Thursday Motivation: ಹಣ ಕೊಟ್ಟು ಉಸಿರು ಖರೀದಿಸಲು ಸಾಧ್ಯವಿಲ್ಲ, ಶ್ರೀಮಂತಿಕೆಯ ಅಮಲಿನಲ್ಲಿ ತೇಲುವ ಮುನ್ನ ಯೋಚಿಸಿ
ಬದುಕಿನಲ್ಲಿ ಹಣವೇ ಎಲ್ಲ, ಹಣವಿದ್ದರೆ ಏನನ್ನು ಬೇಕಾದರೂ ಕೊಳ್ಳಬಹುದು ಎಂಬ ಶ್ರೀಮಂತಿಕೆಯ ದರ್ಪದಿಂದ ಮೆರೆಯುವವರು ಒಮ್ಮೆ ಸ್ಮಶಾನದಲ್ಲಿ ತಿರುಗಾಡಿ ಬರಬೇಕು. ಯಾಕೆಂದರೆ ನೀವು ಯಾವುದನ್ನು ಬೇಕಾದರೂ ಹಣ ಕೊಟ್ಟು ಖರೀದಿ ಮಾಡಬಹುದು, ಆದರೆ ಉಸಿರನ್ನು ಖಂಡಿತ ಖರೀದಿಸಲು ಸಾಧ್ಯವಿಲ್ಲ. ಶ್ರೀಮಂತಿಕೆಯ ದರ್ಪದಲ್ಲಿ ಮೆರೆಯುವ ಮುನ್ನ ಯೋಚಿಸಿ.
ಸದ್ಯ ಪ್ರಪಂಚವನ್ನು ಆಳುತ್ತಿರುವುದು ಹಣ. ಹಣವಿಲ್ಲ ಎಂದಾದರೆ ಇಲ್ಲಿ ಬದುಕಲೂ ಸಾಧ್ಯವೇ ಇಲ್ಲ. ಆ ಕಾರಣಕ್ಕೆ ಹಣವಿರುವ ಅದೆಷ್ಟೋ ಶ್ರೀಮಂತರು ಇಂದು ದರ್ಪದಿಂದ ಮೆರೆಯುತ್ತಿದ್ದಾರೆ. ಹಾಗಂತ ಹಣವಿರುವ ಶ್ರೀಮಂತರೆಲ್ಲರೂ ಕೆಟ್ಟವರು ಎಂದಲ್ಲ. ಆದರೆ ಬಹುತೇಕರು ತಮ್ಮ ಶ್ರೀಮಂತಿಕೆಯ ಕಾರಣದಿಂದ ದರ್ಪದಿಂದ ಮೆರೆಯುತ್ತಿರುತ್ತಾರೆ. ಹಣದ ಮದದಲ್ಲಿ ಇತರರನ್ನು ಕೀಳಾಗಿ ನೋಡುತ್ತಾರೆ, ಇತರರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ತಮಗಿಂತ ಹಣದಲ್ಲಿ, ಅಂತಸ್ತಲ್ಲಿ ಕಡಿಮೆ ಇರುವವರ ಜೊತೆ ಅವರು ನಡೆದುಕೊಳ್ಳುವ ರೀತಿಯ ಬದಲಿರುತ್ತದೆ. ಆದರೆ ಅಂತಹವರು ಮಣ್ಣಿನ ಮಡಿಕೆಯನ್ನು ನೋಡಿ ಒಂದು ವಿಚಾರವನ್ನು ಕಲಿಯುವುದಿದೆ. ಒಬ್ಬ ವ್ಯಕ್ತಿ ಮಡಕೆಯ ಬಳಿಗೆ ಹೋಗಿ ಕೇಳಿದ. 'ಯಾವುದೇ ಪರಿಸ್ಥಿತಿ ಇರಲಿ ನೀನು ಶಾಂತವಾಗಿರುತ್ತೀಯಾ, ಕೋಪ ಮಾಡಿಕೊಳ್ಳುವುದೇ ಇಲ್ಲ, ಇದು ಹೇಗೆ ಸಾಧ್ಯ?ʼ ಆಗ ಮಡಕೆ ಹೇಳುತ್ತದೆ 'ನನಗೆ ಯಾವಾಗಲೂ ಒಂದು ವಿಷಯ ಮನದಲ್ಲೇ ಇರುತ್ತದೆ. ನಾನು ಮಣ್ಣಿನಿಂದ ಬಂದಿದ್ದೇನೆ ಮತ್ತು ಮಣ್ಣಿಗೆ ಮರಳುತ್ತೇನೆ. ಮಧ್ಯದಲ್ಲಿ ಈ ಸಿಟ್ಟು, ಗರ್ವ, ಅಹಂಕಾರ ಇವೆಲ್ಲವೂ ಬೇಕಾ' ಎಂದು ನಗುತ್ತದೆ. ಶ್ರೀಮಂತಿಕೆಯಿಂದ ಮರೆಯುವವರು ಈ ಮಡಕೆಯ ನೀತಿಯನ್ನು ಅರ್ಥಮಾಡಿಕೊಳ್ಳಬೇಕು. ನಿಮ್ಮಲ್ಲಿ ಎಷ್ಟೇ ಹಣವಿದ್ದರೂ ಕೊನೆಗೆ ನೀವೂ ಎಲ್ಲರಂತೆ ಮಣ್ಣನ್ನೇ ಸೇರುವುದು. ಈ ಪ್ರಪಂಚದಲ್ಲಿ ಯಾವ ಜೀವಿಯೂ, ಯಾರ ಜೀವನವೂ ಶಾಶ್ವತವಲ್ಲ. ಈ ವಿಚಾರವನ್ನೂ ಪ್ರತಿಯೊಬ್ಬರೂ ಮನದಷ್ಟು ಮಾಡಿಕೊಳ್ಳಬೇಕು.
ಅಹಂಕಾರವೇ ವಿನಾಶ
ಹಣದ ಅಹಂಕಾರದಿಂದ ತುಂಬಿದ ಮನುಷ್ಯ ಸ್ನೇಹ, ಸಂಬಂಧಗಳಿಂದ ದೂರವಿರುತ್ತಾನೆ. ಬದುಕಿನಲ್ಲಿ ಹಣವೇ ಎಲ್ಲಾ, ಹಣದ ಮುಂದೆ ಎಲ್ಲವೂ ನಗಣ್ಯ ಎನ್ನುವ ಭಾವದಿಂದ ಮೆರೆಯುತ್ತಿರುತ್ತಾನೆ. ಆದರೆ ಅಂತಹವರು ಒಮ್ಮೆ ಸನ್ಮಾನದಲ್ಲಿ ಹೋಗಿ ಒಂದರ್ಧ ಗಂಟೆ ಕಳೆಯಬೇಕು. ಯಾಕೆಂದರೆ ಈ ಹಲವು ಶ್ರೀಮಂತರು, ಕೋಟೆ ಕಟ್ಟಿ ಮೆರೆದವರು ಬರೀಗೈಯಲ್ಲಿ ಸನ್ಮಾಶಕ್ಕೆ ಹೋಗಿ ಅಲ್ಲಿ ಮಣ್ಣಲ್ಲಿ ಮಣ್ಣಾಗಿರುತ್ತಾರೆ. ಬದುಕಿನಲ್ಲಿ ನಾವು ಎಲ್ಲವನ್ನೂ ಕಳೆದುಕೊಳ್ಳಲು ಅಹಂಕಾರವೊಂದೇ ಸಾಕು. ಅಹಂಕಾರದ ಹಿಂದೆ ವಿನಾಶವೂ ಇದೆ ಎಂಬುದನ್ನು ಯಾರೂ ಮರೆಯುವಂತಿಲ್ಲ.
ತಾಳ್ಮೆ ಎಂದಿಗೂ ಒಳ್ಳೆಯ ಮನಸ್ಥಿತಿ ಹೊಂದಿರುವ ಜನರ ಜೊತೆ ಮಾತ್ರ ಇರುತ್ತದೆ. ದುಷ್ಟ ಮನೋಭಾವದವರ ಜೊತೆ ಅಹಂಕಾರ, ಅಸೂಯೆ ನೆಲೆಸಿರುತ್ತದೆ. ಅಹಂಕಾರಕ್ಕೆ ಒಂದಿಲ್ಲ ಒಂದು ದಿನ ಸೋಲಾಗುವುದು ಖಚಿತ.
ಗುಣವೇ ಸರ್ವಸ್ವ
ಎಲ್ಲರೂ ನಮ್ಮನ್ನ ಗೌರವಿಸಬೇಕು ಎಂದರೆ ನಮ್ಮಲ್ಲಿ ಒಳ್ಳೆಯ ಗುಣವಿರಬೇಕೇ ಹೊರತು ಹಣವಲ್ಲ. ತಾಳೆಮರ ಎಷ್ಟೇ ಮರವಿರಲಿ, ಆದರೆ ಎಲ್ಲರೂ ನಿಲ್ಲಲ್ಲು ಮರ ಬಯಸುವುದು ಮಾತ್ರ ಆಲದ ಮರದ ಕೆಳಗೆ. ಹಣದ ಮದ, ಅಧಿಕಾರದ ದರ್ಪದಿಂದ ಮೆರೆಯುತ್ತಿರುವ ಜನರೊಂದಿಗೆ ಯಾರೂ ಬದುಕಲು ಇಷ್ಟಪಡುವುದಿಲ್ಲ. ತಾನು ಹೇಳಿದ್ದೇ ನಡೆಯಬೇಕು, ಎಲ್ಲವೂ ತನ್ನಿಂದಲೇ ಆಗಬೇಕು ಎಂದುಕೊಳ್ಳುವವರು ಏಕಾಂಗಿಯೇ ಬದುಕುವ ಪರಿಸ್ಥಿತಿ ಎದುರಾಗುತ್ತದೆ. ಅಂತಹವರೊಂದಿಗೆ ಬೆರೆಯಲು ಯಾರೂ ಮನಸ್ಸು ಮಾಡುವುದಿಲ್ಲ.
ಮನುಷ್ಯನ ಆದಾಯ ಹೆಚ್ಚಾದಂತೆ ಅವನಲ್ಲಿ ದರ್ಪ, ದುರಹಂಕಾರವೂ ಹೆಚ್ಚುತ್ತದೆ, ವಿವೇಚನೆ ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ ಇದರೊಂದಿಗೆ ಅವರ ಪತನವೂ ಪ್ರಾರಂಭವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮಲ್ಲಿರುವ ಹಣ ಮತ್ತು ಸ್ಥಾನಮಾನದಿಂದ ಬರುವ ಗೌರವ ಎಂದಿಗೂ ಶಾಶ್ವತವಲ್ಲ, ಆದರೆ ನಿಮ್ಮ ಒಳ್ಳೆಯತನ ಸದಾ ಶಾಶ್ವತ. ಸತ್ತ ಮೇಲೂ ನಮ್ಮ ಬಗ್ಗೆ ಜನ ಒಳ್ಳೆಯ ಮಾತನಾಡಬೇಕು ಎಂದರೆ ನಾವು ಒಳ್ಳೆಯ ಗುಣವನ್ನು ತೋರಬೇಕು. ಆಗಷ್ಟೇ ಬದುಕು ಸುಂದರವಾಗಿರುವುದು, ಒಳ್ಳೆಯ ಗುಣ ಇರುವ ವ್ಯಕ್ತಿಗಳಿಗೆ ಜೇನುನೊಣಗಳಂತೆ ಜನರು ಮುತ್ತಿಕೊಳ್ಳುತ್ತಾರೆ, ಅದೇ ಹಣದ ದರ್ಪದಿಂದ ಮೆರೆಯುವವರು ಏಕಾಂಗಿಯೇ ಇರಬೇಕಾಗುತ್ತದೆ. ಇನ್ನಾದರೂ ತಿದ್ದಿಕೊಳ್ಳಿ, ಮನುಷ್ಯರಂತೆ ಬದುಕಿ.
ವಿಭಾಗ