Abhyanga: ಯುಗಾದಿ ಹಬ್ಬದಲ್ಲಿ ಎಣ್ಣೆಸ್ನಾನ ಮಾಡುವುದು ವಿಶೇಷ; ಅಭ್ಯಂಗದ ಮಹತ್ವ, ಪ್ರಯೋಜನಗಳ ಬಗ್ಗೆ ತಿಳಿಯಿರಿ
Ugadi Abhyanga: ಯುಗಾದಿ ಹಬ್ಬದಂದು ಎಣ್ಣೆ ಸ್ನಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಅಭ್ಯಂಗವು ಸಂಪ್ರದಾಯದ ಭಾಗವಷ್ಟೇ ಅಲ್ಲ, ಇದರ ಮಹತ್ವ, ಪ್ರಯೋಜನಗಳು ಹೀಗಿವೆ ನೋಡಿ.

Abhyanga Benefits: ಯುಗಾದಿ ಹಿಂದೂಗಳು ಆಚರಿಸುವ ಬಹಳ ಪ್ರಮುಖ ಹಬ್ಬ. ಇದನ್ನು ಹೊಸ ವರ್ಷವೆಂದೂ ಕೂಡ ಕರೆಯಲಾಗುತ್ತದೆ. ಯುಗಾದಿಯಲ್ಲಿ ಬೇವು, ಬೆಲ್ಲದ ಜೊತೆ ಎಣ್ಣೆಸ್ನಾನವೂ ವಿಶೇಷ. ಹಬ್ಬದ ದಿನ ಬೆಳಿಗ್ಗೆ ಸೂರ್ಯೋದಯಕ್ಕೂ ಮುಂಚೆ ಎದ್ದು ಮೈಗೆಲ್ಲಾ ಎಣ್ಣೆ ಹಚ್ಚಿ ಸ್ನಾನ ಮಾಡುವ ಸಂಪ್ರದಾಯವಿದೆ. ಇದಕ್ಕೆ ಅಭ್ಯಂಗ ಅಥವಾ ಅಭ್ಯಂಜನ ಎಂದು ಕರೆಯಲಾಗುತ್ತದೆ.
ಅಭ್ಯಂಗವು ಸಂಪ್ರದಾಯದ ಭಾಗವಾಗಿದ್ದರೂ ಕೂಡ ಇದನ್ನು ಮಾಡುವುದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಇದು ಆಯುರ್ವೇದ ಪದ್ಧತಿಯ ಭಾಗವೂ ಆಗಿದೆ. ನಿತ್ಯ ಅಭ್ಯಂಗ ಸ್ನಾನ ಮಾಡುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇನ್ನೇನು ಯುಗಾದಿ ಹಬ್ಬ ಬಂದೇ ಬಿಟ್ಟಿದೆ. ಈ ವರ್ಷ ಮಾರ್ಚ್ 30ಕ್ಕೆ ಯುಗಾದಿ ಹಬ್ಬವಿದೆ. ಯುಗಾದಿಗೂ ಮುಂಚೆ ಅಭ್ಯಂಗ ಸ್ನಾನದ ಮಹತ್ವ ಹಾಗೂ ಇದರ ಪ್ರಯೋಜನಗಳನ್ನು ತಿಳಿದುಕೊಳ್ಳಿ.
ಅಭ್ಯಂಗದಿಂದ ನಮ್ಮ ದೇಹ, ಮನಸ್ಸು ಹಾಗೂ ಇಂದ್ರೀಯಗಳನ್ನು ಪುನರ್ಯೌವನಗೊಳಿಸಲು ಸಾಧ್ಯವಾಗುತ್ತದೆ. ಪ್ರಾಚೀನ ಕಾಲದಲ್ಲಿ ಖುಷಿ ಮುನಿಗಳು ಹಬ್ಬ–ಹರಿದಿನ, ಶುಭದಿನಗಳಲ್ಲಿ ಸಂಪ್ರದಾಯದ ಭಾಗವಾಗುವುದರ ಜೊತೆಗೆ ಆರೋಗ್ಯವನ್ನೂ ಗಮನದಲ್ಲಿ ಇರಿಸಿಕೊಂಡು ಅಭ್ಯಂಗ ಮಾಡುವುದನ್ನು ರೂಢಿಸಿಕೊಂಡರು. ಅಭ್ಯಂಗ ಸ್ನಾನದ ಸಮಯದಲ್ಲಿ ಮೈಗೆ ಎಣ್ಣೆ ಹಚ್ಚಿ ಕನಿಷ್ಠ ಅರ್ಧ ಬಿಟ್ಟು ನಂತರ ಸ್ನಾನ ಮಾಡಬೇಕು.
ಅಭ್ಯಂಗ ಸ್ನಾನದ ಮಹತ್ವ
ಎಣ್ಣೆ ಸ್ನಾನ ಅಥವಾ ಅಭ್ಯಂಗ ಮಾಡುವುದರಿಂದ ನಮ್ಮೊಳಗಿನ ತಾಮಸ ಮತ್ತು ರಜಾಸ ಗುಣಗಳು ನಿಯಂತ್ರಣಕ್ಕೆ ಬರುತ್ತವೆ. ಇದು ಸತ್ವ ಗುಣಗಳನ್ನು ಹೆಚ್ಚಿಸುತ್ತದೆ. ಇದು ತ್ರಿದೋಷಗಳನ್ನು (ವಾತ, ಕಫ ಮತ್ತು ಪಿತ್ತ) ಸಮತೋಲನಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಅಭ್ಯಂಗದ ಇತರ ಪ್ರಯೋಜನಗಳು ಹೀಗಿವೆ.
ಅಭ್ಯಂಗ ಸ್ನಾನದ ಪ್ರಯೋಜನಗಳು
- ಅಭ್ಯಂಗ ಸ್ನಾನವು ಚರ್ಮದ ಮೇಲ್ಮೈಯಿಂದ ವಿಷಾಂಶವನ್ನು ಶುದ್ಧೀಕರಿಸುತ್ತದೆ ಮತ್ತು ನಿರ್ಜೀವ ಚರ್ಮದ ತೊಡೆದುಹಾಕಲು ಸಹಾಯ ಮಾಡುತ್ತದೆ.
- ಚರ್ಮವನ್ನು ನಯವಾಗಿಸಿ, ಚರ್ಮದ ಕಾಂತಿ ಹೆಚ್ಚುವಂತೆ ಮಾಡುತ್ತದೆ. ಚರ್ಮದ ಮೇಲೆ ಕಲೆಗಳ ನಿವಾರಣೆಗೂ ಎಣ್ಣೆ ಸ್ನಾನ ಉತ್ತಮ.
- ಇದು ಸ್ನಾಯುಗಳಿಗೆ ವಿಶ್ರಾಂತಿ ನೀಡುವುದು ಮಾತ್ರವಲ್ಲ, ಬಲಪಡಿಸುತ್ತದೆ. ಆ ಮೂಲಕ ದೇಹಕ್ಕೆ ಚೈತನ್ಯ ನೀಡುತ್ತದೆ.
- ಕೀಲುಗಳನ್ನು ನಯಗೊಳಿಸುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.
- ನರಗಳನ್ನು ಉತ್ತೇಜಿಸುವ ಮೂಲಕ ದೇಹವನ್ನು ಶಾಂತಗೊಳಿಸುತ್ತದೆ ಮತ್ತು ವಿಶ್ರಾಂತಿ ನೀಡುತ್ತದೆ.
- ದೇಹದಲ್ಲಿನ ವಿಷವನ್ನು ತೆಗೆದುಹಾಕಲು ಕಾರಣವಾಗಿರುವ ದುಗ್ಧರಸ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.
- ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲು ಹಾಗೂ ನೆತ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರವಿಡಬಹುದು.
- ಇದರಿಂದ ನಮ್ಮ ದೇಹ ಮತ್ತು ಮನಸ್ಸನ್ನು ಪುನರುಜ್ಜೀವನಗೊಳಿಸಬಹುದು.
- ದೀರ್ಘ ಹಾಗೂ ಆಳವಾದ ನಿದ್ದೆಗೂ ಸಹಕಾರಿ.
- ಜೀರ್ಣಕ್ರಿಯೆ ಮತ್ತು ಹಸಿವನ್ನು ಸುಧಾರಿಸುತ್ತದೆ.
- ಇದರಿಂದ ನಕಾರಾತ್ಮಕ ಅಂಶ ದೇಹದಿಂದ ದೂರವಾಗುತ್ತದೆ.
- ತೇಜಸ್ಸು ಹೆಚ್ಚುತ್ತದೆ.
ಇದನ್ನೂ ಓದಿ: Yugadi 2024: ಯುಗಾದಿ ಹಬ್ಬದಂದು ಮನೆ ಅಲಂಕಾರಕ್ಕಿದೆ ವಿಶೇಷ ಮಹತ್ವ, ಹಬ್ಬದ ಸಂಭ್ರಮ ಹೆಚ್ಚಲು ಹೀಗಿರಲಿ ಮನೆಯ ಸಿಂಗಾರ
ಅಭ್ಯಂಗಕ್ಕೆ ಯಾವ ಎಣ್ಣೆ ಸೂಕ್ತ
ಎಳ್ಣೆಣ್ಣೆ, ಕೊಬ್ಬರಿ ಎಣ್ಣೆ, ಹರಳೆಣ್ಣೆ, ಶೇಂಗಾ ಎಣ್ಣೆ, ಸೂರ್ಯಕಾಂತಿ ಎಣ್ಣೆ ಈ ಎಲ್ಲವೂ ಅಭ್ಯಂಗಕ್ಕೆ ಸೂಕ್ತವಾಗಿವೆ. ಆದರೆ ಇದರಲ್ಲಿ ಎಳ್ಳೆಣ್ಣೆ ಹೆಚ್ಚು ಶ್ರೇಷ್ಠ ಎಂದು ಹೇಳುತ್ತಾರೆ.
ಅಭ್ಯಂಗಕ್ಕೆ ಸೂಕ್ತ ಸಮಯ
ಅಭ್ಯಂಗ ಸ್ನಾನಕ್ಕೆ ಬೆಳಗಿನ ಹೊತ್ತು ಅಂದರೆ ಬೆಳಿಗ್ಗೆ 5 ರಿಂದ 6 ಗಂಟೆಯ ನಡುವೆ ಅಭ್ಯಂಗ ಸ್ನಾನ ಮಾಡಬೇಕು. ಆ ಹೊತ್ತಿನಲ್ಲಿ ಸ್ನಾನ ಮಾಡುವುದು ಸಾಧ್ಯವಾಗಿಲ್ಲ ಎಂದರೆ ಬೆಳಿಗ್ಗೆ ಆದಷ್ಟು ಬೇಗ ಎಣ್ಣೆ ಸ್ನಾನ ಮಾಡಿ. ಆದರೆ ಆಹಾರ ಸೇವಿಸಿದ ತಕ್ಷಣಕ್ಕೆ ಅಭ್ಯಂಗ ಸ್ನಾನ ಮಾಡುವಂತಿಲ್ಲ.
ಅಭ್ಯಂಗ ವಿಧಾನ
ಅಭ್ಯಂಗಕ್ಕೆ ಸೂಕ್ತವಾದ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಕೊಂಚ ಬಿಸಿ ಮಾಡಿ ಸೂಕ್ತ ರೀತಿಯಲ್ಲಿ ದೇಹದ ಅಂಗಾಗಗಳಿಗೆ ಹಚ್ಚಬೇಕು. ಅನುಲೋಮ ರೀತಿಯಲ್ಲಿ ಅಂದರೆ ಮೇಲಿಂದ ಕೆಳಕ್ಕೆ ಹಾಗೂ ದೇಹದ ಸಂಧಿಗಳಲ್ಲಿ ವೃತ್ತಕಾರವಾಗಿ ಮಸಾಜ್ ಮಾಡಬೇಕು. ಈ ಸಮಯದಲ್ಲಿ ಸ್ವಲ್ಪ ಬೆಚ್ಚಗಿನ ಎಣ್ಣೆಯನ್ನು ಕಿವಿಗೂ ಬಿಟ್ಟು ಕೊಳ್ಳುವುದು ಉತ್ತಮ. ಆದರೆ ಕಿವಿ ಸೋರಿಕೆಯ ಸಮಸ್ಯೆ ಇದ್ದರೆ ಕಿವಿಗೆ ಎಣ್ಣೆ ಹಾಕಿದಿರಿ.
ಅಭ್ಯಂಗಕ್ಕೂ ಮುನ್ನ ಈ ವಿಚಾರ ತಿಳಿದಿರಲಿ
ಜ್ವರ ಇರುವವರು, ಶ್ವಾಸಕೋಶದ ಸಮಸ್ಯೆ ಇರುವವರು, ರುಮಟೈಡ್ ಸಂಧಿವಾತ ಇರುವವರು ಅಭ್ಯಂಗ ಮಾಡದೇ ಇರುವುದು ಉತ್ತಮ.
- ಅಭ್ಯಂಗಕ್ಕೆ ಬಿಸಿನೀರು ಅಥವಾ ಉಗುರು ಬೆಚ್ಚಗಿನ ನೀರು ಬಳಸುವುದು ಉತ್ತಮ.
- ಎಣ್ಣೆ ಹಚ್ಚಿಕೊಂಡು 7 ರಿಂದ 15 ನಿಮಿಷಗಳ ಕಾಲ ವಿರಾಮ ನೀಡಿ ಸ್ನಾನ ಮಾಡಬೇಕು. ಗರಿಷ್ಠ 30 ನಿಮಿಷಗಳ ಒಳಗೆ ಸ್ನಾನ ಮಾಡಬೇಕು.
- ಸ್ನಾನಕ್ಕೆ ಕಡಲೆಹಿಟ್ಟು, ಸೀಗೆಪುಡಿ ಅಥವಾ ಹೆಸರುಬೇಳೆ ಪುಡಿ ಬಳಸುವುದು ಉತ್ತಮ.
- ಅಭ್ಯಂಗಕ್ಕೆ ಕಲಬೆರಕೆ ಎಣ್ಣೆ ಬಳಕೆ ಬೇಡ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
