ಸೋಲೋ ಟ್ರಿಪ್ ತೆರಳಲು ಪ್ಲಾನ್ ಮಾಡುತ್ತಿದ್ದೀರಾ? ಇಲ್ಲಿವೆ 5 ಬಜೆಟ್ ಫ್ರೆಂಡ್ಲಿ ಪ್ರವಾಸಿ ತಾಣಗಳು
ಕೆಲಸದ ಜಂಜಾಟ ನಡುವೆ ಮನಸ್ಸಿಗೆ ಬೇಸರವಾಗುವುದು, ಅತಿಯಾದ ಒತ್ತಡವು ನೆಮ್ಮದಿ ಕೆಡಿಸುತ್ತದೆ. ಆಗ ಒಂಟಿಯಾಗಿ ಎಲ್ಲಾದರೂ ಸುತ್ತಾಡಬೇಕು ಅನ್ನಿಸುತ್ತದೆ. ಇನ್ನೂ ಕೆಲವರಿಗೆ ಸೋಲೋ ಟ್ರಿಪ್ ಮಾಡಬೇಕು ಎಂಬುದು ಕನಸು. ಕಾರಣ ಯಾವುದೇ ಇರಲಿ ಒಂಟಿಯಾಗಿ ಟ್ರಿಪ್ ಮಾಡಲು ಬಜೆಟ್ ಫ್ರೆಂಡ್ಲಿ ಹಾಗೂ ಸುರಕ್ಷಿತ ಜಾಗ ಹುಡುಕುತ್ತಿದ್ದರೆ, ನಿಮಗಾಗಿ ಇಲ್ಲಿದೆ ಒಂದಿಷ್ಟು ಸಲಹೆ.
ಹಿಂದೆಲ್ಲಾ ಪ್ರವಾಸ ಎಂದರೆ ಕುಟುಂಬಸ್ಥರೆಲ್ಲ ಸೇರಿಕೊಂಡು ಅಥವಾ ಸ್ನೇಹಿತರೆಲ್ಲ ಸೇರಿಕೊಂಡು ಒಂದಾಗಿ ಪ್ಲಾನ್ ಮಾಡಿಕೊಂಡು ಪ್ರವಾಸ ಆಯೋಜಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಸೋಲೋ ಟ್ರಿಪ್ಗಳು ಟ್ರೆಂಡಿಯಾಗಿದೆ. ಒಬ್ಬರೇ ಹೊಸ ಹೊಸ ಜಾಗವನ್ನು ಅನ್ವೇಷಿಸುವ ಮೂಲಕ ಟ್ರಿಪ್ ಎಂಜಾಯ್ ಮಾಡುತ್ತಾರೆ. ಇದೊಂದು ರೀತಿಯಲ್ಲಿ ನಿಮ್ಮನ್ನು ಹೆಚ್ಚೆಚ್ಚು ಸ್ವಾವಲಂಬಿಯಾಗಿಸಿ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತೆ. ನೀವು ಕೂಡ ಸೋಲೋ ಟ್ರಿಪ್ ಮಾಡಬೇಕು ಎಂದು ಪ್ಲಾನ್ ಮಾಡಿದ್ದರೆ ಬಜೆಟ್ ಸ್ನೇಹಿಯಾಗಿರುವ ಈ ಸ್ಥಳಗಳು ನಿಮಗೆ ಉತ್ತಮ ಆಯ್ಕೆ ಎನಿಸಬಹುದು.
ಋಷಿಕೇಶ
ಹಿಮಾಲಯದ ತಪ್ಪಲಿನಲ್ಲಿರುವ ಋಷಿಕೇಶ ಸೋಲೋ ಟ್ರಿಪ್ ಮಾಡಲು ಹೇಳಿ ಮಾಡಿಸಿದಂತಹ ಜಾಗ. ವಿಶ್ವ ಯೋಗ ರಾಜಧಾನಿ ಎಂದೇ ಕರೆಯಲ್ಪಡುವ ಈ ಋಷಿಕೇಶವು ಪ್ರಕೃತಿಯನ್ನು ಪ್ರೀತಿಸುವವರಿಗೆ ಉತ್ತಮ ಆಯ್ಕೆಯಾಗಿದೆ. ಗಂಗಾ ನದಿಯ ತೀರದಲ್ಲಿ ಅಲೆದಾಟ, ಪುರಾತನ ದೇವಾಲಯಗಳ ಅನ್ವೇಷಣೆ, ಯೋಗ ಹಾಗೂ ಧ್ಯಾನ ಇವೆಲ್ಲವೂ ನಿಮಗೆ ದಿನನಿತ್ಯದ ಜಂಜಾಟಗಳಿಂದ ಬ್ರೇಕ್ ಕೊಡಿಸುತ್ತದೆ. ನೀವೇನಾದರೂ ಈ ಸ್ಥಳಕ್ಕೆ ಭೇಟಿ ನೀಡಬೇಕು ಎಂದುಕೊಂಡಿದ್ದರೆ ಗಂಗಾರತಿಯನ್ನು ಮಿಸ್ ಮಾಡಿಕೊಳ್ಳಲೇಬೇಡಿ.
ಹಂಪಿ
ನೀವು ಮೊಟ್ಟ ಮೊದಲನೇ ಬಾರಿಗೆ ಸೋಲೋ ಟ್ರಿಪ್ ಅನುಭವ ಪಡೆಯುವವರಾಗಿದ್ದರೆ ಕರ್ನಾಟಕದಲ್ಲೇ ಇರುವ ಹಂಪಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕರುನಾಡಿನ ಶ್ರೀಮಂತ ಇತಿಹಾಸ ಹಾಗೂ ವಾಸ್ತುಶಿಲ್ಪ ನಿಮ್ಮನ್ನು ಕಳೆದು ಹೋಗುವಂತೆ ಮಾಡುತ್ತದೆ. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಬಗ್ಗೆ ನೀವಿಲ್ಲಿ ಹೆಚ್ಚೆಚ್ಚು ಮಾಹಿತಿಯನ್ನು ಪಡೆದುಕೊಳ್ಳುತ್ತೀರಿ. ಇಲ್ಲಿ ನೀವು ಬೈಸಿಕಲ್ ಬಾಡಿಗೆಗೆ ಪಡೆದು ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸಬಹುದಾಗಿದೆ. ಇದು ಬಜೆಟ್ ಸ್ನೇಹಿ ಸೋಲೋ ಟ್ರಿಪ್ ಸಹ ಆಗಲಿದೆ. ಹಂಪಿಯಲ್ಲಿ ಕೈಗೆಟಕುವ ದರದಲ್ಲಿ ಹೋಟೆಲ್ಗಳು, ಆಹಾರಗಳು ಸಿಗೋದ್ರಿಂದ ಇದು ನಿಜಕ್ಕೂ ಒಂದು ಒಳ್ಳೆಯ ಆಯ್ಕೆ ಎನಿಸಲಿದೆ.
ಪುಷ್ಕರ್
ರಾಜಸ್ಥಾನದ ಹೃದಯಭಾಗದಲ್ಲಿರುವ ಪುಷ್ಕರ್ ಪ್ರದೇಶವು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ತಾಣವಾಗಿದೆ. ಪವಿತ್ರವಾದ ಸರೋವರ ಹಾಗೂ ವಾರ್ಷಿಕವಾಗಿ ನಡೆಯುವ ಒಂಟೆ ಮೇಳಕ್ಕೆ ಪುಷ್ಕರ್ ಹೆಸರುವಾಸಿಯಾಗಿದೆ. ಕಿರಿದಾದ ಹಾದಿಗಳಲ್ಲಿ ಸುತ್ತಾಡುವ ಮೂಲಕ ಆಧ್ಯಾತ್ಮಿಕ ಹಾಗೂ ರಾಜಸ್ಥಾನದ ಸಂಸ್ಕೃತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಇಲ್ಲಿನ ಬ್ರಹ್ಮ ದೇವಾಲಯ ನಿಮಗೆ ಪ್ರಶಾಂತ ವಾತಾವರಣವನ್ನು ಕಲ್ಪಿಸಿಕೊಡುತ್ತದೆ. ಪುಷ್ಕರ್ಗೆ ಭೇಟಿ ನೀಡಿದಾಗ ಇಲ್ಲಿನ ಬೀದಿ ಬದಿ ಆಹಾರದ ರುಚಿ ಸವಿಯೋದನ್ನು ಮಾತ್ರ ಮರೆಯಬೇಡಿ.
ಮೆಕ್ಲಿಯೋಡ್ ಗಂಜ್
ಹಿಮಾಚಲ ಪ್ರದೇಶದಲ್ಲಿರುವ ಮೆಕ್ಲಿಯೋಡ್ ಗಂಜ್ ದಲೈಲಾಮಾರ ನಿವಾಸ ಹಾಗೂ ಟಿಬೇಟಿಯನ್ ವಸಾಹತು ಕೂಡ ಹೌದು. ಪ್ರಶಾಂತ ವಾತಾವರಣವನ್ನು ಹುಡುಕಿಕೊಂಡು ನೀವು ಸೋಲೋ ಟ್ರಿಪ್ ಹೊರಟಿದ್ದರೆ ಧೌಲಾಧರ್ ಶ್ರೇಣಿ ಖಂಡಿತವಾಗಿಯೂ ನಿಮಗೆ ಒಳ್ಳೆಯ ಅನುಭವ ನೀಡಲಿದೆ. ನಮ್ಗ್ಯಾಲ್ ಮಠ, ಟ್ರಿಯುಂಡ್ ಬೆಟ್ಟಕ್ಕೆ ಪಾದಯಾತ್ರೆ ಇವೆಲ್ಲವೂ ಖುಷಿ ನೀಡಲಿದೆ. ಟಿಬೆಟಿಯನ್ ಭಕ್ಷ್ಯಗಳನ್ನು ಸವಿಯುವ ಅವಕಾಶ ಕೂಡ ಇಲ್ಲಿ ಸಿಗುತ್ತದೆ.
ಪಾಂಡಿಚೇರಿ
ಸುಂದರವಾದ ಕಡಲತೀರದಲ್ಲಿ ನಿಮ್ಮ ಸೋಲೋ ಟ್ರಿಪ್ ಎಂಜಾಯ್ ಮಾಡಬೇಕು ಎಂದುಕೊಂಡಿದ್ದರೆ ಪಾಂಡಿಚೇರಿಯನ್ನು ನಿಮ್ಮ ಪ್ರವಾಸಿ ತಾಣವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು. ಪಾಂಡಿಚೇರಿಯ ವಸಾಹತುಶಾಹಿ ಯುಗದ ಶ್ರೀಮಂತ ವಾಸ್ತುಶಿಲ್ಪ ನಿಮ್ಮನ್ನು ಸ್ವಾಗತಿಸಲಿದೆ. ಪಾಂಡಿಚೇರಿಯ ಆಕರ್ಷಕ ಬೀದಿಗಳು ಹಾಗೂ ಸುಂದರವಾದ ಕಡಲ ತೀರದಲ್ಲಿ ವಿಶ್ರಾಂತಿ ಪಡೆಯುವ ಅನುಭವವನ್ನು ವರ್ಣಿಸಲು ಪದಗಳು ಸಿಗಲಿಕ್ಕಿಲ್ಲ. ಇಲ್ಲಿನ ಕೆಫೆಗಳಲ್ಲಿ ಕೈಗೆಟಕುವ ದರದಲ್ಲಿ ರುಚಿಕರವಾದ ಫ್ರೆಂಚ್ ಖಾದ್ಯಗಳು ನಿಮಗೆ ಸಿಗಲಿದೆ.
ವಿಭಾಗ