Bidar Tourism: ಐತಿಹಾಸಿಕ ಸ್ಥಳಗಳನ್ನು ನೋಡುವ ಆಸೆ ಇದ್ರೆ ಬೀದರ್‌ನ ಈ ಸುಂದರ ತಾಣಗಳಿಗೆ ಹೋಗಿ ಬನ್ನಿ
ಕನ್ನಡ ಸುದ್ದಿ  /  ಜೀವನಶೈಲಿ  /  Bidar Tourism: ಐತಿಹಾಸಿಕ ಸ್ಥಳಗಳನ್ನು ನೋಡುವ ಆಸೆ ಇದ್ರೆ ಬೀದರ್‌ನ ಈ ಸುಂದರ ತಾಣಗಳಿಗೆ ಹೋಗಿ ಬನ್ನಿ

Bidar Tourism: ಐತಿಹಾಸಿಕ ಸ್ಥಳಗಳನ್ನು ನೋಡುವ ಆಸೆ ಇದ್ರೆ ಬೀದರ್‌ನ ಈ ಸುಂದರ ತಾಣಗಳಿಗೆ ಹೋಗಿ ಬನ್ನಿ

Bidar Tourism: ಬೀದರ್‌ನಲ್ಲಿ ನೋಡಬಹುದಾದ ಸ್ಥಳಗಳಲ್ಲಿ ಬಹಮನಿ ಸುಲ್ತಾನರ ಗೋರಿಗಳು ಕೂಡಾ ಒಂದು. ಸುಮಾರು 15ನೇ ಶತಮಾನದಲ್ಲಿ ನಿರ್ಮಿಸಲಾದ ಈ ಐತಿಹಾಸಿಕ ಗೋರಿಗಳು ಎತ್ತರದ ಗೋಪುರಗಳು ಮತ್ತು ದೊಡ್ಡ ಅಲಂಕಾರಿಕ ಕಮಾನುಗಳಂತಹ ರಚನೆಗಳನ್ನು ಹೊಂದಿವೆ.

ಬೀದರ್‌ನ ಪ್ರವಾಸೋದ್ಯಮ ತಾಣಗಳು
ಬೀದರ್‌ನ ಪ್ರವಾಸೋದ್ಯಮ ತಾಣಗಳು (PC: Ravishankar K Bhat, Bidar City Facebook)

Bidar Tourism: ಕರ್ನಾಟಕದಲ್ಲಿ ಬೀದರ್‌ನಿಂದ ಚಾಮರಾಜನಗರದವರೆಗೂ ಅನೇಕ ಪ್ರವಾಸಿ ತಾಣಗಳಿವೆ. ಬೀದರ್‌ ಬಗ್ಗೆ ಹೇಳುವುದಾದರೆ, ಇದು ಬೆಂಗಳೂರಿನಿಂದ ಸುಮಾರು 700 ಕಿಮೀ ದೂರದಲ್ಲಿದೆ. ಪುರಾತತ್ವ ಇಲಾಖೆಯ ಕಾರ್ಯದಿಂದ ಬೀದರ್‌, ಈಶಾನ್ಯ ಕರ್ನಾಟಕ ಪ್ರದೇಶದಲ್ಲಿ ಜನಪ್ರಿಯ ಪ್ರವಾಸಿ ತಾಣವಾಗಿದೆ. ಬೀದರ್ ಕೋಟೆಯ ಜೊತೆಗೆ, ಈ ಸ್ಥಳವನ್ನು ಆಳಿದ ಅನೇಕ ಸಮಾಧಿಗಳು ಈ ಸ್ಥಳದಲ್ಲಿದೆ. ಮೌರ್ಯರು, ಶಾತವಾಹನರು, ಕದಂಬರು ಮತ್ತು ಚಾಲುಕ್ಯರು ಆಳ್ವಿಕೆ ನಡೆಸಿದ ಬೀದರ್‌ನಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿವೆ.

ಬಹಮನಿ ಸುಲ್ತಾನರ ಕೋಟೆ

ಬೀದರ್‌ನಲ್ಲಿ ನೋಡಬಹುದಾದ ಕೋಟೆಗಳಲ್ಲಿ ಬಹಮನಿ ಸುಲ್ತಾನರ ಕೋಟೆ ಕೂಡಾ ಒಂದು. ಸುಲ್ತಾನ್ ಅಲ್ಲಾವುದ್ದೀನ್ ಬಹಮನಿ ನಿರ್ಮಿಸಿದ ಕೋಟೆ ಇದು. ಈ ಕೋಟೆಯಲ್ಲಿ ಬೃಹತ್ ಬುರುಜುಗಳು, ಕೋಟೆಗಳು, ಕಂದಕಗಳು, ವರ್ಣರಂಜಿತ ಅರಮನೆಗಳು ಮತ್ತು ವಸ್ತುಸಂಗ್ರಹಾಲಯಗಳಿವೆ. ಎಲ್ಲರಿಗೂ ಪ್ರವೇಶ ಉಚಿತ. ಇಲ್ಲಿ ಫೋಟೋಗ್ರಫಿಗೆ ಅವಕಾಶ ಇದ್ದು ನೀವು ಒಳ್ಳೆ ಫೋಟೋಗಳನ್ನು ಕ್ಲಿಕ್‌ ಮಾಡಬಹುದು. ಈ ಸ್ಥಳದಲ್ಲಿ ಸಾಕಷ್ಟು ಶೂಟಿಂಗ್‌ ಕೂಡಾ ನಡೆದಿದೆ. ಈ ಕೋಟೆಯಲ್ಲಿ ಅನೇಕ ವಂಶದ ಸುಲ್ತಾನರು ಆಳ್ವಿಕೆ ನಡೆಸಿದ್ದಾರೆ. ಕೊನೆಯದಾಗಿ ನಿಜಾಮರು ಇಲ್ಲಿ ಆಳ್ವಿಕೆ ನಡೆಸಿದರು.

ಬಹಮನಿ ಸುಲ್ತಾನರ ಗೋರಿಗಳು

ಬೀದರ್‌ನಲ್ಲಿ ನೋಡಬಹುದಾದ ಸ್ಥಳಗಳಲ್ಲಿ ಬಹಮನಿ ಸುಲ್ತಾನರ ಗೋರಿಗಳು ಕೂಡಾ ಒಂದು. ಸುಮಾರು 15ನೇ ಶತಮಾನದಲ್ಲಿ ನಿರ್ಮಿಸಲಾದ ಈ ಐತಿಹಾಸಿಕ ಗೋರಿಗಳು ಎತ್ತರದ ಗೋಪುರಗಳು ಮತ್ತು ದೊಡ್ಡ ಅಲಂಕಾರಿಕ ಕಮಾನುಗಳಂತಹ ರಚನೆಗಳನ್ನು ಹೊಂದಿವೆ. ಇಂಡೋ ಇಸ್ಲಾಮಿಕ್ ಶೈಲಿಯ ಗೋರಿಗಳಲ್ಲಿ ಅಹ್ಮದ್ ಷಾ ಅಲ್ ವಾಲಿಯ ಸಮಾಧಿ ಇಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಇದನ್ನು ಚಿನ್ನದ ಕುಸುರಿ ಮೂಲಕ ಕುರಾನ್‌ ಪದ್ಯಗಳನ್ನು ಕೆತ್ತಲಾಗಿದೆ. ಇಲ್ಲಿನ ಗೋರಿಗಳ ಮೇಲೆ ಅದ್ಭುತವಾದ ವರ್ಣಚಿತ್ರಗಳಿವೆ. ಅವುಗಳ ಮೇಲೆ ಸ್ವಸ್ತಿಕ್‌ ಚಿಹ್ನೆ ಇರುವುದು ಗಮನಾರ್ಹ.

ರಂಗಿನ್‌ ಮಹಲ್‌

ರಂಗಿನ್‌ ಮಹಲ್‌, ಬೀದರ್‌ ಕೋಟೆಯೊಳಗೆ ಇರುವ ಸುಂದರವಾದ ಅರಮನೆ. 16 ನೇ ಶತಮಾನದ ಕರಕುಶಲತೆಗೆ ಪರಿಪೂರ್ಣ ಉದಾಹರಣೆಯಾಗಿದೆ. ರಂಗಿನ್ ಮಹಲ್ ವಿನ್ಯಾಸವು ಹಿಂದೂ ಮತ್ತು ಮುಸ್ಲಿಂ ವಾಸ್ತುಶಿಲ್ಪಗಳ ಮಿಶ್ರಣವಾಗಿದೆ. ಇಲ್ಲಿನ ಒಳಾಂಗಣ ಕೊಠಡಿಗಳನ್ನು ಸುಂದರವಾದ ಕಲಾಕೃತಿ ಮತ್ತು ಪರ್ಷಿಯನ್ ಟೈಲ್ಸ್‌ನಿಂದ ನಿರ್ಮಿಸಲಾಗಿದೆ. ಇದರ ಗೋಡೆಗಳನ್ನು ಮೂಲತಃ ವಿವಿಧ ವರ್ಣಗಳ ಅಂಚುಗಳಿಂದ ಅಲಂಕರಿಸಲಾಗಿರುವುದರಿಂದ ಇದಕ್ಕೆ ರಂಗಿನ್‌ ಮಹಲ್‌ ಎಂದು ಕರೆಯಲಾಗುತ್ತದೆ.

ಚೌಬಾರಾ ಟವರ್

ಬೀದರ್ ಹೃದಯಭಾಗದಲ್ಲಿರುವ ಚೌಬಾರಾ ಟವರ್‌, ಇಲ್ಲಿನ ಆಕರ್ಷಣೀಯ ಸ್ಥಳಗಳಲ್ಲಿ ಒಂದು. ಇದು ಸಿಲಿಂಡರ್‌ ಆಕಾರದಲ್ಲಿದೆ. ಚೌಬಾರಾ ಎಂದರೆ ಎಲ್ಲಾ ಕಡೆಯಿಂದಲೂ ನೋಡಬಹುದಾದ ಕಟ್ಟಡ. ಮೆಟ್ಟಿಲುಗಳ ಮೂಲಕ ನೀವು ಈ ಕಟ್ಟಡದ ಮೇಲೆ ಹತ್ತಿದರೆ ಇಡೀ ನಗರವನ್ನು ನೋಡಬಹುದು. ಇದರ ಎತ್ತರ ಸುಮಾರು 70 ಅಡಿ ಇದ್ದು 180 ಅಡಿ ಸುತ್ತಳತೆ ಇದೆ. ಪ್ರಸ್ತುತ ಇದು ಗಡಿಯಾರ ಗೋಪುರವಾಗಿ ಕಾರ್ಯನಿರ್ವಹಿಸುತ್ತಿದೆ.

ನರಸಿಂಹಸ್ವಾಮಿ ಗುಹಾಂತರ ದೇವಾಲಯ

ಬೀದರ್‌ನ ನರಸಿಂಹಸ್ವಾಮಿ ಗುಹಾಂತರ ದೇವಾಲಯಕ್ಕೆ ಕ್ರಿಪೂ 400ಕ್ಕಿಂತಲೂ ಹಿಂದಿನ ಇತಿಹಾಸವಿದೆ. ಈ ದೇವಸ್ಥಾನದಲ್ಲಿ ಉಗ್ರನರಸಿಂಹನನ್ನು ಪೂಜಿಸಲಾಗುತ್ತದೆ. ಗುಹೆಯಲ್ಲಿ ಎದೆಮಟ್ಟದವರೆಗೂ ನೀರು ಇದ್ದು ಸುಮಾರು 600 ಮೀಟರ್‌ ನಡೆದು ನರಸಿಂಹಸ್ವಾಮಿಯ ದರ್ಶನ ಮಾಡಬೇಕು. ಉಗ್ರನರಸಿಂಹನ ಪಕ್ಕ ಶಿವಲಿಂಗವನ್ನೂ ಪ್ರತಿಷ್ಠಾಪಿಸಲಾಗಿದ್ದು ಶಿವ ಹಾಗೂ ನರಸಿಂಹ ಇಬ್ಬರಿಗೂ ಇಲ್ಲಿ ಪ್ರತಿದಿನ ಪೂಜೆ ಸಲ್ಲಿಸಲಾಗುವುದು.

ಬಿಡುವು ಮಾಡಿಕೊಂಡು ಬೀದರ್‌ನ ಈ ಸುಂದರ ತಾಣಗಳಿಗೆ ಕುಟುಂಬದೊಂದಿಗೆ ಹೋಗಿ ಬನ್ನಿ.

Whats_app_banner