Dharwad Savaji Khanavali: ಬಾಡೂಟಕ್ಕೆ ಫೇಮಸ್ ಧಾರವಾಡದ ವಿನೋದ ಸಾವಜಿ ಖಾನಾವಳಿ; ಒಮ್ಮೆಯಾದ್ರೂ ಇಲ್ಲಿನ ರುಚಿ ಸವಿಯಿರಿ
ತಲೆತಲಾಂತರದಿಂದ ಅಡುಗೆಗೆ ಬೇಕಾದ ಮಸಾಲೆ ಹಾಗೂ ಖಾರವನ್ನು ಮನೆಯಲ್ಲಿಯೇ ತಯಾರಿಸಿ ತಮ್ಮದೇ ಆದ ವಿಶಿಷ್ಠ ರುಚಿಯನ್ನು ಜನರಿಗೆ ಉಣಬಡಿಸುತ್ತಿರುವ ಈ ಹೋಟೆಲ್ ವಿನೋದ ಸಾವಜಿ ಖಾನಾವಳಿಗೆ ನೀವೂ ಒಮ್ಮೆ ಭೇಟಿ ನೀಡಿ, ರುಚಿ ಸವಿದು ಬನ್ನಿ.
ಪೇಢೆನಗರಿ ಧಾರವಾಡ ವಾಣಿಜ್ಯ ನಗರಿ ಹುಬ್ಬಳ್ಳಿ ಹಲವಾರು ಸಂಗತಿಗಳಲ್ಲಿ ತಮ್ಮದೇಯಾದ ವಿಶಿಷ್ಟ ಛಾಪು ಮೂಡಿಸಿವೆ. ಅಂಥವುಗಳಲ್ಲೊಂದು ಇಲ್ಲಿನ ಸಾವಜಿ ಊಟದ ಸವಿರುಚಿ. ಸಾವಜಿ ಊಟ ಎಂದೊಡನೆ ಮಾಂಸಾಹಾರಿಗಳು ಸೇರಿದಂತೆ ಕೆಲವು ಮಾಂಸಾಹಾರಪ್ರಿಯರಾದ ಸಸ್ಯಾಹಾರಿಗಳ ಬಾಯಲ್ಲಿಯೂ ನೀರಾಡುತ್ತದೆ. ಮಹಾನಗರದಲ್ಲಿನ ಕೆಲವು ಸಾವಜಿ ಹೋಟೆಲ್‌ಗಳು ಪಾರಂಪರಿಕ ರುಚಿಯನ್ನು ಉಣಬಡಿಸುತ್ತವೆ. ಅಂಥವುಗಳಲ್ಲೊಂದು ಧಾರವಾಡದ ಹೋಟೆಲ್ ವಿನೋದ ಸಾವಜಿ ಖಾನಾವಳಿ.
ಹೋಟೆಲ್ ಎಲ್ಲಿದೆ?
ಧಾರವಾಡ ಹಳೇ ಬಸ್‌ನಿಲ್ದಾಣದಿಂದ ಜಕಣಿಬಾವಿ ರಸ್ತೆಯಲ್ಲಿ ಪೊಲೀಸ್ ಠಾಣೆ ಸರ್ಕಲ್ ದಾಟಿದ ತಕ್ಷಣ ಬಲಬದಿಗೆ ಮಿಸ್ಕಿನ್ ಸ್ಟುಡಿಯೋ ಎದುರು ಇರುವ ಹೋಟೆಲ್ ವಿನೋದ ಸಾವಜಿ ಖಾನಾವಳಿ ಸದಾ ಗ್ರಾಹಕರ ಸೇವೆಗೆ ಸಿದ್ಧವಾಗಿರುತ್ತದೆ.
60 ವರ್ಷಗಳ ಹಿಂದೆ ಆರಂಭಿಸಿದ ಹೋಟೆಲ್
ಸಧ್ಯ ವಿನೋದ ಕಠಾರೆ ಹಾಗೂ ರಾಹುಲ್ ಕಠಾರೆಯವರು ಈ ಹೋಟೆಲ್ ನಡೆಸುತ್ತಿದ್ದು, ಅವರ ಪೂರ್ವಜರಾದ ಚೂಡಾಮಣಿಸಾ ಕಠಾರೆಯವರು ಸುಮಾರು 60 ವರ್ಷಗಳ ಹಿಂದೆ ಆರಂಭಿಸಿದ ಈ ಹೋಟೆಲ್‌ನ್ನು ಅವರ ನಂತರ ರೇವಣಸಾ ಕಠಾರೆ, ಪರಶುರಾಮಸಾ ಕಠಾರೆಯವರು ತಲೆಮಾರುಗಳಿಂದ ನಡೆಸಿಕೊಂಡು ಬಂದಿದ್ದಾರೆ. ಅವರ ಮುಂದಿನ ಪೀಳಿಗೆಯವರಾದ ವಿನೋದಸಾ ಹಾಗೂ ರಾಹುಲ್‌ಸಾ ಕಠಾರೆಯವರು ಮುಂದುವರಿಸಿದ್ದು, ಅದೇ ಪಾರಂಪರಿಕ ಅಡಿಗೆ ರುಚಿ ಈಗಲೂ ಗ್ರಾಹಕರ ಸಂತೃಪ್ತಿಗೆ ಕಾರಣವಾಗಿದೆ ಎಂದು ರಾಹುಲ್ ಹೆಮ್ಮೆಯಿಂದ ಹೇಳುತ್ತಾರೆ.
ರುಚಿಕರ ಖಾದ್ಯಗಳು
ಇಲ್ಲಿ ದೊರೆಯುವ ಮಟನ್ ಮಸಾಲಾ, ಖೀಮಾ ಸಾವಜಿ ಮಸಾಲಾ, ಚಾಪ್ಸ್ ಮಸಾಲಾ, ಮುಂಡಿ ಮಸಾಲ, ಮಟನ್ ಡ್ರೈ, ಚಿಕನ್ ಮಸಾಲಾ, ಖೀಮಾ ಡ್ರೈ, ಎಗ್ ಮಸಾಲಾ, ಚಿಕನ್ ಡ್ರೈ, ಮುಂಡಿ ಡ್ರೈ, ಬೇಜಾ ಫ್ರೈ, ಎಗ್ ಡ್ರೈ, ಲೀವರ್ ಮಸಾಲಾ, ಲೀವರ್ ಡ್ರೈ, ಖೀಮಾ ಮಿಂಚ್, ಸೀಸನೇಬಲ್ ಫೀಶ್‌ನಂತಹ ವೆರೈಟಿ ಊಟ ಇಲ್ಲಿ ಸದಾ ಗ್ರಾಹಕರನ್ನು ಸಂತೃಪ್ತಗೊಳಿಸುತ್ತವೆ. ಇವುಗಳೊಂದಿಗೆ ಜೋಳದ ಖಡಕ್ ರೊಟ್ಟಿ, ಬಿಸಿರೊಟ್ಟಿ, ಚಪಾತಿ, ಗ್ರೀನ್‌ಗ್ರೇವಿ, ರೆಡ್‌ಗ್ರೇವಿಯಂತೂ ಇದ್ದೇ ಇರುತ್ತವೆ. ನಿತ್ಯ ಮಧ್ಯಾಹ್ನ 1 ಗಂಟೆಯಿಂದ 4.30, ರಾತ್ರಿ 7.30ರಿಂದ 10.30ರವರೆಗೆ ಸೇವೆ ಲಭ್ಯವಿದ್ದು, ಸೋಮವಾರ ವಾರದ ರಜೆ ಇರುತ್ತದೆ. 8951247905 ಗೆ ಸಂಪರ್ಕಿಸಬಹುದು.
ಸ್ಪೇಶಲ್ ಟೇಸ್ಟ್ : ಪ್ರತಿ ಮಂಗಳವಾರ, ರವಿವಾರ ಮಧ್ಯಾಹ್ನ 2ರಿಂದ 4.30ರವರೆಗೆ ವಿವಿಧ ರೀತಿಯ ಬಿರಿಯಾನಿಗಳು, ಖುಷ್ಕಾ ಲಭ್ಯವಿರುತ್ತವೆ. ವಿಶೇಷ ಸಂದರ್ಭಗಳಲ್ಲಿ ಇಲ್ಲಿ ಸಿಗುವಂತಹ ಖಾರಾಬೋಟಿ ಹಾಗೂ ಬೋಟಿಗಳಂತೂ ಬಾಯಿ ಚಪ್ಪರಿಸುವಂತಿರುತ್ತವೆ ಎಂದು ಇಲ್ಲಿಯ ಗ್ರಾಹಕರೊಬ್ಬರು ಪ್ರಶಂಸಿಸುತ್ತಾರೆ.
ಕೃತಕ ಮಸಾಲೆ ಇಲ್ಲ: ತಲೆತಲಾಂತರದಿಂದ ಅಡುಗೆಗೆ ಬೇಕಾದ ಮಸಾಲೆ ಹಾಗೂ ಖಾರವನ್ನು ಮನೆಯಲ್ಲಿಯೇ ತಯಾರಿಸುತ್ತೇವೆ. ನಾವು ಯಾವುದೇ ಕೃತಕ ಮಸಾಲೆಗಳನ್ನು ಬಳಸುವುದಿಲ್ಲ. ಹೀಗಾಗಿ ಅಡುಗೆಯಲ್ಲಿ ನಮ್ಮದೇಯಾದ ಆರೋಗ್ಯಕರ ಟೇಸ್ಟ್ ಇರುತ್ತದೆ. ಅಲ್ಲದೇ ಇಲ್ಲಿ ಪಕ್ಕಾ ಮನೆಯಲ್ಲಿ ಕುಳಿತು ಊಟ ಮಾಡಿದಷ್ಟು ಖುಷಿ ಗ್ರಾಹಕರಿಗೆ ದೊರೆಯುತ್ತದೆ ಎಂಬು ಇನ್ನೊಂದು ವಿಶೇಷ. ಸಣ್ಣಪುಟ್ಟ ಪಾರ್ಟಿ, ಪಂಕ್ಷನ್‌ಗಳಿಗೆ ಆರ್ಡರ್‌ಗಳಿಗೆ ತಯಾರಿಸಿಕೊಡುತ್ತೇವೆ. ಎನ್ನುತ್ತಾರೆ ವಿನೋದ.
ವಿಭಾಗ