ಊರುಬದಿ: ಮಲೆನಾಡಿಗರ ಬದುಕು ಕಟ್ಟಿಕೊಡುವ ಅಡಿಕೆ ಬೆಳೆ; ರೈತರ ಸಂಕಷ್ಟಗಳೂ ಹಲವಾರು
ಕನ್ನಡ ಸುದ್ದಿ  /  ಜೀವನಶೈಲಿ  /  ಊರುಬದಿ: ಮಲೆನಾಡಿಗರ ಬದುಕು ಕಟ್ಟಿಕೊಡುವ ಅಡಿಕೆ ಬೆಳೆ; ರೈತರ ಸಂಕಷ್ಟಗಳೂ ಹಲವಾರು

ಊರುಬದಿ: ಮಲೆನಾಡಿಗರ ಬದುಕು ಕಟ್ಟಿಕೊಡುವ ಅಡಿಕೆ ಬೆಳೆ; ರೈತರ ಸಂಕಷ್ಟಗಳೂ ಹಲವಾರು

Urubadi Column-Arecanut-Malnad Life: 'ಊರುಬದಿ' , ಇದು ಎಚ್‌ಟಿ ಕನ್ನಡದ (Hindustan Times Kannada) ನೂತನ ಅಂಕಣ. ಮಲೆನಾಡಿನ ಬದುಕು-ಸಂಸ್ಕೃತಿ-ಪರಂಪರೆ ಕಟ್ಟಿಕೊಡುವ ಈ ಅಂಕಣ ಪ್ರತಿ ಶನಿವಾರ ಪ್ರಕಟವಾಗಲಿದೆ.

ಊರುಬದಿ ಅಂಕಣದಲ್ಲಿ ಮಲೆನಾಡು ಮತ್ತು ಅಡಿಕೆ (photo-twitter/@@satheesh_ds)
ಊರುಬದಿ ಅಂಕಣದಲ್ಲಿ ಮಲೆನಾಡು ಮತ್ತು ಅಡಿಕೆ (photo-twitter/@@satheesh_ds)

ಮಲೆನಾಡಿನ ಬಹುತೇಕ ಜನರಿಗೆ ಅಡಿಕೆಯೇ ಬದುಕು ಕಟ್ಟಿಕೊಡುವುದು. ಕೇವಲ ಅಡಿಕೆ ಬೆಳೆಯುವ ರೈತ ಮಾತ್ರ ಇದರಿಂದ ಬದುಕು ಕಟ್ಟಿಕೊಂಡಿಲ್ಲ. ಅಡಿಕೆ ಸುಲಿಯುವವರು, ಅಡಿಕೆ ಆರಿಸುವವರು ಮತ್ತು ಅದನ್ನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರು ಸಹ ಅಡಿಕೆಯನ್ನ ನಂಬಿ ಜೀವನ ನಡೆಸುತ್ತಿದ್ದಾರೆ. ಮಲೆನಾಡಿನ ಎಷ್ಟೊ ಹೆಂಗಸರು ದಿನನಿತ್ಯ ಒಣ ಅಡಿಕೆ ಸುಲಿದೇ ಜೀವನ ಸಾಗಿಸುತ್ತಿದ್ದಾರೆ. ಶಾಲಾ-ಕಾಲೇಜಿಗೆ ಹೋಗುವ ಬಡ ಮಕ್ಕಳು ಬಿಡುವಿನ ಸಮಯದಲ್ಲಿ ಒಣ ಅಡಿಕೆ ಸುಲಿದು ಸಣ್ಣಪುಟ್ಟ ವಿದ್ಯಾಭ್ಯಾಸದ ಖರ್ಚಿಗೆ ದುಡ್ಡು ಮಾಡಿಕೊಳ್ಳುವುದೂ ಉಂಟು. ಮಲೆನಾಡು ಭಾಗದಲ್ಲಿ ಅದರಲ್ಲಿಯೂ ಹೆಚ್ಚಾಗಿ ಸಾಗರ-ಹೊಸನಗರ ಭಾಗಗಳಲ್ಲಿ ನವೆಂಬರ್​ ಎರಡನೇ ವಾರದ ಬಳಿಕ ಅಡಿಕೆ ಕೊಯ್ಲು ಆರಂಭವಾಗುತ್ತದೆ. ಆಗ ಅಡಿಕೆ ಬೆಳೆಯುವ ರೈತನ ಮನೆ ಅಂಗಳ-ಹಂಚು-ತಾರಸಿ ಹೀಗೆ ಎಲ್ಲೆಲ್ಲೂ ನೋಡಿದರೆ ಅಡಿಕೆಯೇ ಕಾಣುತ್ತದೆ.

ಅಡಿಕೆ ಸಸಿ ಮರವಾಗಿ ಬೆಳದು ಬೆಳೆ ಕೊಡಲು ಐದಾರು ವರ್ಷಗಳು ಬೇಕು. ಅಡಿಕೆ ಕೊಯ್ಲು ಆಗುತ್ತಿದ್ದಂತೆಯೇ ಮರದಿಂದ ಕೊಯ್ದ ಒಂದರಿಂದ ಮೂರು ದಿನಗಳ ಒಳಗೆ ಹಸಿ ಅಡಿಕೆಯನ್ನು (ಹಸಿರು ಬಣ್ಣದ ಅಡಿಕೆ) ಸುಲಿಯಬೇಕು. ಸುಲಿದ ಅಡಿಕೆಯನ್ನು ಬೇಯಿಸಲಾಗುತ್ತದೆ. ದೊಡ್ಡ ತಾಮ್ರದ ಹಂಡೆಯಲ್ಲಿ ನೀರು, ಮರದ ಚೆಕ್ಕೆ ಹಾಗೂ ಸುಣ್ಣ ಹಾಕಿ ಅಡಿಕೆಯನ್ನು ಬೆರೆಸಿ ಬೇಯಿಸಬೇಕು. ಅಡಿಕೆ ಬೆಂದಂತೆ ಅಡಿಕೆಯಲ್ಲಿರುವ ಸಣ್ಣ ಕಣ್ಣು ಅಡಿಕೆಯಿಂದ ಬೇರ್ಪಟ್ಟು ಮೇಲೆ ಬರುತ್ತದೆ. ಬಳಿಕ ದೊಡ್ಡ ಬೆತ್ತದ ಬುಟ್ಟಿಗೆ ಅಡಿಕೆಯನ್ನು ಹಂಡೆಯಿಂದ ತೆಗೆದು ಹಾಕಿ ನೀರೆಲ್ಲ ಸೋರಿ ಹೋದ ಮೇಲೆ ಬಿಸಿಲಲ್ಲಿ ಅಡಿಕೆ ಹಾಕಿ ಒಣಗಿಸಬೇಕು. ಸರಿಯಾಗಿ ಒಣಗಲಿ ಎಂದು ಅದನ್ನ ಪ್ರತಿದಿನವೂ ಹರಡುತ್ತಾ ಇರುತ್ತಾರೆ. ಇದನ್ನು ಒಣಗಿಸಲೆಂದೆ ಮನೆ ಅಂಗಳದಲ್ಲಿ, ಹಿತ್ತಲಲ್ಲಿ ಒಂದಿಷ್ಟು ಜಾಗ ಮೀಸಲಿಡಲಾಗುತ್ತದೆ.

ಅಡಿಕೆ ಒಣಗಿದ ಮೇಲೆ ಅದಕ್ಕೆ ತೊಗರು ಬಣ್ಣ ಹಾಕಲಾಗುತ್ತದೆ. ಅಡಿಕೆ ಬೇಯಿಸಿದ ನೀರು ಇರುತ್ತದೆಯಲ್ಲ ಅದೇ ನೀರನ್ನ ಬಿಸಿಲಿನಲ್ಲಿ ಇಟ್ಟರೆ ಅದರು ತೊಗರು ಬಣ್ಣವಾಗಿ ಬದಲಾಗುತ್ತದೆ. ಈ ನೀರಿನಲ್ಲಿ ಮತ್ತೆ ಒಣಗಿದ ಅಡಿಕೆಯನ್ನು ಮಿಂದೇಳಿಸಿ ನೀರು ಆರಿಸಿ ಮತ್ತೆ ನಾಲ್ಕೈದು ದಿನ ಬಿಸಿಲಿನಲ್ಲಿ ಒಣಗಿಸಬೇಕು. ಮನೆಯಲ್ಲಿ ಕವಳ ಹಾಕಲು ಬಳಸುವ ಅಡಿಕೆಗೆ ತೊಗರು ಬಣ್ಣ ಹಾಕಲ್ಲ.

ಮನೆ ಅಂಗಳದಲ್ಲಿ ದೊಡ್ಡ ಚಪ್ಪರ ನಿರ್ಮಿಸಿ ಅದರ ಮೇಲೆ ಮರದಲ್ಲೇ ಹಣ್ಣಾದ ಗೋಟು ಅಡಿಕೆಯನ್ನ (ಕೇಸರಿ ಬಣ್ಣಕ್ಕೆ ತಿರುಗಿದ ಅಡಿಕೆ) ಬಿಸಿಲಿನಲ್ಲಿ ಒಣಗಿಸುತ್ತಾರೆ. ಈ ಅಡಿಕೆ ಸಂಪೂರ್ಣ ಒಣಗಿದ ಮೇಲೆ ಅದನ್ನು ಸುಲಿಯಲಾಗುತ್ತದೆ. ಇದನ್ನು ಹಸಿ ಅಡಿಕೆಯಂತೆ ಮೂರು ದಿನಗಳ ಒಳಗೆ ಸುಲಿದು ಮುಗಿಸಬೇಕು ಎಂದೇನಿಲ್ಲ. ಒಂದು ವರ್ಷದ ವರೆಗೂ ಇದನ್ನು ಸಂಗ್ರಹಿಸಿಟ್ಟು ಬೇಕಾದಾಗ ಸುಲಿಯಬಹುದು. ಇದು ಬಿಸಿಲಿನಲ್ಲಿ ಎಷ್ಟು ಒಣಗುತ್ತೋ ಅಷ್ಟು ಸುಲಿಯಲು ಸುಲಭ. ಈ ಅಡಿಕೆಗೆ ಚಾಲಿ ಎಂದು ಕರೆಯಲಾಗುತ್ತದೆ.

ಹಸಿ ಅಡಿಕೆಯನ್ನು ತೆಂಗಿನಕಾಯಿ ತುರಿಯುವ ಮಣೆಯಂತೆಯೇ ಅಡಿಕೆ ಸುಲಿಯಲು ಮೆಟ್ಟುಕತ್ತಿ ಎಂದು ಇರುತ್ತವೆ. ಹಸಿ ಅಡಿಕೆ ಸುಲಿಯಲು ಹಾಗೂ ಒಣ ಅಡಿಗೆ ಸುಲಿಯಲು ಬೇರೆ ಬೇರೆ ಮೂತಿಯ ಕತ್ತಿಗಳು ಬೇಕು. ಒಣ ಅಡಿಕೆ ಸುಲಿಯುವ ಮೆಟ್ಟುಕತ್ತಿಯಲ್ಲಿನ ಕತ್ತಿ ಸ್ವಲ್ಪ ಚೂಪಗಿದ್ದರೆ, ಹಸಿ ಅಡಿಕೆ ಸುಲಿಯುವ ಮೆಟ್ಟುಕತ್ತಿಯಲ್ಲಿನ ಕತ್ತಿ ಅಗಲವಾಗಿ ಇರುತ್ತದೆ. ಇವೆರಡೂ ಕರಿತವಾದ ಕತ್ತಿಗಳಾಗಿದ್ದರಿಂದ ಅಡಿಕೆ ಸುಲಿಯುವಾಗ ಕೈ ಕುಕ್ಕಿಕೊಂಡು, ರಕ್ತ ಬರಿಸಿಕೊಂಡು ಗಾಯಗಳಾಗುವುದುಂಟು. ಗಾಯಕ್ಕೆ ಅರಿಶಿನ ಪುಡಿ ಹಾಕಿ, ಬೆರಳಿಗೆ ಬಟ್ಟೆ ಕಟ್ಟಿಕೊಂಡು ಅದೇ ಕೈಯಲ್ಲಿ ಮತ್ತೆ ಸುಲಿಯುತ್ತಾರೆ. ಇನ್ನು ಹಸಿ ಅಡಿಕೆ ಸುಲಿಯುವವರ ಅಂಗೈಗೆ ಅಡಿಕೆಯಲ್ಲಿನ ರಸ ಅಂಟಿ ಕೈ ಕಪ್ಪಾಗುತ್ತದೆ. ಇದು ಹೋಗಲು ಬಹಳ ದಿನಗಳು ಬೇಕು. ಪ್ರತಿನಿತ್ಯ ಸುಲಿದ ಬಳಿಕ ಹುಣಸೆಹಣ್ಣನ್ನು ಬಳಸಿ ಕೈ ಉಜ್ಜುತ್ತಿದ್ದರೆ ಅಷ್ಟೊಂದು ಕಲೆ ಇರುವುದಿಲ್ಲ. ಇನ್ನು ಅಡಿಕೆ ಸುಲಿದು ಸುಲಿದು ಅಂಗೈಯಲ್ಲಿ ಬಿರುಕು ಸಹ ಮೂಡುತ್ತದೆ.

ಚಾಲಿ ಅಡಿಕೆಯನ್ನು ಬಿಳಿಗೋಟು, ಉತ್ತಮ ಅಡಿಕೆ, ಮಾಣಿ, ಕಲವಾರ್, ಕುತುಬ್​ ಮಿನಾರ್, ಕೋಕಾ ಅಡಿಕೆಯಂದು 6 ಭಾಗಗಳಾಗಿ ಮಾಡಲಾಗುತ್ತದೆ. ಅಂದರೆ ಅವುಗಳನ್ನು ಆರಿಸುವಾಗಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ.. ಭಾರತದಿಂದ ರಫ್ತಾಗುವ ಕುತುಬ್​ ಮಿನಾರ್​ ಅಡಿಕೆಯನ್ನ ಯಾವುದೇ ದೇಶದಲ್ಲಿ ಮದುವೆಗೆ ಅಕ್ಷತೆಯಾಗಿ ಬಳಸುತ್ತಾರಂತೆ. ಅವು ಮಾಣಿ ಅಡಿಕೆಗಿಂತ ತೀರಾ ಚಿಕ್ಕದಾಗಿ ಇರುವುದರಿಂದ ಅದನ್ನು ನಮ್ಮಲ್ಲಿ ಅಕ್ಕಿಯನ್ನು ಅಕ್ಷತೆಯಾಗಿ ಬಳಸುವಂತೆ ಅಲ್ಲಿ ಕುತುಬ್​ ಮಿನಾರ್​ ಅಡಿಕೆಯನ್ನು ಅಕ್ಷತೆಯಾಗಿ ಬಳಸುತ್ತಾರೆ. ಕೆಂಪಡಿಕೆಯಲ್ಲಿ ಬೆಟ್ಟೆ, ಮುರಿ, ಚಿಕಣಿ, ಕೋಕಾ ( ಲಡ್ಡಾದ ಅಡಿಕೆ) ಎಂಬ ನಾಲ್ಕು ವಿಧಗಳಿವೆ. ಎಂದು ಪ್ರತಿನಿತ್ಯ ಅಡಿಕೆ ಆರಿಸುವ ಕೆಲಸಕ್ಕೆ ಹೋಗುವ ಶಿವಮೊಗ್ಗದ ಸಾಗರ ತಾಲೂಕಿನ ಆದಿಶಕ್ತಿನಗರ ಗ್ರಾಮದ ಯಶೋಧ ಹೇಳುತ್ತಾರೆ.

ಅಡಿಕೆ ಬೆಳೆಯುವ ರೈತರ ಸಂಕಷ್ಟಗಳು

ಸಾಮಾನ್ಯವಾಗಿ ಮಲೆನಾಡು ಭಾಗದಲ್ಲಿ ನವೆಂಬರ್​ ಎರಡನೇ ವಾರದ ಬಳಿಕ ಅಡಿಕೆ ಕೊಯ್ಲು ಆರಂಭವಾಗುತ್ತದೆ. ಕೆಲವೊಮ್ಮೆ ವಾಡಿಕೆಗಿಂತ ಮೊದಲೇ ಅಡಿಕೆ ಹಣ್ಣಾಗಲು ಪ್ರಾರಂಭಿಸುತ್ತದೆ. ಅಕಾಲಿಕ ಮಳೆ ಅಥವಾ ತಾಪಮಾನದಲ್ಲಿನ ವ್ಯತ್ಯಾಸದ ಕಾರಣ ನವೆಂಬರ್​ ತಿಂಗಳ ಒಳಗೇ ಅಡಿಕೆ ಹಣ್ಣಾಗಿ ರೈತರಲ್ಲಿ ಆತಂಕ ಸೃಷ್ಟಿಸುತ್ತವೆ. ಕೊಯ್ಲು ಮಾಡೋಣವೆಂದರೆ ಮಳೆ ನಿಲ್ಲದೆ ಬೆಳೆ ನಾಶವಾಗುತ್ತದೆ.

ಮಲೆನಾಡು ಭಾಗಗಳಲ್ಲಿ ಮಳೆಗಾಲದಲ್ಲಿ ಬಸವನ ಹುಳು ಅಥವಾ ಶಂಕು ಹುಳುಗಳ ಹಾವಳಿ ಹೆಚ್ಚಾಗಿರುತ್ತವೆ. ನೋಡಲು ಸೌಮ್ಯ ಸ್ವಭಾವದಂತೆ ಕಾಣುವ ಬಸವನ ಹುಳುಗಳು ಆಕ್ರಮಣಕಾರಿ ಗುಣವನ್ನು ಹೊಂದಿರುತ್ತವೆ. ಅಡಿಕೆ ಮರವನ್ನು ಕೊರೆಯುತ್ತವೆ. ಮಳೆಗಾಲದಲ್ಲಿ ಅಡಿಕೆ ಮರದಲ್ಲಿ ಬೆಳೆಯುವ ಹಿಂಗಾರು ಹೂವಿನ ಮೇಲೆ ದಾಳಿ ಮಾಡುತ್ತವೆ. ಎಕರೆಗಟ್ಟಲೆ ತೋಟವನ್ನು ಹಾಳು ಮಾಡುತ್ತವೆ. ಮೊದಲೆಲ್ಲ ಅಡಿಕೆ ಜೊತೆ ಬಾಳೆ ಗಿಡ, ಏಲಕ್ಕಿ, ಕಾಳು ಮೆಣಸು, ಹೀಗೆ ಉಪಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಈಗ ಹುಳು-ರೋಗಗಳ ಕಾರಣ ಬೆಳೆಯಲಾಗುತ್ತಿಲ್ಲ.

ಇನ್ನು ಮೊದಲಿನಂತೆ ಅಡಿಕೆ ಕೊಯ್ಯಲು ಗಂಡಾಳುಗಳು ಅಥವಾ ಸುಲಿಸಲು ಹೆಣ್ಣಾಳುಗಳು ಸಿಗೋದಿಲ್ಲ. ಹಸಿ ಅಡಿಕೆಯನ್ನು ಮೂರು ದಿನದೊಳಗಾಗಿ ಸುಲಿಸಬೇಕಾಗಿರುವುದರಿಂದ ಆ ಸಮಯಕ್ಕೆ ಸರಿಯಾಗಿ ಆಳುಗಳು ಸಿಗುವುದಿಲ್ಲ. ಸಿಕ್ಕರೂ ಅವರಿಗೆ ಡಿಮ್ಯಾಂಡ್​ ಜಾಸ್ತಿ. ಅವರಿಗೆ ಡಬ್ಬದ ಲೆಕ್ಕದಲ್ಲಿ ಹಣ ಕೊಡುವ ಜೊತೆ ಊಟ-ತಿಂಡಿ ವ್ಯವಸ್ಥೆಯನ್ನೂ ಮಾಡಬೇಕು. ಇವರೊಂದಿಗೆ ಅಡಿಕೆ ಮಾಲೀಕರ ಮನೆ ಮಂದಿಯೂ ಕುಳಿತು ಸುಲಿಯುತ್ತಾರೆ. ಹಸಿ ಅಡಿಕೆಯಾಗಲಿ ಒಣ ಅಡಿಕೆಯಾಗಲಿ ಹೆಂಗಸರು ಕಷ್ಟ-ಸುಖಗಳನ್ನ ಮಾತಾಡುತ್ತಾ ಬೇಜಾರು ಬರದಂತೆ ಸುಲಿಯುತ್ತಾರೆ. ಇನ್ನು ತೋಟದ ನಿರ್ವಹಣೆಗೂ ಕೂಲಿ ಆಳು ಸಿಗುತ್ತಿಲ್ಲ.

ಅಡಿಕೆ ಕೊಯ್ಯೋದರಿಂದ ಹಿಡಿದು ಸುಲಿಯಲು ಯಂತ್ರಗಳು ಬಂದಿವೆ. ಆದರೆ ದುಬಾರಿ ಯಂತ್ರಗಳನ್ನು ಖರೀದಿಸಲು ಎಲ್ಲಾ ಸಣ್ಣ ರೈತರಿಗೂ ಆಗುವುದಿಲ್ಲ. ಕೆಲವೊಮ್ಮ ಅಡಿಕೆ ಬೆಳೆಗೆ ಸರಿಯಾದ ಬೆಲೆ ಸಿಗುವುದಿಲ್ಲ. ತೋಟದ ನಿರ್ವಹಣೆ , ಅಡಿಕೆ ಕೊಯ್ಲು-ಸುಲಿಯುವುದು ಹೀಗೆ ಅದರ ಎಲ್ಲಾ ಪ್ರಕ್ರಿಯೆ ಮುಗಿಸಿ ಉತ್ತಮ ಬೆಲೆಗೆ ಬೆಳೆ ಮಾರಾಟವಾಗಿಲ್ಲ ಅಂದ್ರೆ ಬಂಡವಾಳಕ್ಕೂ - ಲಾಭಕ್ಕೂ ವ್ಯತ್ಯಾಸವಿಲ್ಲದಂತೆ ಆಗುತ್ತದೆ. ಹಾಗೆಯೆ, ಅಡಿಕೆ ಸೇರಿದಂತೆ ತೋಟ-ಗದ್ದೆ ನೋಡಿಕೊಂಡು ಜೀವನ ಸಾಗಿಸುವ ರೈತರನ್ನು ಮದುವೆಯಾಗಲು ಹೆಣ್ಣುಮಕ್ಕಳು ಮುಂದೆ ಬರುತ್ತಿಲ್ಲ. ಅಡಿಕೆ ಬೆಳೆಯುವ ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಸರ್ಕಾರ ಹೆಚ್ಚಿನ ಸೌಲಭ್ಯ ಒದಗಿಸಲಿ ಎಂಬುದೇ ನಮ್ಮ ಆಶಯ.

Whats_app_banner