Tirupati: ವೈಕುಂಠ ಏಕಾದಶಿ ಆಚರಣೆಗೆ ತಿರುಪತಿಯಲ್ಲಿ ಸಕಲ ಸಿದ್ದತೆ; ಡಿ 23 ರಿಂದ ಜ 1 ವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ
Vaikuntha Ekadashi 2023: ವೈಕುಂಠ ಏಕಾದಶಿ ಆಚರಣೆಗೆ ತಿರುಮಲ ತಿರುಪತಿಯಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಡಿ 23 ರಿಂದ ಜ 1 ವರೆಗೆ ವೈಕುಂಠ ದ್ವಾರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
Vaikuntha Ekadashi 2023: ಡಿಸೆಂಬರ್ 23 ರಂದು ವೈಕುಂಠ ಏಕಾದಶಿ ಆಚರಣೆಗೆ ಸಕಲ ಸಿದ್ದತೆ ನಡೆದಿದೆ. ರಾಜ್ಯ ಹಾಗೂ ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಪೂಜೆ, ಭಕ್ತರ ಭೇಟಿಗೆ ಸಿದ್ದತೆ ನಡೆಯುತ್ತಿದ್ದು ಭಕ್ತರು ಕೂಡಾ ಆ ದಿನ ದೇವಾಲಯಕ್ಕೆ ತೆರಳಿ ದೇವರ ದರ್ಶನ ಮಾಡಲು ಕಾಯುತ್ತಿದ್ದಾರೆ.
ಜ 23 ರಿಂದ 10 ದಿನಗಳ ಕಾಲ ದರ್ಶನಕ್ಕೆ ಅವಕಾಶ
ಪ್ರತಿವರ್ಷ ವೈಕುಂಠ ಏಕಾದಶಿಯಂದು ಲಕ್ಷಾಂತರ ಭಕ್ತರು ತಿರುಪತಿಗೆ ಭೇಟಿ ನೀಡುತ್ತಾರೆ. ಈ ದಿನ ತಿರುಪತಿ ದೇವಸ್ಥಾನದಲ್ಲಿ ವಿಶೇಷ ದರ್ಶನ ಹಾಗೂ ಸೇವೆಗಳನ್ನು ಏರ್ಪಡಿಸಲಾಗುತ್ತಿದೆ. ಈ ಬಾರಿ ಕೂಡಾ ಎಲ್ಲಾ ವ್ಯವಸ್ಥೆ ನಡೆಯುತ್ತಿದೆ. ಡಿಸೆಂಬರ್ 23ರಂದು ಮುಂಜಾನೆಯಿಂದ ಭಕ್ತರಿಗೆ ವೈಕುಂಠ ದ್ವಾರದ ಮೂಲಕ ಶ್ರೀನಿವಾಸನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದರ್ಶನಕ್ಕೆ ಬರುವ ಸಾಮಾನ್ಯ ಭಕ್ತರಿಗೆ, ವಿಐಪಿಗಳಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಡಿಸೆಂಬರ್ 23 ರಿಂದ 10 ದಿನಗಳ ಕಾಲ ಅಂದರೆ ಜನವರಿ 1ರವರೆಗೆ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶವಿದೆ. ಜನವರಿ 1 ರಂದು ರಾತ್ರಿ 12 ಗಂಟೆ ನಂತರ ವೈಕುಂಠ ದ್ವಾರವನ್ನು ಮುಚ್ಚಲಾಗುವುದು ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾರೆಡ್ಡಿ ಮಾಹಿತಿ ನೀಡಿದ್ದಾರೆ.
90 ಕೌಂಟರ್‌ಗಳಲ್ಲಿ ಟಿಕೆಟ್ ಹಂಚಿಕೆ
ಇನ್ನು ವಿಐಪಿಗಳು ಕುಟುಂಬ ಸದಸ್ಯರೊಂದಿಗೆ ಬಂದರೆ ಮಾತ್ರ ಟಿಕೆಟ್ ನೀಡಲಾಗುವುದು. ಡಿಸೆಂಬರ್ 23 ರಿಂದ ಜನವರಿ 1 ರವರೆಗೆ 10 ದಿನಗಳ ಕಾಲ ವಿಐಪಿಗಳಿಗೆ ಶಿಫಾರಸ್ಸು ಪತ್ರಗಳ ಮೇಲೆ ನಿಗದಿಪಡಿಸಿದ ದರ್ಶನಗಳನ್ನು ರದ್ದುಗೊಳಿಸಲಾಗಿದೆ. ಹಾಗೇ ತಿರುಮಲದಲ್ಲಿ ವಸತಿ ಸಮಸ್ಯೆ ಇದ್ದು ವಿಐಪಿಗಳು ಟಿಟಿಡಿಗೆ ಸಹಕರಿಸಬೇಕು ಎಂದು ಧರ್ಮಾರೆಡ್ಡಿ ಮನವಿ ಮಾಡಿದ್ದಾರೆ. ಡಿಸೆಂಬರ್ 23ರ ದರ್ಶನಕ್ಕಾಗಿ ಹಿಂದಿನ ದಿನದಿಂದಲೇ ತಿರುಪತಿಯ 9 ಬೇರೆ ಬೇರೆ ಸ್ಥಳಗಳಲ್ಲಿ ಒಟ್ಟು 90 ಕೌಂಟರ್‌ಗಳನ್ನು ಸ್ಥಾಪಿಸಲಾಗಿದ್ದು ಸುಮಾರು 4.25 ಲಕ್ಷ ದರ್ಶನ ಟಿಕೆಟ್‌ಗಳನ್ನು ನೀಡಲಾಗುವುದು. ಈ ಟಿಕೆಟ್‌ಗಳನ್ನು ರಾಮಚಂದ್ರ ಪುಷ್ಕರಿಣಿ, ಶ್ರೀನಿವಾಸಂ ಕಾಂಪ್ಲೆಕ್ಸ್, ವಿಷ್ಣುನಿವಾಸಂ ಕಾಂಪ್ಲೆಕ್ಸ್, ರಾಮನಾಯ್ಡು ಪ್ರೌಢಶಾಲೆ, ಜೀವಕೋಣ ಪ್ರೌಢಶಾಲೆ, ಭೂದೇವಿ ಕಾಂಪ್ಲೆಕ್ಸ್, ಇಂದಿರಾ ಮೈದಾನ, ಶ್ರೀ ಗೋವಿಂದರಾಜಸ್ವಾಮಿ ಎರಡನೇ ಛತ್ರ, ತಿರುಮಲದ ಕೌಸ್ತುಭಂ ವಿಶ್ರಾಂತಿ ಗೃಹ, ಭೈರಾಗಿಪಟ್ಟೇದ ಎಂಆರ್ ಪಲ್ಲಿ ಪ್ರೌಢಶಾಲೆಯಲ್ಲಿ ನೀಡಲಾಗುತ್ತದೆ.
ಟಿಕೆಟ್ ಇಲ್ಲದವರಿಗೆ ದರ್ಶನ ಭಾಗ್ಯವಿಲ್ಲ
ದರ್ಶನದ ಟೋಕನ್ ಪಡೆದ ಭಕ್ತರು 1 ದಿನ ಮುನ್ನವೇ ತಿರುಮಲಕ್ಕೆ ಬರಬೇಕು. ಟೋಕನ್ ಇರುವ ಭಕ್ತರಿಗೆ ಮಾತ್ರ ರೂಮ್‌ಗಳನ್ನು ನೀಡಲಾಗುವುದು. ಟೋಕನ್ ದೊರೆಯದವರೂ ದರ್ಶನ ಪಡೆಯಬಹುದು. ಆದರೆ ಅವರಿಗೆ ರೂಮ್ ವ್ಯವಸ್ಥೆ ಇರುವುದಿಲ್ಲ. ಹಾಗೇ ದರ್ಶನಕ್ಕೂ ಅವಕಾಶ ಇರುವುದಿಲ್ಲ. ಡಿಸೆಂಬರ್ 23 ರಂದು ಬೆಳಗ್ಗೆ 9 ರಿಂದ 11 ಗಂಟೆವರೆಗೆ ಚಿನ್ನದ ರಥೋತ್ಸವ ಇರಲಿದೆ ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.
ದಿನೇ ದಿನೆ ತಿರುಪತಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ದೇವರ ದರ್ಶನಕ್ಕಾಗಿ 18 ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರು 12 ಗಂಟೆ ಕಾದು ದರ್ಶನ ಪಡೆಯುತ್ತಿದ್ದಾರೆ. ಕಳೆದ ಸೋಮವಾರ 61,499 ಭಕ್ತರು ದರ್ಶನ ಪಡೆದಿದ್ದಾರೆ. ಭಕ್ತರು ನೀಡಿದ ಕಾಣಿಕೆಯಿಂದ ಒಂದೇ ದಿನದಲ್ಲಿ 4.14 ಕೋಟಿ ರೂ. ಸಂಗ್ರಹವಾಗಿದೆ ಎಂದು ಧರ್ಮಾರೆಡ್ಡಿ ಮಾಹಿತಿ ನೀಡಿದ್ದಾರೆ.