ಹುಡುಗರು ಮಾತ್ರ ಪ್ರೀತಿಯಲ್ಲಿ ಮೋಸ ಮಾಡ್ತಾರಾ? ಹುಡುಗೀರು ಮೋಸ ಮಾಡೋದೇ ಇಲ್ವಾ? ಹಲವರ ಕಾಡುವ ಪ್ರಶ್ನೆ, ನೋವಿಗೆ ಇಲ್ಲಿದೆ ಉತ್ತರ -ಮನದ ಮಾತು
ಭವ್ಯಾ ವಿಶ್ವನಾಥ್ ಬರಹ: ನಿಜವಾಗಿಯೂ ಪ್ರೀತಿಸುವವರು ಸಂಗಾತಿಯ ಆದ್ಯತೆ, ಗುರಿ ಮತ್ತು ಯೋಗಕ್ಷೇಮದ ಕಡೆಗೆ ಗಮನ ಕೊಡುತ್ತಾರೆ. ಪ್ರಾಮಾಣಿಕವಾಗಿ ಪ್ರೀತಿಸದೇ ಇರುವವರು ಸಂಗಾತಿಗೆ ಪ್ರೋತ್ಸಾಹವನ್ನು ನೀಡುವುದಿಲ್ಲ.

ಪ್ರಶ್ನೆ: ಅಲ್ಲ ಮೇಡಂ, ನಿಮ್ಮಂಥವರು ಪ್ರೀತಿ, ಪ್ರೇಮ ಅಂತೆಲ್ಲ ಬರೆಯುವಾಗ ಕೇವಲ ಹುಡುಗಿಯರ ಬಗ್ಗೆಯೇ ಬರೀತೀರಿ. ಹುಡುಗರಿಗೆ ಭಾವನೆಗಳೇ ಇರಲ್ವಾ? ಹುಡುಗರಿಂದ ಮಾತ್ರವೇ ಹುಡುಗಿಯರಿಗೆ ಯಾವಾಗಲೂ ಮೋಸ ಆಗುವುದಾ? ಹುಡುಗಿಯರಿಂದ ಎಷ್ಟು ಹುಡುಗರಿಗೆ ಮೋಸ ಆಗಿದೆ ಗೊತ್ತಾ ನಿಮಗೆ? ಫೇಕ್ ಲವ್, ಸೆಲ್ಫಿಷ್ ಲವ್, ದುರಾಸೆ ಇಟ್ಕೊಂಡು ಪ್ರಪೋಸ್ ಮಾಡೋ ಹುಡುಗಿಯರನ್ನು ಗುರುತಿಸೋದು ಹೇಗೆ? ಹುಡುಗರು ಹೇಗೆ ಎಚ್ಚರವಹಿಸಬಹುದು ನೀವಾದರೂ ತಿಳಿಸಿಕೊಡಿ ಮೇಡಂ. -ರಾಕೇಶ, ಮಂಗಳೂರು
ಉತ್ತರ: ಒಳ್ಳೆಯ ಪ್ರಶ್ನೆ. ಭಾವನೆಗಳು ಹೆಣ್ಣಿಗೆ ಮತ್ತು ಗಂಡಿಗೆ ಇಬ್ಬರಿಗೂ ಕೂಡ ಒಂದೇ ರೀತಿಯಲ್ಲಿ ಇರುತ್ತವೆ. ಹೆಣ್ಣಿಗೆ ಮಾತ್ರ ಭಾವನೆಗಳು ಹೆಚ್ಚು, ಗಂಡಿಗೆ ಭಾವನೆಗಳು ಕಡಿಮೆ ಅಥವಾ ಗಂಡಸಿಗೆ ಭಾವನೆಗಳು ಇರಲೇಬಾರದು ಎಂಬ ಅನಿಸಿಕೆ ಸರಿಯಲ್ಲ. ನೋವು, ನಲಿವು, ಪ್ರೀತಿ, ವಿಶ್ವಾಸ ಇಬ್ಬರಿಗೂ ಸಮನಾಗಿರುತ್ತದೆ. ಆದರೆ ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ಮಾತ್ರ ಭಿನ್ನವಾಗಿರಬಹುದು. ಹಾಗೆಂದು ಭಿನ್ನವಾಗಿರಲೇಬೇಕೆಂದು ಇಲ್ಲ. ವಿಶೇಷವಾಗಿ, ಪ್ರೀತಿ-ಪ್ರೇಮ ವಿಚಾರದಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರ ಭಾವನೆಗಳನ್ನು ನಾವು ಪರಿಗಣಿಸಲೇಬೇಕು.
ಇಬ್ಬರಿಗೂ ಸಹ ಗಾಢವಾದ ಭಾವನೆಗಳು ಇರುತ್ತವೆ. ಆದರೆ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಭಿನ್ನವಿರಬಹುದು ಅಷ್ಟೇ. ಒಬ್ಬರ ಅಭಿವ್ಯಕ್ತಿ ಪ್ರಬಲವಾಗಿರಬಹುದು, ಕೆಲವರಿಗೆ ಕಡಿಮೆ ತೀವ್ರತೆಯಿಂದ ಕೂಡಿರಬಹುದು. ಹಾಗೆಂದ ತಕ್ಷಣ, ಕಡಿಮೆ ತೀವ್ರತೆಯ ಅಭಿವ್ಯಕ್ತಿ ಇರುವವರಿಗೆ
ಭಾವನೆಯೇ ಇಲ್ಲವೆಂದೋ ಅಥವಾ ಕಡಿಮೆಯೆಂದೋ ಭಾವಿಸಬಾರದು. ಹಾಗೆಯೇ ಇಬ್ಬರಿಗೂ ಅವರದೇ ಆದ ನಂಬಿಕೆಗಳು, ನಿರೀಕ್ಷೆಗಳು ಮತ್ತು ಕನಸುಗಳು ಇರುತ್ತವೆ ಎನ್ನವುದನ್ನು ನಾವು ಅರಿತುಕೊಳ್ಳಬೇಕು.
ಇನ್ನು, ಪ್ರೀತಿಯಲ್ಲಿ ಸಂಗಾತಿಗೆ ಮೋಸ ಮಾಡುವುದು ಸಹ ಗಂಡು ಮತ್ತು ಹೆಣ್ಣು ಇಬ್ಬರಿಗೂ ಅನ್ವಯವಾಗುತ್ತದೆ. ಹೆಣ್ಣಿರುವುದೇ ಪ್ರೀತಿ ಮಾಡಲು, ಅವಳಿಂದ ಸಂಗಾತಿಗೆ ಯಾವುದೇ ಮೋಸ, ವಂಚನೆ ಆಗುವುದೇ ಇಲ್ಲ, ಗಂಡಸರು ಮಾತ್ರ ಮೋಸ ಮಾಡುತ್ತಾರೆಂದು ಭಾವಿಸುವುದು ತಪ್ಪು. ಹಾಗೆಯೇ, ಗಂಡಸಿಗೆ ಮಾನಸಿಕವಾಗಿ ಹೆಚ್ಚು ನೋವಾಗುವುದಿಲ್ಲ, ನೊಂದುಕೊಳ್ಳುವುದಿಲ್ಲ. ಬೇಗ ಚೇತರಿಸಿಕೊಳ್ಳುತ್ತಾನೆ. ಒಂದು ಹೆಣ್ಣು ಮೋಸ ಮಾಡಿದರೆ ಇನ್ನೊಂದು ಹೆಣ್ಣು ಹುಡುಕಿಕೊಳ್ಳುತ್ತಾರೆನೆಂದು ತಪ್ಪು ಭಾವಿಸಬಾರದು.
ಕೆಲವು ಹುಡುಗರು ಮತ್ತು ಹುಡುಗಿಯರು ಪ್ರೀತಿಸುತ್ತಿರುವ ಸಂಗಾತಿಯನ್ನು ಮೋಸ ಮಾಡುತ್ತಾರೆ. ಇಂತಹ ಮೋಸವನ್ನು ಕಂಡುಹಿಡಿಯುವುದು ಹೇಗೆ? ಮತ್ತು ಪ್ರಾಮಾಣಿಕವಾಗಿ ಪ್ರೀತಿಸುತ್ತಿರುವ ಸಂಗಾತಿಗಳು ಹೇಗೆ ಎಚ್ಚೆತ್ತುಕೊಂಡು ತಮ್ಮನ್ನು ರಕ್ಷಿಸಿಕೊಳ್ಳಬಹುದು? ಈ ಪ್ರಶ್ನೆಗೆ ಉತ್ತರ ಮುಂದಿನ ಸಾಲುಗಳಲ್ಲಿವೆ.
ಪ್ರೀತಿಯಲ್ಲಿ ಮೋಸ, ಲವ್ ಮ್ಯಾನಿಪುಲೇಶನ್
ಇತ್ತೀಚೆಗೆ ಫೇಕ್ ಲವ್, ಸೆಲ್ಫಿಷ್ ಲವ್, ಗ್ರೀಡಿ (ದುರಾಸೆ) ಲವ್ ಅಂತೆಲ್ಲ ಹೇಳುತ್ತಾರೆ. ಈ ಕುರಿತು ತಿಳಿಯಲು ಕೆಳಕಂಡ 4 ವಿಧದ ತಂತ್ರಗಳ (ಮ್ಯಾನಿಪುಲೇಷನ್) ಬಗ್ಗೆ ಅರಿತುಕೊಳ್ಳಬೇಕು. ಪ್ರೀತಿಯಲ್ಲಿ ನಡೆಯುವ ಮೋಸವನ್ನು ಗಾಸ್ ಲೈಟಿಂಗ್, ಬ್ರೆಡ್ ಕ್ರಂಬಿಂಗ್, ಸ್ಟೋನ್ ವಾಲಿಂಗ್, ಲವ್ ಬಾಂಬಿಂಗ್ ಎಂದು ವಿಭಾಗಿಸಿದ್ದಾರೆ. ಇವುಗಳ ಲಕ್ಷಣಗಳೇನು ಎಂದು ತಿಳಿದುಕೊಳ್ಳೋಣ ಬನ್ನಿ:
ಒಬ್ಬ ವ್ಯಕ್ತಿಯು ತನ್ನ ಅನುಕೂಲಕ್ಕೆ ತಕ್ಕಂತೆ ನಡೆದಿರುವ ಸಂಗತಿ, ಸತ್ಯವನ್ನು ಬದಲಿಸುತ್ತಾನೆ. ಇಂಥವರನ್ನೇ ‘ಸಂಬಂಧಗಳ ತಂತ್ರಗಾರರು’ ಎನ್ನುವುದು. ಸದಾ ಎದುರಿಗೆ ಇರುವವರದೇ ತಪ್ಪು ಎನ್ನುವಂತೆ ವರ್ತಿಸುತ್ತಾರೆ. ತಂತ್ರಗಳನ್ನು ಬಳಸಿ ಅಧಿಕಾರ (ಮೇಲುಗೈ) ಅಥವಾ ನಿಯಂತ್ರಣ ಪಡೆಯುಬಹುದು. ಇಂತಹ ವ್ಯಕ್ತಿಯನ್ನು ತಂತ್ರಗಾರನೆಂದು (ಮ್ಯಾನಿಪುಲೇಟರ್) ಎಂದು ಕರೆಯಲಾಗುತ್ತದೆ. ಹೀಗೆ ಮಾಡುವವರು ಪುರುಷರಷ್ಟೇ ಅಲ್ಲ; ಮಹಿಳೆಯರೂ ಆಗಿರಬಹುದು.
ಕೆಲವು ಸಮಯಗಳಲ್ಲಿ ತಾನು ಸಿಕ್ಕಿಹಾಕಿಕೊಳ್ಳಬಾರದೆಂಬ ಉದ್ದೇಶದಿಂದಲೂ ಅಥವಾ ಬೇರೆಯವರನ್ನು ಸಿಕ್ಕಿಹಾಕಿಸಲು ಸಹ ಮ್ಯಾನಿಪುಲೇಟ್ ಮಾಡಬಹುದು.
1) ಗಾಸ್ ಲೈಟಿಂಗ್ (Gas Ligting): ಈ ತಂತ್ರದಲ್ಲಿ ವ್ಯಕ್ತಿಯು ವಾಸ್ತವದಲ್ಲಿರುವ ಸತ್ಯವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಿಸುತ್ತಾನೆ. ನಿಜಾಂಶವನ್ನು ವಿಕೃತಗೊಳಿಸುತ್ತಾನೆ. ತನ್ನದೇ ಆದ ವ್ಯಾಖ್ಯಾನ ನೀಡುತ್ತಾನೆ.
2) ಲವ್ ಬಾಂಬಿಂಗ್ (Love Bombing): ಇಂಥವರು ಮತ್ತೊಬ್ಬ ವ್ಯಕ್ತಿಯ ಮೇಲೆ ಅತಿಯಾದ ಪ್ರೀತಿಯನ್ನು ತೋರಿಸುತ್ತಾರೆ. (ಮಿತಿಮೀರೀದ ಪ್ರೀತಿ, ಪ್ರಶಂಸಿಸುವುದು, ಉಡುಗೊರೆ) ಮತ್ತು ಇದರ ಹಿಂದೆ ಮತ್ತೊಬ್ಬರ ಮೇಲೆ ನಿಯಂತ್ರಣ ಅಥವಾ ಪ್ರಭಾವವನ್ನು ಪಡೆಯುವ ಉದ್ದೇಶವಿರುತ್ತದೆ.
3) ಬ್ರೆಡ್ ಕ್ರಂಬಿಂಗ್ (Bread Crumbing): ಇಲ್ಲಿ ವ್ಯಕ್ತಿಯು ಉದ್ದೇಶಪೂರ್ವಕ ಅಥವಾ ಉದ್ದೇಶರಹಿತವಾಗಿಯೋ ಇನ್ನೊಬ್ಬ ವ್ಯಕ್ತಿಯಲ್ಲಿ ಆಸಕ್ತಿ ಹೊಂದಿ, ಸಂಬಂಧ ಬೆಳೆಸುತ್ತಾನೆ/ಳೆ. ಆದರೆ ಸಂಬಂಧವನ್ನು ಧೃಢೀಕರಿಸುವುದಿಲ್ಲ.
4) ಸ್ಟೋನ್ ವಾಲಿಂಗ್ (Stone Walling): ಇಲ್ಲಿ ವ್ಯಕ್ತಿಯು ತನ್ನ ತಪ್ಪು ಏನು ಎಂದು ಅರಿತುಕೊಂಡು ಉತ್ತರ ಕೊಡದೇ, ಮೌನವಾಗಿ ದೂರ ಸರಿಯುತ್ತಾನೆ/ಳೆ.
ಪ್ರೀತಿಯಲ್ಲಿ ಹೀಗೆ ನಾನಾ ವಿಧದ ತಂತ್ರಗಳನ್ನು ಬಳಸಿ ಸಂಗಾತಿಯನ್ನು ಮೋಸ ಮಾಡುವ ಸಾಧ್ಯತೆ ಉಂಟು. ಹಾಗೆಯೇ, ಪ್ರೀತಿಯಲ್ಲಿ ಅಸ್ಥಿರತೆಯನ್ನು ಕೂಡ ಹೊಂದಿರಬಹುದು. ಹುಡುಗ / ಹುಡುಗಿ ತನ್ನ ಅನುಕೂಲತೆ ಅಥವಾ ಪ್ರತಿಕೂಲ ಮನಸ್ಥಿತಿಯನ್ನು ಮಾತ್ರ ಪರಿಗಣಿಸಿ, ಸಂಗಾತಿಯ ಆದ್ಯತೆ, ಅನುಕೂಲಗಳನ್ನು ನಿರ್ಲಕ್ಷಿಸುತ್ತಾನೆ / ಳೆ. ಸ್ಥಿರವಾಗಿ ಸಂಗಾತಿಯ ಬಳಿ ಎಲ್ಲಾ ಪರಿಸ್ಥಿತಿಗಳಲ್ಲೂ ಇರುವುದಿಲ್ಲ. ಮತ್ತು ಮಾನಸಿಕ ಬೆಂಬಲವನ್ನು ನೀಡುವುದಿಲ್ಲ. ನಿಜವಾಗಿಯೂ ಪ್ರೀತಿಸುವವರು ಸಂಗಾತಿಯ ಆದ್ಯತೆ, ಗುರಿ ಮತ್ತು ಯೋಗಕ್ಷೇಮದ ಕಡೆಗೆ ಗಮನ ಕೊಡುತ್ತಾರೆ. ಪ್ರಾಮಾಣಿಕವಾಗಿ ಪ್ರೀತಿಸದೇ ಇರುವವರು ಸಂಗಾತಿಗೆ ಪ್ರೋತ್ಸಾಹವನ್ನು ನೀಡುವುದಿಲ್ಲ.
ಷರತ್ತುಬದ್ಧ ಪ್ರೀತಿ (conditional love)
ನಿಮ್ಮಿಂದ ಏನನ್ನಾದರೂ ಬಯಸಿ, ಅದು ಸಿಗುವುದಾದರೆ ಮಾತ್ರ ಪ್ರೀತಿ ತೋರಿಸಿವುದು ನಕಲಿ ಪ್ರೀತಿಯ ಲಕ್ಷಣವಾಗಿದೆ. ಮುಕ್ತ ಸಂವಹನದ ಕೊರತೆ: ಸಂಗಾತಿಯು ನೇರ ವಾಗಿ, ಸ್ಪಷ್ಟ ಮತ್ತು ಮುಕ್ತವಾಗಿ ತನ್ನ ಮನಸ್ಥಿತಿಯನ್ನು( ಯೋಜನೆ, ನಿಧಾ೯ರ,ಆಧ್ಯತೆ, ಆಲೋಚನೆಗಳು) ಹಂಚಿಕೊಳ್ಳುವುದಿಲ್ಲ. ಪ್ರಾಮಾಣಿಕ ಮತ್ತು ಮುಕ್ತ ಸಂಭಾಷಣೆಗಳನ್ನು ಮಾಡಿವುದಿಲ್ಲ.
ಹಾಗೆಯೇ, ಹುಡುಗರಿಗೆ ಸಾಮಾನ್ಯವಾಗಿ ಹುಡುಗಿಯರು ಎಂದರೆ ಹೀಗೆಯೇ ಇರಬೇಕೆಂಬ ಅಪೇಕ್ಷಗಳಿರುತ್ತವೆ. ಹಾಗೆಯೇ ಹುಡುಗಿಯರಿಗೂ ಸಹ ಹುಡುಗರು ಹೀಗೆಯೇ ಇರಬೇಕೆಂದು ಅಪೇಕ್ಷಿಸುತ್ತಾರೆ. ಜೊತೆಗೆ, ಪ್ರೀತಿಯ ಬಗ್ಗೆಯೂ ಕೂಡ ಸ್ಪಷ್ಟವಾದ ವ್ಯಾಖ್ಯಾನ ಇಟ್ಟುಕೊಂಡಿರುತ್ತಾರೆ. ಪ್ರೀತಿ ಮತ್ತು ಪ್ರೀತಿಸುತ್ತಿರುವ ವ್ಯಕ್ತಿಯು ತಮ್ಮ ದೃಷ್ಟಿಕೋನದ ಚೌಕಟ್ಟಿನಲ್ಲಿ ಸೇರಬೇಕು. ಇಲ್ಲದಿದ್ದರೆ ಆ ವ್ಯಕ್ತಿಯು ಸರಿಯಿಲ್ಲವೆಂದು ನಿರ್ಧರಿಸಿ ನೊಂದುಕೊಳ್ಳುತ್ತಾರೆ. ಈ ಅಪೇಕ್ಷೆಗಳು ಈಡೇರದಿದ್ದಾಗ ಪ್ರೀತಿಯು ಕಹಿಯಾಗಿ ಬದಲಾಯಿಸುತ್ತದೆ.
ಆದ್ದರಿಂದ ಮೊದಲು ಪ್ರೀತಿಸುತ್ತಿರುವ ಹುಡುಗಿ / ಹುಡುಗನ ಮೌಲ್ಯಗಳು, ನಂಬಿಕೆ ಮತ್ತು ಅಪೇಕ್ಷಗಳನ್ನು ತಿಳಿದುಕೊಳ್ಳುವುದು ಮುಖ್ಯ. ನಂತರ, ಪರಸ್ಪರ ಗೌರವದಿಂದ ಇವುಗಳನ್ನು ಒಪ್ಪಿಕೊಂಡು, ವಿಶ್ವಾಸವನ್ನು ಗಳಿಸಿ, ತಮ್ಮ ಸ್ವಾತಂತ್ರ್ಯವನ್ನು ಇಟ್ಟುಕೊಂಡು ಸಂಗಾತಿಗೂ ಸ್ವಾತಂತ್ರ್ಯವನ್ನು ನೀಡುವುದೇ ನಿಜವಾದ ಪ್ರೀತಿ.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.
