Savaji Hotel: ಅಜ್ಜಿ ಕೈಯೂಟದ ರುಚಿಗೆ ಫೇಮಸ್ ಈ ಲಕ್ಷ್ಮೀ ಸಾವಜಿ ಹೋಟೆಲ್, ಧಾರವಾಡಕ್ಕೆ ಹೋದ್ರೆ ಇಲ್ಲಿ ಊಟ ಮಾಡೋದು ಮರಿಬೇಡಿ
Tasty Food: ಅಡಿಗೆಗೆ ಬೇಕಾದ ಮಸಾಲೆ, ಖಾರದಪುಡಿಗಳನ್ನು ನಾವು ಸ್ವತಃ ಮನೆಯಲ್ಲೇ ತಯಾರಿಸಿ ಅಡುಗೆ ಮಾಡುವ ಈ ಹೋಟೆಲ್ ರುಚಿಯನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಧಾರವಾಡದಲ್ಲಿರುವ ಈ ಹೋಟೆಲ್‌ಗೆ ನೀವು ಭೇಟಿ ನೀಡಿದರೆ ಪಾರಂಪರಿಕ ಪಟೇಗಾರ ಶೈಲಿಯ ಅಜ್ಜಿಯ ಕೈಯೂಟದ ರುಚಿ ಸವಿಯಬಹುದು.
ಪಾರಂಪರಿಕ ಪಟೇಗಾರ ಶೈಲಿಯ ಅಜ್ಜಿಯ ಕೈಯೂಟದ ರುಚಿಯನ್ನು ಗ್ರಾಹಕರಿಗೆ ಉಣಬಡಿಸಿ ಸಂತೃಪ್ತಗೊಳಿಸುವ ಸಾವಜಿ ಹೋಟೆಲೊಂದು ಧಾರವಾಡದ ಹೃದಯಭಾಗಲ್ಲಿದೆ. ಇಲ್ಲಿನ ’ಹೋಟೆಲ್ ಲಕ್ಷ್ಮೀ ಸಾವಜಿ’ ಎಂಬ ಹೆಸರಿನೊಟ್ಟಿಗೆ ಅಲ್ಲಿನ ರುಚಿಯೂ ಥಟ್ಟನೆ ನೆನಪಾಗುತ್ತದೆ. ಇದಕ್ಕೆ ಅಜ್ಜಿಯ ಕೈಯೂಟದ ರುಚಿಯೆಂದು ಹೇಳಲು ಕಾರಣವಿದೆ. ಸದ್ಯ ಹೋಟೆಲ್ ನಡೆಸುತ್ತಿರುವ ಮಾಲೀಕ ಸುರೇಶ ರೇವಣಸಾ ಬದ್ದಿಯವರು ಬಾಲಕನಿದ್ದಾಗಲೇ ತಮ್ಮ ಅಜ್ಜಿ ಕಲಘಟಗಿಯ ಸುಶೀಲಾಬಾಯಿ ದಲಭಂಜನ ಅವರ ಬಳಿ ಅಡಿಗೆ ಮಾಡುವುದನ್ನು ಕಲಿತು ತಾಯಿ-ತಂದೆಯರ ಮಾರ್ಗದರ್ಶನದಲ್ಲಿ ಧಾರವಾಡದಲ್ಲಿ 25 ವರ್ಷಗಳ ಹಿಂದೆಯೇ ಈ ಹೋಟೆಲ್ ಆರಂಭಿಸುತ್ತಾರೆ. ಅಂದಿನಿಂದ ಇಂದಿನವರೆಗೂ ಅದೇ ಸ್ವಾದ ಇವರ ಅಡಿಗೆಯಲ್ಲಿ ಮುಂದುವರಿದಿದೆ ಎಂದು ತಮಗೆ ಪಟೇಗಾರ ಶೈಲಿ ಅಡಿಗೆ ಮಾಡಲು ಕಲಿಸಿದ ತಮ್ಮ ಅಜ್ಜಿ ಹಾಗೂ ತಾಯಿಯವರನ್ನು ನೆನೆಯುತ್ತಾರೆ ಸುರೇಶ ಅವರು.
ಇಲ್ಲಿ ತಯಾರಿಸುವ ಮಟನ್ ಮಸಾಲಾ, ಮಟನ್ ಡ್ರೈ, ಜವಾರಿ(ನಾಟಿಕೋಳಿ) ಚಿಕನ್, ಖೀಮಾ ಮಸಾಲಾ, ಖೀಮಾ ಡ್ರೈ, ಮಟನ್ ಗ್ರೀನ್ ಚಾಪ್ಸ್, ಮಟನ್ ಬಿರಿಯಾನಿ, ಖುಷ್ಕಾ, ಚಿಕನ್ ಬಿರಿಯಾನಿ, ಎಗ್ ಬಿರಿಯಾನಿ, ಮನೆಯಲ್ಲೇ ತಯಾರಿಸಿದ ಸ್ಪೇಶಲ್ ಪರೋಟಾ, ಜೋಳದ ರೊಟ್ಟಿ, ಚಪಾತಿ ಸೇರಿದಂತೆ ಎಲ್ಲ ಖಾದ್ಯಗಳು ಗ್ರಾಹಕರ ಮನಗೆದ್ದಿವೆ.
ಕಲರ್, ಕೆಮಿಕಲ್ ಯಾವೂದೂ ಇಲ್ಲ
“ಅಡಿಗೆಗೆ ಬೇಕಾದ ಮಸಾಲೆ, ಖಾರದಪುಡಿಗಳನ್ನು ನಾವು ಸ್ವತಃ ಮನೆಯಲ್ಲೇ ತಯಾರಿಸುತ್ತೇವೆ. ನಮ್ಮ ಮನೆಯವರೆಲ್ಲ ಇದೇ ಅಡಿಗೆ ಉಣ್ಣುತ್ತೇವೆ. ಹೀಗಾಗಿ ನಮ್ಮ ಅಡುಗೆ ’ಫ್ಯಾಮಿಲಿ ಮೇಡ್’ ಆಗಿದ್ದು, ಕೃತಕ ಕಲರ್‌ಗಳಾಗಲಿ, ಕೆಮಿಕಲ್‌ಗಳಾಗಲಿ ನಾವು ಬಳಸುವುದಿಲ್ಲ. ಇದೇ ನಮ್ಮ ಪಾರಂಪರಿಕ ಸಾವಜಿ ಊಟದ ರುಚಿಯನ್ನು ಕಾಯ್ದುಕೊಂಡಿದೆ. ಆರೋಗ್ಯಕ್ಕೂ ಒಳ್ಳೆಯದಾಗಿದೆ. ಇದೇ ನಮ್ಮ ಹೋಟೆಲ್ ಕಾಯಂ ಗ್ರಾಹಕರನ್ನು ಹಿಡಿದಿಟ್ಟಿದೆ”ಎನ್ನುತ್ತಾರೆ ಮಾಲೀಕರಾದ -ಸುರೇಶ ರೇವಣಸಾ ಬದ್ದಿ
ಬಾಯಲ್ಲಿ ನಿರೂರಿಸುವ ಸ್ಪೇಶಲ್ ತಿಂಡಿಗಳು
ಮಟನ್ ಖಾರುಬೋಟಿ, ಖೀಮಾ ಖರ್ಡು, ಸಾವಜಿ ಎಗ್ ಡ್ರೈ, ನಾಟಿಕೋಳಿ ಚಿಕನ್, ರವಿವಾರ ತಯಾರಿಸುವ ಮುಂಡಿ ಬೇಜಾ ಫ್ರೈ ಇಲ್ಲಿನ ಸ್ಪೇಶಲ್‌ಗಳಾಗಿದ್ದು ಇವುಗಳನ್ನು ಸವಿಯಲೆಂದೇ ಕಾಯಂ ಗಿರಾಕಿಗಳು ಇಲ್ಲಿಗೆ ಬರುತ್ತಾರೆ ಎಂದು ಸುರೇಶ ಅವರ ಪುತ್ರ ಸಂತೋಷ ಬದ್ದಿಯವರು ಹೇಳುತ್ತಾರೆ.
ಎಲ್ಲಿದೆ ಈ ಹೋಟೆಲ್?
ನಗರದ ಸಂಗಮ್ ಸರ್ಕಲ್(ಮಹಾವೀರ ವೃತ್ತ) ದಾಟಿ, ಎನ್‌ಟಿಟಿಎಫ್ ಕಡೆಗೆ ನಾಲ್ಕು ಹೆಜ್ಜೆ ನಡೆದರೆ ಬಲಬದಿಗೆ ಓಂ ಸಾಯಿ ಹಾರ್ಡ್‌ವೇರ್‌ನ ಅಟ್ಟದ ಮೇಲೆ ಹೋಟೆಲ್ ಲಕ್ಷ್ಮೀ ಸಾವಜಿ ಎನ್ನುವ ಬೋರ್ಡ್ ನಮ್ಮನ್ನು ಸ್ವಾಗತಿಸುತ್ತದೆ. ನಿತ್ಯ ಮಧ್ಯಾಹ್ನ 12 ರಿಂದ 4-30, ರಾತ್ರಿ 7ರಿಂದ 10-30 ರವರೆಗೆ ವಾರದ ಏಳು ದಿನವೂ ಇಲ್ಲಿ ಸಾವಜಿ ಊಟದ ರುಚಿ ಸವಿಯಬಹುದು.
ಸ್ವಿಗ್ಗಿ ಹಾಗೂ ಝೊಮ್ಯಾಟೊ ಮೂಲಕವೂ ಆರ್ಡರ್ ಮಾಡಿ ಇಲ್ಲಿನ ಸಾವಜಿ ಊಟವನ್ನು ತರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. 100 ಜನರವರೆಗೂ ಪಾರ್ಟಿ ಆರ್ಡರ್‌ಗಳನ್ನು ತಯಾರಿಸಿ ಕೊಡಲಾಗುತ್ತದೆ. “ಇಲ್ಲಿಗೆ ನಾನು ಹಲವಾರು ವರ್ಷಗಳಿಂದ ಊಟಕ್ಕೆ ಬರುತ್ತಿದ್ದೇನೆ. ಇಲ್ಲಿನ ಊಟದ ರುಚಿಯೇ ನಾನು ಈ ಹೋಟೆಲ್ ಫ್ಯಾನ್ ಆಗುವಂತೆ ಮಾಡಿದೆ” ಎನ್ನುತ್ತಾರೆ ಗ್ರಾಹಕ -ಪರಶುರಾಮ ನಾಯಕರವರು.
ಇಲ್ಲಿದೆ ನೋಡಿ ಸಂಪರ್ಕ ಸಂಖ್ಯೆ
7676726655, 9980093260
ವರದಿ: ಪ್ರಸನ್ನಕುಮಾರ ಹಿರೇಮಠ
ಇದನ್ನೂ ಓದಿ: ತೆಂಗಿನಕಾಯಿಯ ಬಗೆಬಗೆ ಬಳಕೆ: ಕೊಬ್ಬರಿಯನ್ನು ಅದೆಷ್ಟು ಥರ ಬಳಸ್ತಾರೆ? ಅಬ್ಬಾ ಎಲ್ಲಕ್ಕೂ ಸಲ್ಲುತ್ತೆ ನಾರಿಕೇಳ
ವಿಭಾಗ