Bisle Ghat: ಬಿಸ್ಲೆ ಘಾಟ್‌ನಲ್ಲಿರುವ ಚಿಟ್ಟೆ ಕಾಡು ನೋಡಿದ್ದೀರಾ? ಈ ಸಲ ಮಿಸ್ ಮಾಡಬೇಡಿ
ಬಣ್ಣ ಬಣ್ಣದ ಸಾವಿರಾರು ಚಿಟ್ಟೆಗಳಿಂದ ತುಂಬಿರುವ ವರ್ಣರಂಜಿತ ಪ್ರಕೃತಿ ಕಣ್ತುಂಬಿಕೊಳ್ಳಬೇಕೆಂಬ ಆಸೆಯಿದ್ದರೆ ಚಿಟ್ಟೆ ಕಾಡಿಗೆ ಹೋಗಿ. ಮಳೆಗಾಲದಲ್ಲಿ ಸಾವಿರಾರು ವಲಸೆ ಚಿಟ್ಟೆಗಳಿಗೆ ಆತಿಥ್ಯ ನೀಡುವ ಈ ಕಾಡು, ಬೇಸಿಗೆಯ ಬಿಸಿಲಿನಿಂದ ಸ್ವಲ್ಪ ರಿಲೀಫ್ ನೀಡುವ ಉತ್ತಮ ಪ್ರವಾಸಿ ತಾಣ. ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುವ ಬಿಸ್ಲೆ ಚಿಟ್ಟೆ ಕಾಡಿಗೆ ತಪ್ಪದೆ ಹೋಗಿ ಬನ್ನಿ.
ಬೇಸಿಗೆ ರಜೆ ಪ್ರಾರಂಭವಾಗಿದೆ. ಈಗಷ್ಟೆ ಮಕ್ಕಳೆಲ್ಲ ಪರೀಕ್ಷೆಗಳನ್ನು ಮುಗಿಸಿ ಮೋಜಿನ ದಿನಗಳನ್ನು ಕಳೆಯುತ್ತಿದ್ದಾರೆ. ವರ್ಷಕ್ಕೊಮ್ಮೆ ಸಿಗುವ ದೊಡ್ಡ ರಜೆಯಲ್ಲಿ ಕುಟುಂಬದ ಸದಸ್ಯರು ಸಹ ಪ್ರವಾಸಕ್ಕೆ ಹೋಗುವ ಯೋಚನೆಯಲ್ಲಿರುವುದನ್ನು ಕಾಣಬಹುದು. ಕೆಲವರಿಗೆ ದೇವಸ್ಥಾನಗಳಂತಹ ಐತಿಹಾಸಕ ಸ್ಥಳಗಳು ಇಷ್ಟವಾದರೆ, ಇನ್ನೂ ಕೆಲವರು ಸಮುದ್ರ, ಬೀಚ್‌ಗಳನ್ನು ಇಷ್ಟ ಪಡುತ್ತಾರೆ. ಪ್ರಕೃತಿ ಪ್ರಿಯರು ಯಾವುದಾದರೂ ಬೆಟ್ಟ, ಕಾಡು ಅಥವಾ ವನ್ಯಜೀವಿ ಅಭಯಾರಣ್ಯಗಳಿಗೆ ಭೇಟಿ ನೀಡುವುದನ್ನು ಆನಂದಿಸುತ್ತಾರೆ. ಈ ರಜೆಯಲ್ಲಿ ನೀವು ಪ್ರಕೃತಿಯ ಮಡಿಲಲ್ಲಿ ದಿನಕಳೆಯಬೇಕೆಂದಿದ್ದರೆ ಬಿಸ್ಲೆ ಘಾಟ್ ಉತ್ತಮ ಆಯ್ಕೆಯಾಗಿದೆ. ಕರ್ನಾಟಕದಲ್ಲಿರುವ ಬಿಸ್ಲೆ ಘಾಟ್ ಮನಸ್ಸಿಗೆ ಮುದ ನೀಡುವ ಲಕ್ಷಾಂತರ ಚಿಟ್ಟೆಗಳ ನೆಲೆಯಾಗಿದೆ. ಇದು ಪಶ್ಚಿಮ ಘಟ್ಟಗಳ ಅತ್ಯಂತ ಸುಂದರವಾದ ತಾಣಗಳಲ್ಲಿ ಒಂದಾಗಿದೆ.
ಕರ್ನಾಟಕದಲ್ಲಿರುವ ಕೆಲವೇ ಕೆಲವು ಹಾಳಾಗದೇ ಉಳಿದ ಅರಣ್ಯಗಳಲ್ಲಿ ಇದೂ ಒಂದು. ಇದು ಭಾರತದ ಅದ್ಭುತ ಮಳೆಕಾಡುಗಳಲ್ಲಿ ಒಂದಾಗಿದೆ. ಹಾಗಾಗಿಯೇ ಇದನ್ನು ಅತಿ ಹೆಚ್ಚು ಆರ್ದ್ರ ಅಥವಾ ತೇವಾಂಶದಿಂದ ಕೂಡಿರುವ ಪ್ರದೇಶ ಎಂದು ಕರೆಯಲಾಗುತ್ತದೆ. ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುವ ಬಿಸ್ಲೆ ಘಾಟ್ ಬೇಸಿಗೆ ಪ್ರವಾಸಕ್ಕೆ ಬೆಸ್ಟ್ ಜಾಗ ಅನ್ನಬಹುದು. ನೀವು ಗಿರಿಧಾಮಗಳಿಗೆ ಭೇಟಿ ನೀಡುವ ಯೊಜನೆಯಿದ್ದರೆ ಬಿಸ್ಲೆ ಘಾಟ್ ನಿಮ್ಮ ಮನ ತಣಿಸಬಲ್ಲದು.
ಕರ್ನಾಟಕದ ಕೊಡಗು, ಮಲ್ನಾಡ್ (ಹಾಸನ ಜಿಲ್ಲೆ) ಮತ್ತು ದಕ್ಷಿಣ ಕನ್ನಡ ಈ ಮೂರು ಪ್ರದೇಶಗಳನ್ನು ಬಿಸ್ಲೆ ಘಾಟ್ ಆವರಿಸಿದೆ. ನಿಮ್ಮ ಇಂದ್ರೀಯಗಳಿಗೆ ರಸದೌತಣ ನೀಡಬಹುದಾದ ಇದು ಬೆಟ್ಟಗಳ ಸಾಲನ್ನು ಹೊದ್ದು ನಿಂತಿದೆ. ಉತ್ತರಕ್ಕೆ ಕಾಗಿನಹರೆ ಅರಣ್ಯದ ಬೆಟ್ಟಗಳು, ದಕ್ಷಿಣದಲ್ಲಿ ಕುಮಾರಧಾರ ನದಿ ಹುಟ್ಟುವ ಕೊಡಗಿನ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ, ಪಶ್ಚಿಮಕ್ಕೆ ಭಾಗಿಮಲೈ ಅರಣ್ಯ ಮತ್ತು ನೈಋತ್ಯಕ್ಕೆ ಕುಮಾರಪರ್ವತ ಮತ್ತು ಕುಕ್ಕೆ ಸುಬ್ರಣ್ಯ ಅರಣ್ಯ ಶ್ರೇಣಿಗಳನ್ನು ಕಾಣಬಹುದು.
ಇದನ್ನೂ ಓದಿ | Char Dham Yatra: ಕೇದಾರನಾಥ, ಬದರಿನಾಥ ಯಾತ್ರೆಗೆ ಹೋಗುವ ಪ್ಲಾನ್ ಇದೆಯಾ; ನೋಂದಣಿ ಮಾಡಿಕೊಳ್ಳುವ ವಿಧಾನ ಹೀಗಿದೆ
ಬೇಸಿಗೆಯ ಬಿರು ಬಿಸಿಲಿಗೆ ಆಹ್ಲಾದವನ್ನುಂಟು ಮಾಡುವ ಬಿಸ್ಲೆ ಘಾಟ್, ಮಳೆಗಾಲದಲ್ಲಿ ವಲಸೆ ಬರುವ ಚಿಟ್ಟೆಗಳಿಗೆ ಆತಿಥ್ಯವನ್ನು ನೀಡುತ್ತದೆ. ಆ ಸಮಯದಲ್ಲಿ ದಟ್ಟ ಕಾಡಿನಲ್ಲಿ ಮೋಡಿಮಾಡುವ ಚಿಟ್ಟೆಗಳನ್ನು ನೀವು ಕಾಣಬಹುದು. ಜೊತೆಗೆ ಹಚ್ಚ ಹಸುರಿನ ನಡುವೆ ಅಪರೂಪದ ಹಕ್ಕಿಗಳ ಚಿಲಿಪಿಲಿ ನಾದವನ್ನು ಕೇಳಬಹುದು. ಮಳೆಗಾಲದ ತಂಪಾದ ವಾತಾವರಣದ ಈ ಕಾಡಿನಲ್ಲಿ ಕಾಣಸಿಗುವ ಸಾವಿರಾರು ಚಿಟ್ಟೆಗಳು ಇಲ್ಲಿನ ನಿಸರ್ಗ ಶ್ರೀಮಂತಿಕೆಯನ್ನು ತೋರಿಸುತ್ತದೆ.
ಇಲ್ಲಿ ಹಲವು ವಿಧದ ಚಿಟ್ಟೆಗಳನ್ನು ಕಾಣಬಹುದು. ವಿಶೇಷ ಬಣ್ಣ, ಆಕಾರಗಳಿಂದ ನೋಡುಗರನ್ನು ಅವು ಆಕರ್ಷಿಸುವುದಂತೂ ಖಂಡಿತ. ಇಲ್ಲಿ ಸಾಮಾನ್ಯವಾಗಿ ಕಾಮನ್ ಬ್ಲೂ, ಬಾಲ್ಕಾ ಪಾರಟ್, ಕಾಮನ್ ಕ್ಯಾಸ್ಟರ್, ಕಾಮನ್ ಗ್ರಾಸ್ ಯೆಲ್ಲೋ, ಕಾಮನ್ ಜೇಯ್, ಕಾಮನ್ ಟೈಗರ್, ಲಿಟಲ್ ಸ್ವಿಫ್ಟ್ ಮುಂತಾದ ಚಿಟ್ಟೆಗಳನ್ನು ಕಾಣಬಹುದು.
ಬಿಸ್ಲೆ ಘಾಟ್‌ನ ಚಿಟ್ಟೆ ಕಾಡು ತಲುಪುವುದು ಹೇಗೆ?
ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರ ಗಿರಿಧಾಮದ ಬಳಿ ಬಿಸ್ಲೆ ಘಾಟ್ ಇದೆ. ನೀವು ಸಕಲೇಶಪುರಕ್ಕೆ ಬಸ್ ಅಥವಾ ರೈಲಿನ ಮೂಲಕ ತಲುಪಬಹುದು. ಸಕಲೇಶಪುರದಿಂದ 45 ಕಿಮೀಗಳಷ್ಟು ದೂರವಿರುವ ಬಿಸ್ಲೆ ಘಾಟ್ ತಲುಪಲು ಟ್ಯಾಕ್ಸಿ ಅಥವಾ ಬಸ್ ಸಹಾಯ ಪಡೆದುಕೊಳ್ಳಬೇಕಾಗುತ್ತದೆ. ನೀವು ಕುಕ್ಕೆ ಸುಬ್ರಮಣ್ಯಕ್ಕೆ ಬಂದಿದ್ದರೆ, ಬಿಸ್ಲೆಗೆ ಹೋಗುವುದು ಇನ್ನೂ ಸುಲಭ. ಸುಬ್ರಮಣ್ಯದಿಂದ ಕೇವಲ 25 ಕಿಮೀ ಸುಂದರ ಕಾಡಿನ ರಸ್ತೆಯಲ್ಲಿ ಪ್ರಯಾಣಿಸಿದರೆ ಬಿಸ್ಲೆ ತಲುಪುವಿರಿ.
ನೀವು ಪ್ರಕೃತಿ ಪ್ರೇಮಿಯಾಗಿದ್ದರೆ ಹಚ್ಚ ಹಸುರಿನ ಕಾಡಿಗೆ ಭೇಟಿ ನೀಡದೆ ಇರಲು ಸಾಧ್ಯವೇ ಇಲ್ಲ. ಮಳೆಗಾಲದಲ್ಲಿ ಬಿಸ್ಲೆ ಘಾಟ್‌ಗೆ ಭೇಟಿ ನೀಡಿದರೆ ಚಿಟ್ಟೆಗಳ ಜೊತೆಗೆ ಅಪರೂಪದ ವಲಸೆ ಹಕ್ಕಿಗಳನ್ನು ನೋಡಬಹುದು. ಬೇಸಿಗೆ ದಿನಗಳಲ್ಲೂ ಬಿಸ್ಲೆ ಘಾಟ್ ಉತ್ತಮ ಪ್ರವಾಸಿ ತಾಣವಾಗಿದೆ. ಬೇಸಿಗೆ ಬಿಸಿಲಿನಿಂದ ಕೊಂಚ ಆರಾಮ ಪಡೆದುಕೊಳ್ಳಲು ಇಂತಹ ಕಾಡುಗಳೇ ಬೆಸ್ಟ್.