ಅಕ್ಟೋಬರ್ ರಜೆಯಲ್ಲಿ ಮಕ್ಕಳನ್ನು ಕರ್ಕೊಂಡು ಪ್ರವಾಸ ಹೋಗೋ ಪ್ಲಾನ್ ಇದೆಯಾ, ಹಾಗಾದ್ರೆ ಇಲ್ಲಿದೆ ಕರ್ನಾಟಕದ 10 ಬೆಸ್ಟ್ ಪ್ಲೇಸಸ್
ಅಕ್ಟೋಬರ್ ಬಂತೆಂದ್ರೆ ಕೇಳಬೇಕಾ? ಹಬ್ಬ ಹರಿದಿನ, ರಜೆ ಹೀಗೆ ಒಟ್ಟಂದದಲ್ಲಿ ಸಂಭ್ರಮ, ಸಡಗರ. ಅಂದ ಹಾಗೆ, ಅಕ್ಟೋಬರ್ ರಜೆಯಲ್ಲಿ ಮಕ್ಕಳನ್ನು ಕರ್ಕೊಂಡು ಪ್ರವಾಸ ಹೋಗೋ ಪ್ಲಾನ್ ಇದೆಯಾ, ಹಾಗಾದ್ರೆ ಇಲ್ಲಿದೆ ಕರ್ನಾಟಕದ 10 ಬೆಸ್ಟ್ ಪ್ಲೇಸಸ್‌ಗಳ ಕಿರು ವಿವರ ಇಲ್ಲಿದೆ. ನೋಡ್ಕೊಂಡು ಪ್ಲಾನ್ ಮಾಡ್ಕೊಳ್ಳಬಹುದು.
ಬೆಂಗಳೂರು: ಅಕ್ಟೋಬರ್ ರಜೆ ಇನ್ನೇನು ಬಂದೇ ಬಿಡ್ತು. ಈ ಸಲ ಮಕ್ಕಳನ್ನು ಕರ್ಕೊಂಡು ಕರ್ನಾಟಕದಲ್ಲಿ ಎಲ್ಲಿಗೆ ಹೋಗಬಹುದು ಎಂಬ ಆಲೋಚನೆಯಲ್ಲಿದ್ದೀರಾ? ಬೆಸ್ಟ್ ಪ್ಲೇಸ್ ಯಾವುದು, ಎಲ್ಲಿ ಏನೇನು ನೋಡಬಹುದು ಎಂಬ ಹುಡುಕಾಟದಲ್ಲಿದ್ದೀರಾ? ಹಾಗಾದರೆ ಈ ಮಾಹಿತಿ ನಿಮಗೆ ಉಪಯೋಗಕ್ಕೆ ಬರಬಹುದು.
ಮಳೆಗಾಲ ಮುಗಿದು ಇನ್ನೇನು ಚಳಿ ಶುರುವಾಗುವ ಸಮಯ ಇದು. ಅದಕ್ಕೂ ಮಿಗಿಲಾಗಿ ಅಕ್ಟೋಬರ್ ತಿಂಗಳು ಎನ್ನುವಂಥದ್ದು ಈ ಸಲ ಹಬ್ಬ ಹರಿದಿನಗಳದ್ದೇ ತಿಂಗಳು. ಪ್ರವಾಸಕ್ಕೂ ಹೇಳಿ ಮಾಡಿಸಿದ ವಾತಾವರಣ ಕರ್ನಾಟಕದ ಉದ್ದಗಲಕ್ಕೂ ಸಿಗುತ್ತೆ. ಆದ್ದರಿಂದ ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳಬಹುದಾದ ಆಯ್ದ 10 ಊರುಗಳ ವಿವರ ನಿಮ್ಮ ಮುಂದಿಡುತ್ತಿದ್ದೇವೆ.
ಅಕ್ಟೋಬರ್‌ನಲ್ಲಿ ಮಕ್ಕಳೊಂದಿಗೆ ಪ್ರವಾಸ ಹೋಗಬಹುದಾದ ಊರುಗಳಿವು
ಅಕ್ಟೋಬರ್ ರಜೆಯಲ್ಲಿ ಬೆಂಗಳೂರಿನಲ್ಲಿರುವವರು ತಮ್ಮ ಮಕ್ಕಳನ್ನು ಕರೆದುಕೊಂಡು ರಾಜ್ಯದ ಇತರೆ ಭಾಗಗಳಿಗೆ ಹೋಗಬಹುದು. ಅದೇ ರೀತಿ ರಾಜ್ಯದ ಇತರೆ ಭಾಗದ ಜನ ತಮ್ಮ ಮಕ್ಕಳನ್ನು ಕರ್ಕೊಂಡು ಬೆಂಗಳೂರು ಸುತ್ತ ಮುತ್ತ ಪ್ರವಾಸಕ್ಕೆ ಹೋಗಬಹುದು. ಆಯ್ದ 10 ಊರುಗಳ ಕಿರು ವಿವರ ಇಲ್ಲಿ ಕೊಡ್ತಾ ಇದ್ದೇವೆ.
1) ಮೈಸೂರು- ಅಕ್ಟೋಬರ್ ಶುರುವಾಗುತ್ತಿದ್ದಂತೆ ನಾಡಹಬ್ಬ ದಸರಾದ ಸಂಭ್ರಮ ಸಡಗರ ಮನೆ ಮಾಡಿರುತ್ತದೆ. ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುತ್ತಾರೆ. ಮೈಸೂರು ಅಂದರೆ ಅರಮನೆಗಳ ನಗರಿ, ಇಲ್ಲಿ ಸುತ್ತಮುತ್ತ ನೋಡುವುದಕ್ಕೆ ಬಹಳಷ್ಟ ಪ್ರವಾಸಿ ಆಕರ್ಷಣೆಗಳೂ ಇವೆ. ಮೈಸೂರು ನಗರದಿಂದ ಸ್ವಲ್ಪ ಹೊರಕ್ಕೆ ಬಂದು ಮಂಡ್ಯ ಜಿಲ್ಲೆ ಕಡೆಗೆ ಹೊರಟರೆ ಅಲ್ಲೂ ಕೆಆರ್‌ಎಸ್, ಮೇಲುಕೋಟೆ ಹೀಗೆ ಕೆಲವು ಪ್ರವಾಸಿ ತಾಣಗಳಿವೆ. ಆದರೂ - ದಸರಾ ರಜೆಗೆ ಮಕ್ಕಳನ್ನು ಕರ್ಕೊಂಡು ಮೈಸೂರಿಗೆ ಹೊರಟಿದ್ದರೆ, ಪುಟಾಣಿಗಳು ಎಂಜಾಯ್ ಮಾಡೋ ಈ 10 ಪ್ಲೇಸ್ ಮಿಸ್ ಮಾಡ್ಬೇಡಿ
2) ಕೊಡಗು -"ಭಾರತದ ಸ್ಕಾಟ್ಲ್ಯಾಂಡ್" ಎಂದು ಕರೆಯಲ್ಪಡುವ ಕೂರ್ಗ್ ಅದ್ಭುತವಾದ ಭೂದೃಶ್ಯಗಳು, ಕಾಫಿ ತೋಟಗಳು ಮತ್ತು ಜಲಪಾತಗಳನ್ನು ನೀಡುತ್ತದೆ. ಟ್ರೆಕ್ಕಿಂಗ್, ರಿವರ್ ರಾಫ್ಟಿಂಗ್ ಮತ್ತು ಪ್ರದೇಶದ ನಿಸರ್ಗ ಸೌಂದರ್ಯವನ್ನು ಅನ್ವೇಷಿಸುತ್ತ ಆನಂದಿಸಿ.
3) ಹಂಪಿ- ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಹಂಪಿ ತನ್ನ ಪ್ರಾಚೀನ ಅವಶೇಷಗಳು, ದೇವಾಲಯಗಳು ಮತ್ತು ವಿಶಿಷ್ಟ ಕಲ್ಲಿನ ಶಿಲ್ಪಗಳಿಗೆ ಹೆಸರುವಾಸಿ. ಐತಿಹಾಸಿಕ ಮಹತ್ವ ಮತ್ತು ರುದ್ರರಮಣೀಯ ದೃಶ್ಯಾವಳಿರುವ ಕಾರಣ ಇತಿಹಾಸ ಪ್ರಿಯರನ್ನು ಮತ್ತು ಪ್ರಕೃತಿ ಪ್ರಿಯರನ್ನು ಆಕರ್ಷಿಸುವ ಪ್ರವಾಸಿ ತಾಣವಿದು.
4) ಬಾದಾಮಿ- ಶಿಲಾ ದೇವಾಲಯಗಳು ಮತ್ತು ಗುಹೆಗಳಿಗೆ ನೆಲೆಯಾಗಿರುವ ಬಾದಾಮಿಯು ಸೊಗಸಾದ ಕೆತ್ತನೆಗಳು ಮತ್ತು ವಾಸ್ತುಶಿಲ್ಪದೊಂದಿಗೆ ಆಕರ್ಷಣೀಯವಾಗಿದೆ. ಪಟ್ಟಣದ ಸುತ್ತಮುತ್ತಲಿನ ರಮಣೀಯ ಭೂದೃಶ್ಯವು ಅದರ ಆಕರ್ಷಣೆಯನ್ನು ಹೆಚ್ಚಿಸಿದೆ.
5) ಗೋಕರ್ಣ - ಪುರಾಣ ಪ್ರಸಿದ್ಧ ತಾಣವಾಗಿದ್ದು, ಧಾರ್ಮಿಕ ಮಹತ್ವವನ್ನೂ ಪಡೆದುಕೊಂಡಿದೆ. ಇವೆಲ್ಲದಕ್ಕೂ ಮೀರಿ ಗೋಕರ್ಣ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಇಲ್ಲಿನ ಪ್ರಶಾಂತ ಬೀಚ್ ತಾಣವು ವಿಶ್ರಾಂತಿ ಮತ್ತು ಜಲ ಕ್ರೀಡೆಗಳಿಗೆ ಅವಕಾಶ ನೀಡಿದೆ.
6) ಕಬಿನಿ - ವನ್ಯಜೀವಿ ಉತ್ಸಾಹಿಗಳಿಗೆ ಆದರ್ಶವಾಗಿರುವ ಕಬಿನಿಯು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಅನುಭವವನ್ನು ನೀಡುತ್ತದೆ. ಅಲ್ಲಿ ನೀವು ಆನೆಗಳು, ಹುಲಿಗಳು ಮತ್ತು ವಿವಿಧ ಪಕ್ಷಿ ಪ್ರಭೇದಗಳನ್ನು ಕೂಡ ಕಾಣಬಹುದು.
7) ಚಿಕ್ಕಮಗಳೂರು - ಕಾಫಿ ಎಸ್ಟೇಟ್ ಮತ್ತು ಆಹ್ಲಾದಕರ ವಾತಾವರಣಕ್ಕೆ ಹೆಸರುವಾಸಿ ಈ ಪ್ರದೇಶ. ಟ್ರೆಕ್ಕಿಂಗ್ (ಚಾರಣ) ಮತ್ತು ರಮಣೀಯ ದೃಶ್ಯಗಳನ್ನು ನೋಡಲು ಇದು ಸರಿಯಾದ ಪ್ರದೇಶ. ಪ್ರಕೃತಿ ಸೊಬಗು ಇಷ್ಟವವರ ಜತೆಗೆ ಮಕ್ಕಳೂ ಇಷ್ಟಪಟ್ಟಾರು.
8) ಬೆಂಗಳೂರು - ಬೆಂಗಳೂರಿಗರಿಗಿಂತ ಹೊರಗಿನವರಿಗೆ ಬೆಂಗಳೂರಿನ ಕುರಿತು ಕುತೂಹಲ ಹೆಚ್ಚು. ಇದು ನಮ್ಮ ರಾಜ್ಯದ ರಾಜಧಾನಿ. ಉದ್ಯಾನ ನಗರಿ, ಐಟಿ ಸಿಟಿ ಹೀಗೆ ಹತ್ತಾರು ವಿಶೇಷಣಗಳೊಂದಿಗೆ ಗುರುತಿಸಲ್ಪಟ್ಟ ಬೆಂಗಳೂರು ಆಧುನಿಕ ಮತ್ತು ಪ್ರಾಚೀನ ಸಂಪ್ರದಾಯಗಳ ಕೊಂಡಿಯಾಗಿ ಮನಸೆಳೆಯುತ್ತದೆ. ಇಲ್ಲಿ ಮಕ್ಕಳನ್ನು ಕರ್ಕೊಂಡು ಸಾಂಸ್ಕೃತಿಕ, ಧಾರ್ಮಿಕ ಪ್ರವಾಸವನ್ನೂ ಮಾಡಬಹುದು. ಆಧುನಿಕ ಸಂಸ್ಕೃತಿಕ ಶಾಪಿಂಗ್, ಅಡ್ವೆಂಚರ್‌ಗಳಿಗೂ ಕರೆದೊಯ್ಯಬಹುದು. ಮಕ್ಕಳನ್ನು ಖುಷಿ ಪಡಿಸಬಲ್ಲ ಫುಡ್ ಸ್ಟ್ರೀಟ್‌ಗಳೂ ಇವೆ.
9) ಸಕಲೇಶಪುರ - ಪಶ್ಚಿಮ ಘಟ್ಟಗಳಲ್ಲಿ ನಡುವೆ ಇರುವ ಸಕಲೇಶಪುರ ಕಾಫಿ ತೋಟಗಳಿಗೆ ಹಾಗೂ ಹಚ್ಚ ಹಸಿರಿಗೆ ಹೆಸರುವಾಸಿ. ಇದು ಟ್ರೆಕ್ಕಿಂಗ್ ಟ್ರೇಲ್ಸ್ ಮತ್ತು ಸುಂದರವಾದ ವ್ಯೂಪಾಯಿಂಟ್‌ಗಳ ಮೂಲಕ ಪ್ರವಾಸೋದ್ಯಮದ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಮಕ್ಕಳನ್ನು ಇಲ್ಲಿ ಕಾಫಿ ಎಸ್ಟೇಟ್‌ಗಳಿಗೆ ಕರೆದೊಯ್ಯಬಹುದು. ಹೋಮ್ ಸ್ಟೇಗಳಲ್ಲಿದ್ದು ಅಲ್ಲಿನ ವಾತಾವರಣ ಪರಿಚಯಿಸಬಹುದು.
10) ಜೋಗ್ ಫಾಲ್ಸ್: ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾದ ಜೋಗ ಜಲಾಪಾತಕ್ಕೆ ಹೋಗಿಬರಬೇಕು. ಇದು ಶಿವಮೊಗ್ಗ ಜಿಲ್ಲೆಯಲ್ಲಿದ್ದು, ಮಳೆಗಾಲ ಮುಗಿಯುವ ಹೊತ್ತಿಗೆ ಹೋದರೆ ನೀರು ಬೀಳುವ ದೃಶ್ಯ ಚೆನ್ನಾಗಿ ಕಾಣುತ್ತದೆ. ಈಗಲೂ ಒಮ್ಮೆ ಹೋಗಿ ನೋಡಿಬರಬಹುದು.