ಕನ್ನಡ ಸುದ್ದಿ  /  Lifestyle  /  Thursday Motivation Patience Hard Work Is Very Important In Life To Get Huge Success Farmer Motivational Story Rsm

Thursday Motivation: ಜೀವನಕ್ಕೊಂದು ಸ್ಫೂರ್ತಿ ಮಾತು, ಪ್ರಯತ್ನ ನಮ್ಮದು ಫಲಾಫಲ ಭಗವಂತನದ್ದು; ಈ ರೈತನ ಕಥೆಯನ್ನೊಮ್ಮೆ ಓದಿ

Thursday Motivation: ಸಾಧನೆಗೆ ಮತ್ತೊಬ್ಬರ ಬದುಕು ಸ್ಫೂರ್ತಿಯಾಗಬೇಕು. ಅದರ ಜೊತೆಗೆ ಯಶಸ್ಸು ನಮ್ಮದಾಗಲು ತಾಳ್ಮೆ ವಹಿಸಬೇಕು. ಅಷ್ಟೇ ಅಲ್ಲ ಶ್ರಮ ಪಡಬೇಕು. ಕೈ ಕೆಸರಾದರೆ ಬಾಯಿ ಮೊಸರು ಎಂಬ ಮಾತು ನೆನಪಿರಬೇಕು. ಇದಕ್ಕೆ ಸಂಬಂಧಿಸಿದಂತೆ ಇಲ್ಲಿ ರೈತನೊಬ್ಬನ ಕಥೆ ಇದೆ ಒಮ್ಮೆ ಓದಿ.

ಬರದ ಪರಿಸ್ಥಿತಿಯಲ್ಲೂ ತಾಳ್ಮೆ ಕೆಡದೆ ಹೊಲ ಉತ್ತಿ, ಬಿತ್ತಿ ಫಸಲು ತೆಗೆದ ರೈತನ ಕಥೆ ( ಸಾಂದರ್ಭಿಕ ಚಿತ್ರ)
ಬರದ ಪರಿಸ್ಥಿತಿಯಲ್ಲೂ ತಾಳ್ಮೆ ಕೆಡದೆ ಹೊಲ ಉತ್ತಿ, ಬಿತ್ತಿ ಫಸಲು ತೆಗೆದ ರೈತನ ಕಥೆ ( ಸಾಂದರ್ಭಿಕ ಚಿತ್ರ) (PC: Unsplash)

Thursday Motivation: ಮನುಷ್ಯ ಜೀವನದಲ್ಲಿ ಏನಾದರೂ ಸಾಧಿಸಬೇಕು, ಸುಖ ಸಂತೋಷ ನೆಮ್ಮದಿಯಿಂದ ಬದುಕು ಸಾಗಿಸಬೇಕು ಎನ್ನುವುದಾದರೆ ಆತನಿಗೆ ಜೀವನದಲ್ಲಿ ಇತರರು ಮಾದರಿಯಾಗಬೇಕು. ಪ್ರೇರಣೆ ಆಗಬೇಕು. ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂಬ ಡಾ. ರಾಜ್‌ಕುಮಾರ್‌ ಅವರ ಬಂಗಾರದ ಮನುಷ್ಯ ಚಿತ್ರದ ಹಾಡನ್ನು ಎಲ್ಲರೂ ಕೇಳಿರುತ್ತೀರ.

ಬಂಗಾರದ ಮನುಷ್ಯ ಸಿನಿಮಾ ಬಿಡುಗಡೆ ಆದ ನಂತರ ಎಷ್ಟೋ ಯುವಜನತೆ ಹಳ್ಳಿಯಿಂದ ಪಟ್ಟಣಕ್ಕೆ ಬಂದು ವ್ಯವಸಾಯ ಆರಂಭಿಸಿದ್ದರು. ಈ ಬದಲಾವಣೆಗೆ ಆ ಸಿನಿಮಾ ಕಥೆಯೇ ಪ್ರೇರಣೆ. ಇದೇ ರೀತಿ ಮತ್ತೊಂದು ಉತ್ತಮ ಉದಾಹರಣೆ ಇಲ್ಲಿದೆ.

ಯಶಸ್ಸಿಗೆ ತಾಳ್ಮೆ ಅಗತ್ಯ

ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದ. ಬುದ್ಧಿವಂತಿಕೆಯ ಜೊತೆಗೆ ಆತನಿಗೆ ಬಹಳ ತಾಳ್ಮೆ ಇತ್ತು. ಇದ್ದಕ್ಕಿದ್ದಂತೆ ಆ ಗ್ರಾಮದಲ್ಲಿ ಭೀಕರ ಬರಗಾಲ ಕಾಣಿಸಿಕೊಂಡಿತು. ಹೊಲ ಗದ್ದೆಗಳು ನೀರು ಇಲ್ಲದೆ ಬತ್ತಿ ಹೋಗಿದ್ದವು. ಕುಡಿಯಲು ನೀರು ಸಿಗುವುದೇ ಕಷ್ಟವಾಗಿತ್ತು. ಪರಿಸ್ಥಿತಿ ನೋಡಿ ರೈತರು ತುಂಬಾ ಭಯಗೊಂಡು ಹೊಲಗಳನ್ನು ಬಿಟ್ಟು ನಗರಕ್ಕೆ ಹೋಗಲು ನಿರ್ಧರಿಸಿದರು. ಬೇರೆ ರೈತರು ಬಹಳ ಭಯಗೊಂಡಿದ್ದರೆ ಈ ರೈತ ಮಾತ್ರ ಬಹಳ ಶಾಂತಿಯಿಂದ ಇದ್ದರು. ಆತ ಎಂದಿಗೂ ಖಿನ್ನತೆಗೆ ಒಳಗಾಗಲಿಲ್ಲ. ಇತರರು ನಗರಗಳಿಗೆ ಹೋಗಲು ತಯಾರಿ ನಡೆಸಿದ್ದರೆ ಈ ರೈತರ ಮಾತ್ರ ಒಣಗಿಹೋದ ತನ್ನ ಜಮೀನಿನ ಸುತ್ತ ಸಣ್ಣ ಸಣ್ಣ ಗುಂಡಿಗಳನ್ನು ಅಗೆಯಲು ಆರಂಭಿಸುತ್ತಾರೆ.

ಒಂದು ವೇಳೆ ಮಳೆ ಬಂದರೆ ಗುಂಡಿಗಳು ನೀರಿನಿಂದ ತುಂಬುತ್ತವೆ. ಇದರಿಂದ ನೀರಿನ ಕೊರತೆ ನಿವಾರಣೆ ಆಗುತ್ತದೆ ಎಂಬುದು ಆತನ ಭರವಸೆ ಆಗಿತ್ತು. ಹಾಗೇ ಹೊಲದಲ್ಲಿ ಬೀಜ ಬಿತ್ತನೆ ಮಾಡಿ ನೀರು ಕೂಡಾ ಸುರಿಯುತ್ತಾನೆ. ಎಷ್ಟು ದಿನ ಕಳೆದರೂ ಈ ರೈತನ ಉತ್ಸಾಹ ಕಡಿಮೆ ಆಗಲಿಲ್ಲ. ಇವನ ಕೆಲಸ ನೋಡಿ ಇತರರು ನಗುತ್ತಿದ್ದರು. ಒಂದು ದಿನ ಆಕಾಶದಲ್ಲಿ ಕಪ್ಪು ಮೋಡಗಳು ಕಾಣಿಸಿಕೊಂಡವು. ಇದ್ದಕ್ಕಿದ್ದಂತೆ ಮಳೆ ಸುರಿಯಿತು. ಈ ರೈತ ತೋಡಿದ ಗುಂಡಿಗಳೆಲ್ಲ ನೀರು ತುಂಬಿ ಕೊಳವೂ ನೀರಿನಿಂದ ತುಳುಕಿತು. ಕೆಲ ದಿನಗಳಿಂದ ರೈತನ ಗದ್ದೆ ಹಸಿರಿನಿಂದ ಕಂಗೊಳಿಸುತ್ತಿತ್ತು.

ನಂಬಿಕೆಯೇ ಯಶಸ್ಸಿನ ಸೂತ್ರ

ಉಳಿದ ರೈತರು ಮಳೆ ಬರುವುದಿಲ್ಲ ಎಂದುಕೊಂಡೇ ತಮ್ಮ ಜಮೀನುಗಳನ್ನು ಪಾಳು ಬಿಟ್ಟಿದ್ದರು. ಹೂಳು ತೋಡಿದೆ, ಕೆರೆ ಹೂಳು ತೆಗೆಯದೆ ನಿರಾಶರಾಗಿ ಕೂತಿದ್ದರು. ಆ ಕಾರಣಕ್ಕಾಗಿ ಆ ರೈತರ ಹೊಲ ಗದ್ದೆ ಎಲ್ಲವೂ ಒಣಗಿ ನಿಂತಿತ್ತು. ಕಷ್ಟ ಬಂತೆಂದು ತಾಳ್ಮೆ ಕಳೆದುಕೊಳ್ಳದೆ ಆಶಾಭಾವನೆಯಿಂದ ಹಳ್ಳ, ಕೆರೆ ತೋಡಿದ ರೈತನಿಗೆ ಆತನ ನಂಬಿಕೆಯೇ ಆಧಾರವಾಯ್ತು. ಈತನನ್ನು ನೋಡಿ ನಗುತ್ತಿದ್ದ ಇತರ ರೈತರು ಬುದ್ಧಿ ಕಲಿತರು. ಆದ್ದರಿಂದ ಯಾರೇ ಆಗಲಿ, ಇತರರು ಏನೇ ಹೇಳಿದರೂ ತಮ್ಮ ಪ್ರಯತ್ನ ಬಿಡಬಾರದು. ಪ್ರಯತ್ನ ನಿನ್ನದು ಫಲಾಫಲ ದೇವರದ್ದು ಎಂಬ ಮಾತಿನಂತೆ ನಿಮ್ಮ ಪ್ರಯತ್ನ ನೀವು ಮಾಡಿ. ಖಂಡಿತ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಈ ಕಥೆ ಎಲ್ಲರ ಜೀವನಕ್ಕೆ ಸ್ಫೂರ್ತಿಯಾಗಲಿ.

ವಿಭಾಗ