Travel: ನೀವು ಚಾರಣ ಪ್ರೇಮಿಯಾಗಿದ್ರೆ ಚಿಕ್ಕಮಗಳೂರಿನ ರಾಣಿಜರಿ ಅಂಚಿಗೊಮ್ಮೆ ಭೇಟಿ ಕೊಡಿ, ಈ ಜಾಗ ನಿಮಗಿಷ್ಟ ಆಗೋದು ಪಕ್ಕಾ
Chikamagaluru Trekking Places: ಪ್ರಕೃತಿ ಮತ್ತು ಚಾರಣ ಪ್ರಿಯರ ಅಚ್ಚುಮೆಚ್ಚಿನ ಊರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ ರಾಣಿಜರಿ ಅಂಚು. ದುರ್ಗದಹಳ್ಳಿ ಗ್ರಾಮದಲ್ಲಿರುವ ಈ ಅಂಚು ಬಲ್ಲಾಳರಾಯನದುರ್ಗದ ಕೋಟೆ ಸಮೀಪವಿದೆ. ಚಿಕ್ಕಮಗಳೂರಿನ ಪ್ರವಾಸದಲ್ಲಿ ಒಂದು ದಿನದ ಟ್ರಕ್ಕಿಂಗ್ ಪ್ಲಾನ್ ಮಾಡಿದ್ದರೆ ಇದು ಬೆಸ್ಟ್ ಜಾಗ.
ಕರ್ನಾಟಕದ ಸುಂದರ ಪಶ್ಚಿಮ ಘಟ್ಟದ ಮಡಿಲಲ್ಲಿರುವ ರಾಣಿಜರಿ ಅಂಚು ಘಾಟಿಕಲ್ಲಿನ ಸಮೀಪದಲ್ಲೇ ಇದೆ. ಕುದುರೆಮುಖ ಪ್ರದೇಶದಲ್ಲಿ ರತ್ನದಂತೆ ಎತ್ತರ ಪ್ರದೇಶದಲ್ಲಿ ಕಂಗೊಳಿಸುತ್ತಿದೆ. ಸುತ್ತಲಿನ ಶಿಖರಗಳ ಸೌಂದರ್ಯ, ದಟ್ಟವಾದ ಕಾಡು, ಶ್ರೀಮಂತ ಜೀವವೈವಿಧ್ಯ, ಅಗಾಧ ವನಸಿರಿ, ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಕಡಿದಾದ ದಾರಿ ಸಾಹಸ ಪ್ರಿಯರ ಮತ್ತು ಪ್ರಕೃತಿ ಪ್ರಿಯರ ಸ್ವರ್ಗವಾಗಿದೆ. ಅಲ್ಲಿನ ಸ್ಥಳೀಯರ ಪ್ರಕಾರ, ಮೈಸೂರಿನ ಟಿಪ್ಪು ಸುಲ್ತಾನನಿಂದ ತಪ್ಪಿಸಿಕೊಳ್ಳಲು ರಾಣಿ ಪದ್ಮಿನಿ ದೇವಿಯು ಇಲ್ಲಿಂದ ಜಿಗಿದ ನಂತರ ಈ ಸ್ಥಳಕ್ಕೆ ರಾಣಿಜರಿ ಅಂಚು ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ರಾಣಿಜರಿ ಅಂಚಿನಿಂದ ದಟ್ಟ ಅರಣ್ಯ, ಘಾಟಿಕಲ್ಲು ವ್ಯೂಪಾಯಿಂಟ್, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಮತ್ತು ಬಲ್ಲಾಳರಾಯನ ದುರ್ಗದ ಕೋಟೆಗಳ ವಿಹಂಗಮ ನೋಟವನ್ನು ನೋಡಬಹುದಾಗಿದೆ.
ಎಲ್ಲಿದೆ ರಾಣಿಜರಿ ಅಂಚು?
ಪ್ರಕೃತಿ ಮತ್ತು ಚಾರಣ ಪ್ರಿಯರ ಅಚ್ಚುಮೆಚ್ಚಿನ ಊರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ ರಾಣಿಜರಿ ಅಂಚು. ದುರ್ಗದಹಳ್ಳಿಯಿಂದ 4 ಕಿಮೀ, ಸುಂಕಸಾಲೆಯಿಂದ 7 ಕಿಮೀ, ಕೊಟ್ಟಿಗೆಹಾರದಿಂದ 24 ಕಿಮೀ, ಮೂಡಿಗೆರೆಯಿಂದ 41 ಕಿಮೀ, ಮತ್ತು ಚಿಕ್ಕಮಗಳೂರಿನಿಂದ 70 ಕಿಮೀ ದೂರದಲ್ಲಿರುವ ರಾಣಿ ಜರಿ ಅಂಚು ನೋಡುಗರಿಗೆ ಅದ್ಭುತ ತಾಣ ಎನಿಸುವ ಜಾಗವಾಗಿದೆ. ಕರ್ನಾಟಕದ ದುರ್ಗದಹಳ್ಳಿ ಗ್ರಾಮದಲ್ಲಿರುವ ಈ ಅಂಚು ಬಲ್ಲಾಳರಾಯನದುರ್ಗದ ಕೋಟೆ ಸಮೀಪವಿದೆ. ಚಿಕ್ಕಮಗಳೂರಿನಲ್ಲಿ ಭೇಟಿ ನೀಡಬಹುದಾದ ಉತ್ತಮ ಸ್ಥಳಗಳಲ್ಲಿ ಇದೂ ಒಂದು.
ರಾಣಿಜರಿ ಅಂಚು ತಲುಪಲು ದಾರಿ ಯಾವುದು?
ಚಾರಣ ಮಾರ್ಗವೊಂದೇ ರಾಣಿಜರಿ ಅಂಚು ತಲುಪಲು ಇರುವ ಮಾರ್ಗ. ದುರ್ಗದಹಳ್ಳಿ ಗ್ರಾಮದಿಂದ ದಟ್ಟ ಅರಣ್ಯ ಮಾರ್ಗದಲ್ಲಿ ಸಾಗಿ ಆ ಜಾಗವನ್ನು ತಲುಪಬಹುದು. ದುರ್ಗದಹಳ್ಳಿಯ ಕಾಲಭೈರವೇಶ್ವರ ದೇವಸ್ಥಾನದಿಂದ ಈ ಮಾರ್ಗ ಪ್ರಾರಂಭವಾಗುತ್ತದೆ. ಇದು ಮೂಡಿಗೆರೆಯಿಂದ 41 ಕಿಮೀ. ದೂರದಲ್ಲಿದೆ. ದೇವಸ್ಥಾನದಿಂದ 4 ಕಿಮೀ ಚಾರಣ ರಸ್ತೆಯಲ್ಲಿ ಸಾಗಬೇಕು. ದೇವಸ್ಥಾನದಿಂದಲೇ ಚಾರಣ ಪ್ರಾರಂಭಿಸಬೇಕಾಗುತ್ತದೆ.
ಇದನ್ನೂ ಓದಿ: Tourism: ಪ್ರವಾಸಿಗರು, ಚಾರಣಿಗರನ್ನು ಸೆಳೆಯುತ್ತಿದೆ ದೇವರಮನೆ ಗುಡ್ಡ, ಬೇರೆ ಎಲ್ಲೋ ಅಲ್ಲ ಇದು ಇರೋದು ಕರ್ನಾಟಕದಲ್ಲೇ; ಫೋಟೋ ಗ್ಯಾಲರಿ
ಯಾವ ಸಮಯ ಬೆಸ್ಟ್?
ರಾಣಿಜರಿ ಅಂಚು ಸ್ಥಳಕ್ಕೆ ಭೇಟಿ ನೀಡಲು ಅತ್ಯಂತ ಸೂಕ್ತವಾದ ಸಮಯವೆಂದರೆ ನವೆಂಬರ್ ಮತ್ತು ಮೇ ತಿಂಗಳುಗಳ ನಡುವಿನ ಸಮಯ. ಇದರ ಸಮೀಪ ಯಾವುದೇ ಅಂಗಡಿಗಳಿಲ್ಲದ ಕಾರಣ ಪ್ರವಾಸಿಗರು ತಮಗೆ ಬೇಕಾದ ಸಾಕಷ್ಟು ನೀರು, ಪಾನೀಯ, ಆಹಾರಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ರವರೆಗಿನ ಸಮಯದಲ್ಲಿ ಇಲ್ಲಿಗೆ ಹೋಗುವುದು ಉತ್ತಮ.
ಅಲ್ಲೇನು ನೋಡಬಹುದು?
ರಾಣಿಜರಿ ಅಂಚು ಬರೀ ಟ್ರಕ್ಕಿಂಗ್ ಅಥವಾ ವ್ಯೂಪಾಯಿಂಟ್ ಅಷ್ಟೇ ಅಲ್ಲ. ರಾಣಿಜರಿ ಅಂಚಿನ ಸುತ್ತಲಿನ ಕಾಡುಗಳು ತೇಗ, ಬಿದಿರು, ರೋಸ್‌ವುಡ್, ಹಲವಾರು ಔಷಧೀಯ ಸಸ್ಯಗಳು ಮತ್ತು ಮುಂತಾದ ಅಪರೂಪದ ಸಸ್ಯಗಳಿಂದ ಇದು ಅಲಂಕೃತವಾಗಿದೆ. ಹಾಗಾಗಿ ಅಲ್ಲಿ ಸಸ್ಯ ಪ್ರಭೇದಗಳನ್ನು ನೋಡಬಹುದು. ಅಲ್ಲಿ ಋತುಮಾನದ ಹೂವುಗಳಾದ ಆರ್ಕಿಡ್‌ಗಳನ್ನು ಕಾಣಬಹುದು. ಇಲ್ಲಿ ಚಾರಣಿಗರು ಮಲಬಾರ್ ದೈತ್ಯ ಅಳಿಲು, ಕಾಡೆಮ್ಮೆ, ಸಾಂಬಾರ್ ಜಿಂಕೆ ಮುಂತಾದ ಜೀವಿಗಳನ್ನು ಗುರುತಿಸಬಹುದಾಗಿದೆ. ಇದು ಪಕ್ಷಿ ಪ್ರಿಯರಿಗೆ ಸ್ವರ್ಗವಾಗಿದೆ. ಇಲ್ಲಿ ಸ್ಥಳೀಯ ಪಕ್ಷಿ ಪ್ರಭೇದಗಳನ್ನು ಒಳಗೊಂಡಂತೆ ವಿವಿಧ ರೀತಿಯ ಪಕ್ಷಿಗಳನ್ನು ವೀಕ್ಷಿಸಬಹುದಾಗಿದೆ.