ಅಪ್ಪನ ಕಾಡುವ ವ್ಯಾಲೆಂಟೈನ್ಸ್ ಡೇ ಭಯ: ಅವನಿಗಿಂತ ಮೊದಲು, ಅವನಿಗಿಂತ ಹೆಚ್ಚು ನಿನ್ನ ಪ್ರೀತಿಸಿದವನು ನಾನು ಮಗಳೇ -ಅಪ್ಪನ ಮನಸಿನ ತಳಮಳ
'ಅವನಿಗಿಂತ ಮೊದಲಿನಿಂದಲೂ, ನೀನು ನಿನ್ನ ತಾಯಿಯ ಹೊಟ್ಟೆಗೆ ಬಿದ್ದ ದಿನದಿಂದಲೂ ನಿನ್ನನ್ನು ಪ್ರೀತಿಸಿದ್ದೇನೆ ಮಗಳೇ. ನೀನಂದ್ರೆ ನನ್ನ ಕನಸು ಕಣ್ಣೆದುರು ಇರುವಂತೆ. ನಿನ್ನ ಆಯ್ಕೆಯನ್ನು ನಾನು ಗೌರವಿಸುತ್ತೇನೆ. ಆದರೆ ಆತುರದ ನಿರ್ಧಾರಕ್ಕೆ ಜೀವನ ಹಾಳು ಮಾಡಿಕೊಳ್ಳಬೇಡ' ಎಂದೆಲ್ಲಾ ಹೇಳಬೇಕು ಅನ್ನಿಸುತ್ತೆ. ಆದರೆ ಹೇಳುವುದಕ್ಕೆ ಆಗುವುದೇ ಇಲ್ಲ. (ಬರಹ: ಶ್ರೀನಿವಾಸ ಮಠ)

ಮಗಳಿಗೆ ಈಗ 19 ವರ್ಷ ಆಗಿ, 20ನೇ ವರ್ಷ ನಡೆಯುತ್ತಿದೆ. ಅವಳ ಹುಟ್ಟಿದ ಹಬ್ಬ, ಹೊಸ ವರ್ಷದ ದಿನ, ವ್ಯಾಲಂಟೇನ್ಸ್ ಡೇ ಇವೆಲ್ಲ ಬಂತೆಂದರೆ ಮುಂಚಿನಷ್ಟು ಸಂಭ್ರಮವಿಲ್ಲ. ಅಸಲಿಗೆ ರಾತ್ರಿ ಹೊತ್ತಲ್ಲಿ ವಾಟ್ಸಾಪ್ ಮೆಸೇಜ್ ಶಬ್ದ ಮನೆಯಲ್ಲಿ ಕೇಳಿದರೆ ಏನೋ ಕೇಡು ಶಂಕಿಸಿದಂತೆ ಆಗುತ್ತದೆ. 'ಇಷ್ಟು ಹೊತ್ತಲ್ಲಿ ಯಾರದು ಮೆಸೇಜ್ ಮಾಡಿದವರು' ಎಂಬುದು ತಲೆಯಲ್ಲಿ ಹುಳ ಹೊಕ್ಕಂತೆ ಆಗುತ್ತದೆ. ಅವಳಿಗೆ ಈಗ ಗೆಳೆಯ-ಗೆಳತಿಯರು ತುಂಬ ಜನ. ಅವರು ನಮ್ಮ ಮನೆಗೂ ನಮ್ಮ ಮಗಳು ಅವರ ಮನೆಗಳಿಗೂ ಹೋಗುವುದು ತುಂಬ ಸಾಮಾನ್ಯ ಸಂಗತಿ.
ಆದರೆ ಅವಳ ಗೆಳೆಯರ ಪೈಕಿ ಯಾರ ಹೆಸರನ್ನು ಬಹಳ ಸಲ ಹೇಳುತ್ತಾಳೆ ಮತ್ತು ಅವರಲ್ಲಿ ಯಾರು ಹೆಚ್ಚಿಗೆ ನಮ್ಮ ಮನೆಗೆ ಬರುತ್ತಾರೆ ಹಾಗೂ ಅವಳು ಸಹ ಯಾರ ಮನೆಗೆ ಹೆಚ್ಚು ಹೋಗುತ್ತಾಳೆ ಎಂಬುದನ್ನು ಬಹಳ ಬುದ್ಧಿವಂತಿಕೆ ಎಂಬಂತೆ ಹೆಂಡತಿಯಿಂದ ವಿಚಾರಿಸಿಕೊಳ್ಳುತ್ತೇನೆ. ಆಗ ಒಂದು ಬಗೆಯಲ್ಲಿ ನಾಚಿಕೆಯೂ ಮತ್ತೊಂದು ಬಗೆಯಲ್ಲಿ ಮಗಳನ್ನು ಅನುಮಾನಿಸುತ್ತಿದ್ದೇನಲ್ಲ ಎಂಬ ಅಪರಾಧಿ ಭಾವವೂ ಕಾಡುತ್ತದೆ. ಅದರ ಜೊತೆಗೆ ಮಗಳ ವರ್ತನೆ, ಸಣ್ಣ-ಪುಟ್ಟದಕ್ಕೂ ಮಾಡುವ ಹಟ, ನಾನೀಗ ಬೆಳೆದಿದ್ದೇನೆ- ನನ್ನ ನಿರ್ಧಾರ ನಾನು ಮಾಡುತ್ತೇನೆ ಎಂಬ ಮಾತು ಕಿವಿಯಲ್ಲಿ ಜೋರಾಗಿ ಗಂಟೆ ಹೊಡೆದಂತೆ ಕೇಳುತ್ತದೆ.
ಬಂತು ಮತ್ತೊಂದು ವ್ಯಾಲಂಟೇನ್ಸ್ ಡೇ
ಈ ವ್ಯಾಲಂಟೇನ್ಸ್ ಡೇ ಯಾಕಾದರೂ ಬರುತ್ತದೋ? ಫೆಬ್ರುವರಿ 14ಕ್ಕೆ ಒಂದು ವಾರಕ್ಕೆ ಮುಂಚಿನಿಂದಲೂ ಒಂಥರಾ ಆತಂಕ. ಉಳಿದ ಯಾವುದೇ ದಿನ ಹುಡುಗರು ತಾವು ಇಷ್ಟಪಡುವ ಹುಡುಗಿಯರಿಗೆ ಪ್ರಪೋಸ್ ಮಾಡುವುದೇ ಇಲ್ಲವೇನೋ ಎಂಬಂಥ ಮೂಢ ಉದ್ವೇಗವೊಂದು ತಲೆ ಎತ್ತಿ ಹೆಡೆ ಆಡಿಸಲು ಆರಂಭಿಸುತ್ತದೆ. ಇನ್ನು 14ನೇ ತಾರೀಕು ಮಗಳು ಯಾವ ಬಣ್ಣದ ಬಟ್ಟೆ ಹಾಕಿದ್ದಾಳೆ ಎಂಬುದನ್ನು ಗಮನವಿಟ್ಟು ನೋಡುತ್ತೇನೆ. ಸುಖಾಸುಮ್ಮನೆ ನಕ್ಕು, ಯೂ ಆರ್ ಲುಕಿಂಗ್ ಗಾರ್ಜಿಯಸ್ ಮಗಳೇ ಎಂದು ಹೇಳಿ, ಅವಳು ಕಾಲೇಜಿಗೆ ಹೊರಟ ನಂತರವೇ ಆಫೀಸಿಗೆ ಹೊರಡುತ್ತೇನೆ.
ಆ ದಿನ ಮಾತ್ರ, “ಮಗಳು ಕಾಲೇಜಿಂದ ಮನೆಗೆ ಬಂದಳಾ?” ಎಂಬುದನ್ನು ಫೋನ್ ಮಾಡಿ ವಿಚಾರಿಸಿಕೊಳ್ಳುತ್ತೇನೆ. ಪದೇಪದೇ ಅವಳು ಖುಷಿಯಾಗಿದ್ದಾಳಾ ಅಥವಾ ಏನಾದರೂ ಬೇಸರ ಇದೆಯಾ ಹೀಗೆ ಕೆಲವು ಕೇಳಿದ ಕೇಳಿದ ಪ್ರಶ್ನೆಗಳನ್ನೇ ಮತ್ತೆ ಮತ್ತೆ ವಿಚಾರಿಸಿ, ಸಾಧ್ಯವಾದಷ್ಟು ಬೇಗ ಮನೆಗೆ ಬಂದು, ಮಗಳು ಬಹಳ ಇಷ್ಟ ಪಡುವ ಹೋಟೆಲ್‌ಗೆ ಕರೆದುಕೊಂಡು ಹೋಗುತ್ತೇನೆ. ಆ ದಿನ ಮಾತ್ರ ಎಲ್ಲ ಆರ್ಡರ್ ನನ್ನ ಮಗಳೇ ಮಾಡುತ್ತಾಳೆ. ಬಿಲ್ ಅನ್ನು ಸಹ ಅವಳ ಕೈಗೆ ಹಣ ಕೊಟ್ಟು, ಸಪ್ಲೈ ಮಾಡಿದವರಿಗೆ ಒಳ್ಳೆ ಟಿಪ್ಸ್ ಕೊಡಿಸಿ ವಾಪಸ್ ಮನೆ ಸೇರಿಕೊಳ್ಳುತ್ತೇನೆ.
ಹೆಂಡತಿ ಮುಖವನ್ನು ನೋಡಲಾಗದ ಟೆನ್ಷನ್
ಹೋಟೆಲ್‌ಗೆ ಹೋಗುವ ಹಾಗೂ ಬರುವ ದಾರಿಯುದ್ದಕ್ಕೂ ಮಗಳ ಬಗ್ಗೆ ನನಗೆ ಇರುವ ಕನಸುಗಳು, ಅವಳಿಗಾಗಿ ನಾನು ಮಾಡುತ್ತಿರುವ “ತ್ಯಾಗ” ಇತ್ಯಾದಿಗಳ ಬಗ್ಗೆ ಉಳಿದ ಎಲ್ಲ ಮಾತುಗಳ ಮಧ್ಯೆಯೇ ಸೇರಿಸುತ್ತಾ ಇರುತ್ತೇನೆ. ಯಾಕೆಂದರೆ, ಈ ಮಾತುಗಳು ಅವಳಿಗೆ ಬೋರಿಂಗ್. 'ಅಪ್ಪಾ, ನಿಮ್ಮ ಅಪ್ಪ ಸಹ ಹೀಗೆ ಹೇಳುತ್ತಿದ್ದರಾ' ಅಂದುಬಿಡುತ್ತಾಳೆ. ಆಗ ಏನು ಉತ್ತರ ಕೊಡಬೇಕು ಅನ್ನೋದೇ ನನಗೆ ಹೊಳೆಯಲ್ಲ. ಇನ್ನು ನನ್ನ ಹೆಂಡತಿಯ ಮುಖ ನೋಡಿದರೆ ವ್ಯಂಗ್ಯವಾಗಿ ನಗುತ್ತಾಳೇನೋ ಅಂತಲೂ ಟೆನ್ಷನ್ ಆಗುತ್ತಾ ಇರುತ್ತದೆ. ನನ್ನ ಹೆಂಡತಿಗೆ ಇವತ್ತಿಗೂ ಟ್ರಾಫಿಕ್ ಅಂದರೆ ಸ್ವಲ್ಪ ಭಯ. ಆದರೆ ಮಗಳಿಗೆ ಧೈರ್ಯ ಜಾಸ್ತಿ. ತನ್ನ ಅಮ್ಮನನ್ನ ಹೊರಗೆ ಕರೆದುಕೊಂಡು ಹೋಗುತ್ತಾಳೆ, ಡಾಕ್ಟರ್ ಹತ್ತಿರ ರೊಟೀನ್ ಚೆಕಪ್‌ನಿಂದ ಹಿಡಿದು, ಬ್ಯೂಟಿ ಪಾರ್ಲರ್ ತನಕ ಎಲ್ಲ ಕಡೆಗೆ ಅಮ್ಮನನ್ನ ಕರೆದುಕೊಂಡು ಹೋಗುವುದು ಮಗಳೇ.
ಮಗಳ ಧೈರ್ಯವೇ ನನ್ನ ಭಯ
ಮೊದಮೊದಲಿಗೆ ಹೆಂಡತಿ ಪಡುತ್ತಿದ್ದ ಭಯ ನೋಡಿ ಆಡಿಕೊಳ್ಳುತ್ತಿದ್ದೆ. ಒಂದು ರಸ್ತೆ ದಾಟುವುದಕ್ಕೆ ಇಷ್ಟು ಹೆದರ್ತಿಯಲ್ಲಾ ಅಂತಿದ್ದೆ. ಈಗೆಲ್ಲ ಮಗಳ ಧೈರ್ಯ ನೋಡಿದರೆ ಭಯ ಆಗುತ್ತೆ. ಯಾವ ಕಾಲೇಜು, ಯಾವ ಟ್ಯೂಷನ್, ಯಾವ ಗಾಡಿ ಬೇಕು ಹೀಗೆ ಎಲ್ಲ ನಿರ್ಧಾರ ಮಗಳದೇ. “ಹೀಗೇ ಒಂದು ದಿನ ತಾನು ಇಷ್ಟಪಡುವ ಹುಡುಗ ಇವನೇ, ಇವನನ್ನೇ ಮದುವೆ ಆಗ್ತೀನಿ ಅಂತ ಹೇಳ್ತಾಳೆ ನೋಡಿ ನಿಮ್ಮ ಮಗಳು,” ಎಂದು ಜೊತೆಯಲ್ಲಿ ಕೆಲಸ ಮಾಡುವ ಸುಗುಣ ಅವರು ಹೇಳಿದರೆ, ಒಮ್ಮೆಲೇ ಸಿಟ್ಟು ಬರುತ್ತದೆ. ಆ ಮಾತಾಡಿದ ಎರಡು ದಿನ ಅವರ ಜೊತೆಗೆ ನಾನು ಬೇಕಂತಲೇ ಮುಖ ತಪ್ಪಿಸಿಕೊಂಡು ಓಡಾಡಿರ್ತೀನಿ.
'ಅವನಿಗಿಂತ ಮೊದಲಿನಿಂದಲೂ, ನೀನು ನಿನ್ನ ತಾಯಿಯ ಹೊಟ್ಟೆಗೆ ಬಿದ್ದ ದಿನದಿಂದಲೂ ನಿನ್ನನ್ನು ಪ್ರೀತಿಸಿದ್ದೇನೆ ಮಗಳೇ. ನಿನ್ನ ಆಯ್ಕೆಯನ್ನು ನಾನು ಗೌರವಿಸುತ್ತೇನೆ. ಆದರೆ ಆ ಹುಡುಗನ ಬಗ್ಗೆ ವಿಚಾರಿಸಲು ಅನುವು ಮಾಡಿಕೊಡು. ಆತುರದ ನಿರ್ಧಾರಕ್ಕೆ ಜೀವನ ಹಾಳು ಮಾಡಿಕೊಳ್ಳಬೇಡ. ಅವನಿಗಿಂತ ಹೆಚ್ಚು ನಿನ್ನನ್ನು ನಾನು ಸದಾ ಪ್ರೀತಿಸುತ್ತೇನೆ ಮಗಳೇ' ಎಂದೆಲ್ಲಾ ಹೇಳಬೇಕು ಅನ್ನಿಸುತ್ತೆ. ಆದರೆ ಹೇಳುವುದಕ್ಕೆ ಆಗುವುದೇ ಇಲ್ಲ.
ನನ್ನ ತಲೆಮಾರಿನವರಿಗೆ ಇವ್ಯಾವೂ ಅರ್ಥವಾಗಲ್ಲ
ಈಗಿನ ಮಕ್ಕಳು ತಮಗೆ ಅನಿಸಿದ್ದನ್ನು ನೇರವಾಗಿ ಹೇಳಿಬಿಡ್ತಾರೆ. ಅವರಿಗೆ ಯಾವುದಾದರೂ ವಸ್ತುವಾಗಲೀ ವ್ಯಕ್ತಿಗಳಾಗಲೀ ಇಷ್ಟವಾಗುವುದು ಬಹಳ ಬೇಗ. ಅದೇ ರೀತಿ ಅವರಿಗೆ ಅವೇ ವಸ್ತುಗಳು, ವ್ಯಕ್ತಿಗಳು ಬೇಗ ಬೋರ್ ಆಗುವುದು ಸಹ ಹೌದು. ತಮ್ಮ ಡಿಗ್ರಿ ಮುಗಿಸುತ್ತಿದ್ದ ಹಾಗೆ ಒಳ್ಳೆ ಸಂಬಳದ ಕೆಲಸವೂ ಸಿಕ್ಕಿಬಿಡುತ್ತದೆ. ಪ್ರೀತಿ- ಮದುವೆ- ಸಂಬಂಧಗಳು (ಲಿವ್ ಇನ್ ರಿಲೇಷನ್ ಷಿಪ್) ತಾವು ಅಂದುಕೊಂಡಂತೆ ಮಾಡುತ್ತೇವೆ ಅಂದುಕೊಳ್ಳುತ್ತಾರೆ ಎಂಬುದು ನನ್ನ ಅನಿಸಿಕೆಯಾಗಿತ್ತು. ಇತ್ತೀಚೆಗೆ ನನ್ನ ಅಭಿಪ್ರಾಯಕ್ಕೆ ಏನೇನೋ ಸೇರಿಕೊಳ್ಳುತ್ತಿದೆ. ಅದೇನೆಂದರೆ, ಎಲ್ಲವನ್ನೂ ಮಾಡಬೇಕು, ಎಕ್ಸ್ ಪೀರಿಯೆನ್ಸ್ ಆಗಬೇಕು. ಎಜುಕೇಷನ್ ಬೋರ್ ಆದರೂ ಸೆಕೆಂಡ್ ಪಿಯುಸಿ ಅಥವಾ ಎಂಜಿನಿಯರಿಂಗ್ ಮಾಡುವಾಗಲೂ ಮಧ್ಯೆ ಬ್ರೇಕ್ ತಗೊಳ್ತಾರೆ. ನನ್ನ ತಲೆಮಾರಿನವರಿಗೆ ಇವ್ಯಾವೂ ಅರ್ಥವಾಗಲ್ಲ.
ನಿಮಗೂ ಹೀಗೇ ಅನ್ನಿಸುತ್ತಾ?
ನನಗೆ ಮಗಳೆಂದರೆ ಅಮ್ಮನದೇ ನೆನಪು. ಅಮ್ಮನೂ ಅಮಾಯಕಳಾಗಿದ್ದಳು, ಮಗಳೂ ಅಮಾಯಕಳು; ಆದರೆ ಸಿಕ್ಕಾಪಟ್ಟೆ ಧೈರ್ಯವಂತೆ, ವಿದ್ಯಾವಂತೆ, ಬುದ್ಧಿವಂತೆ ಹೌದಾ- ಅಲ್ಲವಾ ಅನ್ನೋದನ್ನ ತಂದೆಯ ಸ್ಥಾನದಲ್ಲಿ ನಿಂತು ನೋಡುವ ನನಗೆ ನಿರ್ಧಾರ ಮಾಡುವುದಕ್ಕೆ ಆಗುತ್ತಿಲ್ಲ. ಮತ್ತೊಂದು ವ್ಯಾಲಂಟೇನ್ಸ್ ಡೇ ಬಂದಿದೆ. ವಾಟ್ಸಾಪ್ ಮೆಸೇಜ್ ಬಂದಂತೆ ಫೋನ್‌ನಲ್ಲಿ ಶಬ್ವ ಬಂದರೆ ಅಥವಾ ಕನಸು ಬಂದರೆ ಗಾಬರಿಯಿಂದ ಎದ್ದು ಕೂರುತ್ತೇನೆ, ಬಹಳ ಹೊತ್ತು ನಿದ್ದೆ ಬರುವುದಿಲ್ಲ. ಅದೆಷ್ಟೋ ಸಾವಿರ ಸಾವಿರ ಹುಡುಗರು ತಮ್ಮ ಕೈಯಲ್ಲಿ ಹೆಣ್ಣುಮಗುವೊಂದನ್ನು ತಂದಂತೆ ಚಿತ್ರವೊಂದು ಬರುತ್ತದೆ. ಅಂದರೆ ಅವರು ಹೆಣ್ಣುಮಕ್ಕಳ ತಂದೆ ಆದಾಗ ನಾನು ಹಾಗೂ ನನ್ನಂಥ ತಂದೆ ಏನು ಆಲೋಚಿಸುತ್ತಾರೆ, ಯಾಕೆ ಆತಂಕ ಪಡುತ್ತಾರೆ ಎಂಬುದು ಅರ್ಥವಾಗಬಹುದು ಎಂಬುದು ಒಂದು ಊಹೆ.
ನಿಮಗೂ ಹೆಣ್ಣುಮಗು ಇದೆಯಾ, ನನಗೆ ಆದಂಥ ಗಾಬರಿ- ಆತಂಕ ನಿಮಗೂ ಆಗುತ್ತದೆಯಾ?
(ಬರಹ: ಶ್ರೀನಿವಾಸ ಮಠ, ಬೆಂಗಳೂರು)
