ಬೇಸಿಗೆ ಪ್ರವಾಸಕ್ಕೆ ಕೊಡಗು ಕಡೆ ಹೋಗಬೇಕು ಅಂತಿದ್ದೀರಾ, ಈ 6 ಸ್ಥಳಗಳನ್ನು ಮಿಸ್ ಮಾಡದೇ ನೋಡಿ ಬನ್ನಿ
ಪಹಲ್ಗಾಮ್ ದಾಳಿಯ ಬಳಿಕ ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದರೆ, ಭಾರತದ ಸ್ಕಾಟ್ಲೆಂಡ್ ಎಂದು ಪ್ರಸಿದ್ಧಿ ಪಡೆದ ಕೂರ್ಗ್ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಮೇ ತಿಂಗಳಲ್ಲಿ ನೀವೂ ಕೊಡಗು ಪ್ರವಾಸ ಮಾಡಬೇಕು ಅಂತಿದ್ದರೆ ಈ ಜಾಗಗಳನ್ನು ತಪ್ಪದೇ ನೋಡಿ ಬನ್ನಿ.

ಕರ್ನಾಟಕದಲ್ಲಿ ಮೇ ತಿಂಗಳ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ ಕೊಡಗು. ಸರ್ವಕಾಲದಲ್ಲೂ ತಂಪಾಗಿರುವ ಕೊಡಗಿಗೆ ಈ ಮೇ ತಿಂಗಳಲ್ಲಿ ನೀವೂ ಕೂಡ ಪ್ರವಾಸ ಮಾಡಬೇಕು ಅಂತಿದ್ದರೆ ಕೆಲವು ಜಾಗಗಳನ್ನು ತಪ್ಪದೇ ನೋಡಬೇಕು. ಕೊಡಗಿನಲ್ಲಿರುವ ಕಾಫಿ ಎಸ್ಟೇಟ್ಗಳು, ಜಲಪಾತಗಳ ಜೊತೆಗೆ ಈ ಸ್ಥಳಗಳನ್ನು ತಪ್ಪದೇ ನೋಡಿ ಬನ್ನಿ.
ಪಹಲ್ಗಾಮ್ ದಾಳಿಯ ಬಳಿಕ ಕರ್ನಾಟಕದ ಕಾಶ್ಮೀರ, ಭಾರತದ ಸ್ಕಾಟ್ಲೆಂಡ್ ಎಂದು ಖ್ಯಾತಿ ಪಡೆದ ಕೂರ್ಗ್ ಕಡೆ ಪ್ರವಾಸ ಬರುವವರ ಸಂಖ್ಯೆ ಹೆಚ್ಚುತ್ತಿದೆಯಂತೆ. ಆದರೆ ನಾವು ಕರ್ನಾಟಕದಲ್ಲೇ ಇದ್ದು ಕೊಡಗು ನೋಡಿಲ್ಲ ಎಂದರೆ ಹೇಗೆ. ಈ ಮೇ ತಿಂಗಳಲ್ಲಿ ಬಿಸಿಲಿನ ತಾಪ ನಿವಾರಿಸಿಕೊಳ್ಳಲು ಮಡಿಕೇರಿ, ಕೊಡಗು ಕಡೆ ಪ್ರವಾಸ ಮಾಡಲು ಬಯಸಿದರೆ ಈ 6 ಜಾಗಗಳನ್ನು ಮಿಸ್ ಮಾಡದೇ ನೋಡಿ ಬನ್ನಿ.
ಅಬ್ಬೇ ಫಾಲ್ಸ್
ಅಬ್ಬೇ ಫಾಲ್ಸ್ ಕೊಡಗಿನಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಇದು ಕೊಡಗಿನ ಮುಖ್ಯ ಆಕರ್ಷಣೆ. ಕಾಫಿ ಎಸ್ಟೇಟ್ಗಳ ಮಧ್ಯೆ ಹರಿಯುವ ಸುಂದರ ಜಲಪಾತವಿದು. 70 ಅಡಿ ಎತ್ತರರಿಂದ ಧುಮ್ಮಕ್ಕುವ ಜಲಪಾತವಿದು. ಮಳೆಗಾಲದ ಸಮಯದಲ್ಲಿ ಈ ಜಲಪಾತ ಸೊಬಗು ನೋಡುವುದೇ ಅಂದ. ಮೇ ತಿಂಗಳಲ್ಲಿ ನೀರು ಕಡಿಮೆ ಇದ್ದರು, ಈ ಜಲಪಾತದ ಸುತ್ತಲಿನ ಪ್ರಕೃತಿಯ ಅಂದವನ್ನು ಕಣ್ತುಂಬಿಕೊಳ್ಳಲು ಅಡ್ಡಿಯೇನಿಲ್ಲ.
ಮಡಿಕೇರಿ ಕೋಟೆ
ಇದು ಕೊಡುಗ ಪ್ರಾಂತ್ಯದಲ್ಲಿರುವ ಒಂದು ಐತಿಹಾಸಿಕ ಹೆಗ್ಗುರುತು. ಇದು ಈ ಪ್ರದೇಶದ ಶ್ರೀಮಂತ ಇತಿಹಾಸವನ್ನು ಪ್ರತಿನಿಧಿಸುತ್ತದೆ. 17ನೇ ಶತಮಾನದಲ್ಲಿ ಮುದ್ದು ರಾಜ ಎನ್ನುವವನು ಈ ಕೋಟೆಯನ್ನು ನಿರ್ಮಾಣ ಮಾಡಿದ್ದ. ಇಂದು ಇಲ್ಲಿ ವಸ್ತು ಸಂಗ್ರಹಾಲಯ ಕೂಡ ಇದ್ದು, ಕೋಟೆಯ ಮೇಲಿಂದ ಮಡಿಕೇರಿ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.
ನಿಸರ್ಗಧಾಮ
ಇದು ಕಾವೇರಿ ನದಿ ಬಳಿ ಇರುವ ಒಂದು ಅದ್ಭುತ ದ್ವೀಪ ಪ್ರದೇಶ. ಹಚ್ಚ ಹಸಿರಿನ ಬಿದಿರಿನ ತೋಪುಗಳು, ಶ್ರೀಗಂಧದ ಮರಗಳು ಮತ್ತು ತೇಗದ ಮರಗಳಿಂದ ಆವೃತವಾಗಿದೆ. ಈ ನೈಸರ್ಗಿಕ ಉದ್ಯಾನವನವು ಪ್ರಕೃತಿ ನಡಿಗೆ, ಆನೆ ಸವಾರಿ ಮತ್ತು ದೋಣಿ ವಿಹಾರಕ್ಕೆ ಸೂಕ್ತವಾಗಿದೆ. ಇದು ಕುಟುಂಬ ವಿಹಾರಕ್ಕೆ ಉತ್ತಮ ಸ್ಥಳವಾಗಿದ್ದು, ಪಿಕ್ನಿಕ್ ಸೌಲಭ್ಯಗಳನ್ನು ಹೊಂದಿದೆ. ನೀವು ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಪ್ರವಾಸಕ್ಕೆ ಹೋಗಿದ್ದರೆ ಈ ಜಾಗವನ್ನು ಮಿಸ್ ಮಾಡದೇ ನೋಡಿ ಬನ್ನಿ.
ತಲಕಾವೇರಿ
ಬ್ರಹ್ಮಗಿರಿ ಬೆಟ್ಟದ ಮೇಲೆ ನೆಲೆಗೊಂಡಿರುವ ತಲಕಾವೇರಿ ಕಾವೇರಿ ನದಿಯ ಜನ್ಮಸ್ಥಳವಾಗಿದ್ದು, ಈ ಸ್ಥಳವು ಸಾಕಷ್ಟು ಧಾರ್ಮಿಕ ಮಹತ್ವವನ್ನು ಹೊಂದಿದೆ. ಕಾವೇರಿ ದೇವಿಗೆ ಸಮರ್ಪಿತವಾದ ಈ ದೇವಾಲಯವು ಶಾಂತ ವಾತಾವರಣ ಮತ್ತು ಸುತ್ತಮುತ್ತಲಿನ ಬೆಟ್ಟಗಳ ವಿಹಂಗಮ ನೋಟಗಳನ್ನು ನೀಡುತ್ತದೆ. ಇದು ಕೂರ್ಗ್ನ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಇಲ್ಲಿರುವ ಪವಿತ್ರ ಕೊಳವು ಶುದ್ಧ ಮತ್ತು ಪವಿತ್ರವಾದ ನೀರನ್ನು ಹೊಂದಿದೆ.
ಕಾಫಿ ತೋಟಗಳು
ಕೂರ್ಗ್ ಅಥವಾ ಕೊಡಗು ಪ್ರಾಂತ್ಯವು ಸುತ್ತಲೂ ಕಾಫಿ ತೋಟಗಳಿಂದ ಸುತ್ತುವರಿದಿದೆ. ಈ ಕಾಫಿ ಎಸ್ಟೇಟ್ಗಳಿ ಭೇಟಿ ನೀಡಿದೆ ನಿಮ್ಮ ಪ್ರವಾಸ ಅಂತ್ಯವಾಗುವುದಿಲ್ಲ. ಕಾಫಿ ಗಿಡಗಳನ್ನು ನೋಡುವುದರಿಂದ ಕಾಫಿ ಪುಡಿ ತಯಾರಿಸುವವರೆಗೆ ಎಲ್ಲಾ ಪ್ರತಿಕ್ರಿಯೆಯನ್ನು ನೀವು ಕಣ್ತುಂಬಿಕೊಳ್ಳಬಹುದು. ಇಲ್ಲಿ ಕಾಫಿ ತೋಟಗಳಲ್ಲಿ ನೀವು ನಿಮ್ಮ ಸುಂದರ ಕ್ಷಣಗಳನ್ನು ಕಳೆಯಬಹುದು. ಬಿರು ಬೇಸಿಗೆಯ ಝಳದಿಂದ ತಪ್ಪಿಸಿಕೊಂಡು ಹಸಿರ ನಡುವೆ ಕಳೆದು ಹೋಗಲು ಇದು ಉತ್ತಮ ಆಯ್ಕೆ.
ದುಬಾರೆ ಆನೆ ಕ್ಯಾಂಪ್
ಮೇ ತಿಂಗಳಲ್ಲಿ ನೀವು ಕೊಡಗು ಪ್ರವಾಸ ಮಾಡುತ್ತಿದ್ದರೆ ದುಬಾರೆ ಆನೆ ಕ್ಯಾಂಪ್ಗೆ ಹೋಗದೇ ಮರಳಬೇಡಿ. ಅದರಲ್ಲೂ ನೀವು ಪ್ರಾಣಿಪ್ರೇಮಿಗಳಾದರೆ, ಮಕ್ಕಳ ಜೊತೆ ಪ್ರವಾಸಕ್ಕೆ ಹೋಗಿದ್ದರೆ ತಪ್ಪದೇ ದುಬಾರೆಗೆ ಭೇಟಿ ನೀಡಿ. ಇಲ್ಲಿ ನೀವು ಆನೆಗಳಿಗೆ ತಿನ್ನಿಸಬಹುದು, ಅವುಗಳಿಗೆ ಸ್ನಾನ ಮಾಡಿಸಬಹುದು, ಅವುಗಳ ಜೊತೆ ಟೈಮ್ಪಾಸ್ ಮಾಡಬಹುದು.