Thandai Recipe: ಹೋಳಿ ಹಬ್ಬದ ಸಂಭ್ರಮದೊಂದಿಗೆ ನಿಮ್ಮ ಜೊತೆಗಿರಲಿ ಥಂಡಾಯ್; ರಂಗಿನ ಹಬ್ಬಕ್ಕೆ ಹೇಳಿ ಮಾಡಿಸಿದಂಥ ರೆಸಿಪಿ ಇದು
Thandai Recipe: ಪ್ರತಿಯೊಂದು ಹಬ್ಬಕ್ಕೂ ಏನಾದರೊಂದು ಸಾಂಪ್ರದಾಯಿಕ ತಿನಿಸು ತಯಾರಿಸುವ ಪದ್ಧತಿ ಇದೆ. ಇಂದು ( ಮಾರ್ಚ್ 25) ದೇಶಾದ್ಯಂತ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಬ್ಬಕ್ಕೆ ಸಾಮಾನ್ಯವಾಗಿ ಎಲ್ಲಾ ಕಡೆ ಥಂಡಾಯ್ ತಯಾರಿಸಲಾಗುತ್ತದೆ. ಹಾಲಿನಿಂದ ತಯಾರಿಸುವ ರೆಸಿಪಿ ಹೀಗಿದೆ ನೋಡಿ.
Thandai Recipe: ಇಂದು ದೇಶಾದ್ಯಂತ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ರಂಗಿನ ಹಬ್ಬವನ್ನು ಮಕ್ಕಳು, ಯುವಕರು, ವೃದ್ಧರು ಎಲ್ಲರೂ ಜೊತೆ ಸೇರಿ ಆಚರಿಸಲು ಕಾಯುತ್ತಿದ್ದಾರೆ. ಕಳೆದ ಒಂದು ವಾರದಿಂದಲೇ ಹಬ್ಬದ ಸಂಭ್ರಮ ಆರಂಭವಾಗಿದೆ. ಹಬ್ಬ ಎಂದರೆ ಅಲ್ಲಿ ಸಡಗರ, ಸಂಭ್ರಮದ ಜೊತೆಗೆ ಅಡುಗೆಯ ರುಚಿಯೂ ಸೇರಿದರೆ ಖುಷಿ ದುಪ್ಪಟ್ಟಾಗುತ್ತದೆ.
ಹೋಳಿ ಹಬ್ಬದ ಪ್ರಮುಖ ಪಾನೀಯ ಥಂಡಾಯ್. ಹೋಳಿ ಹಬ್ಬದಂದು ಈ ಪಾನೀಯ ಕುಡಿಯುವುದು ಶುಭ ಎಂದು ನಂಬಲಾಗಿದೆ. ಉತ್ತರ ಭಾರತದ ಎಲ್ಲಾ ಕಡೆ ಹಾಗೂ ದಕ್ಷಿಣ ಭಾರತದ ಕೆಲವೆಡೆ ಈ ಥಂಡಾಯ್ ರೆಸಿಪಿಯನ್ನು ತಯಾರಿಸಲಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಮತ್ತು ರುಚಿಯಾಗಿರುತ್ತದೆ. ಹೋಳಿ ಸಮಯದಲ್ಲಿ ಥಂಡಾಯ್ ತಯಾರಿಸುವುದು ಹಿಂದಿನಿಂದಲೂ ನಡೆದುಬಂದ ಸಂಪ್ರದಾಯ. ರುಚಿಯಾದ ಥಂಡಾಯ್ ರೆಸಿಪಿ ಇಲ್ಲಿದೆ.
ಥಂಡಾಯ್ ತಯಾರಿಲು ಬೇಕಾದ ಸಾಮಗ್ರಿಗಳು
- ಹಾಲು - 1 1/2 ಲೀಟರ್
- ಬಾದಾಮಿ - 25
- ಗೋಡಂಬಿ - 10
- ಗಸಗಸೆ - 1 ಟೇಬಲ್ ಸ್ಪೂನ್
- ಸೋಂಪು - 1 ಟೀ ಸ್ಪೂನ್
- ಏಲಕ್ಕಿ - 10
- ಕಾಳು ಮೆಣಸು - 8
- ಗುಲಾಬಿ ದಳ - ಸ್ವಲ್ಪ
- ಸಕ್ಕರೆ - 6 ಚಮಚ
- ಕೇಸರಿ - ಚಿಟಿಕೆ
- ಐಸ್ ಕ್ಯೂಬ್‌ಗಳು - ಸ್ವಲ್ಪ
ಇದನ್ನೂ ಓದಿ: ಗರಿಗರಿ ಬೆಣ್ಣೆ ಚಕ್ಕುಲಿ ತಿಂತಿದ್ರೆ ಸ್ವರ್ಗಸುಖ; ಇಲ್ಲಿದೆ ರೆಸಿಪಿ
ಥಂಡಾಯ್ ತಯಾರಿಸುವ ವಿಧಾನ
- ಬಾದಾಮಿ, ಗೋಡಂಬಿ ಮತ್ತು ಪಿಸ್ತಾಗೆ ಸ್ವಲ್ಪ ನೀರು ಸೇರಿಸಿ ನೆನೆಯಲು ಬಿಡಿ
- ಗಸಗಸೆಯನ್ನು ಅರ್ಧ ಗಂಟೆ ಸಮಯ ಪ್ರತ್ಯೇಕವಾಗಿ ನೆನೆಸಿ
- ನೆನೆಸಿದ ಗಸಗಸೆ ಹಾಗೂ ಡ್ರೈ ಫ್ರೂಟ್‌ಗಳನ್ನು ನೀರು ಶೋಧಿಸಿ ಬ್ಲೆಂಡರ್‌ಗೆ ಸೇರಿಸಿ
- ಇದರೊಂದಿಗೆ ಸೋಂಪು, ಏಲಕ್ಕಿ, ಲವಂಗ, ಗುಲಾಬಿ ದಳಗಳು, ಕೇಸರಿ ಸೇರಿಸಿ ಗ್ರೈಂಡ್ ಮಾಡಿ
- ಈ ಮಿಶ್ರಣಕ್ಕೆ ನೀರು ಅಥವಾ ಹಾಲು ಯಾವುದಾದರನ್ನೂ ಸೇರಿಸಿ ಗ್ರೈಂಡ್ ಮಾಡಿಕೊಳ್ಳಬಹುದು.
- ಹಾಲನ್ನು ಸ್ಟೌವ್ ಮೇಲಿಟ್ಟು ಕುದಿಯಲು ಬಿಡಿ. ನಂತರ ಇದಕ್ಕೆ ಸಕ್ಕರೆ ಸೇರಿಸಿ
- ಸಕ್ಕರೆ ಕರಗಿದ ನಂತರ ಮೊದಲೇ ಗ್ರೈಂಡ್ ಮಾಡಿಕೊಂಡಿದ್ದ ಮಿಶ್ರಣ ಸೇರಿಸಿ ಮಿಕ್ಸ್ ಮಾಡಿ ತಿರುವಿ
- ಒಂದೆರಡು ನಿಮಿಷದ ನಂತರ ಸ್ಟೌವ್ ಆಫ್ ಮಾಡಿ, ರೂಮ್ ಟೆಂಪ್ರೇಚರ್‌ಗೆ ಬಂದ ನಂತರ 4 ಗಂಟೆಗಳ ಕಾಲ ರೆಫ್ರಿಜರೇಟರ್‌ಗೆ ಇಡಿ
- ಫ್ರಿಡ್ಜ್‌ನಿಂದ ತೆಗೆದ ಥಂಡಾಯನ್ನು ಡ್ರೈ ಫ್ರೂಟ್ಸ್, ರೋಸ್ ಪೆಟಲ್ಸ್‌ನಿಂದ ಗಾರ್ನಿಶ್ ಮಾಡಿ ಸರ್ವ್ ಮಾಡಿ
ಥಂಡಾಯ್ ನಿಮಗೆ ಹೊರಗೆ ಕೂಡಾ ದೊರೆಯುತ್ತದೆ. ಆದರೆ ಇದು ಮನೆಯಲ್ಲಿ ತಯಾರಿಸುವಷ್ಟು ಶುದ್ಧವಾಗಿರುವುದಿಲ್ಲ. ಹೊರಗೆ ಇದಕ್ಕೆ ಇನ್ನಿತರ ವಸ್ತುಗಳನ್ನು ಸೇರಿಸುತ್ತಾರೆ. ಆದ್ದರಿಂದ ನೀವು ಮನೆಯಲ್ಲೇ ರುಚಿಯಾದ , ಸ್ವಚ್ಛವಾದ ಥಂಡಾಯ್ ತಯಾರಿಸಿ ಸೇವಿಸಿ. ದೇಹವನ್ನು ಶಾಖದಿಂದ ತಡೆಯಲು ಈ ಪಾನೀಯವು ತುಂಬಾ ಸಹಾಯಕವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೋಳಿ ಹಬ್ಬ, ಬೇಸಿಗೆ ಕಾಲದಲ್ಲಿ ಬರುವುದರಿಂದ ದೇಹದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಇರುತ್ತವೆ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಥಂಡಾಯ್ ಬಹಳ ಉಪಯುಕ್ತವಾಗಿದೆ. ಇದರಲ್ಲಿ ಹಲವಾರು ಔಷಧೀಯ ಗುಣಗಳು ಇವೆ. ಆದರೆ ಹೆಚ್ಚು ಕುಡಿಯಬೇಡಿ. ಗರ್ಭಿಣಿಯರು ಮತ್ತು ಮಕ್ಕಳು ಥಂಡಾಯ್ ಸೇವಿಸಬೇಡಿ.