Valentines Day Special: ಪ್ರೀತಿ ಸೃಷ್ಟಿ ಸಲುಹುವ ಅಸೀಮ, ಎಂದಿಗೂ ಬರಿದಾಗದ ಜೀವಸೆಲೆ; ಡಾ ಭಾಗ್ಯಜ್ಯೋತಿ ಕೋಟಿಮಠ ಬರಹ
ಪ್ರೇಮಿಗಳ ದಿನವಾದ ಇಂದು ಜಗದ ಮಾತಾ-ಪಿತೃಗಳಾದ ಶಂಕರ-ಪಾರ್ವತಿಯರ ಅನನ್ಯ ಪ್ರೀತಿಯ, ಅದಮ್ಯ ಚೇತನದ, ಅನ್ಯೋನ್ಯತೆಯ, ಆದರ್ಶ ದಂಪತಿಗಳ ಪ್ರತೀಕತೆಯನ್ನು ನೋಡೋಣ. ಅವರನ್ನು ನಾವು ಅನುಸರಿಸೋಣ

‘ಪ್ರೇಮಿಗಳ ದಿನ’ ಎಂದ ಕೂಡಲೇ, ನಮ್ಮ ಮನದಾಳದಲ್ಲಿ ಪಾಸಿಟಿವ್‌ಗಿಂತ ನೆಗೆಟಿವ್ ಆಲೋಚನೆಯೇ ಸ್ವಲ್ಪ ಜಾಸ್ತಿಯೆನಿಸುವಂತೆ ಬರುತ್ತದೆ. ಆದರೆ ಪ್ರೀತಿ ಎಂಬ ಪದ ತನ್ನದೇ ವಿಶಿಷ್ಟ, ಅನಂತ ಅರ್ಥ ನೀಡುತ್ತದೆ. ನಮ್ಮ ಸೃಷ್ಟಿಯ ಪ್ರಥಮ ಪ್ರೀತಿ ಕಥೆಯೇ ಶಿವ-ಪಾರ್ವತಿಯರ ಪ್ರಣಯದ-ಮದುವೆಯ ಕಥೆ. ಹಿಂಗೆಂದ ಕೂಡಲೇ ಈಗ ತಾನೇ ಪ್ರೌಢಾವಸ್ಥೆಗೆ ಬರುತ್ತಿರುವ ಯುವಕ-ಯುವತಿಯರು ಕೆಲವೊಮ್ಮೆ ಆಕರ್ಷಣೆಗೆ ಪ್ರೀತಿ-ಪ್ರೇಮ ಎಂದು ಹೆಸರಿಡುವರು. ಆದರೆ ಪ್ರೀತಿ ಎಂದರೆ ಅತ್ಯಂತ ಆಳ, ಅಸೀಮ, ಅರ್ಥ ಹೊಂದಿದೆ. ತಾಯಿ-ತಂದೆ-ಮಕ್ಕಳ, ಗುರು-ಶಿಷ್ಯರ, ಸಹೋದರತ್ವದ ಹೀಗೆ ಅನಂತ ಬಾಂಧವ್ಯಗಳಲ್ಲಿ ಪ್ರೀತಿ ನಿರಂತರ ಜೀವಸೆಲೆಯಂತೆ ಹರಿಯುತ್ತಿರುತ್ತದೆ. ಆದರೆ ಪ್ರೀತಿಗೆ ಮುಖ್ಯವಾಗಿ ಗಂಡು-ಹೆಣ್ಣು ಅನ್ನುವುದಕ್ಕಿಂತ ಗಂಡ-ಹೆಂಡತಿ ಎಂದರೆ ಪರಿಪೂರ್ಣ ಅರ್ಥ ನೀಡುವುದು.
ಅದಕ್ಕೆ ನಾವಿಂದು ಪ್ರೇಮಿಗಳ ದಿನದಂದು ಜಗದ ಮಾತಾ-ಪಿತೃಗಳಾದ ಶಂಕರ-ಪಾರ್ವತಿಯರ ಅನನ್ಯ ಪ್ರೀತಿಯ, ಅದಮ್ಯ ಚೇತನದ, ಅನ್ಯೋನ್ಯತೆಯ, ಆದರ್ಶ ದಂಪತಿಗಳ ಪ್ರತೀಕತೆಯನ್ನು ನೋಡೋಣ. ಅವರನ್ನು ನಾವು ಅನುಸರಿಸೋಣ.
’ಅರ್ಧ ನಾರೀಶ್ವರ’ ಎನ್ನುವ ಪರಿಕಲ್ಪನೆ ಹಾಗೂ ಮಹತ್ವ
ನೀವು ಎಂದಾದರು ಕೇಳಿರಬಹುದು, ಅರ್ಧ ಗಂಡಸು ಮತ್ತು ಅರ್ಧ ಹೆಂಗಸು ಆಗಿರುವ ದೇವರನ್ನು, ಆ ದೇವರೇ ’ಅರ್ಧ ನಾರೀಶ್ವರ’ ಎಂದು ಪ್ರಖ್ಯಾತನಾಗಿರುವ ದೇವರು. ಅಂದರೆ ಅರ್ಧ ನಾರಿಯ ರೂಪದಲ್ಲಿ ಕಾಣಿಸಿಕೊಳ್ಳುವ ಈಶ್ವರ. ಹೌದು, ಈಶ್ವರ ಮತ್ತು ಆತನ ಸತಿಯಾದ ಶಕ್ತಿದೇವತೆಯ ಅರ್ಧರ್ಧ ದೇಹಗಳು ಸೇರಿಕೊಂಡು ಒಂದು ಪರಿಪೂರ್ಣ ಮಾನವ ಶರೀರವಾಗಿ ಕಾಣುವ ದೇವರ ಪ್ರತಿರೂಪವೇ ಅರ್ಧ ನಾರೀಶ್ವರ. ಈ ಅರ್ಧ ನಾರೀಶ್ವರ ಹೆಣ್ಣೋ, ಗಂಡೋ ಎಂಬ ಜಿಜ್ಞಾಸೆ ನಮ್ಮಲ್ಲಿ ಮೂಡುವುದು ಸಹಜ.
ಹೌದು! ಈ ಅರ್ಧನಾರೀಶ್ವರನಲ್ಲಿ ಹೆಣ್ಣಿನ ಸ್ತ್ರೀ ಸಹಜ ಶಕ್ತಿಗಳು ಮತ್ತು ಗಂಡಿನ ಆಳ್ತನ ಎರಡೂ ಇರುತ್ತವೆ. ಕೆಲವೊಂದು ಪುರಾಣದ ಪ್ರಕಾರ ಈ ಜಗತ್ತಿನಲ್ಲಿರುವುದೆಲ್ಲವೂ ಅರ್ಧ ನಾರೀಶ್ವರನಿಂದಲೇ ಬಂದಂತಹವು ಮತ್ತು ಅವುಗಳ ಜೀವಿತಾವಧಿ ಮುಗಿದ ನಂತರ ಅವೆಲ್ಲವು ಮತ್ತೆ ಅರ್ಧ ನಾರೀಶ್ವರನ ಬಳಿಗೆ ಹೋಗುತ್ತವೆಯಂತೆ.
ಪುರಾಣಗಳ ಪ್ರಕಾರ ನಮ್ಮ ವಿಶ್ವದಲ್ಲಿ ಎಂದಿಗೂ ನಾಶವಾಗದಿರುವ ಎರಡು ಶಕ್ತಿಗಳು ಇವೆಯಂತೆ. ಒಂದು ಪುರುಷ ಮತ್ತೊಂದು ಪ್ರಕೃತಿ. ಪ್ರಕೃತಿಯು ಮೂರು ಗುಣಗಳನ್ನು ಹೊಂದಿದೆ. ಆದ್ದರಿಂದ ಪುರುಷ ಮತ್ತು ಪ್ರಕೃತಿ ಎಂದಿಗೂ ಸ್ವತಂತ್ರವಾಗಿ ಅಸ್ತಿತ್ವದಲ್ಲಿರುವುದಿಲ್ಲ. ಸೃಷ್ಟಿಯನ್ನು ಮುಂದುವರಿಸುವ ಸಲುವಾಗಿ ಇವೆರಡೂ ಜೊತೆಯಾಗೇ ಸಾಗುತ್ತವೆ. ದೇವಿ ಭಾಗವತ ಪುರಾಣದ ಪ್ರಕಾರ ಪುರುಷನು (ಶಿವ, ಲೌಕಿಕ ರೂಪದಲ್ಲಿ) ಆದಿಶಕ್ತಿಯನ್ನು ಒಲಿಸಿಕೊಳ್ಳಲು ’ಕ್ಲೀಂ’ ಎನ್ನುವ ಬೀಜ ಮಂತ್ರದಿಂದ ಸಾವಿರ ವರ್ಷಗಳ ಕಾಲ ಧ್ಯಾನ ಮಾಡಿದನಂತೆ.
ಅರ್ಧನಾರೀಶ್ವರನ ಮಹತ್ವದ ವಿಚಾರಕ್ಕೆ ಬಂದರೆ, ಅರ್ಧನಾರೀಶ್ವರನು ಲೌಕಿಕ ಸುಖ ಭೋಗಗಳ ಮತ್ತು ವಿಶ್ವದ ಪವಿತ್ರತೆಯ ಸಾಕಾರ ಮೂರ್ತಿಯಾಗಿ ನಮ್ಮ ಮುಂದೆ ಕಾಣಿಸಿಕೊಳ್ಳುತ್ತಾನೆ. ಅರ್ಧನಾರೀಶ್ವರನು ’ಇಬ್ಬರ ಹಿಂದಿರುವ ಪರಿಪೂರ್ಣತೆಯ ಪ್ರತೀಕ’ವಾಗಿ ನಮಗೆ ತೋರುತ್ತದೆ. ಇಲ್ಲಿ ದೇವರು ಹೆಣ್ಣು ಮತ್ತು ಗಂಡು ಎಂಬ ಭೇದಗಳನ್ನು ಮೀರಿ ನಿಂತು ಬಿಡುತ್ತಾನೆ. ಹೀಗೆ ವಿಶ್ವದ ಎಲ್ಲಾ ವ್ಯತ್ಯಾಸಗಳನ್ನು ಏಕೀಕರಣ ಮಾಡುವ ಏಕೈಕ ಶಕ್ತಿಯಾಗಿ ಅರ್ಧನಾರೀಶ್ವರ ಕಾಣಿಸುತ್ತಾನೆ. ಒಟ್ಟಾರೆಯಾಗಿ ಸೃಷ್ಟಿಗೆ ಅಗತ್ಯವಾದ ಎರಡು ವಿಭಿನ್ನ ಮುಖಗಳನ್ನು ಒಂದೇ ದೇಹದಲ್ಲಿ ಅಡಕಗೊಳಿಸಿ, ಒಬ್ಬರನ್ನು ಬಿಟ್ಟು ಮತ್ತೊಬ್ಬರಿಲ್ಲ, ಇವರಿಲ್ಲದೆ ಸೃಷ್ಟಿಯಿಲ್ಲ ಎಂಬ ಸಂದೇಶವನ್ನು ಇಲ್ಲಿ ಸಾರಲಾಗಿದೆ.
ಇದರ ಜೊತೆಗೆ ಸಾಂಪ್ರದಾಯಿಕವಾಗಿ ಹೆಂಡತಿಯು ಗಂಡನ ಎಡಭಾಗದಲ್ಲಿ ಮಾತ್ರ ಏಕೆ ಕೂರಬೇಕು ಎಂಬ ಪ್ರಶ್ನೆಗೂ ಸಹ ಅರ್ಧನಾರೀಶ್ವರ ಉತ್ತರ ನೀಡುತ್ತಾನೆ. ಏಕೆಂದರೆ ಸಂಪ್ರದಾಯದ ರೀತಿ ಪೂಜೆ-ಪುನಸ್ಕಾರಗಳ ಸಂದರ್ಭದಲ್ಲಿ ಹೆಂಡತಿ ಗಂಡನ ಎಡ ಭಾಗದಲ್ಲಿ ಕೂರುತ್ತಾಳೆ. ಅದಕ್ಕಾಗಿಯೇ ಆಕೆಯನ್ನು ವಾಮಾಂಗಿ ಎನ್ನುವುದು. ವಾಮ ಎಂದರೆ ಎಡ ಎಂದರ್ಥ. ನಮ್ಮ ದೇಹದಲ್ಲಿ ಸ್ತ್ರೀ ಗುಣಗಳನ್ನು ಹೊಂದಿರುವ ಹೃದಯವು ನೆಲೆಸಿರುವುದು ಎಡ ಭಾಗದ ಮೆದುಳಿನಲ್ಲಿ. ಇದು ಅರಿವು ಮತ್ತು ಸೃಷ್ಟಿಶೀಲತೆಯಂತಹ ಗುಣಗಳನ್ನು ಒಳಗೊಂಡಿರುತ್ತದೆ. ಇನ್ನೂ ಬಲಭಾಗದ ಮೆದುಳಿನಲ್ಲಿ ಸ್ನಾಯು ಶಕ್ತಿ, ತರ್ಕ, ವೀರತ್ವ ಮತ್ತು ವ್ಯವಸ್ಥಿತ ಆಲೋಚನೆಗಳನ್ನು ಮಾಡುವ ಗುಣಗಳು ಇರುತ್ತವೆ.
(ಬರಹ: ಡಾ ಭಾಗ್ಯಜ್ಯೋತಿ ಕೋಟಿಮಠ)

ವಿಭಾಗ