ಕನ್ನಡ ಸುದ್ದಿ  /  ಜೀವನಶೈಲಿ  /  5g ನೆಟ್‌ವರ್ಕ್‌ನಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗ ಖಾಲಿ ಆಗುತ್ತಾ? ತಕ್ಷಣ ಈ ಟಿಪ್ಸ್ ಗಮನಿಸಿ

5G ನೆಟ್‌ವರ್ಕ್‌ನಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗ ಖಾಲಿ ಆಗುತ್ತಾ? ತಕ್ಷಣ ಈ ಟಿಪ್ಸ್ ಗಮನಿಸಿ

ಸ್ಮಾರ್ಟ್‌ಫೋನ್‌ನಲ್ಲಿ (ಬ್ಯಾಟರಿ) ಚಾರ್ಜ್ ಬೇಗ ಖಾಲಿ ಆಗುವುದು ದೊಡ್ಡ ಸಮಸ್ಯೆಯಾಗಿದೆ. 5G ನೆಟ್‌ವರ್ಕ್ ಬಂದ ಮೇಲಂತು ಈ ಬಗ್ಗೆ ಅನೇಕರು ದೂರುತ್ತಿದ್ದಾರೆ. ಹಾಗಾದರೆ, ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರಲು, ಚಾರ್ಜ್ ಬೇಗ ಖಾಲಿ ಆಗದಿರಲು ಏನು ಮಾಡಬೇಕು? ಇಲ್ಲಿದೆ ನೋಡಿ ಒಂದಿಷ್ಟು ಟಿಪ್ಸ್. (ಬರಹ: ವಿನಯ್ ಭಟ್)

ಮೊಬೈಲ್‌ನಲ್ಲಿ ಚಾರ್ಜ್ ನಿಲ್ಲುತ್ತಿಲ್ಲವೇ? ಈ ಟಿಪ್ಸ್ ಗಮನಿಸಿ.
ಮೊಬೈಲ್‌ನಲ್ಲಿ ಚಾರ್ಜ್ ನಿಲ್ಲುತ್ತಿಲ್ಲವೇ? ಈ ಟಿಪ್ಸ್ ಗಮನಿಸಿ.

ಸ್ಮಾರ್ಟ್‌ಫೋನ್‌ನಲ್ಲಿ ಚಾರ್ಜ್ ನಿಲ್ಲುತ್ತಿಲ್ಲ, ಚಾರ್ಜ್ ಆದಷ್ಟೇ ವೇಗದಲ್ಲಿ ಬ್ಯಾಟರಿ ಕೂಡ ಖಾಲಿ ಆಗುತ್ತಿದೆಯೇ? ಇದೇ ರೀತಿಯ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ ಇಂದಿನ ಲೇಖನವು ನಿಮಗಾಗಿ. ಫೋನ್‌ನ ಬ್ಯಾಟರಿ ಬೇಗನೆ ಖಾಲಿಯಾಗಲು 5G ಒಂದು ಕಾರಣ ಎಂದು ಹೇಳಲಾಗುತ್ತಿದೆ. 5G ಯಿಂದಾಗಿ ತಮ್ಮ ಫೋನ್‌ನ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ ಎಂದು ಅನೇಕ ಬಳಕೆದಾರರು ದೂರುತ್ತಿದ್ದಾರೆ. 5G ಹೊಸ ತಂತ್ರಜ್ಞಾನವಾಗಿದ್ದು ಇದು ಹೆಚ್ಚು ಶಕ್ತಿಯನ್ನು ಎಳೆದುಕೊಳ್ಳುತ್ತದಂತೆ. ಆದರೆ, ಈ ವಿಚಾರವನ್ನು ಎಲ್ಲರೂ ಒಪ್ಪುವುದಿಲ್ಲ. ನಿಮಗೆಲ್ಲಾದರು 5G ಉಪಯೋಗಿಸಿದ ಕಾರಣ ಬೇಗನೆ ಚಾರ್ಜ್ ಮುಗಿಯುತ್ತಿದೆ ಎಂದು ಅನಿಸಿದರೆ ಮೊಬೈಲ್ ನೆಟ್ವರ್ಕ್ ಆಯ್ಕೆಗೆ ಹೋಗಿ 5ಜಿ ಬದಲು ಅದನ್ನು 4G ಗೆ ಬದಲಾಯಿಸಿ ನೋಡಬಹುದು. ಚಾರ್ಜ್ ಹೆಚ್ಚು ಸಮಯ ನಿಲ್ಲಲು ಇಲ್ಲಿದೆ ಟಿಪ್ಸ್.

1) ಮೊಬೈಲ್ ಚಾರ್ಜಿಂಗ್‌ನಲ್ಲಿ 80:20 ನಿಯಮ

ಹೆಚ್ಚಿನ ಜನರು ಬ್ಯಾಟರಿಯಲ್ಲಿ ಚಾರ್ಜ್ ಪೂರ್ತಿ ಖಾಲಿಯಾದಾಗ, ಅಂದರೆ 0% ತಲುಪಿದಾಗ ಮಾತ್ರ ಫೋನ್ ಅನ್ನು ಚಾರ್ಜ್ ಮಾಡಲು ಮುಂದಾಗುತ್ತಾರೆ. ಆದರೆ, ಇದು ಸರಿಯಲ್ಲ ಎನ್ನುತ್ತಾರೆ ತಜ್ಞರು. ಹಾಗೆಯೆ ಸ್ಮಾರ್ಟ್‌ಫೋನ್‌ ಪೂರ್ತಿಯಾಗಿ, ಅಂದರೆ 100% ಚಾರ್ಜ್ ಕೂಡ ಮಾಡಬಾರದು. ಫೋನ್ ಬ್ಯಾಟರಿಯನ್ನು ಸಂಪೂರ್ಣವಾಗಿ ಡಿಸ್‌ಚಾರ್ಜ್‌ ಆಗಲು ಬಿಡಬಾರದು ಅಥವಾ ಫುಲ್ ಚಾರ್ಜ್ ಮಾಡಬಾರದು. ಫೋನ್ ಚಾರ್ಜ್ ಮಾಡುವಾಗ ಯಾವಾಗಲೂ 20:80 ಅನುಪಾತವನ್ನು ನೆನಪಿನಲ್ಲಿಡಿ. 20:80 ಅನುಪಾತ ಎಂದರೆ, ಬ್ಯಾಟರಿ 20% ಬಂದಾಗ ಮೊಬೈಲ್ ಅನ್ನು ಚಾರ್ಜ್ ಮಾಡುವುದು. ಅಲ್ಲದೆ, ಚಾರ್ಜಿಂಗ್ 80 ಪ್ರತಿಶತವನ್ನು ತಲುಪಿದಾಗ, ಅದನ್ನು ತೆಗೆಯಬೇಕು. ಇದನ್ನು 20:80 ಅನುಪಾತ ಎಂದು ಕರೆಯಲಾಗುತ್ತದೆ. ಬ್ಯಾಟರಿಯನ್ನು 90 ಪ್ರತಿಶತದವರೆಗೂ ಚಾರ್ಜ್ ಮಾಡಬಹುದು ಎಂದು ಕೆಲವು ತಜ್ಞರು ಹೇಳುತ್ತಾರೆ. ನೀವು ಈ ನಿಯಮವನ್ನು ಅನುಸರಿಸಿದರೆ ನಿಮ್ಮ ಬ್ಯಾಟರಿ ಹೆಚ್ಚು ಬಾಳಿಕೆ ಬರುತ್ತದೆ.

ಟ್ರೆಂಡಿಂಗ್​ ಸುದ್ದಿ

2) ಚಾರ್ಜ್‌ಗೆ ಹಾಕಿದ್ದಾಗ ಮೊಬೈಲ್ ಬಳಸದಿರಿ

ಫೋನ್ ಅನ್ನು ಚಾರ್ಜ್ ಮಾಡುವಾಗ ಅದನ್ನು ಬಳಸುವ ಅನೇಕ ಜನರಿದ್ದಾರೆ. ಹೀಗೆ ಮಾಡಲೇಬಾರದು. ಈರೀತಿ ಮಾಡುವುದರಿಂದ ಫೋನ್‌ನ ಪ್ರೊಸೆಸರ್‌ ಮೇಲೆ ಹೆಚ್ಚಿದ ಒತ್ತಡ ಬೀಳುತ್ತದೆ. ಫೋನ್ ಅನ್ನು ಚಾರ್ಜ್ ಮಾಡುವಾಗ, ನೀವು ಕಂಪನಿಯಿಂದ ಸ್ವೀಕರಿಸಿದ ಚಾರ್ಜರ್ ಅನ್ನು ಬಳಸಿ. ಯಾವುದೇ ಕಾರಣದಿಂದ ಚಾರ್ಜರ್ ಹಾಳಾಗಿದ್ದರೆ, ನೀವು ಕಂಪನಿಯ ಒರಿಜಿನಲ್ ಚಾರ್ಜರ್ ಅನ್ನು ಮಾತ್ರ ಖರೀದಿಸಬೇಕು. ಬೇರೆ ಚಾರ್ಜರ್ ಬಳಸಿದರೆ ಬ್ಯಾಟರಿ ಹಾಳಾಗಿ ಚಾರ್ಜ್ ನಿಲ್ಲದಂತಾಗುತ್ತದೆ.

3) ಬ್ಯಾಟರಿ ಬೇಗ ಖಾಲಿಯಾಗಲು ಇವು ಸಹ ಕಾರಣ

ಅನೇಕ ಬಾರಿ, ನಿಮ್ಮ ಕೆಲವು ತಪ್ಪುಗಳಿಂದಾಗಿ ನಿಮ್ಮ ಫೋನ್‌ನ ಬ್ಯಾಟರಿ ತ್ವರಿತವಾಗಿ ಖಾಲಿಯಾಗುತ್ತದೆ. ನಿಮ್ಮ ಫೋನ್‌ನ ಬ್ಯಾಟರಿ ಹಳೆಯದಾಗುತ್ತಿದ್ದಂತೆ, ಅದರ ಸಾಮರ್ಥ್ಯವು ಕಡಿಮೆಯಾಗುತ್ತದೆ, ಅದರ ಧಾರಣ ಶಕ್ತಿ ಕಡಿಮೆಯಾಗುವುದರಿಂದ ಹೆಚ್ಚು ಹೊತ್ತು ಚಾರ್ಜ್ ನಿಲ್ಲುವುದಿಲ್ಲ. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ದೀರ್ಘಕಾಲದವರೆಗೆ ಬಳಸಿದರೆ, ಅದು ಬ್ಯಾಟರಿ ಬ್ಯಾಕಪ್ ಮೇಲೆ ಪರಿಣಾಮ ಬೀರುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ವೀಡಿಯೊಗಳನ್ನು ನೋಡುವುದು, ಗೇಮ್ ಆಡುವುದು ಇತ್ಯಾದಿ. ಇದರಿಂದ ಬ್ಯಾಟರಿ ಬೇಗ ಖಾಲಿಯಾಗುತ್ತದೆ.

4) ಬಿಸಿಯಾದ ಸ್ಥಳಗಳಿಂದ ಫೋನ್ ದೂರವಿಡಿ

ಬಿಸಿಯಾದ ಸ್ಥಳಗಳಿಂದ ಫೋನ್ ಅನ್ನು ದೂರವಿಡಿ, ಬಿಸಿಯಿಂದಾಗಿ ಫೋನ್‌ನ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ. ನಿಮ್ಮ ಫೋನ್‌ನ ಒಎಸ್ ಅಪ್‌ಡೇಟ್ ಮಾಡುವುದು ಕೂಡ ಮುಖ್ಯ.

5) ಅನಗತ್ಯ ಅಪ್ಲಿಕೇಶನ್‌ಗಳ ಬಳಕೆ ನಿಲ್ಲಿಸಿ

ಅನಗತ್ಯ ಅಪ್ಲಿಕೇಶನ್‌ಗಳನ್ನು ಕ್ಲೋಸ್ ಮಾಡಿದರೆ ಬ್ಯಾಟರಿಯಲ್ಲಿ ಹೆಚ್ಚು ಸಮಯ ಚಾರ್ಜ್ ಉಳಿಯುತ್ತದೆ. 5ಜಿ ಬಳಕೆಯಿಂದಲೇ ಚಾರ್ಜ್ ಖಾಲಿಯಾಗುತ್ತಿದೆ ಎನಿಸಿದರೆ ಸೆಟಿಂಗ್‌ ಬದಲಿಸಿಕೊಳ್ಳಿ. 4ಜಿ ವರೆಗೆ ಮಾತ್ರವೇ ಇಂಟರ್‌ನೆಟ್ ಬಳಕೆಯಾಗುವಂತೆ ಬದಲಿಸಿಕೊಳ್ಳಬಹುದು.