ಇದು ಭಾರತದ ಸ್ಕಾಟ್ಲೆಂಡ್: ಸಂಗಾತಿಯೊಂದಿಗೆ ಪ್ರೇಮಿಗಳ ದಿನ ಆಚರಿಸಲು ಕೊಡಗು ಜಿಲ್ಲೆಗಿಂತ ಉತ್ತಮ ತಾಣ ಬೇಕೇ?
ಕನ್ನಡ ಸುದ್ದಿ  /  ಜೀವನಶೈಲಿ  /  ಇದು ಭಾರತದ ಸ್ಕಾಟ್ಲೆಂಡ್: ಸಂಗಾತಿಯೊಂದಿಗೆ ಪ್ರೇಮಿಗಳ ದಿನ ಆಚರಿಸಲು ಕೊಡಗು ಜಿಲ್ಲೆಗಿಂತ ಉತ್ತಮ ತಾಣ ಬೇಕೇ?

ಇದು ಭಾರತದ ಸ್ಕಾಟ್ಲೆಂಡ್: ಸಂಗಾತಿಯೊಂದಿಗೆ ಪ್ರೇಮಿಗಳ ದಿನ ಆಚರಿಸಲು ಕೊಡಗು ಜಿಲ್ಲೆಗಿಂತ ಉತ್ತಮ ತಾಣ ಬೇಕೇ?

ಸಂಗಾತಿಯೊಂದಿಗೆ ಪ್ರೇಮಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಬಯಸುವಿರಾದರೆ ಕೊಡಗು ಜಿಲ್ಲೆಗೆ ಭೇಟಿ ನೀಡಬಹುದು. ಭಾರತದ ಸ್ಕಾಟ್ಲೆಂಡ್ ಎಂದೇ ಕರೆಯಲಾಗುವ ಕೊಡಗು ಬಹಳ ಸುಂದರ ತಾಣ.

ಸಂಗಾತಿಯೊಂದಿಗೆ ಪ್ರೇಮಿಗಳ ದಿನ ಆಚರಿಸಲು ಸೂಕ್ತ ತಾಣವಿಗದು
ಸಂಗಾತಿಯೊಂದಿಗೆ ಪ್ರೇಮಿಗಳ ದಿನ ಆಚರಿಸಲು ಸೂಕ್ತ ತಾಣವಿಗದು (Pixabay)

ಸಂಗಾತಿಯೊಂದಿಗೆ ಪ್ರೇಮಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಬಯಸುತ್ತೀರಾ. ಇದಕ್ಕಾಗಿ ನೀವು ಸುಂದರ ಸ್ಥಳವನ್ನು ಹುಡುಕುತ್ತಿರಬಹುದು. ಕರ್ನಾಟಕದ ಮಡಿಕೇರಿಗಿಂತ ಉತ್ತಮ ಸ್ಥಳ ಬೇಕೇ? ಭಾರತದ ಸ್ಕಾಟ್ಲೆಂಡ್ ಎಂದೇ ಕರೆಯಲಾಗುವ ಕೊಡಗು ಬಹಳ ಸುಂದರ ತಾಣ. ನೀವಿಲ್ಲಿಗೆ ಕಾಲಿಟ್ಟರೆ ಯಾಕೆ ಈ ಸ್ಥಳ ಇಷ್ಟೊಂದು ಸುಂದರವಾಗಿದೆ ಎಂದು ನಿಮಗೆ ಅರ್ಥವಾಗುತ್ತದೆ.

ಕೊಡಗು ತನ್ನ ಹಚ್ಚ ಹಸಿರಿನ ಕಾಫಿ ತೋಟಗಳು, ಪ್ರಕೃತಿಯ ಸೌಂದರ್ಯ, ಮಂಜಿನಿಂದ ಆವೃತವಾದ ಪರ್ವತಗಳು, ಜಲಪಾತಗಳು ಮತ್ತು ಆಹ್ಲಾದಕರ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಇಲ್ಲಿರುವ ಪ್ರತಿಯೊಂದು ಸ್ಥಳವೂ ಸಂಗಾತಿಯೊಂದಿಗೆ ಖುಷಿಯ ಕ್ಷಣಗಳನ್ನು ಕಳೆಯಲು ಉತ್ತಮವಾಗಿದೆ.

ಕೊಡಗಿನಲ್ಲಿ ದಂಪತಿಗಳು ಭೇಟಿ ನೀಡಬಹುದಾದ ಉತ್ತಮ ಸ್ಥಳಗಳು

ಮಾಂದಲಪಟ್ಟಿ: ಇದು ಕೊಡಗು ಜಿಲ್ಲೆಯಲ್ಲಿರುವ ಒಂದು ಭವ್ಯ ಮತ್ತು ವಿಶಿಷ್ಟ ತಾಣವಾಗಿದ್ದು, ಮಡಿಕೇರಿಯಿಂದ 20 ಕಿ.ಮೀ ದೂರದಲ್ಲಿದೆ. ಈ ಸ್ಥಳವು ಸೂರ್ಯೋದಯ ಮತ್ತು ಸೂರ್ಯಾಸ್ತದ ವೀಕ್ಷಣೆಗೆ ಹೆಸರುವಾಸಿಯಾಗಿದೆ. ಕೊಡಗಿನ ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿರುವ ಇದು ನಿಧಾನವಾಗಿ ಅಭಿವೃದ್ಧಿ ಹೊಂದುತ್ತಿದೆ. ಗಾಳಿಪಟ ಸಿನಿಮಾದಲ್ಲಿ ಮುಗಿಲುಪೇಟೆ ಊರು ಎಂಬ ಹೆಸರಿನಿಂದ ಗುರುತಿಸಿಕೊಳ್ಳುವ ಮೂಲಕ ಈ ಸ್ಥಳಕ್ಕೆ ಪ್ರಸಿದ್ಧಿ ದೊರೆಯಿತು.

ಅಬ್ಬಿ ಜಲಪಾತ: ಸುಂದರವಾದ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು. ಇದು ಕೊಡಗು ಜಿಲ್ಲೆಯ ಪ್ರಸಿದ್ಧ ಜಲಪಾತ. ಸುಮಾರು 70 ಅಡಿ ಎತ್ತರವಿದೆ. ಸುತ್ತಲೂ ಹಚ್ಚ ಹಸಿರಿನ ಗಿರಿ-ಶಿಖರಗಳು, ಜೋರಾದ ನೀರಿನ ಶಬ್ಧ ಕಣ್ಮನ ಸೆಳೆಯುವ ಈ ದೃಶ್ಯ ವೈಭವ ವೀಕ್ಷಿಸುವುದೇ ಒಂದು ವಿಶಿಷ್ಟ ಅನುಭವ. ಮಡಿಕೇರಿ ಪೇಟೆಯಿಂದ 6 ಕಿ.ಮೀ ದೂರದಲ್ಲಿದ್ದು, ಬೆಂಗಳೂರು ನಗರದಿಂದ ಸುಮಾರು 250 ಕಿ.ಮೀ ದೂರದಲ್ಲಿದೆ.

ದುಬಾರೆ ಆನೆ ಶಿಬಿರ: ಪ್ರಣಯದ ಜೊತೆಗೆ ಸಾಹಸವನ್ನು ಬಯಸಿದರೆ ಆನೆ ಶಿಬಿರಕ್ಕೆ ಭೇಟಿ ನೀಡಬಹುದು. ಕೊಡಗಿನ ಕುಶಾಲನಗರದಲ್ಲಿ ದುಬಾರೆ ಆನೆ ಶಿಬಿರವಿದೆ. ಇಲ್ಲಿ ಮದವೇರಿದ ಆನೆಗಳನ್ನು ಹಿಡಿದು ಪಳಗಿಸುತ್ತಾರೆ. ಇಲ್ಲಿ ಆನೆಗಳಿಗೆ ತರಬೇತಿ ನೀಡಲಾಗುತ್ತದೆ. ಅಷ್ಟೇ ಅಲ್ಲ, ಪ್ರವಾಸಿಗರಿಗೆ ಆನೆ ಸವಾರಿಯಂತಹ ಚಟುವಟಿಕೆಗಳೂ ಇವೆ. ಕಾವೇರಿ ನದಿಯಲ್ಲಿ 45 ನಿಮಿಷಗಳ ಸ್ನಾನ, ಅಲ್ಲಿ ಪ್ರವಾಸಿಗರು ಆನೆಗಳಿಗೆ ಸ್ನಾನ ಮಾಡಿಸುವುದು, ಆಹಾರ ತಿನ್ನಿಸುವುದು ಇತ್ಯಾದಿ ಚಟುವಟಿಕೆಗಳೂ ಇವೆ. ಒಟ್ಟಿನಲ್ಲಿ ಆನೆಗಳೊಂದಿಗೆ ಸಮಯ ಕಳೆಯಲು ಉತ್ತಮ ಅವಕಾಶ.

ಇರ್ಪು ಜಲಪಾತ: ಈ ಜಲಪಾತವು ಹಚ್ಚ ಹಸಿರಿನ ಕಾಡಿನಲ್ಲಿ ನೆಲೆಗೊಂಡಿದ್ದು, ದಂಪತಿಗಳಿಗೆ ಸೂಕ್ತ ತಾಣ. ಕೊಡಗು ಹಾಗೂ ಕೇರಳ ರಾಜ್ಯದ ಗಡಿಭಾಗದ ಕುಟ್ಟ ಎಂಬ ಪ್ರದೇಶದಲ್ಲಿ ಕಾಣಸಿಗುತ್ತದೆ. ಈ ಜಲಪಾತವು ಲಕ್ಷ್ಮಣ ತೀರ್ಥ ನದಿಯ ಒಂದು ಭಾಗವಾಗಿದ್ದು, ಪವಿತ್ರ ಸ್ಥಳವಾಗಿದೆ. ಜಲಪಾತದ ಎಡಭಾಗದಲ್ಲಿ ರಾಮೇಶ್ವರ ದೇವಸ್ಥಾನವಿದೆ.

ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ಚಾರಣ: ಮಾಂದಲಪಟ್ಟಿ ಅಥವಾ ದುಬಾರೆ ಆನೆಶಿಬಿರಗಳಂತಹ ಸುಂದರ ಸ್ಥಳಗಳಿಗೆ ಭೇಟಿ ನೀಡುವಾಗ ಚಾರಣವನ್ನು ಕೈಗೊಳ್ಳಬಹುದು. ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿನ ಚಾರಣವು ಬಹಳ ಹಿತಕರವೆನಿಸುತ್ತದೆ.

ರಾಫ್ಟಿಂಗ್: ಸಾಹಸದಂತಹ ಚಟುವಟಿಕೆಗಳಲ್ಲಿ ಭಾಗವಹಿಸಲು ಇಷ್ಟಪಟ್ಟರೆ ರಿವರ್ (ನದಿ) ರಾಫ್ಟಿಂಗ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಹುದು.

ಗೋಣಿಕೊಪ್ಪದಿಂದ 27 ಕಿಮೀ ಮತ್ತು ಮಡಿಕೇರಿಯಿಂದ 71 ಕಿಮೀ ದೂರದಲ್ಲಿರುವಗೆ ಪ್ರಸಿದ್ಧವಾಗಿದೆ. ಹಚ್ಚ ಹಸಿರಿನ ಮಧ್ಯೆ ರಭಸದಲ್ಲಿ ಹರಿಯುವ ನದಿಯಲ್ಲಿ ಸಾಹಸಪ್ರಿಯರು ರಿವರ್ ರಾಫ್ಟಿಂಗ್ ಕೈಗೊಳ್ಳಬಹುದು.
ಆಹಾರ: ಕೊಡಗಿನ ಆಹಾರ ಅಂದ್ರೆ ನೆನಪಾಗುವುದು ಪಂದಿ ಕರಿ. ಕಡುಬು ಜೊತೆಗೆ ಹಂದಿ ಗ್ರೇವಿಯನ್ನು ಬಡಿಸಲಾಗುತ್ತದೆ. ಇದು ಬಹಳ ರುಚಿಕರವಾಗಿರುತ್ತದೆ. ನೀವು ಮಾಂಸಾಹಾರ ಪ್ರಿಯರಾಗಿದ್ದರೆ ಈ ಖಾದ್ಯವನ್ನು ಟ್ರೈ ಮಾಡಲೇಬೇಕು. ಜೊತೆಗೆ ಇಲ್ಲಿ ಕಾಫಿ ತುಂಬಾ ಪ್ರಸಿದ್ಧಿ ಪಡೆದಿರುವುದರಿಂದ ಕೊಡಗಿಗೆ ಭೇಟಿ ನೀಡಿದಾಗ ನೀವು ಕಾಫಿ ಪ್ರಿಯರಲ್ಲದಿದ್ದರೂ ಕಾಫಿ ಕುಡಿಯುವುದನ್ನು ಮರೆಯಬೇಡಿ.

ಮಂಗಳೂರಿನಿಂದ ಸುಮಾರು 140 ಕಿ.ಮೀ ದೂರವಿದ್ದರೆ, ಬೆಂಗಳೂರಿನಿಂದ ಕೊಡಗು ಜಿಲ್ಲೆಗೆ ಸುಮಾರು 250 ಕಿ.ಮೀ ದೂರವಿದೆ. ರಸ್ತೆ ಮಾರ್ಗದ ಮೂಲಕ ಇಲ್ಲಿದೆ ತಲುಪಬಹುದು. ಇನ್ಯಾಕೆ ತಡ ನಿಮ್ಮ ಬ್ಯಾಗ್‌ಗಳನ್ನು ಈಗಲೇ ಪ್ಯಾಕ್ ಮಾಡಿ, ಸಂಗಾತಿ ಜೊತೆಗೆ ಕೊಡಗಿ ಪ್ರವಾಸ ಕೈಗೊಂಡು ಪ್ರೇಮಿಗಳ ದಿನವನ್ನು ಆಚರಿಸಿ.

Priyanka Gowda

eMail
Whats_app_banner