Malnad ಊರುಬದಿ: ಮರೆಯಾಗುತ್ತಿದೆ ಮಲೆನಾಡಿನ ಸೋಬಾನೆ ಪದ; ಸಾಗರದ ಮುದ್ದು ಅಜ್ಜಿ ಬಾಯಲ್ಲಿ ಕೇಳಿ ಸೋಬಾನೆ ಹಾಡಿನ ಶ್ರೀಮಂತಿಕೆ
Urubadi Column-Sobane Pada-Malnad Culture: 'ಊರುಬದಿ' , ಇದು ಎಚ್‌ಟಿ ಕನ್ನಡದ (Hindustan Times Kannada) ನೂತನ ಅಂಕಣ. ಮಲೆನಾಡಿನ ಬದುಕು-ಸಂಸ್ಕೃತಿ-ಪರಂಪರೆ ಕಟ್ಟಿಕೊಡುವ ಈ ಅಂಕಣ ಪ್ರತಿ ಶನಿವಾರ ಪ್ರಕಟವಾಗಲಿದೆ.
'ಸೋಬಾನೆ ಪದ', ಇದು ಜಾನಪದ ಕಲೆಯ ಒಂದು ಭಾಗ. ಈ ಕಲೆಯು ಕೇವಲ ಮೌಖಿಕವಾಗಿ ಒಬ್ಬರಿಂದ ಒಬ್ಬರಿಗೆ ದಾಟಿಬಂದಂತಹ ಕಲೆ. ಹೆಚ್ಚಾಗಿ ಮಲೆನಾಡಿನ ಭಾಗದಲ್ಲಿ ಸೋಬಾನೆ ಪದ ಶ್ರೀಮಂತಿಕೆಯನ್ನು ಹೊಂದಿದೆ. ಹಿಂದೆ ಈಗಿನ ಹಾಗೆ ಜನರಿಗೆ ಸಾಮಾಜಿಕ ಜಾಲತಾಣಗಳು ಇರಲಿಲ್ಲ. ಆ ಸಂದರ್ಭಲ್ಲಿ ಜಾನಪದ ಕಲೆಗಳೇ ಜನರಿಗೆ ನೋವು-ನಲಿವಿನಲ್ಲಿ ಮನಸ್ಸಿಗೆ ಹಿತ ನೀಡುತ್ತಿದ್ದವು. ಈ ಪೈಕಿ ಸೋಬಾನೆ ಪದ ಅಥವಾ ಸೋಬಾನೆ ಹಾಡು ಕೂಡ ಒಂದು.
ಆದರೆ ಈ ಸಂಗೀತ ಇಂದು ಅಳಿವಿನಂಚಿನಲ್ಲಿರುವುದು ನಿಜ. ಯಾಕೆಂದರೆ ಕೆಲವೇ ಕೆಲವು ತಲೆಮಾರುಗಳು ಮಾತ್ರ ಈ ಪದದ ಶ್ರೀಮಂತಿಕೆ ( ಕಲೆ ) ಹೊಂದಿದ್ದಾರೆ. ಮದುವೆ ಶಾಸ್ತ್ರಗಳು, ಹಬ್ಬಹರಿದಿನಗಳು, ಬಿತ್ತನೆ ಮಾಡುವಾಗ, ನಟ್ಟಿ (ನಾಟಿ) ಮಾಡುವಾಗ, ಅಕ್ಕಿ ಬೀಸುವಾಗ, ಭತ್ತ ಕುಟ್ಟುವಾಗ, ಹೀಗೆ ಗ್ರಾಮೀಣ ಭಾಗದಲ್ಲಿ ಹತ್ತು ಹಲವು ಕೆಲಸ ಮಾಡುವಾಗ ಸೋಬಾನೆ ಪದವನ್ನು ಮಹಿಳೆಯರು ಹಾಡುತ್ತಾರೆ. ಪ್ರತಿಯೊಂದು ಶಾಸ್ತ್ರ, ಕೆಲಸಗಳಿಗೂ ಬೇರೆ ಬೇರೆ ಸೋಬಾನೆ ಪದಗಳಿವೆ. ಕೆಲಸದ ನೋವು- ಒತ್ತಡಗಳನ್ನು ಮರೆಯಲು ಕೆಲಸದ ಜೊತೆ ಈ ಸೋಬಾನೆ ಪದ ಹಾಡುವುದು ರೂಢಿ. ಮನೆಯಲ್ಲಿ ಅಜ್ಜಿಯಿಂದ ಮಗಳಿಗೆ- ಮೊಮ್ಮಗಳಿಗೆ ಹೀಗೆ ಬಾಯಿಂದ ಬಾಯಿಗೆ ಬಂದ ಸಾಹಿತ್ಯ ಇದೀಗ ಮರೆಯಾಗುತ್ತಿದೆ ಎನ್ನುವುದೇ ಬೇಸರದ ಸಂಗತಿ. ಅಳಿವಿನಂಚಿನಲ್ಲಿರುವ ಒಂದು ಜಾನಪದ ಕಲೆಯಾಗಿದೆ ಸೋಬಾನೆ ಪದ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಸಮೀಪ ಮರ್ತೂರು ಎಂಬ ಗ್ರಾಮವಿದೆ. ಈ ಗ್ರಾಮದ ಮುದ್ದು ಅಜ್ಜಿ ಹಾಲಮ್ಮ ಸೋಬಾನೆ ಪದ ಹಾಡುವುದಲ್ಲಿ ಎತ್ತಿದ ಕೈ. 75 ವರ್ಷದ ಹಾಲಮ್ಮ ಅವರಿಗೆ ಸುಮಾರು ಒಂದು ಸಾವಿರ ಸೋಬಾನೆ ಹಾಡುಗಳು ಗೊತ್ತಿದೆ. ಸಾಗರದಿಂದ ಬೆಂಗಳೂರಿನವರೆಗೆ ನಾನಾ ಪ್ರದೇಶಗಳಿಗೆ ತೆರಳಿ ಸೋಬಾನೆ ಪದದ ಕಾರ್ಯಕ್ರಮ ನೀಡಿದ್ದಾರೆ ಇವರು. ರಾಮನಗರದಲ್ಲಿ ನಡೆದ ರಾಜ್ಯ ಮಟ್ಟದ ಸೋಬಾನೆ ಪದಗಳ ದಶಮಾನೋತ್ಸವ ಸಂಭ್ರಮ, ಕನ್ನಡ ಜಾನಪದ ಪರಿಷತ್ನ ಶಿವಮೊಗ್ಗ ಘಟಕದ ವತಿಯಿಂದ ಶಿಕಾರಿಪುರದಲ್ಲಿ ನಡೆದ ಜಾನಪದ ಜಾತ್ರೆ ಕಾರ್ಯಕ್ರಮ ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ಹಾಲಮ್ಮ ಮತ್ತು ಅವರ ನಾಲ್ಕು ಜನರ ತಂಡ ಸೋಬಾನೆ ಪದವನ್ನು ಹಾಡಿ, ಮಲೆನಾಡಿನ ಕಲೆಯನ್ನು ಪ್ರದರ್ಶಿಸಿದ್ದಾರೆ. ಅನೇಕ ಪ್ರಶಸ್ತಿ ಪತ್ರ, ಅಭಿನಂದನಾ ಪತ್ರಗಳನ್ನು ನೀಡಿ ಇವರನ್ನು ಗೌರವಿಸಲಾಗಿದೆ. ಇವರ ಬಾಯಲ್ಲೇ ಕೇಳಿ ಸೋಬಾನೆ ಪದ ಮತ್ತು ಅದರ ಶ್ರೀಮಂತಿಕೆ.. (ಹಾಲಮ್ಮ ಅವರು ಆಡುಭಾಷೆಯಲ್ಲಿ ಮಾತನಾಡಿದ್ದು, ಅವರ ಮಾತನ್ನ ಎಲ್ಲರಿಗೂ ಅರ್ಥವಾಗುವಂತೆ ಗ್ರಾಂಥಿಕ ಭಾಷೆಯಲ್ಲಿ ಬರೆಯಲಾಗಿದೆ)
"ನನಗೆ ವಿದ್ಯಾಭ್ಯಾಸ ಇಲ್ಲ. ಆದರೆ ಒಂದು ಸಾವಿರ ಸೋಬಾನೆ ಹಾಡು ಬೇಕಾದ್ರೂ ಹೇಳ್ತೀನಿ. ಬೆಳಗ್ಗೆ ಶುರು ಮಾಡಿದ್ರೆ ಸಂಜೆ ತನಕ ಹೇಳುವಂತಹ ಸೋಬಾನೆ ಹಾಡುಗಳೂ ಇವೆ. ಆದರೆ ಇದು ಒಬ್ಬರಿಂದ ಸಾಧ್ಯವಿಲ್ಲ, ಮೂರ್ನಾಲ್ಕು ಜನರು ಬೇಕು. ಮದುಮಗನಿಗೆ ಬಾಸಿಂಗ ಕಟ್ಟುವಾಗ, ಮದುಮಗನನ್ನ ಹೆಣ್ಣಿಗೆ ಮನೆಗೆ ಧಾರೆಗೆ ಕರೆದುಕೊಂಡು ಹೋಗುವಾಗ, ಮದುಮಗಳಿಗೆ ತಾಳಿ ಕಟ್ಟುವಾಗ, ನಾಗೋಲೆ ಶಾಸ್ತ್ರ ಮಾಡುವಾಗ ಹೀಗೆ ಮದುವೆ ಸಮಾರಂಭದಲ್ಲಿ ಎಲ್ಲಾ ಶಾಸ್ತ್ರಕ್ಕೂ ಬೇರೆ ಬೇರೆ ಸೋಬಾನೆ ಹಾಡುಗಳಿವೆ. ಬಿತ್ತನೆ ಸಮಯ, ನಟ್ಟಿ ಸಮಯದಲ್ಲಿ ಸೋಬಾನೆ ಹಾಡ್ತೀವಿ. ಕೊಯ್ಲು ಸಮಯದಲ್ಲಿ ಹೇಳಲ್ಲ, ಯಾಕಂದ್ರೆ ಕೊಯ್ಲು ಬೇಗ ಬೇಗ ಕೆಲಸ ಮಾಡಿಕೊಂಡು ಹೋಗೋದು. ನಾವು ಮಾಡುವ ಕೆಲಸ ನಿಧಾನ ಇದ್ದಾಗ ಬೇಜಾರು ಕಳೆಯಲು, ಕೆಲಸ ಸಾಗಲು ಸೋಬಾನೆ ಹೇಳ್ತೀವಿ. ಬಿತ್ತನೆ, ನಟ್ಟಿ ಬಿಟ್ಟರೆ ಅಡಿಕೆ ಸುಲಿಯುವಾಗ, ಅಕ್ಕಿ ಬೀಸುವಾಗ, ಭತ್ತ ಕುಟ್ಟುವಾಗ ಅದು ಇದು ಕೆಲಸ ಮಾಡುವಾಗ ಬೇಜಾರು ಕಳಿಯೋಕೆ ಹೇಳ್ತೀವಿ".
“ಅತ್ತೆ-ಸೊಸೆ ಜಗಳ ಮಾಡಿಕೊಳ್ಳುವುದಕ್ಕೂ ಒಂದು ಸೋಬಾನೆ ಹಾಡಿದೆ. ಹಬ್ಬ ಹರಿದಿನಗಳಲ್ಲಿ ಇಡಕಲು ಪೂಜೆ, ಬಾಗಿಲು ಪೂಜೆ ಮಾಡುವಾಗಲೂ ಸೋಬಾನೆ ಪದ ಹಾಡ್ತೀವಿ. ಕಾರ್ಯಕ್ರಮಗಳಲ್ಲಿ ಒಬ್ಬೊಬ್ಬರೆ ಸೋಬಾನೆ ಪದ ಹಾಡುವುದು ಚೆನ್ನಾಗಾಗಲ್ಲ. ಇಬ್ಬರ ಜೊತೆ ಇನ್ನಿಬ್ಬರು ಹಿನ್ನೆಲೆ ಧ್ವನಿ (ಕೋರಸ್) ಕೂಡಿಸಿದಾಗ ಚೆನ್ನಾಗಿರತ್ತೆ. ನಮ್ಮದು ನಾಲ್ಕು ಜನರ ತಂಡ. ಇದರಲ್ಲಿ ಭವಾನಿ, ಜಯಮ್ಮ ಎಂಬವರು ನನ್ನ ಮಕ್ಕಳೇ. ನಾವು ಸಾಗರದಿಂದ ಬೆಂಗಳೂರಿನವರೆಗೆ ನಾನಾ ಪ್ರದೇಶಗಳಿಗೆ ತೆರಳಿ ಕಾರ್ಯಕ್ರಮ ಕೊಟ್ಟಿದೀವಿ. ಯಾವುದಾದರೂ ದೊಡ್ಡ ಫಂಕ್ಷನ್ಗಳಿಗೆ ನಮ್ಮನ್ನ ಕರೆಸ್ತಾರೆ. ಬೆಂಗಳೂರಲ್ಲಿ ಕಾಗೋಡು ತಿಮ್ಮಪ್ಪ ಅವರ ಕಾರ್ಯಕ್ರಮವೊಂದಕ್ಕೆ ಕರೆಸಿದ್ರು, ರಾಮನಗರದಲ್ಲಿ ಮರಿದೇವರು (ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ) ಅವರ ಕಾರ್ಯಕ್ರಮಕ್ಕೆ 5 ವರ್ಷ ನಮ್ಮನ್ನ ಕರೆಸಿದ್ರು. ಮರಿದೇವರ ತಾಯಿ ಕಲೆಗಾರ್ತಿ ಆಗಿದ್ರು, ಅವರ ತಾಯಿ ತೀರಿಕೊಂಡ ಮೇಲೆ ಅವರ ನೆನಪಿಗಾಗಿ ವರ್ಷಕ್ಕೊಮ್ಮೆ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ನಮ್ಮಿಂದ ಹಾಡು ಹೇಳಿಸುತ್ತಿದ್ದರು. ಶಿವಮೊಗ್ಗದಲ್ಲಿ 2 ಬಾರಿ ಕರೆಸಿದ್ರು. ಈಗಲೂ ಅಲ್ಲಿ ಇಲ್ಲಿ ಕರೀತಾರೆ ಆದರೆ ಈಗ ವಯಸ್ಸಾಯ್ತು ಅದಕ್ಕೆ ಹೋಗೋಕೆ ಆಗ್ತಾ ಇಲ್ಲ”.
ಮರೆಯಾಗುತ್ತಿರುವ ಸೋಬಾನೆ
ಹಿಂದೆಲ್ಲಾ ಸೋಬಾನೆ ಪದ ತುಂಬಾ ಚಾಲ್ತಿಯಲ್ಲಿತ್ತು. ಸಾಗರದ ಅನೇಕ ಹಳ್ಳಿಗಳಲ್ಲಿ ಸೋಬಾನೆ ಹಾಡು ಇಲ್ಲದೆ ಮದುವೆಗಳೇ ನಡೀತಾ ಇರಲಿಲ್ಲ, ಸೋಬಾನೆ ಪದ ಇಲ್ಲದೇ ಬಿತ್ತನೆ, ನಟ್ಟಿ ನಡೀತಾ ಇರಲಿಲ್ಲ. ಆದರೆ ಈಗ ಅವೆಲ್ಲಾ ಕಡಿಮೆ ಆಗಿದೆ. ಈಗಿನ ಪೀಳಿಗೆಯ ಮಕ್ಕಳು ಕಲಿಯಲು ಒಲವು ತೋರಿಸುತ್ತಿಲ್ಲ, ಇದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಾಲಮ್ಮ, "ನಮ್ಮ ಅಜ್ಜಿ ಸೋಬಾನೆ ಹಾಡ್ತಾ ಇದ್ರು, ಅವರಿಂದ ನಾನು ಒಂದಿಷ್ಟು ಸೋಬಾನೆ ಪದ ಕಲಿತೆ. ನಟ್ಟಿ ನಡೋಕೆ ಹೋದಾಗ ಅಲ್ಲಿ 10-15 ಜನ ಇರ್ತೀವಿ, ಆಗ ಒಬ್ಬರಿಂದ ಒಬ್ಬರು ಹಾಡನ್ನ ಕಲಿತುಕೊಂಡ್ವಿ. ಹಿಂದೆಲ್ಲಾ ಹೆಚ್ಚಿನ ಪ್ರಮಾಣದ ಅಕ್ಕಿಯನ್ನ ಮನೆಯಲ್ಲೇ ಬೀಸುತ್ತಾ ಇದ್ದೆವು. ಆಗ ಸೋಬಾನೆ ಹೇಳುತ್ತಿದ್ದೆವು. ಆದ್ರೆ ಈಗ ಮಿಲ್ ಅಲ್ಲಿ ಮಾಡಿಸ್ಕೊಂಡು ಬರ್ತಾರೆ. ನಾವು ಹೇಗೋ ಸೋಬಾನೆ ಕಲಿತುಕೊಂಡ್ವಿ ಆದ್ರೆ ಈಗಿನ ಮಕ್ಕಳು ಅಷ್ಟೆಲ್ಲಾ ಕಷ್ಟಪಟ್ಟು ಕಲಿಯಲು ಮನಸ್ಸು ಮಾಡಲ್ಲ. ಹೋಗವ್ವ ಯಾರು ಬೆಳಗ್ಗೆಯಿಂದ ಸಂಜೆತನಕ ಕೂಗ್ತಾ ಇರ್ತಾರೆ ಅಂತಾರೆ. ಸಿನಿಮಾ ಹಾಡುಗಳನ್ನಾದ್ರೆ ಬೇಗ ಕಲಿತುಕೊಳ್ತಾರೆ. ಅದರಲ್ಲೂ ಹಳ್ಳಿ ಬಿಟ್ಟು ದೂರದ ಪಟ್ಟಣಗಳಿಗೆ ಓದೋಕೆ ಹೋಗ್ತಾರೆ, ಹೀಗಾಗಿ ಅವರಿಗೆ ಕಲಿಯೋಕೆ ಆಗೋದೂ ಇಲ್ಲ, ಆಸಕ್ತಿನೂ ಇಲ್ಲ. ಆದರೆ ವಿದ್ಯೆಬುದ್ಧಿ ಏನೂ ಇಲ್ಲದೆ ಇಷ್ಟೆಲ್ಲಾ ಹಾಡುಗಳನ್ನ ಹೇಳ್ತೀರಲಾ, ಅದೇಗೆ ಸಾಧ್ಯ ಅಂತ ನಮ್ಮತ್ರ ಕೇಳಿ ಆಶ್ಚರ್ಯ ಪಡ್ತಾರೆ" ಎಂದರು.
ದ್ವೀಪ ಸಿನಿಮಾದಲ್ಲಿ ಸೋಬಾನೆ ಮತ್ತು ಹಾಲಮ್ಮನ ಧ್ವನಿ
ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ, ದಿವಂಗತ ನಟಿ ಸೌಂದರ್ಯ ಅವರ ನಿರ್ಮಾಣ-ಅಭಿನಯದ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ದ್ವೀಪ. ಈ ಸಿನಿಮಾದ ಒಂದು ದೃಶ್ಯದಲ್ಲಿ ನಾಯಕಿ ಸೌಂದರ್ಯ ಮತ್ತು ನಾಯಕ ಅವಿನಾಶ್ಗೆ ಗುಡ್ಡೆದಾಚೆಯಿಂದ ಸೋಬಾನೆ ಹಾಡು ಕೇಳಿಸುತ್ತದೆ. ಚಿತ್ರದಲ್ಲಿ ನಟ್ಟಿ ವೇಳೆ ಕೇಳುವ ಈ ಹಾಡನ್ನು ಹೇಳಿದವರಲ್ಲಿ ಹಾಲಮ್ಮ ಕೂಡ ಒಬ್ಬರು. ಮಲೆನಾಡಿನ ಭಾಗದಲ್ಲಿ, ಅದರಲ್ಲಿಯೂ ಸಾಗರದ ತಾಳಗುಪ್ಪ ಸಮೀಪ ಹೆಚ್ಚು ಚಿತ್ರೀಕರಣ ನಡೆದಿದೆ. ತಾಳಗುಪ್ಪ ಸಮೀಪದ ಮರ್ತೂರು ಗ್ರಾಮದವರಾದ ಹಾಲಮ್ಮ ಹಾಗೂ ಇತರ ಮಹಿಳೆಯರಿಂದ ಈ ಚಿತ್ರದಲ್ಲಿ ಸೋಬಾನೆ ಹಾಡು ಹೇಳಿಸಿಕೊಳ್ಳಲಾಗಿದೆ.
ಜಾನಪದ ಹಾಡುಗಳಲ್ಲಿನ ಒಂದೊಂದು ಪದವೂ ಎಷ್ಟು ಅರ್ಥಪೂರ್ಣವಾಗಿರುತ್ತದೆ. ಆದರೆ, ಹಾಲಮ್ಮನವರು ಹೇಳಿದಂತೆ ಇಂದಿನ ಮಕ್ಕಳಲ್ಲಿ ಜಾನಪದ ಕಲೆಯನ್ನು ಕಲಿಯುವ ಆಸಕ್ತಿ ಕಡಿಮೆ ಆಗಿದೆ. ಡಿಜೆ ಹಾಡುಗಳ ಜಮಾನದಲ್ಲಿ ಜಾನಪದ ಹಾಡುಗಳನ್ನ ಕೇಳಲೂ ಕೂಡ ಇಂದಿನ ಯುವಜನತೆ ಒಲವು ತೋರುತ್ತಿಲ್ಲ. ಇವುಗಳ ಸಂಗ್ರಹದ ಕೊರತೆಯೂ ಇರುವುದರಿಂದ ಮುಂದೊಂದು ದಿನ ಅಂದಿನ ಮಕ್ಕಳಿಗೆ ಹೀಗೊಂದು ಕಲೆ ಇತ್ತು ಎಂಬುದಕ್ಕೆ ಸಾಕ್ಷಿಗಳೇ ಇಲ್ಲದಂತಾಗಬಹುದು. ಜಾನಪದ ಕಲೆ ಬೆಳೆಸೋಣ, ಉಳಿಸೋಣ, ಪ್ರೋತ್ಸಾಹಿಸೋಣ.