Kannada News  /  Lifestyle  /  Vaastu Tips For Money In 2023
ಆರ್ಥಿಕ ವಿಚಾರಗಳಿಗೆ ಕುರಿತಾದ ವಾಸ್ತು ಟಿಪ್ಸ್‌ 2023
ಆರ್ಥಿಕ ವಿಚಾರಗಳಿಗೆ ಕುರಿತಾದ ವಾಸ್ತು ಟಿಪ್ಸ್‌ 2023 (PC: Pixaby.com)

Money Vaastu Tips 2023: ಈ ವರ್ಷದಿಂದ ನಿಮಗೆ ಶಾಶ್ವತವಾಗಿ ಲಕ್ಷ್ಮಿಕಟಾಕ್ಷ ಪ್ರಾಪ್ತಿಯಾಗಬೇಕೇ...ಈ ಅತ್ಯುತ್ತಮ ಸಲಹೆಗಳನ್ನು ಅನುಸರಿಸಿ

09 January 2023, 16:07 ISTHT Kannada Desk
09 January 2023, 16:07 IST

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ದೀಪಾರಾಧನೆಗೆ ಬಹಳ ಮಹತ್ವ ಇದೆ. ಪ್ರತಿದಿನ ಮನೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ದೀಪ ಹಚ್ಚುವುದರಿಂದ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮುಸ್ಸಂಜೆಯಲ್ಲಿ ದೀಪ ಹಚ್ಚುವವರ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಲು ಇಷ್ಟಪಡುತ್ತಾಳೆ.

ದಿನಗಳು ಬಹಳ ಬೇಗ ಉರುಳುತ್ತಿವೆ. ಇಂಗ್ಲೀಷ್‌ ಹೊಸ ವರ್ಷಕ್ಕೆ ಕಾಲಿಟ್ಟು 9 ದಿನಗಳು ಕಳೆದಿವೆ. ಪ್ರತಿವರ್ಷ ಕ್ಯಾಲೆಂಡರ್‌ ಬದಲಾಗುತ್ತಿದ್ದಂತೆ ಎಲ್ಲರೂ ರೆಸ್ಯುಲೂಷನ್‌ ಬಗ್ಗೆ ಮಾತನಾಡಲು ಆರಂಭಿಸುತ್ತಾರೆ. ಹಾಗೇ ಈ ವರ್ಷ ನಮಗೆ ಉತ್ತಮ ಫಲ ದೊರೆಯಬೇಕು ಎಂದು ಬಯಸುತ್ತಾರೆ. ಅದರಲ್ಲೂ ಎಲ್ಲರೂ ಆರ್ಥಿಕವಾಗಿ ಸಧೃಡರಾಗಬೇಕೆಂದು ಬಯಸುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಹಣವಿಲ್ಲದೆ ಈ ಜಗತ್ತಿನಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಒಂದು ಹೊತ್ತು ಊಟಕ್ಕೆ ಹಣ ಬೇಕು, ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಬೇಕು, ನಿಮ್ಮ ಆರೋಗ್ಯಕ್ಕೆ ಔಷಧಗಳನ್ನು ಕೊಳ್ಳಲು ಹಣ ಬೇಕು. ಹೀಗೆ ಹಣವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲು ಕೆಲವರು ಸಣ್ಣಪುಟ್ಟ ಉಪಾಯಗಳನ್ನು ಅನುಸರಿಸುತ್ತಾರೆ ಮತ್ತು ಅಂತ್ಯವಿಲ್ಲದ ಆದಾಯವನ್ನು ಗಳಿಸುತ್ತಾರೆ. ಆದರೆ ಇನ್ನೂ ಕೆಲವರು ಹಣ ಮಾಡುವ ಆಸೆಗೆ ಬಿದ್ದು ಕೆಲವು ತಪ್ಪುಗಳನ್ನು ಮಾಡುತ್ತಾರೆ. ತಿಳಿದೂ ತಪ್ಪು ಮಾಡುವ ಕೆಲಸಗಳಿಂದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ. ಹಾಗಾಗಿ ಹೊಸ ವರ್ಷದಲ್ಲಿ ಎಂದಿಗೂ ಈ ತಪ್ಪು ಕೆಲಸಗಳನ್ನು ಮಾಡಲೇಬೇಡಿ. ಅದರ ಬದಲಿಗೆ ಇಲ್ಲಿರುವ ಕೆಲವೊಂದು ಸಲಹೆಗಳನ್ನು ಅನುಸರಿಸಿ.

ನಿದ್ರೆ ಕಡಿಮೆ ಮಾಡಿ: ಪ್ರತಿಯೊಬ್ಬ ಮನುಷ್ಯನಿಗೂ ನಿದ್ರೆ ಅತ್ಯಗತ್ಯ. ಆದರೆ ದಿನಕ್ಕೆ 6 ಅಥವಾ 8 ಗಂಟೆಗಳ ನಿದ್ರೆ ಸಾಕು. ಈ ರೀತಿ ಮಲಗುವುದರಿಂದ ಆಯಾಸ ಕಡಿಮೆಯಾಗುತ್ತದೆ ಮತ್ತು ಹೆಚ್ಚು ಕ್ರಿಯಾಶೀಲರಾಗುತ್ತೀರಿ. ಆದರೆ ಕೆಲವರು ಅವಶ್ಯಕತೆಗೂ ಮೀರಿ ನಿದ್ರೆ ಮಾಡುತ್ತಾರೆ. ರಾತ್ರಿ ಬೇಗ ಮಲಗಿದರೂ ಬೆಳಗ್ಗೆ 9 ಗಂಟೆ ಮುನ್ನ ಏಳುವುದಿಲ್ಲ. ಕೆಲಸ ಇಲ್ಲದಿದ್ದರೆ 10 ಗಂಟೆ ಆದರೂ ಆದೀತು. ತಿಂಡಿ ಅಥವಾ ಮಧ್ಯಾಹ್ನದ ಊಟ ತಿಂದ ನಂತರ ಮತ್ತೆ ನಿದ್ರೆ ಮಾಡುವ ಅಭ್ಯಾಸ ಕೆಲವರಿಗೆ ಇರುತ್ತದೆ. ಇನ್ನೂ ಕೆಲವರಿಗೆ ಮುಸ್ಸಂಜೆ ವೇಳೆಗೆ ನಿದ್ರೆ ಮಾಡುವ ಕೆಟ್ಟ ಅಭ್ಯಾಸ ಇರುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಯಾರೇ ಆಗಲೀ, ಅತಿಯಾಗಿ ನಿದ್ರೆ ಮಾಡಬಾರದು. ಮನೆಯಲ್ಲಿ ಹಿರಿಯರಿದ್ದರೆ ಈ ಸಮಯದಲ್ಲಿ ದರಿದ್ರ ನಿದ್ರೆ ಏಕೆ? ಎಂದು ಬೈಯ್ಯುವುದನ್ನು ನೀವು ಕೇಳಿರುತ್ತೀರಿ. ಅತಿಯಾದ ನಿದ್ರೆ ಸೋಮಾರಿಗಳ ಲಕ್ಷಣ. ಇನ್ನೂ ಕೆಲವರು ಎಲ್ಲೆಂದರಲ್ಲಿ ತೂಕಡಿಸಿ ಬೀಳುತ್ತಾರೆ. ಆದರೆ ಹೀಗೆ ಮಾಡಿದರೆ ಲಕ್ಷ್ಮಿ ದೇವಿಗೆ ತುಂಬಾ ಕೋಪ ಬರುತ್ತದೆ. ನಿಮ್ಮ ಅಭ್ಯಾಸ ಮನೆಯಲ್ಲಿ ಹಣ ಕೂಡಿಡುವುದಕ್ಕೆ ತಡೆ ಆಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆದ್ದರಿಂದ ತಡವಾಗಿ ಏಳುವ ಅಭ್ಯಾಸವನ್ನು ತಪ್ಪಿಸಿ.

ಬೆಳಗ್ಗೆ-ಸಂಜೆ ಮನೆಯಲ್ಲಿ ದೀಪ ಹಚ್ಚಿ: ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ದೀಪಾರಾಧನೆಗೆ ಬಹಳ ಮಹತ್ವ ಇದೆ. ಪ್ರತಿದಿನ ಮನೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ದೀಪ ಹಚ್ಚುವುದರಿಂದ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮುಸ್ಸಂಜೆಯಲ್ಲಿ ದೀಪ ಹಚ್ಚುವವರ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಲು ಇಷ್ಟಪಡುತ್ತಾಳೆ. ಮತ್ತು ಆ ತಾಯಿಯ ಆಶೀರ್ವಾದ ಯಾವಾಗಲೂ ನಿಮ್ಮ ಮೇಲಿರುತ್ತದೆ. ಆದ್ದರಿಂದ ಪ್ರತಿದಿನ ದೀಪ ಹಚ್ಚಿ ದೇವರ ಆಶೀರ್ವಾದ ಪಡೆಯಿರಿ.

ಸಣ್ಣಪುಟ್ಟ ವಿಷಯಗಳಿಗೆ ಕೋಪ ಮಾಡಿಕೊಳ್ಳಬೇಡಿ: ಕೆಲವರಿಗೆ ಚಿಕ್ಕ ಚಿಕ್ಕ ವಿಚಾರಗಳಿಗೆಲ್ಲಾ ಕೋಪ ಮಾಡಿಕೊಂಡು ಎದುರಿಗೆ ಇದ್ದವರ ಮೇಲೆ ಕೂಗಾಡುವ ಕೆಟ್ಟ ಅಭ್ಯಾಸ ಇರುತ್ತದೆ. ಆದರೆ ಈ ಕೋಪವೇ ಮನೆಯವರೊಂದಿಗಿನ ಮನಸ್ತಾಪ, ಜಗಳಕ್ಕೆ ಕಾರಣವಾಗಬಹುದು. ಪ್ರತಿದಿನ ಜಗಳ ಮಾಡುವವರ ಮನೆಯಲ್ಲಿ ಲಕ್ಷ್ಮಿ ಎಂದಿಗೂ ಇರಲು ಇಷ್ಟಪಡುವುದಿಲ್ಲ. ಅದರಲ್ಲೂ ಮುಸ್ಸಂಜೆ ಸಮಯದಲ್ಲಿ ಯಾವುದೇ ಕಾರಣಕ್ಕೂ ಕೋಪ, ಕಿರಿಕಿರಿ, ಜಗಳ, ವಾದ ವಿವಾದ ಬೇಡವೇ ಬೇಡ. ಆದಷ್ಟು ಶಾಂತ ರೀತಿಯಲ್ಲಿ ವರ್ತಿಸಿದರೆ ಲಕ್ಷ್ಮಿ ನಿಮಗೆ ಒಲಿಯುತ್ತಾಳೆ.

ಸ್ವಚ್ಛತೆ ಇಲ್ಲದಿದ್ದರೆ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚು, ಜಾಗ್ರತೆ: ಬಹಳ ಜನರಿಗೆ ಸ್ವಚ್ಛತೆಯ ಬಗ್ಗೆ ಕಾಳಜಿ ಇರುವುದಿಲ್ಲ. ಸೋಮಾರಿತನದಿಂದಲೇ ಮನೆಯನ್ನು ಬಹಳ ಕೊಳಕಾಗಿ ಇರಿಸಿಕೊಂಡಿರುತ್ತಾರೆ. ಆದರೆ ಧನಲಕ್ಷ್ಮಿಗೆ ಇದು ಇಷ್ಟವಾಗುವುದಿಲ್ಲ. ಏಕೆಂದರೆ ಯಾವುದೇ ಮನೆ ಕೊಳಗಾಗಿದ್ದರೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಪ್ರವೇಶಿಸುತ್ತವೆ. ದರಿದ್ರ ಲಕ್ಷ್ಮಿ ಬಂದರೆ ಧನಲಕ್ಷ್ಮಿ ಕೋಪಗೊಂಡು ನಿಮ್ಮ ಮನೆಯನ್ನು ಬಿಟ್ಟು ಹೋಗುತ್ತಾಳೆ. ಆದ್ದರಿಂದ ನೀವು ಬಯಸಿದ ಆದಾಯವನ್ನು ಪಡೆಯಲು ಮನೆಯ ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಹರಿಸಬೇಕು. ಮನೆ ಸ್ವಚ್ಛವಾಗಿದ್ದರೆ ನಿಮ್ಮ ಮನಸ್ಸು ಹಾಗೂ ದೇಹ ಎರಡೂ ಆರೋಗ್ಯವಾಗಿರುತ್ತದೆ.

ವೈಯಕ್ತಿಕ ಶುಚಿತ್ವ: ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಶುಚಿತ್ವದ ಜೊತೆಗೆ ವೈಯಕ್ತಿಕ ಸ್ವಚ್ಛತೆಯೂ ಬಹಳ ಮುಖ್ಯ. ವಿಶೇಷವಾಗಿ ತೊಳೆಯದ ಬಟ್ಟೆಗಳನ್ನು ಧರಿಸಬೇಡಿ. ಕೆಲವರು ಬೇರೆ ಬಟ್ಟೆಗಳು ಇದ್ದರೂ ಹಾಕಿದ ಬಟ್ಟೆಯನ್ನೇ ಮತ್ತೆ ಮತ್ತೆ ಧರಿಸುತ್ತಾರೆ. ಅಂತವರ ಮನೆಯಲ್ಲಿ ಲಕ್ಷ್ಮಿ ದೇವಿ ಇರುವುದಿಲ್ಲ. ಆದ್ದರಿಂದ ಯಾವಾಗಲೂ ತೊಳೆದ ಬಟ್ಟೆಗಳನ್ನು ಧರಿಸಿ. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.

ಇದೆಲ್ಲದರ ಜೊತೆ ಆದಷ್ಟು ದಾನ ಧರ್ಮ ಮಾಡಿ. ನಿಮ್ಮ ಬಳಿ 10 ರೂಪಾಯಿ ಇದ್ದರೆ 1 ರೂಪಾಯಿ ಆದರೂ ದಾನ ಮಾಡಿ. ದಾನ ಧರ್ಮದಿಂದ ದೊರೆಯುವ ಪುಣ್ಯ ಬೇರೆ ಯಾವುದರಿಂದಲೂ ದೊರೆಯುವುದಿಲ್ಲ. ಬಡಬಗ್ಗರಿಗೆ, ಪ್ರಾಣಿ ಪಕ್ಷಿಗಳ ಮೇಲೆ ದಯೆ ಇರಲಿ. ನಿಮ್ಮ ಶಕ್ತಿ ಇರುವಷ್ಟು ಇನ್ನೊಬ್ಬರಿಗೆ ಸಹಾಯ ಮಾಡಲು ಪ್ರಯತ್ನಿಸಿ. ನೀವು ಮಾಡಿದ ಪುಣ್ಯ ಕೆಲಸಗಳಿಂದ ನಿಮಗೆ ಹತ್ತರಷ್ಟು ಸುಖ ಸಂತೋಷ ದೊರೆಯುತ್ತದೆ.

ವಿಭಾಗ