ಅವನಲ್ಲಿ ಇವಳಿಲ್ಲಿ: ಲಾಂಗ್ ಡಿಸ್ಟೆನ್ಸ್ ರಿಲೇಷನ್‌ಶಿಪ್ ನಿಭಾಯಿಸಲು ದೂರದೂರಿನಲ್ಲಿರುವ ಪ್ರೇಮಿಗಳಿಗೆ ಇಲ್ಲಿದೆ ಟಿಪ್ಸ್
ರೆಡಿಮೇಡ್ ಐಟಮ್‌ಗಳನ್ನು ಕೊಡುವುದಕ್ಕಿಂತಲೂ ಖುದ್ದಾಗಿ ನೀವೆ ನಿಮ್ಮ ಮನದಾಳದ ಮಾತುಗಳನ್ನು ಬರೆದು ಅದಕ್ಕೆ ಅವರು ಇಷ್ಟಪಡುವ ಸೆಂಟ್ ಹಾಕಿ ನಿಮ್ಮ ಪ್ರೇಮಿಗೆ ತಲುಪಿಸಿ. ಇದು ನಿಮ್ಮ ಸಂಗಾತಿಗೆ ಇಷ್ಟವಾಗುತ್ತದೆ.

ಪ್ರೀತಿಸುವ ವಿಧಾನ ಪ್ರತಿಯೊಬ್ಬರಲ್ಲೂ ಭಿನ್ನವಾಗಿರುತ್ತದೆ. ಹಲವರು ತಮ್ಮ ಸಂಗಾತಿಯೊಂದಿಗೆ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಮತ್ತಷ್ಟು ಜನ ದೂರದಲ್ಲಿದ್ದು ಕೆಲ ದಿನಗಳಿಗೊಮ್ಮೆ ಪರಸ್ಪರ ಭೇಟಿಯಾಗುತ್ತಿರುತ್ತಾರೆ. ತಮ್ಮ ಸಂಗಾತಿಯು ಪರ ಊರು, ದೇಶ-ವಿದೇಶಗಳಲ್ಲಿದ್ದಾಗ ಪರಸ್ಪರ ಭೇಟಿಯಾಗಿ ಮನಸಿನ ಮಾತನ್ನು ಹಂಚಿಕೊಳ್ಳುವುದು ಅಸಾಧ್ಯವೇ. ಆದರೂ ಅವರ ಪ್ರೀತಿ ಮಾತ್ರ ಅಗಾಧವಾಗಿರುತ್ತದೆ.
'ಅವನಲ್ಲಿ ಇವಳಿಲ್ಲಿ ಮಾತಿಲ್ಲ ಕಥೆಯಿಲ್ಲ, ಎದುರೆದುರು ಬಂದಾಗ ಹೆದರೆದರಿ ನಿಂತಾಗ, ಅಲ್ಲೇ ಆರಂಭ ಪ್ರೇಮ' ಎನ್ನುವ ಹಾಡಿನಂತೆ ಈ ಪ್ರೀತಿಯು ಕೂಡ. ದೂರವಿದ್ದರೆ ಪ್ರೀತಿಯಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ಮಾತುಗಳು ಕೇಳಿಬರುವುದು ಸಹಜವೇ. ಆದರೆ ವಾಸ್ತವದಲ್ಲಿ ದೂರವಿರುವ ಪ್ರೀತಿ ಹೆಚ್ಚು ಕಾಲ ಉಳಿದಿರುವುದನ್ನು ನಾವು ಸಾಕಷ್ಟು ಕಡೆಗಳಲ್ಲಿ ನೋಡಿರುತ್ತೇವೆ. ಅಂತೆಯೇ ಈ ಲೇಖನದಲ್ಲಿ ದೂರದಲ್ಲಿದ್ದು ಪ್ರೇಮಿಸುವವರಿಗೆ ಒಂದಷ್ಟು ಟಿಪ್ಸ್ ನೀಡುತ್ತಿದ್ದೇವೆ.
ವಿಡಿಯೋ ಕರೆಗೆ ಸಮಯ ನಿಗದಿಪಡಿಸಿ
ಹೌದು, ನಮಗೆ ದೂರದಲ್ಲಿದ್ದು ಪ್ರೀತಿಸುವವರ ಸಂಕಟ ಅರ್ಥವಾಗುತ್ತದೆ. ದೈಹಿಕವಾಗಿ ಜೊತೆಗಿರದೆ ಮಾನಸಿಕವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತ ಪ್ರೇಮ ಜೀವನವನ್ನು ಕಳೆಯುತ್ತಿರುವ ನೀವು ದಿನದಲ್ಲಿ ನಿರ್ದಿಷ್ಟ ಸಮಯವನ್ನು ವಿಡಿಯೊ ಕರೆಗಾಗಿ ಮೀಸಲಿಡಿ. ಈ ಸಂದರ್ಭದಲ್ಲಿ ಇಬ್ಬರು ಏಕಾಂತದಲ್ಲಿ ಭೋಜನವನ್ನು ಪ್ರೀತಿಯಿಂದ ಸವಿಯಿರಿ.
ಖುದ್ದಾಗಿ ಪತ್ರ ಬರೆಯಿರಿ
ಪ್ರೇಮಿಗಳ ದಿನದಂದು ದೂರದಲ್ಲಿರುವ ತಮ್ಮ ಸಂಗಾತಿಗೆ ಕಾರ್ಡ್‌ಗಳು, ಉಡುಗೊರೆಗಳು ಮತ್ತು ಪ್ರೀತಿಯ ಸಂದೇಶಗಳನ್ನು ಕಳುಹಿಸುವ ಮೂಲಕ ಹಲವರು ತಮ್ಮ ಪ್ರೀತಿ ತೋರಿಸುತ್ತಾರೆ. ಈ ರೆಡಿಮೇಡ್ ಐಟಮ್‌ಗಳನ್ನು ಕೊಡುವುದಕ್ಕಿಂತಲೂ ಖುದ್ದಾಗಿ ನೀವೆ ನಿಮ್ಮ ಮನದಾಳದ ಮಾತುಗಳನ್ನು ಬರೆದು ಅದಕ್ಕೆ ಅವರು ಇಷ್ಟಪಡುವ ಸೆಂಟ್ ಹಾಕಿ ನಿಮ್ಮ ಪ್ರೇಮಿಗೆ ತಲುಪಿಸಿ. ಇದು ನಿಮ್ಮ ಸಂಗಾತಿಗೆ ಇಷ್ಟವಾಗುತ್ತದೆ.
ಆರೈಕೆ ವಸ್ತುಗಳನ್ನು ಗಿಫ್ಟ್ ಮಾಡಿ
ಇತ್ತೀಚಿನ ದಿನಗಳಲ್ಲಿ 'ಕೇರ್ ಪ್ಯಾಕೇಜ್ ಗಿಫ್ಟ್'ಗಳನ್ನು ವಿವಿಧ ಕಂಪನಿಗಳು ಆನ್‌ಲೈನ್ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿವೆ. ಅದು ಆಹಾರ, ಸೌಂದರ್ಯವರ್ಧಕ ವಸ್ತುಗಳು, ಉಡುಗೆ ತೊಡುಗೆಗಳು, ಚಾಕೊಲೇಟ್, ಹೂಗಳು ಮತ್ತು ಅನೇಕ ರೋಮ್ಯಾಂಟಿಕ್ ವಸ್ತುಗಳನ್ನು ಒಳಗೊಂಡಿರುತ್ತವೆ. ನೀವು ಅವರ ಆಯ್ಕೆಗೆ ಅನುಗುಣವಾಗಿ ಉಡುಗೊರೆಗಳನ್ನು ಆಯ್ಕೆ ಮಾಡಿ ಮತ್ತು ಈ ದಿನವನ್ನು ಸ್ಮರಣೀಯವಾಗಿಸಿ. ಇದರಿಂದ ಅವರ ಮೇಲೆ ನೀವಿಟ್ಟಿರುವ ಕಾಳಜಿ ಮತ್ತು ಪ್ರೀತಿ ಮತ್ತಷ್ಟು ಬಲಗೊಳ್ಳುತ್ತದೆ.
ಇಬ್ಬರೂ ಸೇರಿ ಟ್ರಿಪ್ ಪ್ಲ್ಯಾನ್ ಮಾಡಿ
ಇಬ್ಬರೂ ಬೇರೆಬೇರೆ ಸ್ಥಳದಲ್ಲಿದ್ದರೂ ಈ ಪ್ರೇಮಿಗಳ ದಿನದಂದು ಮುಂಚಿತವಾಗಿಯೇ ಜೊತೆಯಾಗಿರುವಂತೆ ಪ್ಲಾನ್ ಮಾಡಿಕೊಳ್ಳಿ. ನೀವು ಭೇಟಿಯಾಗಬೇಕೆಂದಿರುವ ಸ್ಥಳದ ಆಯ್ಕೆಯು ಪರಿಪೂರ್ಣವಾಗಿರಬೇಕು. ಈ ಭೇಟಿ ನಿಮ್ಮಿಬ್ಬರನ್ನು ಬೇರೆ ಜಗತ್ತಿಗೆ ಕರೆದೊಯ್ಯುವಂತಿರಬೇಕು. ನಿಮ್ಮ ಮನಸ್ಸಿನಲ್ಲಿರುವ ಪ್ರೀತಿಯನ್ನು ಮನಬಿಚ್ಚಿ ಹೇಳಿಕೊಂಡು ಆ ಸಮಯವನ್ನು ಅನುಭವಿಸಿ.
ಅನಿರೀಕ್ಷಿತವಾಗಿ ಭೇಟಿ ಮಾಡಿ
ನೀವು ನಿಮ್ಮ ಪ್ರೇಮಿಯನ್ನು ಭೇಟಿಯಾಗಿ ತುಂಬಾ ದಿನಗಳಾಗಿದ್ದರೆ ಸ್ವಲ್ಪವು ಯೋಚಿಸದೆ ಅನಿರೀಕ್ಷಿತ ಭೇಟಿಗೆ ಸಜ್ಜಾಗಿ. ಅವರಿಗೆ ಇಷ್ಟವಾಗುವ ಉಡುಗೊರೆಗಳನ್ನು ತೆಗೆದುಕೊಂಡು ಇದ್ದಕ್ಕಿದ್ದ ಹಾಗೆ ಅವರ ಮುಂದೆ ಹೋಗುವ ಮೂಲಕ ರೋಮ್ಯಾಂಟಿಕ್ ಆಗಿ ಸರ್‌ಪ್ರೈಸ್ ಕೊಡಿ. ಇದರಿಂದ ನೀವು ಅವರ ಮೇಲಿಟ್ಟಿರುವ ಅಗಾಧ ಪ್ರೀತಿಗೆ ಅಭಿವ್ಯಕ್ತಿ ಸಿಗುತ್ತದೆ. ನಿಮ್ಮ ಸಂಬಂಧವೂ ಮತ್ತಷ್ಟು ಗಟ್ಟಿಯಾಗುತ್ತದೆ.
