Hill Stations: ಬೇಸಿಗೆ ರಜೆಗೆ ಸಿದ್ಧರಾಗ್ತಿದ್ದೀರಾ? ತಮಿಳುನಾಡಿನಲ್ಲಿವೆ ಕಣ್ಮನ ಸೆಳೆಯುವ ಗಿರಿಧಾಮಗಳು
Hill Stations in Tamil Nadu: ಬೇಸಿಗೆ ರಜೆ ಸಿಗುವುದಕ್ಕೆ ಕಾಯುತ್ತಿದ್ದೀರಾ? ಸಮ್ಮರ್ ವೆಕೇಶನ್ಸ್ ಎಂಜಾಯ್ ಮಾಡಲು ಯಾವುದು ಬೆಸ್ಟ್ ಪ್ಲೇಸ್ ಎಂಬ ಗೊಂದಲವೇ.. ಗಿರಿಧಾಮಗಳಿಗೆ ಭೇಟಿ ನೀಡುವ ಆಯ್ಕೆ ನಿಮ್ಮದಾದರೆ ತಮಿಳುನಾಡಿನಲ್ಲಿವೆ ಊಟಿ, ಕೊಡೈಕೆನಾಲ್, ಕೂನೂರು, ಯಳಗಿರಿ, ಏರ್ಕಾಡ್ ನಂತಹ ಅನೇಕ ಪ್ರವಾಸಿ ತಾಣಗಳು..

ಬೇಸಿಗೆಯ ಸುಡು ಬಿಸಿಲಿನಲ್ಲಂತೂ ಮೈ ಮನ ತಣಿಸುವಂತಹ ಪ್ರದೇಶಗಳನ್ನೇ ಎಲ್ಲರು ಹುಡುಕಾಡುತ್ತಿರುತ್ತಾರೆ. ಉತ್ತರ ಭಾರತದ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಪರ್ವತ ಪ್ರದೇಶಗಳಿಗೆ ಹೋಗೋದಕ್ಕೆ ಕಷ್ಟವೆನ್ನಿಸಿದರೆ ದಕ್ಷಿಣ ಭಾರತ, ಅದರಲ್ಲೂ ನಮ್ಮ ನೆರೆಯ ರಾಜ್ಯಗಳಲ್ಲೇ ಇವೆ ಸುಂದರವಾದ ಬೆಟ್ಟಗಳು, ಎತ್ತರದ ಪರ್ವತಗಳು ಮತ್ತು ಬೆರಗುಗೊಳಿಸುವ ತಾಣಗಳು.. ಅದರಲ್ಲಿಯೂ ತಮಿಳುನಾಡು ಈ ಬೇಸಿಗೆಯಲ್ಲಿ ನೀವು ಭೇಟಿ ನೀಡಲೇಬೇಕಾದ ಪ್ರವಾಸಿ ತಾಣ. ಇಲ್ಲಿ ಅನೇಕ ಗಿರಿಧಾಮಗಳಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಕಣ್ಮನ ಸೂರೆಗೈಯುವ ತಮಿಳುನಾಡಿನ ಪ್ರಮುಖ ಪ್ರೇಕ್ಷಣೀಯ ಗಿರಿಧಾಮಗಳ ಮಾಹಿತಿ ಇಲ್ಲಿದೆ ನಿಮಗಾಗಿ..
1. ಕೊಡೈಕೆನಾಲ್
ತಮಿಳುನಾಡಿನ ಅತ್ಯದ್ಭುತ ಗಿರಿಧಾಮಗಳಲ್ಲಿ ಕೊಡೈಕೆನಾಲ್ ಪ್ರಮುಖವಾದುದು. ಇದನ್ನು ʻಗಿರಿಧಾಮಗಳ ರಾಜಕುಮಾರಿʼ ಎಂದು ಕರೆಯಲಾಗುತ್ತದೆ. ಇದು ಸಮುದ್ರ ಮಟ್ಟದಿಂದ 2000 ಅಡಿ ಎತ್ತರದಲ್ಲಿದೆ. ಕೊಡೈಕೆನಾಲ್‌ನಲ್ಲಿ ಅನೇಕ ಪ್ರವಾಸಿ ತಾಣಗಳಲ್ಲಿದ್ದು, ಸುಂದರವಾದ ಕೊಡೈ ಸರೋವರ, ಬೇರ್ ಶೋಲಾ ಫಾಲ್ಸ್, ಗ್ರೀನ್ ವ್ಯಾಲೀ ವ್ಯೂ, ಬೆರಿಜೆಮ್ ಸರೋವರ, ಕುರಿಂಜಿ ದೇವಾಲಯ, ಪಿಲ್ಲರ್ ರಾಕ್ಸ್, ಬ್ರ್ಯಾಂಟ್ ಪಾರ್ಕ್, ಕೋಕರ್ಸ್ ವಾಕ್ ಮತ್ತು ಸಿಲ್ವರ್ ಕ್ಯಾಸ್ಕೇಡ್ ಅನ್ನು ನೋಡಬಹುದು.
2. ಊಟಿ
ಮೈನವಿರೇಳಿಸುವ ಚಳಿ, ಮಂಜಿನ ವಾತಾವರಣಕ್ಕೆ ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾಗಿರುವ ಪ್ರದೇಶ ಊಟಿ. ಇದು ಸಮುದ್ರ ಮಟ್ಟದಿಂದ 7440 ಅಡಿ ಎತ್ತರದಲ್ಲಿದೆ ಮತ್ತು ಅನೇಕ ಸುಂದರವಾದ ಪ್ರವಾಸಿ ಸ್ಥಳಗಳನ್ನು ಹೊಂದಿದೆ. ಏಪ್ರಿಲ್-ಜೂನ್ ತಿಂಗಳು ಊಟಿಗೆ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ. ಆದರೆ ಇಲ್ಲಿರುವ ಪ್ರವಾಸಿ ತಾಣಗಳನ್ನು ಕಣ್ತುಂಬಲು ಏನಿಲ್ಲವೆಂದರೂ 2-3 ದಿನಗಳು ಬೇಕೇ ಬೇಕು.
3. ಕೂನೂರು
ಸುತ್ತಲೂ ಹುಲ್ಲುಗಾವಲಿಂದ ಅಲಂಕೃತಗೊಂಡ ಕೂನೂರಿನ ಪ್ರಕೃತಿಯು ಎಂಥವರನ್ನು ಮರಳುಗೊಳಿಸುವ ಸೌಂದರ್ಯವನ್ನು ಹೊಂದಿದೆ. ಮುಖ್ಯವಾಗಿ ಕೂನೂರು ನೀಲಗಿರಿ ಮತ್ತು ಚಹಾ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಸಮುದ್ರಮಟ್ಟದಿಂದ ಸುಮಾರು 6000 ಅಡಿ ಎತ್ತರದಲ್ಲಿರುವ ಈ ಕೂನೂರಿಗೆ ಸಾಹಸಿಗಳು ಟ್ರೆಕ್ಕಿಂಗ್ ಕೂಡ ಮಾಡಬಹುದು. ಕೂನೂರಿಗೆ ಹೋದರೆ ಸಿಮ್ಸ್ ಪಾರ್ಕ್,ಟಾಯ್ ಟ್ರೈನ್ ರೈಡ್, ಲ್ಯಾಂಬ್ಸ್ ರಾಕ್, ಸೇಂಟ್ ಕ್ಯಾಥರೀನ್ ಫಾಲ್ಸ್, ಡಾಲ್ಫಿನ್ಸ್ ನೋಸ್ ಮತ್ತು ಲಾಸ್ ಫಾಲ್ಸ್ ಅನ್ನು ನೋಡಬಹುದು.
4. ಯಳಗಿರಿ
ಯಳಗಿರಿ ತಮಿಳುನಾಡಿನಲ್ಲಿ ಭೇಟಿ ನೀಡಲೇಬೇಕಾದ ಮತ್ತೊಂದು ಪ್ರೇಕ್ಷಣೀಯ ಸ್ಥಳ. ಬೆಂಗಳೂರಿನಿಂದ ಯಳಗಿರಿ ಗಿರಿಧಾಮಕ್ಕೆ ಕೇವಲ 150 ಕಿ.ಮೀ ದೂರದಲ್ಲಿದ್ದು, ಒಂದು ದಿನದ ಪ್ರವಾಸಕ್ಕಿದು ಸೂಕ್ತ ಆಯ್ಕೆ. ಇದು ಸಮುದ್ರ ಮಟ್ಟಕ್ಕಿಂತ 3500 ಅಡಿ ಎತ್ತರದಲ್ಲಿದೆ ಮತ್ತು ಪ್ಯಾರಾಗ್ಲೈಡಿಂಗ್ ಮತ್ತು ಟ್ರೆಕ್ಕಿಂಗ್ ಟ್ರೇಲ್‌ಗಳಿಗೆ ಹೆಸರುವಾಸಿಯಾಗಿದೆ. ಜಲಗಂಪರೈ ಜಲಪಾತಗಳು, ಪುಂಗನೂರು ಸರೋವರ, ಸ್ವಾಮಿ ಮಲೈ ಬೆಟ್ಟ, ವೆಲವನ್ ದೇವಾಲಯ, ಹರ್ಬಲ್ ಫಾರ್ಮ್ ಮತ್ತು ನೇಚರ್ ಪಾರ್ಕ್ ಇತರ ಆಕರ್ಷಣೆಗಳಾಗಿವೆ.
5. ಟಾಪ್‌ಸ್ಲಿಪ್
ತಮಿಳುನಾಡಿನ ಅತ್ಯುತ್ತಮ ಪ್ರೇಕ್ಷಣೀಯ ಸ್ಥಳ ಟಾಪ್‌ಸ್ಲಿಪ್. ಇದು ವನ್ಯಜೀವಿ, ಸಾಹಸ ಕ್ರೀಡೆಗಳು ಮತ್ತು ಔಷಧೀಯ ಸಸ್ಯ ಸಂರಕ್ಷಣೆಗೆ ಹೆಸರುವಾಸಿಯಾಗಿದೆ. ಇದು ಸಮುದ್ರದಿಂದ 2554 ಅಡಿ ಎತ್ತರದಲ್ಲಿದೆ. ನೀವು ಟಾಪ್ಸ್ಲಿಪ್ನಲ್ಲಿ ಜೀಪ್ ಸಫಾರಿ ಮತ್ತು ಆನೆ ಸವಾರಿಗಳನ್ನು ಮಾಡಬಹುದು. ನವೆಂಬರ್ ನಿಂದ ಏಪ್ರಿಲ್ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.
6. ಏರ್ಕಾಡ್
ಇದು ಊಟಿಯಂತೆ ಜನಜಂಗುಳಿಯಿಲ್ಲವಾದರೂ ಸರಳ ಸುಂದರವಾಗಿರುವ ಪ್ರವಾಸಿ ತಾಣ. ಸಮುದ್ರ ಮಟ್ಟದಿಂದ ಸುಮಾರು 5000 ಅಡಿ ಎತ್ತರದಲ್ಲಿರುವ ಏರ್ಕಾಡ್ ಗಿರಿಧಾಮವು ಸೇಲಂ ಜಿಲ್ಲೆಯಲ್ಲಿದೆ.ಇಲ್ಲಿ ಸರೋವರ, ಪಗೋಡಾ ಪಾಯಿಂಟ್, ಸಿಲ್ಕ್ ಫಾರ್ಮ್ ಹಾಗೂ ರೋಸ್ ಗಾರ್ಡನ್, ಕಿಳಿಯೂರ್ ವಾಟರ್ ಫಾಲ್ಸ್, ಟಿಪ್ಪೆರರೀ ವ್ಯೂ ಪಾಯಿಂಟ್, ಡೀರ್ ಪಾರ್ಕ್, ಲೇಡೀಸ್ ಸೀಟ್ ಸೇರಿದಂತೆ ಅನೇಕ ತಾಣಗಳು ಮನಸೂರೆಗಯ್ಯುವಂತಿವೆ.
7. ವಾಲ್ಪರೈ
ಹಚ್ಚಹಸಿರಿನ ಸ್ವರ್ಗವಾಗಿರುವ ವಾಲ್ಪರೈ ಪಶ್ಚಿಮಘಟ್ಟದ ಅಣ್ಣಮಲೈ ಪರ್ವತ ಶ್ರೇಣಿಯಲ್ಲಿ ಸಮುದ್ರ ಮಟ್ಟಕ್ಕಿಂತ 3500 ಅಡಿ ಎತ್ತರದಲ್ಲಿದೆ. ಚಿನ್ನಕಲಾರ್ ಜಲಪಾತ, ನಿರಾರ್ ಅಣೆಕಟ್ಟು, ಶೋಲಯಾರ್ ಅಣೆಕಟ್ಟು, ಬಾಲಾಜಿ ಮಂದಿರ, ಗಣಪತಿ ಮಂದಿರಗಳು ಈ ಭಾಗದಲ್ಲಿ ನೋಡಬಹುದಾದ ಪ್ರೇಕ್ಷಣೀಯ ತಾಣಗಳು.
8.ಮಸಿನಗುಡಿ
ಊಟಿಯಿಂದ 30 ಕಿ.ಮೀ ದೂರದಲ್ಲಿ ದಟ್ಟವಾದ ಹಾಗು ಹಚ್ಚ ಹಸಿರಿನ ವಾತಾವರಣದಿಂದ ಕೂಡಿದ ಪ್ರವಾಸಿ ತಾಣವಿದು. ಮೈಸೂರಿನಿಂದ 97 ಕಿ.ಮೀ ಹಾಗು ಬೆಂಗಳೂರಿನಿಂದ 237 ದೂರದಲ್ಲಿ ಮಸಿನಗುಡಿ ಇದೆ.ಚಹಾ ತೋಟಗಳಿಗೆ ಹೆಸರು ವಾಸಿಯಾಗಿರುವ ಪ್ರದೇಶವಿದು.
ತಮಿಳುನಾಡಿನಲ್ಲಿ ಪ್ರಮುಖವಲ್ಲದೇ ಹೋದರೂ, ಒಮ್ಮೆಯಾದರೂ ಭೇಟಿನೀಡಲು ಯೋಗ್ಯವಾದ ಇನ್ನೂ ಅನೇಕ ಗಿರಿಧಾಮಗಳಿವೆ. ಅವುಗಳಲ್ಲಿ ಮೇಘಮಲೈ, ಕೋಟಗಿರಿ ಗಿರಿಧಾಮ ಕೂಡ ಹೌದು.
