IRCTC Package: ಕರ್ನಾಟಕದಲ್ಲಿದ್ದೂ ಬೆಂಗಳೂರು, ಮೈಸೂರು ಸರಿಯಾಗಿ ನೋಡಿಲ್ವಾ? ಹಾಗಿದ್ರೆ ಈ ಪ್ಯಾಕೇಜ್‌ ನೀವು ಗಮನಿಸಲೇಬೇಕು
ಕನ್ನಡ ಸುದ್ದಿ  /  ಜೀವನಶೈಲಿ  /  Irctc Package: ಕರ್ನಾಟಕದಲ್ಲಿದ್ದೂ ಬೆಂಗಳೂರು, ಮೈಸೂರು ಸರಿಯಾಗಿ ನೋಡಿಲ್ವಾ? ಹಾಗಿದ್ರೆ ಈ ಪ್ಯಾಕೇಜ್‌ ನೀವು ಗಮನಿಸಲೇಬೇಕು

IRCTC Package: ಕರ್ನಾಟಕದಲ್ಲಿದ್ದೂ ಬೆಂಗಳೂರು, ಮೈಸೂರು ಸರಿಯಾಗಿ ನೋಡಿಲ್ವಾ? ಹಾಗಿದ್ರೆ ಈ ಪ್ಯಾಕೇಜ್‌ ನೀವು ಗಮನಿಸಲೇಬೇಕು

IRCTC Package: ಕರ್ನಾಟಕದ ಯಾವುದೇ ಮೂಲೆಯಲ್ಲಿದ್ದರೂ ಬೆಂಗಳೂರು-ಮೈಸೂರು ಸುತ್ತಬಹುದು. ಇನ್ನು ಬೆಂಗಳೂರಲ್ಲೇ ಇದ್ದು ಸರಿಯಾಗಿ ಬೆಂಗಳೂರು ನೋಡದವರಿಗೂ ಈ ಪ್ಯಾಕೇಜ್‌ ಉತ್ತಮ. ಕ್ಯಾಬ್‌ ಮೂಲಕ ಸಂಪೂರ್ಣ ಸುತ್ತಲು ಸಾಧ್ಯವಾಗದಿದ್ದರೂ, ಪ್ರಮುಖ ಸ್ಥಳಗಳಿಗೆ ಹೋಗಿ ಬರಬಹುದು.

IRCTC Package: ಕರ್ನಾಟಕದಲ್ಲಿದ್ದೂ ಬೆಂಗಳೂರು, ಮೈಸೂರು ಸರಿಯಾಗಿ ನೋಡಿಲ್ವಾ?
IRCTC Package: ಕರ್ನಾಟಕದಲ್ಲಿದ್ದೂ ಬೆಂಗಳೂರು, ಮೈಸೂರು ಸರಿಯಾಗಿ ನೋಡಿಲ್ವಾ? (Pixabay)

ವಿಶ್ವದ ಸಿಲಿಕಾನ್‌ ಸಿಟಿ, ಉದ್ಯಾನ ನಗರಿ ಎಂದು ಕರೆಯಲ್ಪಡುವ ಬೆಂಗಳೂರು, ಭಾರತದ ಮೂರನೇ ಅತಿದೊಡ್ಡ ನಗರ. ಇದೇ ವೇಳೆ ಅರಮನೆಗಳ ನಗರಿ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ. ಉಭಯ ನಗರಗಳು ಕೆಲವೇ ಗಂಟೆಗಳಲ್ಲಿ ಪ್ರಯಾಣಿಸಬಹುದಾದಷ್ಟು ಹತ್ತಿರವಿದೆ. ಈಗಂತೂ ಎಕ್ಸ್‌ಪ್ರೆಸ್‌ ವೇ ಇದ್ದು, ಇನ್ನೂ ಸುಲಭ. ಆದರೂ ಈ ಎರಡು ನಗರಗಳು ಮತ್ತು ಅಲ್ಲಿರುವ ಪ್ರಸಿದ್ಧ ಸ್ಥಳಗಳನ್ನು ಸರಿಯಾಗಿ ನೋಡದವರು ಹಲವು ಮಂದಿ ಇದ್ದಾರೆ. ಬೆಂಗಳೂರಿನಲ್ಲಿ ಇದ್ದರೂ ಅಥವಾ ನಗರದಿಂದ ಹೊರಗಿದ್ದರೂ, ಕರ್ನಾಟಕದಲ್ಲಿಯೇ ರಾಜ್ಯದ ಎರಡು ಪ್ರಮುಖ ನಗರಗಳನ್ನು ನೋಡದಿದ್ದರೆ ಹೇಗೆ. ಇದಕ್ಕಾಗಿಯೇ ಐಆರ್‌ಸಿಟಿಸಿಯ (IRCTC Package) ಈ ಟೂರ್‌ ಪ್ಯಾಕೇಜ್ ನಿಮಗಾಗಿ ಇದೆ. ಎರಡು ರಾತ್ರಿ ಹಾಗೂ 3 ದಿನಗಳನ್ನು ಈ ಪ್ರವಾಸಕ್ಕಾಗಿ ಮೀಸಲಿಟ್ಟರೆ ಸಾಕು. ಕಾರಿನಲ್ಲಿ ಆರಾಮದಾಯಕ ಪ್ರಯಾಣ ಸವಿಯಬಹುದು.

ಕರ್ನಾಟಕದ ಯಾವುದೇ ಮೂಲೆಯಲ್ಲಿದ್ದರೂ ಈ ಪ್ಯಾಕೇಜ್‌ ಆಯ್ಕೆ ಮಾಡಿಕೊಂಡು ಪ್ಯಾಕೇಜ್‌ನಿಂದ ಕೊಡುವಂತೆಯೇ ವಾಸ್ತವ್ಯ ಹೂಡಬಹುದು. ಈ ಪ್ಯಾಕೇಜ್‌ ಅಡಿಯಲ್ಲಿ ನಿಮಗೆ ಕ್ಯಾಬ್‌ ವ್ಯವಸ್ಥೆಯಲ್ಲಿ ಪ್ರವಾಸ ಕರೆದೊಯ್ಯಲಾಗುತ್ತದೆ. ಜೊತೆಗೆ ಎರಡು ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಇರುತ್ತದೆ.

ಪ್ಯಾಕೇಜ್‌ ವೆಚ್ಚವೆಷ್ಟು?

ಒಬ್ಬರಿಗಾದರೆ 25,480 ರೂ ವೆಚ್ಚವಾಗುತ್ತದೆ. ಇಬ್ಬರಿಗೆ ಶೇರಿಂಗ್‌ ಆದರೆ ತಲಾ 13,370 ರೂ ವೆಚ್ಚವಾಗಲಿದೆ. ಮೂವರು ಶೇರಿಂಗ್‌ ಆದರೆ 9,830 ರೂ ವೆಚ್ಚವಾಗುತ್ತದೆ. ಹೀಗಾಗಿ ಇಬ್ಬರು ಅಥವಾ ಮೂವರೊಂದಿಗೆ ಪ್ರಯಾಣಿಸಿ ರೂಮ್‌ ಶೇರಿಂಗ್‌ ಮಾಡಿದರೆ ವೆಚ್ಚ ಕಡಿಮೆಯಾಗಲಿದೆ.

ಮೊದಲನೇ ದಿನ

ಬೆಂಗಳೂರು ರೈಲು ನಿಲ್ದಾಣ, ಬಸ್ ನಿಲ್ದಾಣ ಅಥವಾ ವಿಮಾನ ನಿಲ್ದಾಣದಿಂದ ನಿಮ್ಮನ್ನು ಪಿಕಪ್ ಮಾಡಿ ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಲಾಗುತ್ತದೆ. ಮಧ್ಯಾಹ್ನ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ಗೆ ಭೇಟಿ ನೀಡಿ ಇಲ್ಲಿನ ವೈವಿಧ್ಯಮಯ ಸಸ್ಯ ಪ್ರಭೇದಗಳು ಮತ್ತು ಪ್ರಸಿದ್ಧ ಗಾಜಿನ ಮನೆಯನ್ನು ನೋಡಬಹುದು. ಸಂಜೆ ಶಾಪಿಂಗ್ ಮತ್ತು ಭೋಜನಕ್ಕಾಗಿ ಬ್ರಿಗೇಡ್ ರಸ್ತೆ ಮತ್ತು ಎಂಜಿ ರಸ್ತೆಗೆ ಕರೆದೊಯ್ಯಲಾಗುತ್ತದೆ. ಇಲ್ಲಿ ಸ್ಥಳೀಯ ತಿನಿಸುಗಳನ್ನು ಸವಿಯಬಹುದು. ರಾತ್ರಿಯ ವಾಸ್ತವ್ಯಕ್ಕಾಗಿ ಹೋಟೆಲ್‌ಗೆ ಮತ್ತೆ ಮರಳಬೇಕು.

ಎರಡನೇ ದಿನ

ಬೆಳಗಿನ ಉಪಾಹಾರದ ನಂತರ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ ಮತ್ತು ರಸ್ತೆಯ ಮೂಲಕ ಮೈಸೂರಿಗೆ ಪ್ರಯಾಣ. ಮೊದಲಿಗೆ ಮೈಸೂರು ಅರಮನೆಗೆ ಭೇಟಿ. ನಂತರ ಹೋಟೆಲ್‌ನಲ್ಲಿ ಚೆಕ್ ಇನ್. ತುಸು ವಿಶ್ರಾಂತಿ ಬಳಿಕ ಮಧ್ಯಾಹ್ನ ಚಾಮುಂಡಿ ಬೆಟ್ಟಕ್ಕೆ ಪ್ರಯಾಣ. ಇಲ್ಲಿ ಸಾಂಸ್ಕೃತಿಕ ನಗರದ ವಿಹಂಗಮ ನೋಟವನ್ನು ಆಸ್ವಾದಿಸಿ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ. ಸಂಜೆ ಬೃಂದಾವನ ಉದ್ಯಾನಗಳನ್ನು ನೋಡಬಹುದು. ದಿನದ ಅಂತ್ಯಕ್ಕೆ ಮೈಸೂರಿನಲ್ಲಿ ರಾತ್ರಿ ವಾಸ್ತವ್ಯ.

ಮೂರನೇ ದಿನ

ಬೆಳಗ್ಗಿನ ಉಪಾಹಾರದ ನಂತರ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ ಪ್ರಸಿದ್ಧ ಸೇಂಟ್ ಫಿಲೋಮಿನಾ ಚರ್ಚ್ ನೋಡಬಹುದು. ಬಳಿಕ ಸ್ಥಳೀಯ ಕರಕುಶಲ ವಸ್ತುಗಳ ಖರೀದಿಗೆ ಮೈಸೂರು ಮಾರುಕಟ್ಟೆಗೆ ಭೇಟಿ ನೀಡಿ. ಮಧ್ಯಾಹ್ನ ರಸ್ತೆಯ ಮೂಲಕ ಬೆಂಗಳೂರಿಗೆ ಹಿಂತಿರುಗಿ. ಸಮಯವಿದ್ದರೆ ಇಸ್ಕಾನ್ ದೇವಸ್ಥಾನ ಅಥವಾ ಕಬ್ಬನ್ ಪಾರ್ಕ್‌ಗೆ ಭೇಟಿ ನೀಡಿಬಹುದು. ಆಯ್ಕೆಯ ಅನುಸಾರ ಬೆಂಗಳೂರು ರೈಲ್ವೆ ನಿಲ್ದಾಣ/ಬಸ್ ನಿಲ್ದಾಣ/ವಿಮಾನ ನಿಲ್ದಾಣದಲ್ಲಿ ಇಳಿಯಬಹುದು.

ಇನ್ನಷ್ಟು ಪ್ರವಾಸ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.