Valentines Day: ನಿಮ್ಮ ಕ್ರಷ್, ಸಂಗಾತಿಗೆ ಲವ್ ಲೆಟರ್ ಬರಿತೀರಾ; ಭಾವನೆಗೆ ಅಕ್ಷರ ರೂಪ ಕೊಡೋ ಮುನ್ನ ಈ ಟಿಪ್ಸ್ ಓದ್ಕೊಳಿ
ಪ್ರೇಮ ನಿವೇದನೆಗೆ ಬೆಸ್ಟ್ ದಾರಿ ಎಂದರೆ ಲವ್ ಲೆಟರ್ ಬರಿಯೋದು. ಇದೇನಪ್ಪಾ, ಹಳೆ ಕಾಲದವರ ಥರ ಲವ್ ಲೆಟರ್ ಬಗ್ಗೆ ಹೇಳ್ತಾರೆ ಅನ್ಕೋಬೇಡಿ. ಲವ್ ಲೆಟರ್ ಬರಿಯೋದ್ರಲ್ಲಿ ಇರುವ ಸುಖವೇ ಬೇರೆ. ಈ ಬಾರಿ ಪ್ರೇಮಿಗಳ ದಿನದಂದು ನಿಮ್ಮ ಮನ ಕದ್ದ ವ್ಯಕ್ತಿಗೆ ಪರ್ಫೆಕ್ಟ್ ಲವ್ ಲೆಟರ್ ಬರಿಬೇಕು ಅಂತಿದ್ರೆ ಈ ಟಿಪ್ಸ್ ಪಾಲಿಸಿ.
ಹಿಂದೆಲ್ಲಾ ಪ್ರೇಮ ನಿವೇದನೆಗೆ ಇದಿದ್ದು ಒಂದೇ ಮಾರ್ಗ, ಅದು ಲವ್ ಲೆಟರ್. ಕಾಲ, ತಂತ್ರಜ್ಞಾನ ಬದಲಾದಂತೆ ಪ್ರೇಮದ ಪರಿಭಾಷೆಯು ಬದಲಾಗಿದೆ. ಲವ್‌ಲೆಟರ್‌ಗಳು ಬರೆಯುವುದಿರಲಿ ಮೆಸೇಜ್ ಕೂಡ ಟೈಪ್ ಮಾಡುವ ಕಾಲ ಈಗಿಲ್ಲ. ಈಗೆಲ್ಲಾ ಮೀಮ್ಸ್, ಇಮೋಜಿ, ಜಿಫ್‌ಗಳ ಕಾಲ. ಎಲ್ಲವೂ ಅದರಲ್ಲಿ ವಿನಿಮಯವಾಗುತ್ತದೆ. ಆದ್ರೂ ಪ್ರೇಮಿಗಳ ದಿನ ಹತ್ತಿರ ಬಂದಾಗ ಲವ್ ಲೆಟರ್ ಬರೆಯುವ ಆಸೆ ಮೂಡುವುದು ಸುಳ್ಳಲ್ಲ. ಈ ಬಾರಿಯ ಪ್ರೇಮಿಗಳ ದಿನಕ್ಕೆ ನೀವು ಲವ್‌ಲೆಟರ್ ಬರೆದು ನಿಮ್ಮ ಸಂಗಾತಿಯನ್ನು ಖುಷಿ ಪಡಿಸಬೇಕು ಅಂತಿದ್ರೆ ನೀವು ಈ ಸಲಹೆಯನ್ನು ಪಾಲಿಸಬಹುದು. ಪರ್ಫೆಕ್ಟ್ ಲವ್ ಲೆಟರ್ ಬರಿಯೋಕೆ ರೋಮನ್ ಮೂಲದ ಕಥೆಗಾರರು ನೀಡಿದ ಟಿಪ್ಸ್ ಇಲ್ಲಿದೆ. ಇವರ ಪ್ರಕಾರ ಲವ್ ಲೆಟರ್ ಹೇಗೆ ಆರಂಭವಾಗಬೇಕು ಹಾಗೂ ಹೇಗೆ ಮುಗಿಯಬೇಕು ನೋಡಿ.
ಲವ್ ಲೆಟರ್ ಆರಂಭಿಸೋದು ಹೇಗೆ?
ಬಿಳಿ ಬಣ್ಣದ ಖಾಲಿ ಹಾಳೆಯಲ್ಲಿ ಪ್ರೇಮದ ಆಳವನ್ನು ಬಿತ್ತರಿಸುವುದು ನಿಜಕ್ಕೂ ಸುಲಭವಲ್ಲ. ಖಾಲಿ ಪುಟವನ್ನು ಕೈಯಲ್ಲಿ ಹಿಡಿದಾಗ ಎಲ್ಲಿಂದ ಆರಂಭಿಸಬೇಕು, ಹೇಗೆ ಆರಂಭಿಸಬೇಕು ಎಂಬ ಗೊಂದಲ ಮೂಡುವುದು ಸಹಜ. ಹಾಗಿದ್ದಾಗ ನೀವು ಮೊದಲು ನಿಮ್ಮ ಮನದನ್ನೆ ಅಥವಾ ಪ್ರಿಯಕರನಿಗೆ ಏನೆಂದು ಸಂಬೋಧಿಸಲು ಇಷ್ಟಪಡುತ್ತೀರಿ ಅದನ್ನು ಬರೆಯಿರಿ. ಒಲವಿನ ಪ್ರಿಯತಮನಿಂದ ಹಿಡಿದು, ಚಿನ್ನ, ಮುದ್ದು ಹೀಗೆ ಅವರಿಗೆ ನೀವು ಕರೆಯುವ ಅಡ್ಡ ಹೆಸರಿನಿಂದ ಪತ್ರ ಆರಂಭಿಸಿ. ನೀವು ಕರೆಯುವ ಆ ಹೆಸರೇ ಅವರನ್ನು ರೋಮಾಂಚನಗೊಳಿಸುವುದರಲ್ಲಿ ಎರಡು ಮಾತಿಲ್ಲ. ಅಲ್ಲಿಂದ ನಿಮ್ಮ ಮನದ ಮಾತನ್ನು ನೇರವಾಗಿ ಬರೆದುಕೊಂಡು ಹೋಗಿ. ನಿಮ್ಮೆಲ್ಲಾ ಭಾವನೆಗಳಿಗೆ ಅಕ್ಷರ ರೂಪ ನೀಡಿ. ನಿಮ್ಮೊಳಗೆ ಅಡಗಿರುವ ಅವರ ಮೇಲಿನ ಪ್ರೀತಿಯ ಭಾವವನ್ನು ಅಕ್ಷರ ರೂಪಕ್ಕೆ ಇಳಿಸಿ. ಅವರು ನಿಮ್ಮ ಬದುಕಿಗೆ ಎಷ್ಟು ಮುಖ್ಯ ಎಂಬ ಅಂಶವನ್ನೂ ಈ ಪತ್ರದಲ್ಲಿ ವಿವರವಾಗಿ ಬರೆಯಿರಿ. ನಿಮ್ಮಿಬ್ಬರ ಬದುಕು ಒಂದೇ ದೋಣಿಯಲ್ಲಿ ಸಾಗಿದರೆ ಹೇಗಿರುತ್ತದೆ ಎಂಬ ನಿಮ್ಮ ಕಲ್ಪನಾ ಪ್ರಪಂಚವನ್ನು ಮುಂದಿನ ಸಾಲುಗಳಲ್ಲಿ ಅವರ ಎದುರು ತೆರೆದಿಡಿ. ಒಟ್ಟಾರೆ ನಿಮ್ಮ ಪ್ರೇಮ ಆರಂಭವಾಗುವ ಕ್ಷಣದಿಂದ ನೀವಿಬ್ಬರೂ ಬದುಕಿನಲ್ಲಿ ಒಂದಾಗುವ ಕ್ಷಣ ಹಾಗೂ ಒಂದಾದ ನಂತರದ ಕ್ಷಣಗಳೆಲ್ಲವನ್ನೂ ಈ ಪತ್ರದಲ್ಲಿ ಅಕ್ಷರ ರೂಪಕ್ಕೆ ತಿಳಿಸಿ.
ಹೀಗೆ ಮುಗಿಸಿ
ಯಾವುದೇ ಬರವಣಿಗೆಯಂತೆ ಪ್ರೇಮ ಪತ್ರ ಬರೆಯುವಾಗ ಕೂಡ ನಿರ್ದಿಷ್ಠ ಹಾಗೂ ವಸ್ತುನಿಷ್ಠವಾಗಿರುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಭಾವನೆಗಳು ನಿಷ್ಕಪಟ ಎಂಬುದು ನಿಮ್ಮ ಸಂಗಾತಿಗೆ ಅರಿವಾಗುವಂತೆ ನಿಮ್ಮ ಪತ್ರ ಕೊನೆಯಾಗಬೇಕು. ನಿಮ್ಮದು ನಿಷ್ಕಲಶ್ಮ ಪ್ರೇಮ, ಪತ್ರದಲ್ಲಿ ಬರೆದಿರುವುದು ಕೇವಲ ಸಾಲುಗಳಲ್ಲ ನಿಮ್ಮ ಮನದ ಭಾವನೆಗಳು ಎಂಬುದು ಅವರ ಮನಸ್ಸಿಗೆ ನಾಟುವಂತೆ ಬರೆದು ಪತ್ರವನ್ನು ಅಂತ್ಯ ಮಾಡುವುದು ಮುಖ್ಯವಾಗುತ್ತದೆ.
ನೀವು ಅವರಲ್ಲಿ ಹೆಚ್ಚು ಇಷ್ಟಪಟ್ಟಿದ್ದೇನು?
ನಿಮ್ಮ ಪ್ರೇಮದಲ್ಲಿ ಯಾರೋ ಬರೆದ ಕವನ, ಪದ್ಯ, ಸಾಲುಗಳನ್ನು ತುರುಕಿಸಬೇಡಿ. ಸಾಧ್ಯವಾದಷ್ಟರ ಮಟ್ಟಿಗೆ ನಿಮ್ಮದೇ ಸ್ವಂತ ಆಲೋಚನೆಗಳನ್ನು ಕಟ್ಟಿಕೊಡಿ. ಲವ್ ಲೆಟರ್ ಎಂದರೆ ಕಾವ್ಯಾತ್ಮಕವಾಗಿಯೇ ಇರಬೇಕು ಎಂದೇನಿಲ್ಲ ಎಂಬುದು ನಿಮ್ಮ ಮನದಲ್ಲಿರಲಿ. ಅವರು ನಿಮಗೆ ಯಾಕಿಷ್ಟ ಎಂಬುದನ್ನು ನೇರವಾಗಿ ಹೇಳಲು ಪ್ರಯತ್ನಿಸಿ. ನಿಮ್ಮ ಮೊದಲ ಭೇಟಿ ಹೇಗಿತ್ತು, ನೀವು ಅವರನ್ನು ಮೊದಲು ಎಲ್ಲಿ ನೋಡಿದ್ದು, ಮೊದಲ ನೋಟದಲ್ಲಿ ನಿಮಗೆ ಅವರ ಬಗ್ಗೆ ಏನನ್ನಿಸ್ತು, ಅವರ ಮೇಲೆ ಪ್ರೀತಿ ಹುಟ್ಟಲು ಕಾರಣವೇನು? ಈ ಎಲ್ಲಾ ಅಂಶಗಳನ್ನು ಹಾಳೆಯ ಮೇಲೆ ವ್ಯಕ್ತಪಡಿಸಿ.
ಪ್ರೇಮಪತ್ರ ಬರೆಯುವುದು ಒಂದು ಕಲೆ. ಇದನ್ನು ಎಲ್ಲರಿಂದಲೂ ಬರೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಮನದ ಮಾತನ್ನು ಅಕ್ಷರ ರೂಪಕ್ಕೆ ಇಳಿಸಲು ಯಾವ ಕಲೆಯೂ ಬೇಡ ಅಲ್ಲವೇ. ಈ ಬಾರಿ ಪ್ರೇಮಿಗಳ ದಿನವನ್ನು ಲವ್‌ಲೆಟರ್ ಬರೆದು ನಿಮ್ಮ ಸಂಗಾತಿಗೆ ನೀಡುವ ಮೂಲಕ ಭಿನ್ನವಾಗಿ ಆಚರಿಸಿ.
(This copy first appeared in Hindustan Times Kannada website. To read more like this please logon to kannada.hindustantimes.com )
ವಿಭಾಗ