮಿಸುವ ದೂರವನ್ನೇ ಕಡಿಮೆ ಮಾಡುತ್ತದೆ.

ಉಳಿಯುವುದು ಎಲ್ಲಿ?

ದೇವಾಲಯದ ಆವರಣದ ಬಳಿ ಧರ್ಮಛತ್ರಗಳಿವೆ. ಲಾಡ್ಜ್‌, ಡೇರೆ ಸೇರಿದಂತೆ ವಿವಿಧ ವಸತಿ ಆಯ್ಕೆಗಳು ಲಭ್ಯವಿದೆ. ಯಾತ್ರಿಕರಿಗೆ ಇದರಲ್ಲಿ ಉಳಿದುಕೊಳ್ಳಬಹುದು. ತೀರ್ಥಯಾತ್ರೆಯ ಋತುಗಳಲ್ಲಿ ಮುಂಗಡ ಬುಕಿಂಗ್ ಮಾಡುವುದು ಒಳಿತು.

ಇದನ್ನೂ ಓದಿ | Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ಮಾತ್ರವಲ್ಲ, ಈ ವಸ್ತುಗಳನ್ನು ಕೂಡಾ ಖರೀದಿಸಿ ತರಬಹುದು

ಕೇದಾರನಾಥ ಧಾಮದ ಪೌರಾಣಿಕ ಹಿನ್ನೆಲೆ

ಹಿಂದೂ ಪುರಾಣಗಳಲ್ಲಿ ಪ್ರತಿಯೊಂದು ತೀರ್ಥಕ್ಷೇತ್ರಕ್ಕೂ ಅದರದ್ದೇ ಆದ ಪೌರಾಣಿಕ ಹಿನ್ನೆಲೆ ಇದೆ. ಕೇದಾರನಾಥ ದೇವಾಲಯವನ್ನು ಮಹಾಭಾರತ ಯುದ್ಧದ ನಂತರ ಪಾಂಡವರು ತಮ್ಮ ಪಾಪಗಳಿಗೆ ಪ್ರಾಯಶ್ಚಿತ್ತಕ್ಕಾಗಿ ನಿರ್ಮಿಸಿದರು ಎನ್ನುವುದು ಪ್ರತೀತಿ. ಶಿವನು ಗೂಳಿಯ ರೂಪ ತಾಳಿ ಕೇದಾರನಾಥದಲ್ಲಿ ಗೂನು ಬಿಟ್ಟು ನೆಲದಡಿ ಕಣ್ಮರೆಯಾದನು ಎನ್ನುತ್ತದೆ ಪುರಾಣ. ಇದೀಗ ದೇವಸ್ಥಾನದಲ್ಲಿ ಆ ಗೂನು ಲಿಂಗವಾಗಿ ಪೂಜಿ ಪಡೆಯುತ್ತದೆ. ಇದು ಶಿವನ ಉಪಸ್ಥಿತಿಯನ್ನು ಸಂಕೇತಿಸುತ್ತದೆ.

ಕೇದಾರನಾಥದ ಆಧ್ಯಾತ್ಮಿಕ ಮಹತ್ವ

ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥವು ಹಿಂದೂಗಳಿಗೆ ಪವಿತ್ರ ಸ್ಥಳ. ಧಾರ್ಮಿಕ ಹಾಗೂ ಆಧ್ಯಾತ್ಮಿಕವಾಗಿ ಮಹತ್ವ ಪಡೆದಿದೆ. ಈ ಪವಿತ್ರ ತಾಣಕ್ಕೆ ತೀರ್ಥಯಾತ್ರೆ ಕೈಗೊಳ್ಳುವುದು ಅನಾದಿಕಾಲದಿಂದಲೂ ಮಹತ್ವ ಪಡೆದಿದೆ. ಮೋಕ್ಷ ಪ್ರಾಪ್ತಿಗಾಗಿ ಈ ಪುಣ್ಯ ಸ್ಥಳಕ್ಕೆ ಜೀವನದಲ್ಲಿ ಒಂದು ಭಾರಿಯಾದರೂ ಭೇಟಿ ನೀಡಿದರೆ ಒಳ್ಳೆಯದು ಎನ್ನುವ ನಂಬಿಕೆ ಇದೆ.

ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿ

ಹಿಮದಿಂದ ಆವೃತವಾದ ಸುಂದರ ಶಿಖರಗಳು ಕೇದಾರನಾಥದ ಪ್ರಮುಖ ಆಕರ್ಷಣೆ. ಹಚ್ಚ ಹಸಿರಿನ ಸುಂದರರ ಕಣಿವೆಗಳು, ಹರಿಯುವ ಮಂದಾಕಿನಿ ನದಿ ಸೇರಿದಂತೆ ಆಕರ್ಷಕ ನೈಸರ್ಗಿಕ ಸೌಂದರ್ಯಕ್ಕೆ ಮಾರುಹೋಗದವರಿಲ್ಲ. ಭವ್ಯವಾದ ಹಿಮಾಲಯದೊಂದಿಗೆ ಶಾಂತ ಪರಿಸರವು ಯಾತ್ರಿಕರಿಗೆ ನೈಸರ್ಗಿಕ ಆಧ್ಯಾತ್ಮಿಕ ಭಾವ ಕೊಡುತ್ತದೆ. ಪ್ರಯಾಣದ ಸಮಯದಲ್ಲಿ ಶಾಂತಿ ಹಾಗೂ ಪ್ರಶಾಂತ ಭಾವ ತುಂಬುತ್ತದೆ.

Whats_app_banner