Tuesday Motivation: ಜೀವನಕ್ಕೊಂದು ಸ್ಫೂರ್ತಿಮಾತು; ಬದುಕು ಸಾಕಾಯ್ತು ಎಂದುಕೊಳ್ಳುವವರು ಈ ಕಾಗೆಯ ಕಥೆಯನ್ನೊಮ್ಮೆ ಓದಿ-tuesday motivation do no be jealous of others do not underestimate your strength story of crow beautiful quotes rsm ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Tuesday Motivation: ಜೀವನಕ್ಕೊಂದು ಸ್ಫೂರ್ತಿಮಾತು; ಬದುಕು ಸಾಕಾಯ್ತು ಎಂದುಕೊಳ್ಳುವವರು ಈ ಕಾಗೆಯ ಕಥೆಯನ್ನೊಮ್ಮೆ ಓದಿ

Tuesday Motivation: ಜೀವನಕ್ಕೊಂದು ಸ್ಫೂರ್ತಿಮಾತು; ಬದುಕು ಸಾಕಾಯ್ತು ಎಂದುಕೊಳ್ಳುವವರು ಈ ಕಾಗೆಯ ಕಥೆಯನ್ನೊಮ್ಮೆ ಓದಿ

Tuesday Motivation: ಯಾರೇ ಆಗಲೀ ತಮ್ಮ ಜೀವನವನ್ನು ಮತ್ತೊಬ್ಬರಿಗೆ ಹೋಲಿಸಿಕೊಳ್ಳಬಾರದು. ಪ್ರತಿಯೊಬ್ಬರಿಗೂ ಒಂದೊಂದು ಪ್ರತಿಭೆ ಇರುತ್ತದೆ, ಅವರದ್ದೇ ಜೀವನ ಇರುತ್ತದೆ. ದೇವರು ಕೊಟ್ಟಿದ್ದನ್ನು ಸ್ವೀಕರಿಸಿ, ಕಷ್ಟಗಳನ್ನು ಚಾಲೆಂಜ್‌ ಆಗಿ ಎದುರಿಸಿ ಬದುಕಬೇಕು. ಜೀವನ ಸಾಕು ಎಂದುಕೊಳ್ಳುವವರಿಗೆ ಈ ಕಾಗೆಯ ಕಥೆ ಸ್ಪೂರ್ತಿ ಎನಿಸಬಹುದು, ಒಮ್ಮೆ ಓದಿ.

ಮಂಗಳವಾರದ ಸ್ಫೂರ್ತಿಮಾತು
ಮಂಗಳವಾರದ ಸ್ಫೂರ್ತಿಮಾತು (PC: Unsplash)

Tuesday Motivation: ಜೀವನದಲ್ಲಿ ಕಷ್ಟಸುಖ ಸಹಜ. ಆದರೆ ಕೆಲವರು ಕಷ್ಟವನ್ನು ಚಾಲೆಂಜ್‌ ಆಗಿ ಸ್ವೀಕರಿಸದರೆ ಇನ್ನೂ ಕೆಲವರು ಅದರನ್ನು ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಆಡುತ್ತಾರೆ. ಇನ್ನೂ ಕೆಲವರು ನನ್ನ ಬದುಕು ಏಕೆ ಹೀಗಿದೆ? ಬೇರೆಯವರು ಎಷ್ಟು ಸಂತೋಷದಿಂದ ಬದುಕುತ್ತಿದ್ದಾರೆ ಎಂದು ತಮ್ಮ ಜೀವನವನ್ನು ಮತೊಬ್ಬರಿಗೆ ಹೋಲಿಸಿಕೊಂಡು ಬೇಸರಗೊಳ್ಳುತ್ತಾರೆ. ಆದರೆ ಯಾರೂ ಕೂಡಾ ತಮ್ಮ ಬಗ್ಗೆ ತಾವೇ ಹೋಲಿಸಿಕೊಳ್ಳುವುದು ಸರಿ ಅಲ್ಲ. ಒಮ್ಮೆ ಈ ಕಾಗೆಯ ಕಥೆ ಓದಿ.

ಒಂದು ಕಾಡಿನಲ್ಲಿ ಕಾಗೆ ವಾಸಿಸುತ್ತಿರುತ್ತದೆ. ಕಾಗೆಗೆ ತನ್ನ ಜೀವನ ಇಷ್ಟವಾವುದಿಲ್ಲ. ತನ್ನ ಕಪ್ಪು ಬಣ್ಣ, ಕೊರಚಲು ಧ್ವನಿ, ಕಾಳು ಕಡ್ಡಿ ಹುಳು, ಹುಪ್ಪಟೆಯನ್ನು ಹೆಕ್ಕಿ ತಿನ್ನುವ ತನ್ನ ಜೀವನವನ್ನು ನೋಡಿ ಕಾಗೆಗೆ ಬೇಸರ ಎನಿಸಿತು. ಹೀಗೆ ಯೋಚಿಸುವಾಗ ಕಾಗೆಗೆ ಮತ್ತೊಂದು ದನಿ ಕೇಳಿತು. ಆ ದನಿ ಅದಕ್ಕೆ ಬಹಳ ಇಷ್ಟವಾಯ್ತು.

ಕೋಗಿಲೆಯ ದನಿಗೆ ಮಾರುಹೋದ ಕಾಗೆ

ಕಾಗೆಯು ಹೊಸ ದನಿ ಕೇಳಿ ಬಂದ ಕಡೆಗೆ ಹುಡುಕುತ್ತಾ ಹೋಯ್ತು. ಅಲ್ಲಿ ಮರದ ಮೇಲೆ ಕುಳಿತು ಮಾವಿನ ಹಣ್ಣನ್ನು ತಿನ್ನುತ್ತಾ, ಮಧ್ಯೆ ಮಧ್ಯೆ ಸುಂದರ ದನಿ ಹೊರ ಹಾಕುತ್ತಿದ್ದ ಕೋಗಿಲೆಯನ್ನು ಕಾಗೆ ಕಂಡಿತು. ಅದನ್ನು ಮಾತನಾಡಿಸಿದ ಕಾಗೆ, ನಿನ್ನ ದನಿ ಬಹಳ ಚೆನ್ನಾಗಿದೆ. ಹಾಗೇ ನನ್ನ ಹಾಗೆ ನೀನು ಹುಳು, ಹುಪ್ಪಟೆ ತಿಂದು ಬದುಕುವುದಿಲ್ಲ. ಮಾವಿನ ಸಿಹಿಯನ್ನು ತಿಂದು ಬದುಕುತ್ತಿದ್ದೀರಿ, ನಿಮ್ಮ ದನಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂದು ಹೊಗಳತೊಡಗಿತು. ಕಾಗೆಯ ಮಾತಿಗೆ ಪ್ರತಿಕ್ರಿಯಿಸಿದ ಕೋಗಿಲೆ. ಸಾಕು ಸಾಕು ನಂದೂ ಒಂದು ಬದುಕಾ? ನನ್ನ ಬಣ್ಣ ನಿನಗಿಂತ ಕಪ್ಪಾಗಿದೆ, ಅದರಲ್ಲೂ ವಸಂತ ಕಾಲ ಬಿಟ್ಟು ಉಳಿದ ಸಮಯದಲ್ಲಿ ನಾನು ದನಿ ತೆಗೆಯಲು ಸಾಧ್ಯವಿಲ್ಲ. ಕೊನೆಗೆ ನನ್ನ ಮಕ್ಕಳನ್ನು ಕೂಡಾ ನಾನು ಸಾಕಲು ಸಾಧ್ಯವಾಗುತ್ತಿಲ್ಲ. ನಿನ್ನ ಗೂಡಿನಲ್ಲಿ ನಾನು ಮೊಟ್ಟೆ ಇಡುತ್ತೇನೆ. ನನಗೆ ಹೋಲಿಸಿದರೆ ಆ ಗಿಣಿಯ ಜೀವನವೇ ಉತ್ತಮ ಎನ್ನುತ್ತದೆ.

ಗಿಣಿಯ ಬದುಕು ಕಂಡು ಅಸೂಯೆ ಪಟ್ಟ ಕಾಗಕ್ಕ

ಕೋಗಿಲೆಯ ಮಾತನ್ನು ಕೇಳಿದ ಕಾಗೆ ಗಿಣಿಯನ್ನು ಹುಡುಕಲು ಹೊರಟಿತು. ಸೀಬೆಹಣ್ಣಿನ ಮರದ ಮೇಲೆ ಕುಳಿತು ಸೀಬೆಹಣ್ಣು ತಿನ್ನುತ್ತಿದ್ದ ಗಿಣಿಯನ್ನು ನೋಡಿದ ಕಾಗೆ ಅದನ್ನೂ ಮಾತನಾಡಿಸಿತು. ನೀನು ಎಷ್ಟು ಅಂದವಾಗಿದ್ದೀಯ, ನಿನ್ನ ಬಣ್ಣ ಬಹಳ ಚೆನ್ನಾಗಿದೆ. ಅದರ ಮುಂದೆ ಬೇರೆ ಏನೂ ಇಲ್ಲ. ನಾನು ನಿನ್ನಷ್ಟು ಅದೃಷ್ಟವಂತನಲ್ಲ ಎಂದು ಹೊಗಳಿತು. ಇದಕ್ಕೆ ಪ್ರತಿಕ್ರಿಯಿಸಿದ ಗಿಣಿ, ಇರು ಸಾಕು ನನ್ನದೂ ಒಂದು ಬದುಕಾ ಯಾವುದಾದರೂ ಬೇಟೆಗಾರನಿಗೆ ದೊರೆತರೆ ಸಾಕು ನನ್ನನ್ನು ಹಿಡಿದುಕೊಂಡು ಹೋಗಿ ಸಂತೆಯಲ್ಲಿ ಮಾರುತ್ತಾನೆ. ನಂತರ ಅವರು ನನ್ನನ್ನು ಪಂಜರದಲ್ಲಿ ಬಂಧಿಸುತ್ತಾರೆ. ನನ್ನ ಮೈ ಬಣ್ಣವೇ ನನಗೆ ಶಾಪ, ನನಗಿಂತ ನವಿಲಿನ ಜೀವನವೇ ಬಹಳ ಚೆನ್ನಾಗಿದೆ ಎಂದು ಬೇಸರ ವ್ಯಕ್ತಪಡಿಸಿತು.

ಆಹಾ ನವಿಲಿನ ಬದುಕು ಎಷ್ಟು ಸುಂದರ!

ಗಿಣಿಯ ಮಾತನ್ನು ಕೇಳಿದ ಕಾಗೆ ನವಿಲನ್ನು ಹುಡುಕಲು ಹೊರಟಿತು. ಅದೇ ಸಮಯಕ್ಕೆ ಸರಿಯಾಗಿ ತುಂತುರು ಮಳೆ ಬೀಳುತ್ತಿದ್ದಂತೆ ನವಿಲು ನರ್ತಿಸುತ್ತಿದ್ದ ದೃಶ್ಯ ಕಂಡುಬಂತು. ನವಿಲಿನ ಬಣ್ಣ, ಕುಣಿತ, ಗರಿಗಳನ್ನು ಕಂಡು ಕಾಗೆ ಅಸೂಯೆ ಪಟ್ಟಿತು. ಆಹಾ, ಜೀವನ ಎಂದರೆ ನಿನ್ನದೇ, ನಿಮ್ಮ ನೃತ್ಯ ಮತ್ತು ಸೌಂದರ್ಯ ಸಾಮಾನ್ಯವಲ್ಲ. ನಿನ್ನ ಮುಂದೆ ನನ್ನ ಬದುಕಿಗೆ ಬೆಲೆಯೇ ಇಲ್ಲ, ನಾನು ಬದುಕಿದರೆ ನಿನ್ನಂತೆ ಬಾಳಬೇಕು ಎಂದು ಹೇಳಿತು. ಕಾಗೆಯ ಮಾತಿಗೆ ನಕ್ಕ ನವಿಲು ನನ್ನದೂ ಒಂದು ಬದುಕಾ? ನಾನು ನೃತ್ಯ ಮಾಡಬೇಕಂದರೆ ಮಳೆ ಬರಬೇಕು. ನನ್ನ ಗರಿಗಳಿಂದ ನನ್ನ ಜೀವನಕ್ಕೆ ಅಪಾಯವಿದೆ. ಅದಕ್ಕಾಗಿ ಅನೇಕರು ನನ್ನನ್ನು ಬೇಟೆಯಾಡುತ್ತಿದ್ದಾರೆ. ನನ್ನ ದೇಹವನ್ನು ಬೇಯಿಸಿ ತಿನ್ನಲು ಎಷ್ಟು ಜನರು ಕಾಯುತ್ತಿದ್ದಾರೆ. ನಿಮಗೆ ಅಂತಹ ಯಾವುದೇ ಸಮಸ್ಯೆಗಳಿಲ್ಲ. ಯಾರೂ ನಿಮ್ಮನ್ನು ಹಿಡಿಯಲು ಪ್ರಯತ್ನಿಸುವುದಿಲ್ಲ. ನೀವು ಮುಕ್ತವಾಗಿ ಎಲ್ಲಿ ಬೇಕೆಂದರೆ ಓಡಾಡಬಹುದು. ಇಷ್ಟಪಟ್ಟಿದನ್ನು ತಿನ್ನಬಹುದು. ನಿಮ್ಮಂತೆ ಬದುಕಲು ನಮಗೆ ಅವಕಾಶವಿಲ್ಲ. ಪ್ರತಿದಿನವೂ ಕಷ್ಟಪಟ್ಟು ಬದುಕಬೇಕು ಎಂದು ಕಣ್ಣೀರು ಹಾಕಿತು.

ಬುದ್ಧಿ ಕಲಿತ ಕಾಗೆ

ಎಲ್ಲಾ ಪಕ್ಷಿಗಳ ಮಾತನ್ನು ಕೇಳಿದ ಕಾಗೆಗೆ ತನ್ನ ಬದುಕು ಏನೆಂದು ಅರ್ಥವಾಯ್ತು. ನನ್ನಷ್ಟು ಸ್ವತಂತ್ರವಾಗಿ ಬೇರೆ ಯಾವುದೇ ಪಕ್ಷಿ ಬದುಕುವುದಿಲ್ಲ ಎಂದು ಅವಳು ಅರ್ಥಮಾಡಿಕೊಂಡಿತು. ತನ್ನ ಬಣ್ಣ, ನೋಟ, ದನಿ ಎಲ್ಲವೂ ನನಗೆ ಯಾರಿಂದಲೂ ತೊಂದರೆ ಆಗದಂತೆ ರಕ್ಷಿಸುತ್ತಿದೆ. ಎಲ್ಲರಿಗೂ ಹೋಲಿಸಿದರೆ ನನ್ನ ಜೀವನ ಬಹಳ ಚೆನ್ನಾಗಿದೆ ಎಂದು ಕಾಗೆ ಸಂತೃಪ್ತಿಯಿಂಂದ ತನ್ನ ಗೂಡಿಗೆ ಹಾರಿ ಹೋಯ್ತು. ಅಂದಿನಿಂದ ಕಾಗೆ ತನ್ನ ಜೀವನದ ಬಗ್ಗೆ ಎಂದಿಗೂ ವ್ಯಥೆ ಪಡಲಿಲ್ಲ.

ಇದು ಕಾಗೆಗೆ ಮಾತ್ರವಲ್ಲ ಮನುಷ್ಯರಾದ ನಮಗೂ ಅನ್ವಯಿಸುತ್ತದೆ. ಅಂಬಾನಿ, ಅದಾನಿಯನ್ನು ನೋಡಿ ಕೊರಗುವ ಬದಲಿಗೆ ದೇವರು ನಮಗೆ ಕೊಟ್ಟ ಜೀವನದಲ್ಲಿ ನೆಮ್ಮದಿ ಕಾಣುವುದು ಉತ್ತಮ. ದೇವರು ಪ್ರತಿಯೊಬ್ಬ ಮನುಷ್ಯನಿಗೆ ಕೆಲವು ದೌರ್ಬಲ್ಯ ಮತ್ತು ಶಕ್ತಿಯನ್ನು ನೀಡಿರುತ್ತಾನೆ. ನಿಮ್ಮ ಸಾಮರ್ಥ್ಯ ಏನೆಂದು ತಿಳಿದುಕೊಳ್ಳಿ. ಆಗಲೇ ನಿಮ್ಮ ಜೀವನ ನಿಮಗೆ ಸುಂದರವಾಗಿ ಕಾಣುತ್ತದೆ.