Kunti Betta: ಚಾರಣಿಗರ ಸ್ವರ್ಗ ಮಂಡ್ಯದ ಕುಂತಿಬೆಟ್ಟಕ್ಕೆ ತೆರಳುವ ಮುನ್ನ ಈ ಜಾಗದ ಐತಿಹ್ಯ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Kunti Betta: ಚಾರಣಿಗರ ಸ್ವರ್ಗ ಮಂಡ್ಯದ ಕುಂತಿಬೆಟ್ಟಕ್ಕೆ ತೆರಳುವ ಮುನ್ನ ಈ ಜಾಗದ ಐತಿಹ್ಯ ತಿಳಿಯಿರಿ

Kunti Betta: ಚಾರಣಿಗರ ಸ್ವರ್ಗ ಮಂಡ್ಯದ ಕುಂತಿಬೆಟ್ಟಕ್ಕೆ ತೆರಳುವ ಮುನ್ನ ಈ ಜಾಗದ ಐತಿಹ್ಯ ತಿಳಿಯಿರಿ

ಬೆಂಗಳೂರಿನ ಬ್ಯುಸಿ ಲೈಫ್‌ನಿಂದ ಬೇಸರವಾಗಿದ್ದು, ಒಂದು ದಿನ ಆರಾಮಾಗಿ ಎಂಜಾಯ್‌ ಮಾಡಬೇಕು ಅಂತಿದ್ರೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕೆಂಚೇನಹಳ್ಳಿಯಲ್ಲಿರುವ ಕುಂತಿಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೋಗಬಹುದು. ಈ ತಾಣವನ್ನು ಚಾರಣಿಗರ ಸ್ವರ್ಗ ಅಂತಲೇ ಕರೆಯಬಹುದು. ಇಲ್ಲಿಗೆ ಹೋಗುವ ಮುನ್ನ ಇಲ್ಲಿನ ಇತಿಹಾಸ ತಿಳಿಯಿರಿ.

ಕುಂತಿಬೆಟ್ಟ
ಕುಂತಿಬೆಟ್ಟ (insider.in)

ಟ್ರೆಕ್ಕಿಂಗ್‌ ಹೋಗೋದು ಹಲವರ ನೆಚ್ಚಿನ ಹವ್ಯಾಸ. ಟ್ರೆಕ್ಕಿಂಗ್‌ ದೇಹಕ್ಕೆ ಕಷ್ಟ ಎನ್ನಿಸಿದ್ರು ಮನಸ್ಸಿಗೆ ಖುಷಿ ನೀಡುತ್ತದೆ. ಬೆಂಗಳೂರಿನಲ್ಲಿ ಇರೋರಿಗಂತೂ ಟ್ರೆಕ್ಕಿಂಗ್‌ ಮಾಡೋಕೆ ಸುತ್ತಮುತ್ತ ಸಾಕಷ್ಟು ಜಾಗಗಳಿವೆ. ಅವುಗಳಲ್ಲಿ ಮಂಡ್ಯದ ಕುಂತಿ ಬೆಟ್ಟವೂ ಒಂದು. ಇದನ್ನು ಚಾರಣಿಗರ ಸ್ವರ್ಗ ಅಂತಲೂ ಕರೆಯುತ್ತಾರೆ.

ಈ ಕುಂತಿಬೆಟ್ಟ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿದೆ. ಎರಡು ಬೆಟ್ಟಗಳ ನಡುವಿನ ಸುಂದರ ಬೆಟ್ಟ ಇದಾಗಿದ್ದು, ಚಾರಣಕ್ಕೆ ಹೇಳಿ ಮಾಡಿಸಿದಂತಿದೆ. ಈ ಬೆಟ್ಟ ಏರಿ ನೋಡಿದಾಗ ಕಾಣುವ ಅದ್ಭುತ ದೃಶ್ಯಸಿರಿಗಳು ಕಣ್ಮನ ಸೆಳೆಯುವುದು ಖಂಡಿತ.

ಸುತ್ತಲೂ ಭತ್ತದ ಗದ್ದೆಗಳು, ಕಬ್ಬಿನಗದ್ದೆಗಳು ಹಾಗೂ ತೆಂಗಿನಮರಗಳಿಂದ ಕೂಡಿದ್ದು, ರಮ್ಯ ಮನೋಹರ ಎನ್ನಿಸುವುದು ಖಂಡಿತ. ಜೊತೆಗೆ ಅಗಲವಾಗಿ ಹರಡಿರುವ ಕೆರೆ ಕೂಡ ನೋಡಲು ಅದ್ಭುತವಾಗಿರುತ್ತದೆ.

18ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನ್‌ ಅವರಿಗೆ ಸಹಾಯ ಮಾಡಲ ಬಂದ ಫ್ರೆಂಚ್‌ ಸೈನಿಕರ ರೆಜಿಮೆಂಟ್‌ ಇಲ್ಲಿ ನೆಲೆಸಿತ್ತು. ಆ ಕಾರಣಕ್ಕೆ ಇದನ್ನು ಫ್ರೆಂಚ್‌ ಬಂಡೆಗಳು ಎಂದೂ ಕರೆಯುತ್ತಾರೆ.

ಮದ್ರಾಸ್‌ ಪದಾತಿ ಸೈನ್ಯದ ಒಂದು ರೆಜಿಮೆಂಟ್‌ ಕೂಡ 1881ರವರೆಗೆ ಇಲ್ಲಿ ಕಂಟೋನ್ಮೆಂಟ್‌ನಲ್ಲಿ ನೆಲೆಸಿತ್ತು. ಆಗ ಅದನ್ನು ಮಿಲಿಟರಿ ಸ್ಟೇಷನ್‌ ಆಗಿ ಬಿಟ್ಟುಕೊಡಲಾಗಿತ್ತು.

ಫ್ರೆಂಚ್‌ ಸ್ಮಶಾನ

ಪಾಂಡವಪುರ ಹೊರ ವಲಯದಲ್ಲಿರುವ ಹಳೆಯ ಸ್ಮಶಾನದಲ್ಲಿ ಮದ್ರಾಸ್ ರೆಜಿಮೆಂಟ್ ಮತ್ತು ಇತರ ಸೈನ್ಯದ ಸೈನಿಕರ ಸಮಾಧಿಗಳಿವೆ. ಈ ಐತಿಹಾಸಿಕ ಗೋರಿಗಳು ಸದ್ಯ ದುಸ್ಥಿತಿಯಲ್ಲಿವೆ. ನಿರ್ಲಕ್ಷ್ಯದ ಕಾರಣದಿಂದ ಈ ಜಾಗವು ಪಾಳು ಬಿದ್ದಂತಿದೆ.

ಅದ್ಯಾಗೂ ಇಲ್ಲಿ ಸಮಾಧಿ ಮಾಡಿದ ಕೆಲವರ ಹೆಸರನ್ನು ಗುರುತಿಸಬಹುದಾಗಿದೆ ಹಾಗೂ ಅವರ ವಿವರಗಳು ದಾಖಲಾಗಿದ್ದು, ನಾವು ಕಾಣಬಹುದಾಗಿದೆ. ಇಲ್ಲಿನ ಸಮಾಧಿಗಳ ಮೇಲೆ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: Travel: ಭಾರತೀಯರಿಗೆ ಶ್ರೀಲಂಕಾ ಪ್ರವಾಸವಿನ್ನು ಸುಲಭ; ಈ ದೇಶದಲ್ಲಿ ಕಡಿಮೆ ಖರ್ಚಿನಲ್ಲಿ ನೋಡಬಹುದಾದ 6 ಅದ್ಭುತ ತಾಣಗಳಿವು

ಪೌರಾಣಿಕ ಕಥೆಗಳು

ಪಾಂಡವಪುರ ಎಂಬ ಹೆಸರು ಪಾಂಡವರ ಕಾಲದಿಂದ ಬಂದಿದ್ದು ಎನ್ನಲಾಗುತ್ತದೆ. ವನವಾಸದ ಸಮಯದಲ್ಲಿ ಪಾಂಡವರು ತಮ್ಮ ತಾಯಿ ಕುಂತಿಯೊಂದಿಗೆ ಕೆಲವು ದಿನಗಳ ಕಾಲ ಇಲ್ಲಿ ವಾಸವಿದ್ದರು ಎಂದು ಹೇಳಲಾಗುತ್ತದೆ. ಬೆಟ್ಟದ ಮೇಲಿರುವ ಕಲ್ಲಿನ ಸಂಭ್ತವನ್ನು ಕುಂತಿ ಬಳಸುತ್ತಿದ್ದರು ಎಂಬ ನಂಬಿಕೆ ಇದೆ. ಇಲ್ಲಿರುವ ದೇವಾಲಯವೂ ಕುಂತಿಯೊಂದಿಗೆ ಸಂಬಂಧ ಹೊಂದಿದೆ. ಬೆಟ್ಟಗಳ ಕೆಳಗೆ ಹರಿಯುವ ಮಳೆನೀರಿನಿಂದ ರೂಪುಗೊಂಡ ಕೊಳವನ್ನು 'ಕುಂತಿ ಕುಂಡ' ಎಂದು ಕರೆಯಲಾಗುತ್ತದೆ.

ಭೀಮ ಹಾಗೂ ಬಕಾಸುರನಿಗೆ ಸಂಬಂಧಿಸಿದ ದಂತಕಥೆಗಳೂ ಈ ಬೆಟ್ಟದ ಜೊತೆಗೆ ತಳುಕು ಹಾಕಿಕೊಂಡಿವೆ. ರಾಕ್ಷಸ ಬಕಾಸುರನನ್ನು ಇಲ್ಲಿ ಕೊಲ್ಲಲಾಯಿತು ಎಂದು ದಂತಕಥೆಗಳು ಹೇಳುತ್ತವೆ. ಈ ಬೆಟ್ಟದ ಮೇಲೆ ದೈತ್ಯ ಹೆಜ್ಜೆ ಗುರುತುಗಳಿದ್ದು ಇದನ್ನು ಭೀಮನ ಪಾದ ಎಂದು ಕರೆಯಲಾಗುತ್ತದೆ. ಈ ಕುಂತಿ ಬೆಟ್ಟದಲ್ಲಿ ಮಲ್ಲಿಕಾರ್ಜುನ ಹಾಗೂ ಶ್ರೀರಾಮ ದೇವಾಲಯಗಳೂ ಇವೆ. ಅಲ್ಲದೆ ಇತರ ಸಣ್ಣ ದೇವಾಲಯಗಳನ್ನೂ ನೋಡಬಹುದಾಗಿದೆ.

ಚಾರಣಿಗರ ನೆಚ್ಚಿನ ತಾಣ

ಕುಂತಿ ಬೆಟ್ಟವು ಸುಮಾರು 900 ಮೀಟರ್‌ ಎತ್ತರವಿದೆ. ಇಲ್ಲಿ ಕಡಿದಾದ ದಾರಿ ಇರುವ ಕಾರಣಕ್ಕೆ ಬೆಟ್ಟ ಹತ್ತಲು ಹಾಗೂ ಇಳಿಯುವುದು ಸವಾಲು ಎನ್ನಿಸುತ್ತದೆ. ಆದರೆ ಟ್ರೆಕ್ಕಿಂಗ್‌ ಪ್ರಿಯರಿಗೆ ಇಂದು ಖಂಡಿತ ಹೇಳಿ ಮಾಡಿಸಿದ ಜಾಗ. ಬೆಟ್ಟದ ತುದಿಯನ್ನು ಏರಿದ ಮೇಲೆ ಕಾಣುವ ವಿಹಂಗಮ ನೋಟವು ನಿಮ್ಮ ಆಯಾಸವನ್ನು ಖಂಡಿತ ಮರೆಸುತ್ತದೆ.

ಹಸಿರಿನಿಂದ ಕಂಗೊಳಿಸುವ ಭೂ ಪ್ರದೇಶದ ಜೊತೆಗೆ 10 ಕಿಲೋಮೀಟರ್‌ ದೂರದಲ್ಲಿರುವ ತೊಣ್ಣೂರು ಕರೆಯ ಅಂದವನ್ನು ಮನಸೂರೆಗೊಳ್ಳುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ.

ಈ ಬೆಟ್ಟಕ್ಕೆ ರಾತ್ರಿ ವೇಳೆ ಕೂಡ ಟ್ರೆಕ್ಕಿಂಗ್‌ ಮಾಡಬಹುದಾಗಿದೆ. ಜೊತೆಗೆ ಇಲ್ಲಿ ಫೈರ್‌ ಕ್ಯಾಂಪ್‌ ಕೂಡ ಮಾಡಬಹುದು.

ಬೆಂಗಳೂರಿನಿಂದ ಕುಂತಿ ಬೆಟ್ಟ ತಲುಪಲು ಶ್ರೀರಂಗಪಟ್ಟಣ ಅಥವಾ ಮಂಡ್ಯಕ್ಕೆ ಹೋಗಬಹುದು. ಪಾಂಡವಪುರ ರೈಲು ನಿಲ್ದಾಣದಿಂದ ಕುಂತಿಬೆಟ್ಟ 8 ಕಿಲೋಮೀಟರ್‌ ದೂರದಲ್ಲಿದೆ. ಬೆಂಗಳೂರಿನಿಂದ ಕೇವಲ 125 ಕಿಲೋಮೀಟರ್‌ ದೂರದಲ್ಲಿದ್ದು ಒನ್‌ ಡೇ ಟ್ರಿಪ್‌ಗೆ ಹೇಳಿ ಮಾಡಿಸಿದ ಜಾಗ ಇದಾಗಿದೆ.

Whats_app_banner