ಊರುಬದಿ: ಏಡಿ ಹಿಡಿಯುವುದರಲ್ಲಿ ಮಲೆನಾಡ ಮಂದಿ ಎತ್ತಿದ ಕೈ; ಮಳೆಗಾಲ ಬಂತಂದ್ರೆ ಗದ್ದೆ-ತೋಟದಲ್ಲಿ ಏಡಿ ಬೇಟೆ.. ಹಿಡಿಯುವ ಟ್ರಿಕ್ಸ್ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಊರುಬದಿ: ಏಡಿ ಹಿಡಿಯುವುದರಲ್ಲಿ ಮಲೆನಾಡ ಮಂದಿ ಎತ್ತಿದ ಕೈ; ಮಳೆಗಾಲ ಬಂತಂದ್ರೆ ಗದ್ದೆ-ತೋಟದಲ್ಲಿ ಏಡಿ ಬೇಟೆ.. ಹಿಡಿಯುವ ಟ್ರಿಕ್ಸ್ ನೋಡಿ

ಊರುಬದಿ: ಏಡಿ ಹಿಡಿಯುವುದರಲ್ಲಿ ಮಲೆನಾಡ ಮಂದಿ ಎತ್ತಿದ ಕೈ; ಮಳೆಗಾಲ ಬಂತಂದ್ರೆ ಗದ್ದೆ-ತೋಟದಲ್ಲಿ ಏಡಿ ಬೇಟೆ.. ಹಿಡಿಯುವ ಟ್ರಿಕ್ಸ್ ನೋಡಿ

Urubadi Column-Crab Catching-Malnad Life: 'ಊರುಬದಿ' , ಇದು ಎಚ್‌ಟಿ ಕನ್ನಡದ (Hindustan Times Kannada) ನೂತನ ಅಂಕಣ. ಮಲೆನಾಡಿನ ಬದುಕು-ಸಂಸ್ಕೃತಿ-ಪರಂಪರೆ ಕಟ್ಟಿಕೊಡುವ ಈ ಅಂಕಣ ಪ್ರತಿ ಶನಿವಾರ ಪ್ರಕಟವಾಗುತ್ತದೆ.

ಮಲೆನಾಡಿನಲ್ಲಿ ಏಡಿ ಹಿಡಿಯುವ ಕುರಿತು ಈ ವಾರ ಊರುಬದಿ ಅಂಕಣ
ಮಲೆನಾಡಿನಲ್ಲಿ ಏಡಿ ಹಿಡಿಯುವ ಕುರಿತು ಈ ವಾರ ಊರುಬದಿ ಅಂಕಣ

ಮೊದಲೇ ಮಲೆನಾಡು ಚಂದ. ಮಳೆಗಾಲದಲ್ಲಿ ಇನ್ನೂ ಅಂದ. ಸುತ್ತಲ ಹಚ್ಚ ಹಸಿರು, ದಟ್ಟವಾಗಿ ಬೆಳೆದುಕೊಳ್ಳುವ ಕಾಡು, ನದಿ-ಕೆರೆ-ಹೊಳೆಗಳು ತುಂಬಿರುವುದನ್ನ ನೋಡುವುದೇ ಕಣ್ಣಿಗೆ ಹಬ್ಬ. ಮುಂಗಾರು ಆರಂಭವಾದ ಕೆಲ ದಿನಗಳಲ್ಲಿ ಮಲೆನಾಡು ಜನರು ಏಡಿ, ಅಣಬೆ, ಕಳಲೆಗಾಗಿ ಹುಡುಕಾಟ ಶುರು ಮಾಡುತ್ತಾರೆ. ವರ್ಷಕ್ಕೊಮ್ಮೆ ಹೇರಳವಾಗಿ ಸಿಗುವ ಇವುಗಳನ್ನು ಹುಡುಕಿ ತಂದು ಸಾರು, ಪಲ್ಯ ಮಾಡಿ ಸವಿಯುತ್ತಾರೆ. ಅಣಬೆ, ಕಳಲೆಯನ್ನು ಹುಡುಕಿದ ನಂತರ ಅದನ್ನು ಕಿತ್ತು ತರುವುದು ಸುಲಭ. ಆದರೆ ಏಡಿ ಮಾತ್ರ ಕಿಲಾಡಿ. ಅದನ್ನ ಹಿಡಿಯೋಕೆ ಹರಸಾಹಸ ಪಡಬೇಕು, ಆದ್ರೆ ನಮ್ಮ ಮಲೆನಾಡ ಮಂದಿ ಏಡಿ ಹಿಡಿಯೋದ್ರಲ್ಲಿ ಎತ್ತಿದ ಕೈ. ಎಲ್ಲರಿಗೂ ಹಿಡಿಯಲು ಆಗದಿದ್ದರೂ ಕೆಲವರು ಇದರಲ್ಲಿ ಪರಿಣತಿ ಹೊಂದಿರುತ್ತಾರೆ.

ಮಲೆನಾಡು ಬದಿಯ ಪ್ರತಿಯೊಂದು ತೋಟಗಳಲ್ಲಿ ತೋಡು ಅಥವಾ ಕಾಲುವೆಗಳನ್ನ ನಿರ್ಮಾಣ ಮಾಡಿರುತ್ತಾರೆ. ತೋಟದ ಮಧ್ಯಭಾಗ ಅಥವಾ ಅಂಚಿನ ಭಾಗದಲ್ಲಿ ತೋಡುಗಳನ್ನ ನಿರ್ಮಿಸಿರುತ್ತಾರೆ. ಮಳೆಗಾಲದಲ್ಲಿ ಇಲ್ಲಿ ಸಂಗ್ರಹವಾಗುವ ನೀರನ್ನ ತೋಟಕ್ಕೆ ಬಳಸಿಕೊಳ್ಳುತ್ತಾರೆ. ತೋಟ ಮಾತ್ರವಲ್ಲ ಗದ್ದೆಗಳಲ್ಲೂ ತೋಡು ನಿರ್ಮಿಸಲಾಗಿರುತ್ತದೆ. ಮಳೆಗಾಲದಲ್ಲಿ ಊರಲ್ಲಿನ ಕೆರೆಗಳು ತುಂಬಿದಾಗ ಆ ನೀರು ಹರಿದು ತೋಟ-ಗದ್ದೆಗಳಿಗೆ ನುಗ್ಗುತ್ತವೆ. ಬೆಳೆ ಹಾಳಾಗಬಾರದೆಂದೂ ತೋಡುಗಳನ್ನು ಕಟ್ಟಿರುತ್ತಾರೆ. ಹೀಗೆ ತೋಟ-ಗದ್ದೆಗಳಲ್ಲಿ ಕಟ್ಟಿರುವ ತೋಡು-ಕಾಲುವೆಗಳಲ್ಲಿ ಸಂಗ್ರಹವಾಗುವ ನೀರಿನಲ್ಲಿ ಏಡಿಗಳು ಇರುತ್ತವೆ. ಈ ಏಡಿಗಳನ್ನು ಹಿಡಿಯುವುದೇ ಒಂದು ಸಾಹಸ.

ಮೊದಲು ಒಂದು ಹಗ್ಗದಲ್ಲಿ ಕೋಳಿ ಕರುಳನ್ನು ಸುತ್ತಿ ಸುತ್ತಿ ಕಟ್ಟಿಕೊಳ್ಳಬೇಕು. ನಂತರ ಒಂದು ಉದ್ದನೆಯ ಹಗ್ಗದಲ್ಲಿ ಕಲ್ಲನ್ನು ಕಟ್ಟಿಕೊಳ್ಳಬೇಕು. ನಂತರ ಕೋಳಿ ಕರುಳು ಕಟ್ಟಿದ ಹಗ್ಗವನ್ನು ಕಲ್ಲು ಕಟ್ಟಿದ ಹಗ್ಗದ ಭಾಗದಲ್ಲಿ ಕಟ್ಟಬೇಕು. ಈಗ ಕಲ್ಲು-ಕರುಳು ಒಂದೇ ಕಡೆ ಆಗುತ್ತದೆ. ನಂತರ ಈ ಉದ್ದನೆಯ ಕಲ್ಲು-ಕರುಳು ಕಟ್ಟಿದ ಹಗ್ಗವನ್ನು ತೋಡಿನೊಳಗೆ ಬಿಡಬೇಕು. ತೋಡಿನೊಳಗೆ ಇರುವ ಕಲ್ಲುಗಳ ಅಡಿ ಅಥವಾ ತೋಡಿನ ಬದಿಯಲ್ಲಿನ ಸಂದುಗಳಲ್ಲಿ ಏಡಿ ಇರುತ್ತವೆ. ಇವು ಕೋಳಿ ಕರುಳಿನ ವಾಸನೆ ಹಿಡಿದು ಅದರ ಬಳಿ ಬರುತ್ತವೆ. ಆದರೆ ಇವು ಬರಲು ಸ್ವಲ್ಪ ಸಮಯ ಬೇಕು ಮತ್ತು ಮನುಷ್ಯರೇ ಹಗ್ಗ ಹಿಡಿದು ನಿಂತರೆ ಶೇಕ್​ ಆಗುತ್ತಾ ಇರುತ್ತದೆ, ಹೀಗಾಗಿ ಏಡಿಗಳು ಬರುವುದಿಲ್ಲ. ಅದಕ್ಕಾಗಿ ಆ ಹಗ್ಗವನ್ನು ಹಿಡಿದು ನಿಲ್ಲುವ ಬದಲು ಪಕ್ಕದಲ್ಲಿರುವ ಮರಗಳಿಗೆ ಕಟ್ಟಬಹುದು ಅಥವಾ ನಾವೇ ಒಂದು ಕಂಬ ಹುಗಿದು ಕಟ್ಟಬಹುದು.

ಸಾಮಾನ್ಯವಾಗಿ ಏಡಿಗಳಿಗೆ ಆರು ಅಥವಾ ಎಂಟು ಕಾಲುಗಳು ಮತ್ತು ಮುಂಭಾಗದಲ್ಲಿ ಎರಡು ದೊಡ್ಡ ಕೊಂಬುಗಳು ಇರುತ್ತದೆ. ಆ ಕೊಂಬುಗಳು ತುಂಬಾ ಅಪಾಯಕಾರಿ. ಅದರಲ್ಲಿ ಏನೇ ಸಿಲುಕಿಕೊಂಡರೂ ತಪ್ಪಿಸಿಕೊಳ್ಳುವುದು ಕಷ್ಟಕರ. ಅಷ್ಟು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ ಮತ್ತು ಅಷ್ಟು ಹರಿತವಾಗಿರುತ್ತದೆ. ಮನುಷ್ಯರ ಬೆರೆಳು ಸಿಕ್ಕಿ ಹಾಕಿಕೊಂಡರೇ ಕತ್ತರಿಸಿಯೇ ಬಿಡುತ್ತವೆ. ಅದಕ್ಕೆ ಹೇಳಿದ್ದು ಏಡಿ ಹಿಡಿಯಲು ಟ್ರಿಕ್ಸ್ ಬೇಕು ಅಂತ. ಈಗ ಕೇಳಿ, ಮಾಂಸದ ಹಗ್ಗ ಇಳಿಬಿಟ್ಟ 5-10 ನಿಮಿಷಗಳಲ್ಲಿ ನಿಧಾನವಾಗಿ ಏಡಿಗಳು ಬಂದು ಕರುಳನ್ನು ಮುತ್ತಿಹಾಕಿಕೊಳ್ಳುತ್ತವೆ. ಕೊಂಬುಗಳಲ್ಲಿ ಮಾಂಸವನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ನಾವು ಆ ಹಗ್ಗವನ್ನು ಮೇಲಕ್ಕೆತ್ತಲು ಪ್ರಯತ್ನಿಸಿದಾಗ ಮಾಂಸವನ್ನು ಏನೋ ಎಳೆಯುತ್ತಿದೆ ಎಂದೆನಿಸಿದರೆ ಅಲ್ಲಿ ಏಡಿಗಳು ಬಂದಿವೆ ಎಂದು ಅರ್ಥ. ಹೀಗೆ ಗಮನಕ್ಕೆ ಬಾರದಿದ್ದರೂ ಕೂಡ 5 ನಿಮಿಷದ ಬಳಿಕ ಹಗ್ಗವನ್ನು ಮೇಲಕ್ಕೆತ್ತಿದರೆ ಏಡಿಗಳು ಸಿಕ್ಕಿವೆಯಾ ಇಲ್ಲವಾ ಎಂಬುದು ಗೊತ್ತಾಗುತ್ತದೆ.

ಹೀಗೆ ಸಿಕ್ಕ ಏಡಿಗಳನ್ನು ಮೇಲಕ್ಕೆತ್ತಿ ಒಂದು ದೊಡ್ಡ ಬಕೆಟ್​ ಒಳಗೆ ಇಳಿಸಬೇಕು. ಮತ್ತೆ ಹಗ್ಗವನ್ನು ಬಿಡುತ್ತಾ ಹೀಗೆ ಐದೈದು ನಿಮಿಷ ಬಿಟ್ಟು ಹಗ್ಗ ಮೇಲಕ್ಕೆತ್ತುತ್ತಾ ಸಿಕ್ಕ ಏಡಿಗಳನ್ನು ಬಕೆಟ್​ ಒಳಗೆ ಇಳಿ ಬಿಡುತ್ತಾ ಇರಬೇಕು. ಏಡಿಯನ್ನು ಕೈಯಲ್ಲಿ ಹೇಗೇಗೋ ಹಿಡಿಯಲು ಆಗುವುದಿಲ್ಲ. ಅದರ ಮುಂಭಾಗದ ಕೊಂಬುಗಳನ್ನು ಎರಡೂ ಕೈಯಲ್ಲಿ ಹಿಡಿಯಬೇಕು. ಅದನ್ನ ಸಾಯಿಸುವುದೂ ಕೂಡ ಈ ಕೊಂಬುಗಳನ್ನ ಮುರಿದೇ. ಕೊಂಬುಗಳನ್ನ ಮುರಿದರೂ ಏಡಿಯ ಉಳಿದ ಭಾಗದಲ್ಲಿ ಜೀವ ಇರುತ್ತದೆ. ಆದರೆ ಕೊಂಬು ಮುರಿದ ಕೆಲ ಸಮಯದಲ್ಲಿ ಅವು ಸಾಯುತ್ತವೆ.

ಕೆರೆಯಲ್ಲಿ ತುಂಬಾ ಪ್ರಮಾಣದಲ್ಲಿ ಏಡಿಗಳನ್ನು ಹಿಡಿಯುವಾದರೆ ಅದಕ್ಕಾಗಿಯೇ ಬೆತ್ತದ ಬುಟ್ಟಿಯನ್ನು ತಯಾರಿಸಲಾಗಿರುತ್ತದೆ. ಹಗ್ಗಕ್ಕೆ ಆ ಬುಟ್ಟಿಯೊಳಗೆ ಮೀನಿನ ತ್ಯಾಜ್ಯ (ಪಚ್ಚಿ, ಕರುಳು)ವನ್ನು ಹಾಕಿ ಹಿಂದಿನ ದಿನ ರಾತ್ರಿಯೇ ಕೆರೆಯೊಳಗೆ ಬುಟ್ಟಿ ಬಿಟ್ಟು ಹಗ್ಗವನ್ನು ಮೊದಲು ಹೇಳಿದಂತೆ ಮರ ಅಥವಾ ಕಂಬಕ್ಕೆ ಕಟ್ಟಿ ಬಿಡಬೇಕು. ಆ ಬುಟ್ಟಿಯ ಬಾಯಿ ಹೇಗಿರುತ್ತದೆ ಎಂದರೆ ಏಡಿಗಳು ಬುಟ್ಟಿಯೊಳಗೆ ಮಾತ್ರ ಹೋಗಬಹುದು ಆದರೆ ಹೊರಗಡೆ ಬರಲು ಆಗುವುದಿಲ್ಲ. ಒಂದು ರಾತ್ರಿಯೊಳಗೆ ಆ ಬುಟ್ಟಿಯೊಳಗೆ ಸಾಕಷ್ಟು ಏಡಿ ನುಗ್ಗಿ ಬಂದಿರುತ್ತವೆ. ನದಿಯ ದಂಡೆಗಳ ಬದಿ ಸಂದುಗಳಲ್ಲಿಯೂ ಏಡಿ ಇರುತ್ತವೆ. ಕೆಲವರು ಗಟ್ಟಿ ಇರುವ ಬಲೆಗಳನ್ನ ಸಹ ಬಳಸಿ ಏಡಿ ಹಿಡಿಯುತ್ತಾರೆ.

ತೋಟ-ಗದ್ದೆ-ಕೆರೆ ಬಿಟ್ಟು, ಕೆರೆ ತುಂಬಿ ನೀರು ಹರಿದು ಹೋಗುವ ಇತರ ಜಾಗದಲ್ಲಿ ಕಲ್ಲು- ಬಂಡೆಗಳಿದ್ದರೆ ಅವುಗಳ ಅಡಿಯಲ್ಲಿಯೂ ಏಡಿಗಳು ಅಡಗಿ ಕುಳಿತಿರುತ್ತವೆ. ಅವುಗಳನ್ನ ಹಿಡಿಯುವ ವೇಳೆ ಕಲ್ಲು-ಬಂಡೆಗಳನ್ನು ಸರಿಸಿ ಕೊಂಬುಗಳನ್ನು ಎರಡೂ ಕೈಯಲ್ಲಿ ಹಿಡಿಯಬೇಕು. ತುಂಬಾ ದೊಡ್ಡ ಏಡಿ ಸಿಕ್ಕು ಅದರೊಳಗೆ ಹೆಚ್ಚು ಮಾಂಸವಿಲ್ಲವೆಂದರೆ ಅದು ಹಳೆಯ ಏಡಿ ಎಂದರ್ಥ, ಅಂದರೆ ಒಂದು ವರ್ಷದ ಹಿಂದಿನ ಏಡಿ ಅದಾಗಿರುತ್ತದೆ ಎಂದು ಬಲ್ಲವರು ಹೇಳುತ್ತಾರೆ. ಕೊಂಬು ಮುರಿದು ಏಡಿ ಸತ್ತಮೇಲೆ ರುಚಿರುಚಿಯಾಗಿ ಏಡಿ ಸಾರು ಅಥವಾ ಸುಕ್ಕ ಮಾಡಿ ಸವಿಯುತ್ತಾರೆ. ಒಂದು-ಎರಡು ಏಡಿ ಅಷ್ಟೇ ಸಿಕ್ಕರೆ ಅದನ್ನ ಸುಟ್ಟುಕೊಂಡು ತಿನ್ನುತ್ತಾರೆ. ಇದರ ರುಚಿ ಮತ್ತು ಇದನ್ನು ಸವಿಯುವ ಆನಂದವೇ ಮಲೆನಾಡು ಮಂದಿಗೆ ಸ್ವರ್ಗ.

-ಮೇಘನಾ ಬಿ. ಸಾಗರ

Whats_app_banner