ವೈಕುಂಠ ಏಕಾದಶಿ ಉಪವಾಸದ ಪ್ರಯೋಜನವೇನು? ಧಾರ್ಮಿಕ ಮಾತ್ರವಲ್ಲ ದೇಹದ ಆರೋಗ್ಯಕ್ಕೂ ಇದೆ 7 ಲಾಭ
ಕನ್ನಡ ಸುದ್ದಿ  /  ಜೀವನಶೈಲಿ  /  ವೈಕುಂಠ ಏಕಾದಶಿ ಉಪವಾಸದ ಪ್ರಯೋಜನವೇನು? ಧಾರ್ಮಿಕ ಮಾತ್ರವಲ್ಲ ದೇಹದ ಆರೋಗ್ಯಕ್ಕೂ ಇದೆ 7 ಲಾಭ

ವೈಕುಂಠ ಏಕಾದಶಿ ಉಪವಾಸದ ಪ್ರಯೋಜನವೇನು? ಧಾರ್ಮಿಕ ಮಾತ್ರವಲ್ಲ ದೇಹದ ಆರೋಗ್ಯಕ್ಕೂ ಇದೆ 7 ಲಾಭ

ಹಿಂದೂ ಧರ್ಮದಲ್ಲಿ ಏಕಾದಶಿ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಅದರಲ್ಲೂ ವೈಕುಂಠ ಏಕಾದಶಿ ಇನ್ನೂ ವಿಶೇಷ. ಈ ದಿನ ಉಪವಾಸ ಮಾಡುವುದರಿಂದ ಸಾಕಷ್ಟು ಪುಣ್ಯಗಳು ಲಭಿಸುತ್ತವೆ ಎಂದು ಹೇಳಲಾಗುತ್ತದೆ. ಆದರೆ ಏಕಾದಶಿ ಸೇರಿದಂತೆ ಯಾವುದೇ ದಿನ ಉಪವಾಸ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಉಪಯೋಗಗಳಿವೆ. ಇದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತೆ ಎಂಬ ವಿವರ ಇಲ್ಲಿದೆ.

ಉಪವಾಸದ ಪ್ರಯೋಜನಗಳು
ಉಪವಾಸದ ಪ್ರಯೋಜನಗಳು

ಹಿಂದೂ ಧರ್ಮದಲ್ಲಿ ಸಾಕಷ್ಟು ವಿಶಿಷ್ಟ ಆಚರಣೆ, ಸಂಪ್ರದಾಯಗಳಿವೆ. ಇವು ಧಾರ್ಮಿಕವಾಗಿ ಹಾಗೂ ವೈಜ್ಞಾನಿಕವಾಗಿ ತಳುಕು ಹಾಕಿಕೊಂಡಿರುತ್ತವೆ. ಇಂತಹ ಆಚರಣೆಗಳಲ್ಲಿ ಏಕಾದಶಿ ಕೂಡ ಒಂದು. ಹಿಂದೂ ಪಂಚಾಂಗದ ಪ್ರಕಾರ ಪ್ರತಿ ತಿಂಗಳಲ್ಲೂ ಏಕಾದಶಿ ಬರುತ್ತದೆ. ಏಕಾದಶಿ ದಿನ ಏನೂ ತಿನ್ನದೆ ಉ‍ಪವಾಸ ಮಾಡುವುದು ವಾಡಿಕೆ. ಆದರೆ ಏಕಾದಶಿ ದಿನ ಉಪವಾಸ ಮಾಡುವುದು ಧಾರ್ಮಿಕ ಹಿನ್ನೆಲೆಯ ದೃಷ್ಟಿಯಿಂದ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಪ್ರಯೋಜನಕಾರಿ.

ನಾಳೆ ವೈಕುಂಠ ಏಕಾದಶಿ ಇದ್ದು, ಎಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ ಜೋರಾಗಿದೆ. ವಿಷ್ಣು ಭಕ್ತರು ಏನನ್ನೂ ತಿನ್ನದೇ ಉಪವಾಸ ಮಾಡುತ್ತಾರೆ. ಈ ಹೊತ್ತಿನಲ್ಲಿ ಏಕಾದಶಿ ಉಪವಾಸ ಯಾಕೆ ಮಾಡಬೇಕು, ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳೋಣ.

ದೇಹ ನಿರ್ವಿಶಗೊಳ್ಳುತ್ತದೆ

ಏಕಾದಶಿಯಂದು ದಿನಪೂರ್ತಿ ಉಪವಾಸ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆ ವ್ಯವಸ್ಥೆಗೆ ವಿರಾಮ ಸಿಗುತ್ತದೆ. ಇದರಿಂದ ದೇಹವು ನೈಸರ್ಗಿಕವಾಗಿ ನಿರ್ವಿಶವಾಗುತ್ತದೆ. ದೇಹದಲ್ಲಿರುವ ವಿಷಾಂಶಗಳು ನೀರಿನ ಮೂಲಕ ಹೊರಹೋಗುತ್ತವೆ. ಇದು ತಿಂಗಳಿಗೊಮ್ಮೆ ಅಥವಾ ಏಕಾದಶಿ ದಿನ ಉಪವಾಸ ಮಾಡುವುದರಿಂದ ದೊರಕುವ ಪ್ರಮುಖ ಪ್ರಯೋಜನವಾಗಿದೆ.

ಜೀರ್ಣಕ್ರಿಯೆ ವೃದ್ಧಿ

ನಿಯಮಿತವಾಗಿ, ತಿಂಗಳೊಮ್ಮೆಯಾದರೂ ಉಪವಾಸ ಮಾಡುವುದರಿಂದ ನಮ್ಮ ಕರುಳಿನ ಆರೋಗ್ಯ ಸುಧಾರಿಸುತ್ತದೆ. ಇದು ಜೀರ್ಣಕ್ರಿಯೆಯ ಮೇಲೆ ಒತ್ತಡ ಬೀಳುವುದನ್ನು ತಪ್ಪಿಸುತ್ತದೆ. ಕರುಳು ಸ್ವಚ್ಛವಾಗುತ್ತದೆ.

ಮಾನಸಿಕ ಸ್ಪಷ್ಟತೆ

ಉಪವಾಸ ಮಾಡುವುದರಿಂದ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ನಮಗೆ ಸಾಕಷ್ಟು ಪ್ರಯೋಜನಗಳಿವೆ. ಉಪವಾಸ ಮಾಡುವುದರಿಂದ ಮಾನಸಿಕ ಸ್ಪಷ್ಟತೆ ಸಿಗುತ್ತದೆ. ಇದರಿಂದ ನಮ್ಮ ಗಮನಶಕ್ತಿಯೂ ಹೆಚ್ಚುತ್ತದೆ.

ತೂಕ ನಿರ್ವಹಣೆ

ಇಂದಿನ ಕಾಲದಲ್ಲಿ ಪ್ರತಿಯೊಬ್ಬರು ತೂಕ ನಿರ್ವಹಣೆಗೆ ಹರಸಾಹಸ ಪಡುತ್ತಿದ್ದಾರೆ. ಆದರೆ ನಿರಂತರ ಉಪವಾಸದಿಂದ ತೂಕ ನಿರ್ವಹಣೆ ಸಾಧ್ಯವಾಗುತ್ತದೆ. ಇದು ನಮ್ಮ ಚಯಾಪಚಯವನ್ನು ಸುಧಾರಿಸಲು ಕೂಡ ಉತ್ತಮ.

ಉರಿಯೂತ ನಿವಾರಣೆಗೂ ಸಹಕಾರಿ

ದೇಹದಲ್ಲಿ ಉರಿಯೂತವು ಹಲವು ರೀತಿಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗೂ ಉರಿಯೂತವೇ ಕಾರಣ. ನಿಯಮಿತ ಉಪವಾಸದಿಂದ ಉರಿಯೂತ ನಿವಾರಣೆ ಸಾಧ್ಯವಿದೆ. ಇದರಿಂದ ಹೃದಯಾಘಾತದಂತಹ ಅಪಾಯ ತಗ್ಗುತ್ತದೆ.

ಹಾರ್ಮೋನ್ ಉತ್ಪಾದನೆಯನ್ನು ವೃದ್ಧಿಸುತ್ತದೆ

ಕೆಲವು ಅಧ್ಯಯನಗಳ ಪ್ರಕಾರ ಉಪವಾಸ ಮಾಡುವುದರಿಂದ ಹ್ಯೂಮನ್ ಗ್ರೋತ್ ಹಾರ್ಮೋನ್ ಎನ್ನುವ ಪ್ರೊಟೀನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ನಮ್ಮ ದೇಹಕ್ಕೆ ಅತಿ ಅವಶ್ಯ ಕೂಡ. ಇದು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ.

ಜೀವಿತಾವಧಿ ವಿಸ್ತರಣೆ

ಪ್ರಾಣಿಗಳ ಮೇಲೆ ನಡೆದ ಕೆಲವು ಅಧ್ಯಯನಗಳ ಪ್ರಕಾರ ಉಪವಾಸ ಮಾಡುವುದರಿಂದ ನಮ್ಮ ಜೀವಿತಾವಧಿ ಹೆಚ್ಚುತ್ತದೆ. ಇದರಿಂದ ನಾವು ಹೆಚ್ಚು ಕಾಲ ಬದುಕುತ್ತೇವೆ ಎನ್ನುವ ಅಂಶವನ್ನು ಕಂಡುಕೊಳ್ಳಲಾಗಿದೆ. ಉಪವಾಸವು ಮನುಷ್ಯನ ಜೀವಿತಾವಧಿಯ ಮೇಲೂ ಪರಿಣಾಮ ಬೀರುತ್ತದೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Whats_app_banner