ಕೋಚಿಂಗ್ ಇಲ್ಲದೆ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡಬಹುದು; ಇಲ್ಲಿದೆ ಸಲಹೆ
ಕನ್ನಡ ಸುದ್ದಿ  /  ಜೀವನಶೈಲಿ  /  ಕೋಚಿಂಗ್ ಇಲ್ಲದೆ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡಬಹುದು; ಇಲ್ಲಿದೆ ಸಲಹೆ

ಕೋಚಿಂಗ್ ಇಲ್ಲದೆ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡಬಹುದು; ಇಲ್ಲಿದೆ ಸಲಹೆ

ಕೇಂದ್ರ ನಾಗರೀಕ ಸೇವಾ ಕೇಂದ್ರ (ಯುಪಿಎಸ್‌ಸಿ) ನಡೆಸುವ ಸಿವಿಲ್ ಸರ್ವೀಸ್ ಪರೀಕ್ಷೆ, ಭಾರತದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದೆ. ಇದು ಅತ್ಯಂತ ಕಠಿಣವಾಗಿರುತ್ತದೆ. ಯಾವುದೇ ಕೋಚಿಂಗ್ ಇಲ್ಲದೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇಲ್ಲಿದೆ ಸಲಹೆ. (ಬರಹ: ಪ್ರಜ್ವಲಾ)

ಕೋಚಿಂಗ್ ಇಲ್ಲದೆ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡಬಹುದು
ಕೋಚಿಂಗ್ ಇಲ್ಲದೆ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡಬಹುದು (PC: Canva)

ಕೇಂದ್ರ ನಾಗರೀಕ ಸೇವಾ ಕೇಂದ್ರ ( ಯುಪಿಎಸ್‌ಸಿ) ನಡೆಸುವ ಸಿವಿಲ್ ಸರ್ವೀಸ್ ಪರೀಕ್ಷೆ, ಭಾರತದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆ ಮೂಲಕ ಭಾರತೀಯ ಆಡಳಿತಾತ್ಮಕ ಸೇವೆಗಳಾದ ಐಎಎಸ್, ಐಪಿಎಸ್, ಐಎಫ್ಎಸ್ ಮುಂತಾದ ಹಲವಾರು ಪ್ರಮುಖ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಈ ಪರೀಕ್ಷೆಗೆ ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಹಾಜರಾಗುತ್ತಾರೆ. ಆದರೆ, ಪ್ರವೇಶಕ್ಕೆ ಅವಕಾಶ (ಸೀಟು) ಮಾತ್ರ ಅತಿ ಕಡಿಮೆ ಇರುತ್ತವೆ. ಇದರರ್ಥ ಸ್ಪರ್ಧೆಯ ಮಟ್ಟ ಅತ್ಯಂತ ಉಚ್ಛವಾಗಿರುತ್ತದೆ ಹಾಗು ಕಠಿಣವಾಗಿರುತ್ತದೆ.

ಇಷ್ಟು ದೊಡ್ಡ ಪ್ರಮಾಣದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಹಲವರು ಕೋಚಿಂಗ್ ಕ್ಲಾಸ್‌ಗಳಿಗೆ ಸೇರುತ್ತಾರೆ. ಆದರೆ ಎಲ್ಲರಿಗೂ ಅದಕ್ಕಾಗುವಷ್ಟು ಹಣವಿರುವುದಿಲ್ಲ, ಅಥವಾ ಕೋಚಿಂಗ್ ತರಬೇತಿ ಕೇಂದ್ರಗಳಿರುವ ಜಾಗಗಳಿಗೆ ಎಲ್ಲರಿಂದಲೂ ಹೋಗಲು ಸಾಧ್ಯವಿರುವುದಿಲ್ಲ. ಹಾಗೇ ಸೌಲಭ್ಯವೂ ಇರುವುದಿಲ್ಲ. ಕೆಲವರು ಸ್ವತಂತ್ರವಾಗಿ ಓದುವುದು ಇಷ್ಟಪಡುವವರೂ ಆಗಿರಬಹುದು.

ನಿಮ್ಮಲ್ಲಿ ಶಿಸ್ತು, ನಿರಂತರ ಅಭ್ಯಾಸ, ಮತ್ತು ಒತ್ತಡದ ಸಮಯದಲ್ಲೂ ಮನೋಬಲ ಕಾಯ್ದುಕೊಳ್ಳುವ ಶಕ್ತಿ ಇದ್ದರೆ ನೀವು ಕೂಡ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪ್ರಿಲಿಮ್ಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು.

ಈ 10 ಸರಳ ಮತ್ತು ಪರಿಣಾಮಕಾರಿ ವಿಧಾನಗಳನ್ನು ಅನುಸರಿಸಿ

ಪಠ್ಯಕ್ರಮ ಮತ್ತು ಪರೀಕ್ಷಾ ಮಾದರಿ ತಿಳಿದುಕೊಳ್ಳಿ: ಪ್ರಾರಂಭದಲ್ಲೇ ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಯ ಪಠ್ಯಕ್ರಮವನ್ನು ಸಂಪೂರ್ಣವಾಗಿ ಓದಿ. ಪ್ರಶ್ನೆಗಳು ಯಾವುದೇ ಅಂಶದಿಂದ ಬಂದರೂ ನೀವು ಬೆರಗಾಗಬಾರದು. ಈ ಪರೀಕ್ಷೆಯಲ್ಲಿ ಎರಡು ಪೇಪರ್ ಇರುತ್ತದೆ:

ಜನರಲ್ ಸ್ಟಡೀಸ್ - ಪೇಪರ್ ೧

ಸಿಸ್ಯಾಟ್ - ಪೇಪರ್ ೨ (ಅರ್ಹತೆ ಮೇರೆಗೆ)

ಎನ್‌ಸಿಆರ್‌ಟಿ ಪುಸ್ತಕಗಳ ಅಧ್ಯಯನ: ಯುಪಿಎಸ್‌ಸಿ ಪರೀಕ್ಷೆಯ ತಯಾರಿಯ ಪ್ರಾರಂಭಿಕ ಹಂತದಲ್ಲಿ ಎನ್‌ಸಿಆರ್‌ಟಿ ಪುಸ್ತಕಗಳು (೬-೧೨) ಅತ್ಯಂತ ಪ್ರಾಮಾಣಿಕ ಮತ್ತು ವಿಶ್ವಾಸಾರ್ಹ ಮೂಲ. ಇವು ಮೂಲಭೂತ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸುತ್ತದೆ. ವಿಶೇಷವಾಗಿ ಇತಿಹಾಸ, ಭೂಗೋಳ, ಸಮಾಜಶಾಸ್ತ್ರ, ಆರ್ಥಿಕಶಾಸ್ತ್ರ, ವಿಜ್ಞಾನ ಈ ವಿಷಯಗಳಪುಸ್ತಕಗಳನ್ನು ಓದಿ.

ದಿನನಿತ್ಯದ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಮೇಲೆ ಹಿಡಿತವಿರಲಿ: ಪ್ರಚಲಿತ ಘಟನೆಗಳು ಯುಪಿಎಸ್‌ಸಿ ಪ್ರಿಲಿಮ್ಸ್‌ಗೆ ಅತಿ ಮಹತ್ವದ ಭಾಗ. ಸುದ್ದಿ ಪತ್ರಿಕೆ ಅಥವಾ ಪ್ರಚಲಿತ ವಿದ್ಯಮಾನ ಓದುವ ಅಭ್ಯಾಸ ಇರಲಿ. ದಿನಕ್ಕೆ ಕನಿಷ್ಠ 30 ನಿಮಿಷ ಈ ವಿಭಾಗಕ್ಕೆ ಮೀಸಲಿಡಿ.

ಓದಿಗೆ ನಿಷ್ಠೆ ಹೊಂದಿರುವ ದಿನಚರಿ ರೂಪಿಸಿಕೊಳ್ಳಿ: ನಿಮ್ಮ ಸಮಯದ ಮಾಲೀಕರೂ ನೀವೇ ಆಗಿರುತ್ತೀರಿ. ಆದ್ದರಿಂದ ನಿಖರವಾದ ಓದಿನ ವೇಳಾಪಟ್ಟಿ ಇರಲಿ. ತಲಾ ವಿಷಯಗಳಿಗೆ ನಿಗದಿತ ಸಮಯ, ವಿಶ್ರಾಂತಿಗೆ ಸಮಯ, ವಾರದ ಪುನರಾವರ್ತನೆಗೂ ಸಮಯ ಇರಲಿ.

ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳು: 2013 ರಿಂದ ಇತ್ತೀಚಿನವರೆಗೆ ಇರುವ ಯುಪಿಎಸ್‌ಸಿ ಪ್ರಿಲಿಮ್ಸ್ ಪ್ರಶ್ನೆಪತ್ರಿಕೆಗಳನ್ನು ಅಧ್ಯಯನ ಮಾಡಿ. ಪ್ರಶ್ನೆಗಳ ಮಾದರಿ, ಪಟಣೆಗೊಳಿಸುವ ಪಾಠಗಳು ಹಾಗೂ ಯುಪಿಎಸ್‌ಸಿ ಕೇಳುವ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದು.

ಮಾದರಿ ಪರೀಕ್ಷೆಗಳನ್ನು ಬರೆಯುವುದು: ಮಾದರಿ ಪರೀಕ್ಷೆಗಳನ್ನು ಬರೆಯುವುದರಿಂದ ನಿಮಗೆ ಸಮಯ ಪರಿಪಾಲನೆ, ಬೇಡದ ಪ್ರಶ್ನೆಗಳನ್ನು ವರ್ಜಿಸುವ ಉಪಾಯಗಳು ಹಾಗೂ ಸ್ವತಃ ಮೌಲ್ಯಮಾಪನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿ ಪರೀಕ್ಷೆಯ ನಂತರ ಅದು ಎಲ್ಲಿ ತಪ್ಪಾಗಿದೆ ಎಂಬ ವಿಶ್ಲೇಷಣೆ ಮಾಡುವ ಅಭ್ಯಾಸ ಇರಲಿ.

ದೈನಂದಿನ ಪುನರಾವರ್ತನೆ ಮತ್ತು ಹೈಲೈಟ್ ಮಾಡಿದ ಟಿಪ್ಪಣಿಗಳು: ನೀವು ಓದಿದ ವಿಷಯಗಳು ಮರೆಯದಂತೆ ಇರಬೇಕಾದರೆ, ನಿಯತವಾಗಿ ಪುನರಾವರ್ತನೆ ಅಗತ್ಯ. ವಿಶಿಷ್ಟ ಟಿಪ್ಪಣಿಗಳನ್ನು ಡೈರಿಯಲ್ಲಿ ಬರೆದುಕೊಳ್ಳಿ ಅಥವಾ ಮೈಂಡ್ ಮ್ಯಾಪ್ಸ್ ರೂಪಿಸಿ. ಪರೀಕ್ಷೆಯ ಸಮಯದಲ್ಲಿ ಈ ಟಿಪ್ಪಣಿಗಳು ಜೀವರಕ್ಷಕವಾಗಬಹುದು.

ತಂತ್ರಜ್ಞಾನವನ್ನು ಬಳಸಿ ಹೆಚ್ಚು ಕಲಿಯಿರಿ: ಪ್ರತಿದಿನದ ಓದಿನಲ್ಲಿ ಯುಟ್ಯೂಬ್ ಚಾನೆಲ್‌ಗಳು, ಯುಪಿಎಸ್‌ಸಿ ತಯಾರಿಯ ಆ್ಯಪ್‌ಗಳು, ಆನ್‌ಲೈನ್ ರಸಪ್ರಶ್ನೆಗಳು, ಪಿಡಿಎಫ್, ಟೆಲಿಗ್ರಾಂ ನೋಟ್ಸ್ ಮುಂತಾದವುಗಳನ್ನು ಸರಿಯಾಗಿ ಉಪಯೋಗಿಸಿ. ಆದರೆ ಒತ್ತಡಕ್ಕೆ ಒಳಗಾಗದೆ, ಅಗತ್ಯವಿರುವ ವಿಷಯಗಳಿಗೆ ಮಾತ್ರ ಗಮನ ಕೊಡಿ.

ಸುಲಭವಾದ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಿ: ಯಾವ ವಿಷಯ ನಿಮಗೆ ಚೆನ್ನಾಗಿ ಮನದಟ್ಟಾಗಿರುತ್ತದೆಯೋ, ಅದನ್ನು ಇನ್ನೂ ಬಲಪಡಿಸಿ. ಸಮಯ ಉಳಿಸಲು ಮತ್ತು ಅಂಕ ಉಳಿಸಲು ಇದು ಬಹುಪಾಲು ಉಪಯೋಗವಾಗುತ್ತದೆ.

ಶಿಸ್ತು, ಧೈರ್ಯ ಮತ್ತು ಶ್ರದ್ಧೆಯೊಂದಿಗೆ ಪ್ರಯಾಣ ಮುಂದುವರಿಸಿ: ಕೋಚಿಂಗ್ ಇಲ್ಲದಿದ್ದರೂ, ನೀವು ಏನನ್ನು ಕಲಿಯುತ್ತೀರಿ ಎಂಬುದೇ ಮುಖ್ಯ. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ದೈನಂದಿನ ಕ್ರಮವನ್ನು ಅನುಸರಿಸಿ, ತಪ್ಪು ಮಾಡಿದರೂ ಭಯಪಡಬೇಡಿ. ಯುಪಿಎಸ್‌ಸಿ ಪರೀಕ್ಷೆ ಒಂದು ಮ್ಯಾರಥಾನ್ ಇದ್ದಂತೆ. ನಿರಂತರ ಓದನ್ನು ಸಾಗಿಸುವ ಸಾಮರ್ಥ್ಯವೂ ಮುಖ್ಯ.

ಯುಪಿಎಸ್‌ಸಿ ಪರೀಕ್ಷೆಯನ್ನು ಕೋಚಿಂಗ್ ಇಲ್ಲದೆ ತಯಾರಿ ಮಾಡುವುದು ಅನೇಕ ವಿದ್ಯಾರ್ಥಿಗಳಿಗೆ ಸಾಧ್ಯವಾಗಿದೆ. ಅದಕ್ಕೊಂದು ನಿರ್ದಿಷ್ಟ ಮಾರ್ಗವಿದೆ. ನಿಮ್ಮಲ್ಲಿ ಶ್ರಮಿಸಲು ಇಚ್ಛೆಯಿದ್ದರೆ, ಸಮಯವನ್ನು ಪ್ಲಾನ್ ಮಾಡುವ ತಂತ್ರವಿದ್ದರೆ, ಮತ್ತು ಸ್ಪಷ್ಟ ಗುರಿಯಿದ್ದರೆ, ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಂತಹ ಕಷ್ಟವೇನಲ್ಲ. ದೃಢ ಸಂಕಲ್ಪ ಮಾಡಿದ್ರೆ ಗುರಿ ಎಷ್ಟು ದೂರವಾಗಿದ್ದರೂ ತಲುಪಬಹುದು. ಇಲ್ಲಿ ನೀಡಿರುವ ಸಲಹೆಗಳು ನಿಮಗೆ ಸಹಾಯಕವಾಗಬಲ್ಲದು.

Priyanka Gowda

eMail
Whats_app_banner