Tourism: 2023ರಲ್ಲಿ ಭಾರತೀಯರು ಹುಡುಕಿದ ಟಾಪ್ 10 ಪ್ರವಾಸಿತಾಣಗಳ ಪಟ್ಟಿ ಇಲ್ಲಿದೆ; ಕರ್ನಾಟಕದ ಕೂರ್ಗ್‌ಗೂ ಇದೆ ಸ್ಥಾನ
ಹಳೆ ವರ್ಷ ಅಂತ್ಯವಾಗಿ ಹೊಸ ವರ್ಷ ಆರಂಭವಾಗುವ ಹೊತ್ತಿನಲ್ಲಿ ಈ ಒಂದು ವರ್ಷ ಏನೆಲ್ಲಾ ನಡೆಯಿತು ಎಂಬುದನ್ನು ಮೆಲುಕು ಹಾಕುವುದು ಸಹಜ. ಇದೀಗ ಗೂಗಲ್ 2023ರಲ್ಲಿ ಭಾರತೀಯರು ಹೆಚ್ಚು ಹುಡುಕಿದ ಟಾಪ್ 10 ಪ್ರವಾಸಿ ತಾಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯಾವೆಲ್ಲಾ ಸ್ಥಳಗಳನ್ನು ಭಾರತೀಯ ಪ್ರವಾಸಿಗರು ಹುಡುಕಿದ್ದಾರೆ ನೋಡಿ.
2023... ಭಾರತ ಮಾತ್ರವಲ್ಲ, ಪ್ರಪಂಚದಾದ್ಯಂತ ಇರುವ ಪ್ರವಾಸಿಗರು ರೆಕ್ಕೆ ಬಿಚ್ಚಿದ ವರ್ಷ. ಈ ವರ್ಷ ಪ್ರವಾಸ ಮಾಡುವವರ ಸಂಖ್ಯೆ ದ್ವಿಗುಣವಾಗಿದ್ದು ಸುಳ್ಳಲ್ಲ. ಕೊರೊನಾ ಎಂಬ ಮಹಾಮಾರಿಯ ಕಾರಣ ಮೂರ್ನಾಲ್ಕು ವರ್ಷಗಳು ಎಲ್ಲಿಯೂ ತೆರಳಲು ಸಾಧ್ಯವಾಗಿರಲಿಲ್ಲ. ಹಲವಾರು ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧವಿತ್ತು. 2023 ಮತ್ತೆ ಪ್ರಪಂಚದಾದ್ಯಂತ ಪ್ರವಾಸೋದ್ಯಮ ಚಿಗುರೊಡೆದಿತ್ತು. ಅದೆಲ್ಲಾ ಸರಿ ಈಗ 2023 ಮುಗಿಯುತ್ತಾ ಬಂದಿದೆ. 2024ನೇ ವರ್ಷಕ್ಕೆ ಕಾಲಿಡಲು ಸಮೀಪದಲ್ಲಿರುವ ಈ ಹೊತ್ತಿನಲ್ಲಿ 2023ರಲ್ಲಿ ಭಾರತೀಯ ಪ್ರವಾಸಿಗರು ಹೆಚ್ಚು ಸರ್ಚ್ ಮಾಡಿದ ಟಾಪ್ 10 ಪ್ರವಾಸಿ ತಾಣಗಳನ್ನು ಗೂಗಲ್ ಬಿಡುಗಡೆ ಮಾಡಿದೆ. ಹಾಗಾದರೆ ಭಾರತೀಯರು ಹೆಚ್ಚು ಹುಡುಕಿದ ಜಾಗಗಳು ಯಾವುವು, ಇದರಲ್ಲಿ ಭಾರತದ ತಾಣಗಳು ಎಷ್ಟಿವೆ, ಭಾರತೀಯರು ಹುಡುಕಿದ ತಾಣಗಳಲ್ಲಿ ಏನೆಲ್ಲಾ ಚಟುವಟಿಕೆ ಮಾಡಬಹುದು ಎಂಬುದರ ವಿವರ ಇಲ್ಲಿದೆ.
ವಿಯೆಟ್ನಾಂ
ವಿಯೆಟ್ನಾಂ ಐಷಾರಾಮಿ ಇತಿಹಾಸ ಹೊಂದಿರುವ ದೇಶ. ಅದ್ಭುತ ಸಂಸ್ಕೃತಿ ಹಾಗೂ ಪ್ರಾಕೃತಿಕ ಸೌಂದರ್ಯ ಹೊಂದಿರುವ ದೇಶ. ಹನೋಯಿಯ ಬೀದಿಗಳು, ಹಾ ಲಾಂಗ್ ಬೇನ ಪ್ರಶಾಂತ ವಾತಾವರಣ ಹೋಯಿ ಆನ್‌ನ ಐತಿಹಾಸಿಕ ಮೋಡಿ ಈ ದೇಶದಲ್ಲಿ ಈ ನಿಮಗೆ ವೈವಿಧ್ಯಮಯ ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ.
ಗೋವಾ
ಗೋವಾ ಭಾರತೀಯರು ಮಾತ್ರವಲ್ಲ ವಿದೇಶಿಗರಿಗೂ ಇಷ್ಟವಾಗುವ ತಾಣ. ಸುಂದರವಾಗಿ ಉದ್ದಕ್ಕೂ ಹರಡಿರುವ ಬೀಚ್‌ಗಳು, ಕ್ಯಾಸಿನೊಗಳು, ಪಾಶ್ಚಾತ್ಯ ಹಾಗೂ ಭಾರತೀಯ ಸಂಸ್ಕೃತಿ ಸಮ್ಮಿಳಿತ ಸೇರಿದಂತೆ ಗೋವಾವು ಎಲ್ಲರಿಗೂ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ಹೊಸ ವರ್ಷಾಚರಣೆಯಂತೂ ಗೋವಾದಲ್ಲಿ ಸಖತ್ ಆಗಿರುವುದರಲ್ಲಿ ಎರಡು ಮಾತಿಲ್ಲ. ಆ ಕಾರಣಕ್ಕೆ ಹಲವರು ತಮ್ಮ ಇಯರ್ ಎಂಡ್ ಪಾರ್ಟಿಯನ್ನು ಗೋವಾದಲ್ಲಿ ಆಯೋಜಿಸುತ್ತಾರೆ.
ಬಾಲಿ
ಭಾರತೀಯರು ಹೆಚ್ಚು ಹುಡುಕಿದ ಪ್ರವಾಸಿ ತಾಣಗಳ ಪೈಕಿ ಬಾಲಿ ಮೂರನೇ ಸ್ಥಾನದಲ್ಲಿದೆ. ಇಂಡೋನೇಷ್ಯಾದ ಹೃದಯಭಾಗದಲ್ಲಿರುವ ಬಾಲಿಯು ಮೋಡಿ ಮಾಡುವ ಸುಂದರ ದ್ವೀಪ ರಾಷ್ಟ್ರವಾಗಿದೆ. ಆಧ್ಯಾತ್ಮಿಕ ಮನೋಭಾವದವರಿಗೂ ಬಾಲಿ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ರೋಮಾಂಚಕ ಜಲಕ್ರೀಡೆಗಳು ಪ್ರವಾಸಿಗರನ್ನು ಸೆಳೆಯುತ್ತದೆ. ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ನೈಸರ್ಗಿಕ ಸೌಂದರ್ಯವನ್ನು ಸವಿಯಲು ಬಾಲಿ ಹೇಳಿ ಮಾಡಿಸಿದ ತಾಣ.
ಶ್ರೀಲಂಕಾ
ಭಾರತೀಯರು ಅತಿ ಹೆಚ್ಚು ಹುಡುಕಿದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಶ್ರೀಲಂಕಾ 4ನೇ ಸ್ಥಾನದಲ್ಲಿದೆ. ಇನ್ನಂತೂ ಶ್ರೀಲಂಕಾ ವೀಸಾ ಫ್ರಿ ದೇಶವಾಗಿದೆ. ನಾವು ಈ ವೀಸಾ ಇಲ್ಲದೆ ಶ್ರೀಲಂಕಾಕ್ಕೆ ಪ್ರವೇಶ ಮಾಡಬಹುದು. ಜೊತೆಗೆ ಅಲ್ಲಿನ ಪ್ರವಾಸೋದ್ಯಮ ಸವಿಯನ್ನು ಸವಿಯಬಹುದು. ಪುರಾತನ ಅವಶೇಷಗಳು, ಪವಿತ್ರ ದೇವಾಲಯಗಳು, ಕಡಲತೀರಗಳು ಹಾಗೂ ಸುತ್ತಲೂ ಹರಡಿರುವ ಚಹಾ ತೋಟಗಳು ನಮಗೆ ಖುಷಿ ನೀಡುವುದರಲ್ಲಿ ಎರಡು ಮಾತಿಲ್ಲ.
ಥಾಯ್ಲೆಂಡ್
ಲ್ಯಾಂಡ್ ಆಫ್ ಸ್ಮೈಲ್ಸ್ ಎಂದು ಕರೆಸಿಕೊಳ್ಳುವ ಥಾಯ್ಲೆಂಡ್ ಭಾರತೀಯರು ಹುಡುಕಿ ಟಾಪ್ 10 ಪ್ರವಾಸಿ ತಾಣಗಳ ಪಟ್ಟಿಯಲ್ಲಿದೆ. ಬ್ಯಾಂಕಾಕ್‌ನ ಗದ್ದಲದ ಮಾರುಕಟ್ಟೆ, ದೇವಾಲಯಗಳಿಂದ ಕೂಡಿರುವ ಫುಕೆಟ್, ಕೊಹ್ ಫಿಯಂತಹ ಉಷ್ಣವಲಯದ ದ್ವೀಪಗಳ ಅಂದವನ್ನು ನೀವು ಇಲ್ಲಿ ಕಣ್ತುಂಬಿಕೊಳ್ಳಬಹುದು. ಈ ದೇಶವು ಸಾಂಸ್ಕೃತಿಕ ಪರಂಪರೆ ಹಾಗೂ ನೈಸರ್ಗಿಕ ಅದ್ಭುತಗಳಿಂದ ಮೋಡಿ ಮಾಡುತ್ತದೆ.
ಕಾಶ್ಮೀರ
ಕಾಶ್ಮೀರ ಭಾರತದ ಮುಕುಟ. ಕಾಶ್ಮೀರದ ಸೊಬಗನ್ನು ಬಣ್ಣಿಸಲು ಪದಗಳೇ ಇಲ್ಲ ಎನ್ನಬಹುದು. ವರ್ಷದ 24 ಗಂಟೆಯೂ ಹಿಮಚ್ಛಾದಿತವಾಗಿರುವ ಈ ಪ್ರವಾಸಿ ತಾಣಕ್ಕೆ ವರ್ಷದಲ್ಲಿ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಭಾರತೀಯರು ಅತಿ ಹೆಚ್ಚು ಹುಡುಕಿದ ಪ್ರವಾಸಿತಾಣಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಕೊಡಗು
ಕರ್ನಾಟಕ ಕಾಶ್ಮೀರ ಎಂದೇ ಕರೆಸಿಕೊಳ್ಳುವ ಕೂರ್ಗ್ ಅಥವಾ ಕೊಡಗು ಕೂಡ ಭಾರತದಲ್ಲಿ ಅತಿ ಹೆಚ್ಚು ಸರ್ಚ್ ಮಾಡಿರುವ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಅದ್ಭುತ ಪ್ರಕೃತಿ ಸೌಂದರ್ಯ, ನದಿ, ತೊರೆಗಳು, ಕಾಫಿ ಪರಿಮಳ, ಬೆಟ್ಟ ಗುಡ್ಡಗಳ ಸುಂದರ ವಾತಾವರಣದಲ್ಲಿ ಒಂದೆರಡು ದಿನ ಹಾಯಾಗಿ ಸಮಯ ಕಳೆಯಬೇಕು ಅಂದ್ರೆ ನೀವು ಕೂರ್ಗ್‌ಗೆ ಭೇಟಿ ನೀಡಬೇಕು. ಇದನ್ನು ಭಾರತದ ಸ್ಕಾಟ್ಲೆಂಡ್ ಎಂದೂ ಕೂಡ ಕರೆಯುತ್ತಾರೆ.
ಅಂಡಮಾನ್ ನಿಕೋಬರ್ ದ್ವೀಪಗಳು
ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು ಭಾರತೀಯರು ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣವಾಗಿದೆ. ಇದು ಬಂಗಾಳಕೊಲ್ಲಿಯಲ್ಲಿರುವ ದ್ವೀಪಸಮೂಹವಾಗಿದೆ. ಇಲ್ಲಿನ ಬಿಳಿ ಮರಳಿನ ಕಡಲತೀರಗಳು, ಮ್ಯಾಂಗ್ರೋ ಕಾಡುಗಳು, ತಿಳಿ ನೀಲಿ ಕಡಲು, ರುದ್ರ ರಮಣೀಯ ಪ್ರಕೃತಿ ಸೌಂದರ್ಯಕ್ಕೆ ಈ ತಾಣ ಹೆಸರುವಾಸಿಯಾಗಿದೆ.
ಇಟಲಿ
ಭಾರತೀಯರು ಹೆಚ್ಚು ಹುಡುಕಿದ ಪ್ರವಾಸಿತಾಣ ಪಟ್ಟಿಯಲ್ಲಿ ಇಟಲಿ 9ನೇ ಸ್ಥಾನದಲ್ಲಿದೆ. ಯರೋಪ್‌ನ ಹೃದಯ ಭಾಗದಲ್ಲಿರುವ ಇಟಲಿಗೆ ಪ್ರವಾಸ ಮಾಡಬೇಕು ಎನ್ನುವುದು ಪ್ರತಿಯೊಬ್ಬ ಪ್ರವಾಸಿಗನ ಕನಸಾಗಿದೆ. ಶ್ರೀಮಂತ ಪ್ರಾಚೀನ ಇತಿಹಾಸ, ಭಿನ್ನ ರುಚಿಕರ ಪಾಕ ಪದ್ಧತಿ, ಕಲಾ ಸಂಸ್ಕೃತಿಯ ಕಾರಣದಿಂದ ಇಟಲಿ ಪ್ರವಾಸ ಮಾಡಲು ಭಾರತೀಯರು ಇಷ್ಟಪಡುತ್ತಾರೆ.
ಸ್ವಿಟ್ಜರ್ಲೆಂಡ್
ಭಾರತೀಯರು 2023ರಲ್ಲಿ ಹುಡುಕಿದ ಪ್ರವಾಸಿತಾಣಗಳ ಪೈಕಿ 10ನೇ ಸ್ಥಾನ ಪಡೆದಿದೆ ಸ್ವಿಟ್ಜರ್ಲೆಂಡ್. ಇದು ಪ್ರವಾಸಿಗರ ಸ್ವರ್ಗ ಎಂದರೂ ತಪ್ಪಾಗಕ್ಕಿಲ್ಲ. ಸದಾ ಹಿಮಚ್ಛಾದಿತವಾಗಿರುವ ಈ ದೇಶವನ್ನು ಇಷ್ಟಪಡದವರು ಕಡಿಮೆ. ಸ್ಪಟಿಕ ಸ್ಪಷ್ಟ ಸರೋವರಗಳು, ಗಮನ ಸೆಳೆವ ಹಳ್ಳಿ ವಾತಾವರಣ ಮನಸ್ಸಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.