Kolar Tourism: ಅಂತರಗಂಗೆ ಬೆಟ್ಟವೆಂಬ ಮಾಯಾಲೋಕ; ಅಬ್ಬಬ್ಬಾ, ಕೋಲಾರದಲ್ಲಿ ನೋಡಲು ಎಷ್ಟೆಲ್ಲಾ ಇದೆ
ಕೋಲಾರ ಪ್ರವಾಸ ಮಾಡ್ಬೇಕು ಎನ್ನುವ ಪ್ಲಾನ್ ಇದ್ದು, ಯಾವೆಲ್ಲಾ ಜಾಗಗಳನ್ನು ನೋಡಬಹುದು ಎಂಬ ಗೊಂದಲ ಇದ್ದರೆ, ನಿಮಗಾಗಿ ಇಲ್ಲಿದೆ ಪ್ರಮುಖ ಪ್ರವಾಸಿ ತಾಣಗಳ ಪರಿಚಯ. ಅಂತರಗಂಗೆಯನ್ನು ಖಂಡಿತ ಮಿಸ್ ಮಾಡ್ಲೇಬೇಡಿ. ಒನ್ ಡೇ ಟ್ರಿಪ್ ಸರಿಯಾಗಿ ಪ್ಲಾನ್ ಮಾಡಿದ್ರೆ ಈ ಕೆಳಗಿನ ಎಲ್ಲ ತಾಣಗಳನ್ನೂ ನೋಡಿ ಬರಬಹುದು. ಇನ್ನೇಕೆ ತಡ, ಹೊರಡಿ ಪ್ರವಾಸ.
ನೀವು ಬೆಂಗಳೂರು ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿದ್ದೂ ಒನ್ ಡೇ ಟ್ರಿಪ್ ಮಾಡ್ಬೇಕು ಅನ್ನೋ ಹಂಬಲ ಇದ್ರೆ ನಿಮಗೆ ಬೆಸ್ಟ್ ಜಾಗ ಕೋಲಾರ. ಕೋಲಾರದಲ್ಲಿ ನೋಡಲು ಒಂದಲ್ಲ, ಎರಡಲ್ಲ ಹತ್ತಾರು ಪ್ರವಾಸಿ ತಾಣಗಳಿವೆ. ಧಾರ್ಮಿಕ ಕ್ಷೇತ್ರಗಳು, ಚಾರಣ ಮಾಡಲು ಯೋಗ್ಯ ತಾಣಗಳು, ಚಿನ್ನದ ಗಣಿ ಸೇರಿದಂತೆ ಹತ್ತು ಹಲವು ತಾಣಗಳಿವೆ. ನೀವು ಕೋಲಾರ ಪ್ರವಾಸ ಮಾಡುವ ಪ್ಲಾನ್ ಇದ್ದರೆ, ನಿಮಗಾಗಿ ಇಲ್ಲಿದೆ ಕೋಲಾರದ ಪ್ರಮುಖ ಪ್ರವಾಸಿತಾಣಗಳ ಪರಿಚಯ.
ಅಂತರಗಂಗೆ ಬೆಟ್ಟ: ಕೋಲಾರ ಪ್ರವಾಸ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಅಂತರಗಂಗೆ ಬೆಟ್ಟ. ಇದು ಕೋಲಾರದಿಂದ 3 ಕಿಲೋಮೀಟರ್ ದೂರದಲ್ಲಿದೆ. ಅಂತರಗಂಗೆ ಬೆಟ್ಟು ಶತಶೃಂಗ ಬೆಟ್ಟಗಳ ಶ್ರೇಣಿಯಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 4026 ಅಡಿ ಎತ್ತರದಲ್ಲಿರುವ ಈ ಬೆಟ್ಟವು ಚಾರಣಕ್ಕೆ ಹೇಳಿ ಮಾಡಿಸಿದ ಜಾಗ. ಈ ಬೆಟ್ಟವು ಕಾಶಿ ವಿಶ್ವೇಶ್ವರ ದೇವಸ್ಥಾನದಿಂದ ಖ್ಯಾತಿ ಪಡೆದಿದೆ. ಈ ಬೆಟ್ಟವನ್ನು ಹತ್ತಿದರೆ ಸಂಪೂರ್ಣ ಕೋಲಾರದ ಅದ್ಭುತ ಸೌಂದರ್ಯವನ್ನು ಸವಿಯಬಹುದು. ಅಂತರಗಂಗೆಯನ್ನು ದಕ್ಷಿಣದ ಕಾಶಿ ಎಂದೂ ಕರೆಯುತ್ತಾರೆ.
ಮಾರ್ಕಂಡೇಶ್ವರ ಡ್ಯಾಮ್: ಬೂದಿಕೋಟೆಯಿಂದ 3ಕಿಲೋಮೀಟರ್ ಹಾಗೂ ಕೋಲಾರದಿಂದ 30 ಕಿಲೋಮೀಟರ್ ದೂರದಲ್ಲಿರುವ ಒಂದು ಅದ್ಭುತ ತಾಣ ಮಾರ್ಕಂಡೇಶ್ವರ ಡ್ಯಾಮ್. ಸರ್ ಎಂ. ವಿಶ್ವೇಶ್ವರಯ್ಯನವರು ಈ ಡ್ಯಾಮ್ ನಿರ್ಮಿಸಿದ್ದರು.
ಬಿಗ್ ರಾಕ್ ಡರ್ಟ್ ಪಾರ್ಕ್: ಹೊಳಲಿ ಗ್ರಾಮದಲ್ಲಿರುವ ಬಿಗ್‌ರಾಕ್ ಡರ್ಟ್ ಪಾರ್ಕ್ ಒಂದು ಸಮಗ್ರ ತರಬೇತಿ ಅಕಾಡೆಮಿಯಾಗಿದೆ. ಭಾರತದ ಅತ್ಯಂತ ಯಶಸ್ವಿ ಮತ್ತು ಬೇಡಿಕೆಯ ಆಫ್-ರೋಡ್ ತರಬೇತಿ ಇಲ್ಲಿ ಸಿಗುತ್ತದೆ. ಅಕಾಡೆಮಿ ಇಲ್ಲಿಯವರೆಗೆ 1500 ರೈಡರ್‌ಗಳಿಗೆ ತರಬೇತಿ ನೀಡಿದೆ.
ಧಾರ್ಮಿಕ ಕ್ಷೇತ್ರಗಳು
ಕೋಲಾರಮ್ಮ ದೇವಸ್ಥಾನ: ಕೋಲಾರ ಪಟ್ಟಣದ ಪ್ರಧಾನ ದೇವತೆ ಕೋಲಾರಮ್ಮ. ಗಂಗರ ಕಾಲಕ್ಕೂ ಹಿಂದೆ ಈ ದೇವಾಲಯವನ್ನು ಕಟ್ಟಿಸಲಾಗಿತ್ತು ಎನ್ನಲಾಗುತ್ತದೆ. ಹಲವು ವೈಶಿಷ್ಟವನ್ನು ಹೊಂದಿರುವ ಈ ದೇವಾಲಯಕ್ಕೆ ಭೇಟಿ ನೀಡಿ, ದೇಗುಲ ವಿಶೇಷವನ್ನು ಕಣ್ತುಂಬಿಕೊಳ್ಳಬಹುದು.
ಸೋಮೇಶ್ವರ ದೇವಾಯಲ: ಇದು ಕೋಲಾರಮ್ಮ ದೇವಸ್ಥಾನದ ಸಮೀಪದಲ್ಲೇ ಇದೆ. ಸೋಮೇಶ್ವರ ದೇವಾಲಯವು ವಿಜಯನಗರ ಪೂರ್ವ ದ್ರಾವಿಡ ಶೈಲಿ ಅಥವಾ ಚೋಳರ ಕಾಲದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ. ಇದು ಅತ್ಯಂತ ಸೊಬಗಿನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.
ಕೋಟಿಲಿಂಗೇಶ್ವರ: ಕೋಲಾರದ ಪ್ರಮುಖ ದೇವಾಯಲಗಳಲ್ಲಿ ಕೋಟಿಲಿಂಗೇಶ್ವರ ಕೂಡ ಒಂದು. ಇದು ಕೋಲಾರದಿಂದ ಸುಮಾರು 18 ಕಿಲೋಮೀಟರ್ ದೂರದಲ್ಲಿದೆ. ಕಮ್ಮಸಂದ್ರ ಎಂಬ ಗ್ರಾಮದಲ್ಲಿರುವ ಈ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ಸುಮಾರು 1 ಕೋಟಿಯಷ್ಟು ಚಿಕ್ಕ, ದೊಡ್ಡ ಶಿವನ ವಿಗ್ರಹಗಳಿವೆ. ಇಲ್ಲಿ 108 ಅಡಿ ಎತ್ತರದ ಶಿವಲಿಂಗವಿದ್ದು, ಇದು ಪ್ರಪಂಚದಲ್ಲೇ ಅತೀ ಎತ್ತರದ ಶಿವಲಿಂಗ ಎಂದು ಹೇಳಲಾಗುತ್ತದೆ. 35 ಅಡಿ ಎತ್ತರದ ನಂದಿ ವಿಗ್ರಹವನ್ನೂ ಇಲ್ಲಿ ಕಣ್ತುಂಬಿಕೊಳ್ಳಬಹುದು.
ಅವನಿ: ಅವನಿ ಬೆಟ್ಟವು ಕೋಲಾರದ ಮುಳಬಾಗಿಲಿನಿಂದ 10 ಮೈಲಿ ದೂರದಲ್ಲಿದೆ. ಇದನ್ನು ಅತ್ಯಂತ ಪುಣ್ಯಕ್ಷೇತ್ರ ಎಂದೂ ಕರೆಯಲಾಗುತ್ತದೆ. ಇದನ್ನು ವಾಲ್ಮೀಕಿ ಋಷಿಗಳ ವಾಸಸ್ಥಾನ ಎಂದೂ ಹೇಳಲಾಗುತ್ತದೆ. ರಾಮೇಶ್ವರ, ಲಕ್ಷ್ಮಣೇಶ್ವರ, ಭರತೇಶ್ವರ, ಸುಗ್ರೀವೇಶ್ವರ ಮುಂತಾದ ಶ್ರೀರಾಮನಿಗೆ ಸಂಬಂಧಿಸಿದ ಸುಮಾರು 12 ದೇವಾಲಯಗಳಿವೆ. ಈ ಎಲ್ಲಾ ದೇವಾಲಯಗಳನ್ನು ಒಟ್ಟಾಗಿ ರಾಮಲಿಂಗೇಶ್ವರ ದೇವಾಲಯಗಳು ಎಂದೂ ಕರೆಯಲಾಗುತ್ತದೆ.
ಬೂದಿಕೋಟೆ: ವಿಭೂತಿಪುರ ಅಥವಾ ಬೂದಿಯ ಪಟ್ಟಣ ಎಂದೂ ಕರೆಯಲ್ಪಡುವ ಬೂದಿಕೋಟೆಯು 8ನೇ ಶತಮಾನಕ್ಕೂ ಮುಂಚಿನ ಶಾಸನಗಳನ್ನು ಹೊಂದಿದೆ. ಸೋಮೇಶ್ವರ ಮತ್ತು ವೆಂಕಟರಮಣ ದೇವಾಲಯಗಳು ಬೂದಿಕೋಟೆಯ ಪ್ರಮುಖ ದೇವಾಲಯಗಳಾಗಿವೆ.
ಚಿಕ್ಕ ತಿರುಪತಿ: ಇದು ಮಾಲೂರು ತಾಲ್ಲೂಕಿನ ಸರ್ಜಾಪುರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ಈ ದೇವಾಲಯವನ್ನು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಷ್ಟೇ ಪವಿತ್ರ ಎನ್ನಲಾಗುತ್ತದೆ.
ಮಹಾಗಣಪತಿ ದೇವಸ್ಥಾನ ಕುರುಡುಮಲೆ: ಮುಳಬಾಗಲು ತಾಲೂಕಿನಿಂದ ಸುಮಾರು 10 ಕಿ.ಮೀ ದೂರದಲ್ಲಿ ಮಹಾಗಣಪತಿ ದೇವಸ್ಥಾನವಿದೆ. ವಿಜಯನಗರ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯವು ಗರ್ಭಗೃಹ, ಎರಡು ಅರ್ಧಮಂಟಪಗಳು ಮತ್ತು ದೊಡ್ಡ ನವರಂಗವನ್ನು ಹೊಂದಿದೆ. ಇಲ್ಲಿ 8.5 ಅಡಿ ಎತ್ತರದ ಗಣಪತಿ ವಿಗ್ರಹವನ್ನು ನೋಡಬಹುದಾಗಿದೆ. ಈ ವಿಗ್ರಹವು ಕರ್ನಾಟಕದಲ್ಲಿರುವ ಅತೀ ಎತ್ತರದ ಗಣೇಶ ವಿಗ್ರಹ ಎಂದು ನಂಬಲಾಗಿದೆ.
ಇಷ್ಟೇ ಅಲ್ಲದೇ, ಬಂಗಾರು ತಿರುಪತಿ, ಹುನಕುಂದ, ಭೈರವ ಕ್ಷೇತ್ರ, ಟೇಕಲ್, ತೇರುಹಳ್ಳಿ, ವಿರುಪಾಕ್ಷ ದೇವಸ್ಥಾನ ಹೀಗೆ ಹತ್ತು ಹಲವು ದೇವಾಲಯಗಳಿಂದ ಕೋಲಾರ ಸುತ್ತುವರಿದಿದೆ. ಸರಿಯಾಗಿ ಪ್ಲಾನ್ ಮಾಡಿದ್ರೆ ಒಂದು ದಿನದ ಕೋಲಾರ ಟ್ರಿಪ್‌ನಲ್ಲಿ ಇದರಲ್ಲಿ ಸಾಧ್ಯವಾದಷ್ಟು ಎಲ್ಲವನ್ನೂ ನೋಡಿ ಬರಬಹುದು.