ಹುಷಾರ್ ಹುಡುಗಿ! ಪ್ರೇಮಿಗಳ ದಿನದಂದು ಗುಲಾಬಿ ಕೊಟ್ಟವರಿಗೆಲ್ಲಾ ಹೂವಿನ ಮನಸ್ಸು ಇರುತ್ತೆ ಅಂತಲ್ಲ; ರೂಪಾ ರಾವ್ ಬರಹ
ರೂಪಾ ರಾವ್ ಬರಹ: ವ್ಯಾಲಂಟೈನ್ಸ್ ಡೇ ದಿನ ಪ್ರಪೋಸ್ ಮಾಡಿದವನಿಗೆ ದೇಹ, ಮನಸ್ಸು, ಹಣ ಒಪ್ಪಿಸಿದವಳ ದುರಂತ ಕಥೆಯಿದು. ಜೀವನದಲ್ಲಿ ಸಾಕಷ್ಟು ನೋವುಂಡ ಆಕೆಯ ವಿನಂತಿಯಂತೆ ಇದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುತ್ತಿದ್ದೇನೆ.

ಪ್ರೇಮಿಗಳ ದಿನದಂದು ಗುಲಾಬಿ ಕೊಟ್ಟೊಡನೆ ನಕ್ಕು ಮುಡಿಗೇರಿಸದಿರು ಹುಡುಗಿ. ಈ ತಿಂಗಳು ಪ್ರೇಮಿಗಳ ತಿಂಗಳು. ಕಿಸ್‌ಡೇ, ಹಗ್ ಡೇ ರೋಸ್ ಡೇ ಅದೂ ಇದೂ. ರೋಸ್‌ಗಳ ಭರಾಟೆ ಜಾಸ್ತಿ. ಅದರ ಖುಷಿಯಲ್ಲಿ ನಲಿದಾಡುವ ಮೊದಲು ಹರೆಯದ ಹುಡುಗಿಯರೆಲ್ಲ ಈ ಕಥೆ ಓದಿ ಬಿಡಿ. ಒಟ್ಟಾರೆ ನಾನು ಹೇಳುವುದು ಇಷ್ಟೇ, ಮೋಡಿ ಮಾಡುವ ಮಾತಿಗೆ ಮರುಳಾಗಬೇಡಿ. ಯಾವುದೇ ಸಂದರ್ಭದಲ್ಲಿಯೂ ಸಾಧಕ-ಬಾಧಕ ಯೋಚಿಸಿಯೇ ಮುಂದಿನ ಹೆಜ್ಜೆ ಇಡಿ.
ಈ ಕಥೆ ಸುಮಾರು ಹತ್ತು ವರ್ಷದ ಹಿಂದಿನದು. ಆ ಹುಡುಗಿ ಆಗಷ್ಟೇ ಪಿಯುಸಿ ಮೆಟ್ಟಿಲು ಹತ್ತಿದ್ದಳು. ಹದಿನಾರರ ಹರೆಯ. ಮುಗ್ಧತೆ ತುಂಬಿದ ಮುದ್ದು ಮುಖ. ಕನಸು ಕಂಗಳ ಹುಡುಗಿ. ದೇವರೆಂದರೆ ಅತೀವ ಭಕ್ತಿ. ತಾಯಿ-ತಂದೆ ಇಬ್ಬರೂ ತಮ್ಮ ಮಗಳ ಓದಿಗೆ, ಭವಿಷ್ಯಕ್ಕೆ ಹಣ-ಆಸ್ತಿ ಪಾಸ್ತಿ ಮಾಡಿರುವುದರಲ್ಲಿ ಬಹಳ ಬ್ಯುಸಿ ಆಗಿದ್ದರಿಂದ ಮಗಳ ಪ್ರಸ್ತುತ ಬದುಕಿನ ಬಗ್ಗೆ ಗಮನ ಹರಿಸಲು, ಕಾಳಜಿ ನೀಡಲು ಪುರುಸೊತ್ತಿರಲಿಲ್ಲ.
ಆ ಹುಡುಗಿಗೆ ಕಾಲೇಜು ಮೆಟ್ಟಿಲು ಹತ್ತಿದ ಕೊಂಚ ದಿನಗಳಲ್ಲಿಯೇ ಇವಳ ಬಗ್ಗೆ ಕಾಳಜಿ ತೋರಿಸುವ ಹುಡುಗನೊಬ್ಬನ ಪರಿಚಯವಾಯಿತು. ಆ ಹುಡುಗ 22 ವರ್ಷದವ. ಇವಳ ಕಾಲೇಜಿನವನಲ್ಲ. ಪಿಯುಸಿಯಲ್ಲಿ ಮೂರ್ನಾಕು ಸಲ ಡುಮ್ಕಿ ಹೊಡೆದು ಅಪ್ಪ-ಅಮ್ಮನ ಕಾಡಿ-ಬೇಡಿ ಅವರ ಹಣದಲ್ಲಿ ಶೋಕಿಯಲ್ಲಿ ಓಡಾಡುತ್ತಿದ್ದವ. ಚಾರ್ಮಿಂಗ್ ನಗು, ಒಂದಷ್ಟು ಜಿಮ್ ಬಾಡಿ. ಆಕರ್ಷಕ ವ್ಯಕ್ತಿತ್ವ.
ಪ್ರಪೋಸ್ ಮಾಡಿಯೇ ಬಿಟ್ಟ ಹುಡುಗ
ಇಂತಹುದೇ ಒಂದು 'ವಾಲೆಂಟೈನ್ಸ್ ಡೇ' ದಿವಸ ಆತ ರೋಸ್ ಹಿಡಿದು ಬಂದು ‘ಐ ಲವ್ ಯು’ ಅಂದ. ಈಕೆ ಆತನ ಪ್ರೀತಿಗೆ, ಪ್ರೇಮಕ್ಕೆ ಕಾಳಜಿಗೆ ಸೋತು ಹೋದಳು. ಮೊದಲ ನಾಲ್ಕೈದು ತಿಂಗಳು ಎಲ್ಲವೂ ಚೆಂದವಿತ್ತು. ಇಬ್ಬರೂ ಜೋಡಿ ಹಕ್ಕಿಗಳಾಗಿ ಹೋದರು. ಅವನಿಲ್ಲದೆ ಬದುಕೇ ಇಲ್ಲ ಎಂಬಷ್ಟು ಹಚ್ಚಿಕೊಂಡು ಬಿಟ್ಟಳು ಹುಡುಗಿ. ಅವ ಹೇಳಿದ್ದನ್ನು ಅದು ಹಣವಾಗಲಿ. ಮನೆಯಿಂದ ತರುವ ಬಂಗಾರವಾಗಲಿ ಅಥವಾ ತನ್ನ ದೇಹವನ್ನಾಗಲಿ ಬೇಕಾದಷ್ಟು ಸಲ ಎಗ್ಗು ಸಿಗ್ಗಿಲ್ಲದೇ ಹಂಚಿಕೊಂಡಳು.
ಮಗಳ ಬದುಕು ಸೂರೆಯಾಗುವುದು ಹತ್ತವರಿಗೆ ಗೊತ್ತಾಗಲೇ ಇಲ್ಲ
ಮನೆಯಲ್ಲಿಟ್ಟ ಹಣ ಖಾಲಿಯಾಗುತ್ತಿರುವ ಸುಳಿವು ಸಿಗುವುದಿರಲಿ, ಹೆತ್ತ ಮಗಳ ಬದುಕು ಸೂರೆ ಆಗುತ್ತಿರುವುದು ಸಹ ಹೆತ್ತವರಿಗೆ ಗೊತ್ತಾಗಲಿಲ್ಲ. ಕ್ರಮೇಣ ಆ ಹುಡುಗನ ವರ್ತನೆ ಬದಲಾಯಿತು. ಆಕೆಯನ್ನು ಅಕ್ಷರಶಃ ಎಟಿಎಂ ಥರ ಮಾಡಿಕೊಂಡಿದ್ದ. ತನಗೆ ಬೇಕು ಎನಿಸಿದಾಗ ಹಾಸಿಗೆಗೆ ಬರುವ ಅಡಿಯಾಳಾಗಿ ಮಾಡಿಕೊಂಡಿದ್ದ. ಅವಳು ಖುಷಿಯಾಗಿದ್ದರೆ ಅವನಿಗೆ ಇಷ್ಟವಾಗುತ್ತಿರಲಿಲ್ಲ. ಅವಳ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸುತ್ತಿದ್ದ. ಅವಳು ಯಾರೊಂದಿಗೂ ಖುಷಿಯಾಗಿ ಮಾತನಾಡುವಂತೆಯೇ ಇರಲಿಲ್ಲ.
ಆತನೊಬ್ಬ ಸ್ಯಾಡಿಸ್ಟ್ ಎಂದು ಅರಿವಾಗುವ ವೇಳೆಗೆ ಈಕೆ ಗರ್ಭಿಣಿ . ಇದೆಲ್ಲಾ ಆಗಿದ್ದು ಕೇವಲ ಆರೇಳು ತಿಂಗಳಲ್ಲಿ. ಅಂದರೆ ಆಕೆಗೆ ಆಗಷ್ಟೇ 17 ವರ್ಷ ತುಂಬಿತ್ತು. ಹುಡುಗಿ ಗಾಬರಿಯಾಗಿಬಿಟ್ಟಳು. (ಗರ್ಭಪಾತದ ಬಗ್ಗೆ) ಎಲ್ಲಿ, ಏನು, ಹೇಗೆ ಎಂದು ಅರಿಯದ ಆಕೆಯನ್ನು ಅವಳ ಪ್ರೇಮಿಯೇ ಮಗು ತೆಗೆಸಲು ಯಾವುದೋ ಆಸ್ಪತ್ರೆಗೆ ಕರೆದುಕೊಂಡು ಹೋದ. ಅಲ್ಲಿ ಅವರ ಜೊತೆಗೆ ಸೇರಿ ಎರಡು ಲಕ್ಷದಷ್ಟು ಹಣ ಹೊಡೆದ.
ಅವಳು ಆ ಹಣವನ್ನು ತನ್ನ ಅಮ್ಮನ ಒಡವೆ ಮಾರಿ ಕೊಟ್ಟಿದ್ದಳು. ಅದಕ್ಕೂ ಹೆಚ್ಚಿನ ಆಘಾತ ನಾನು ಬೇಕಂತಲೇ ನಿನ್ನನ್ನು ಗರ್ಭಿಣಿ ಮಾಡಿದ್ದು, ಎಂದು ಕ್ರೌರ್ಯ ಮೆರೆದ. ಅವಳ ಆ ಸ್ಥಿತಿಯಲ್ಲಿ ಮೃಗದಂತೆ ಅವಳ ದೇಹವನ್ನು ಮತ್ತು ಮನಸ್ಸನ್ನು ಘಾಸಿಗೊಳಿಸಿದ. ತನ್ನನ್ನು ಬಿಟ್ಟು ಬಿಡು ಎಂದು ಕೇಳಿಕೊಂಡಳು. ಆಗ ಅವಳ ಖಾಸಗಿ ವಿಡಿಯೊ ತೋರಿಸಿ ಹಣ ಕೇಳಿದ.
ಮತ್ತಷ್ಟು ತಪ್ಪು ಸಂಬಂಧಗಳ ಮೊರೆ
ಇಷ್ಟುಹೊತ್ತಿಗೆ ಅವಳ ತಾಳ್ಮೆ ಸತ್ತಿತ್ತು. ತಂದೆ–ತಾಯಿಯ ಮುಂದೆ ಈ ಹುಡುಗ ಕೊಡುತ್ತಿರುವ ಹಿಂಸೆಯನ್ನು ಹೇಳಿಕೊಂಡಳು. ತಂದೆ–ತಾಯಿಗೆ ಆಘಾತವಾಯಿತು. ಆದರೂ ಸಾವಾರಿಸಿಕೊಂಡು ಅವನನ್ನು ಬೆದರಿಸಲು ಹೋದರು. ಆತ ಹೆದರಲಿಲ್ಲ. ಬದಲಿಗೆ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಿ ದೊಡ್ಡ ಮೊತ್ತದ ಹಣ ಕೇಳಿದ. ಸುಮಾರು ಇಪ್ಪತ್ತು ಲಕ್ಷಗಳಷ್ಟು ಹಣ ಕೊಟ್ಟು ಅವನಿಂದ ಮಗಳನ್ನು ಬಿಡಿಸಿಕೊಂಡರು.
ಆ ಹುಡುಗಿ ಅವನಿಂದ ಅನುಭವಿಸಿದ ಆ ನರಕಕ್ಕೆ ನಡುಗಿ ನಲುಗಿ ಹೋಗಿದ್ದಳು. ಭಯ, ಹೇವರಿಕೆ, ಶೇಮ್, ಅಪ್ಪ-ಅಮ್ಮನಿಂದ ಉಪೇಕ್ಷಿತಳಾಗುವ ಅಂಜಿಕೆ ಇವುಗಳಿಂದ ತಪ್ಪಿಸಿಕೊಳ್ಳಲು ಆಕೆ ಮತ್ತೆ ಹೊಸಹೊಸ ತಪ್ಪು ಸಂಬಂಧಗಳ ಮೊರೆ ಹೋಗಲಾರಂಭಿಸಿದಳು. (ಒಮ್ಮೆ ಒಂದು ಸಂಬಂಧದಿಂದ ಹೊರಗೆ ಬಂದರೆ ಅಷ್ಟೇ ವೇಗವಾಗಿ ದೇಹ ಹಾಗೂ ಮನಸು ಇನ್ನೊಂದು ಸಂಬಂಧಕ್ಕೆ ಹಾತೊರೆಯುತ್ತಿರುತ್ತದೆ).
ಸ್ಥಿರ ಸಂಬಂಧಕ್ಕೆ ಅಂಜಿಕೆ
ಎಲ್ಲವೂ ಮೋಸ... ಎಲ್ಲದರಲ್ಲೂ ಮೋಸ. ಇದ್ದಕ್ಕಿದ್ದಂತೆ ತನ್ನೆಲ್ಲಾ ಪರಿಸ್ಥಿತಿಗೆ ತಂದೆ–ತಾಯಿ ಕಾರಣ ಎಂದು ಅನಿಸಿ ಅವರನ್ನು ದ್ವೇಷಿಸಲಾರಂಭಿಸಿದಳು. ಅವಳಿಗೆ ಈಗ 27 ವರ್ಷ. ಕುಡಿತ, ಸಿಗರೇಟ್‌ಗೆ ಅಡಿಕ್ಟ್ ಆಗಿದ್ದಾಳೆ. ಯಾವುದೋ ಶಾರ್ಟ್ ಟರ್ಮ್ ಕೋರ್ಸ್ ಮಾಡಿಕೊಂಡು ಕೆಲಸಕ್ಕಾಗಿ ತಂದೆ-ತಾಯಿಯನ್ನು ಬಿಟ್ಟು ಬೇರೆ ದೇಶಕ್ಕೆ ಶಿಫ್ಟ್ ಆಗಿದ್ದಾಳೆ. ಈಗ ಥೆರಪಿಗೆ ಹೋಗುತ್ತಿದ್ದಾಳೆ. ಅವಳ ಬದುಕಿನಲ್ಲೀಗ ಎಲ್ಲವೂ ‘ಒನ್ ನೈಟ್ ಸ್ಟ್ಯಾಂಡ್’. ಸ್ಥಿರ ಸಂಬಂಧಕ್ಕೆ ಅಂಜುತ್ತಾಳೆ. ಮೇಲಿನ ಕಥೆಯನ್ನು ಹಂಚಿಕೊಳ್ಳಲು ಅವಳೇ ಹೇಳಿದ್ದು. ಜೊತೆಗೆ ಅವಳ ಮಾತುಗಳನ್ನೂ ಸಹ.
ಪ್ರೇಮದ ಸೋಗಿನಲ್ಲಿರಬಹುದು ಕ್ರೌರ್ಯ: ಹೆಣ್ಮಕ್ಕಳಿಗೆ ಇರಬೇಕು ಎಚ್ಚರ
ಹದಿಹರೆಯವೇ ಹಾಗೆ, ಕಣ್ಣಿಗೆ ಎದುರಾದವರನ್ನೆಲ್ಲಾ ಪ್ರೇಮಿ ಎಂದೆನಿಸುವ ಮನಸು. ಆದರೆ ಎದುರಿನ ಜನರು ಕೇವಲ ಕೇವಲ ಪ್ರೇಮ, ಪ್ರೀತಿ, ಕಾಮ, ಮೋಹ ಮಾತ್ರ ತುಂಬಿರುವವರಲ್ಲ. ಅದರಲ್ಲಿ ಕ್ರೌರ್ಯವಿದೆ, ವಿಕೃತ ಮನಸ್ಥಿತಿ ಇದೆ, ಮುಗ್ಧ ಜೀವಿಗಳಿಗೆ ಹಿಂಸೆ ಕೊಟ್ಟ ಕಣ್ಣೀರನ್ನು ನೋಡಿ ನಗುವ ನರರೂಪಿ ರಾಕ್ಷಸರಿದ್ದಾರೆ. ಕರುಣೆಯೇ ಇರದೆ ಮೈಮೇಲೆ ಎರಗುವ ಹಿಂಸಾಪಶುಗಳಿದ್ದಾರೆ.
ಕೈಯಲ್ಲೊಂದು ಗುಲಾಬಿ ಇಟ್ಟುಕೊಂವರ ಮನಸ್ಸಿನ ಇನ್ನೊಂದು ಬದಿಯನ್ನೂ ಯೋಚಿಸಬೇಕು. ಅಲ್ಲಿ ಮುಳ್ಳುಗಳಿಂದ ಮೈಮನಸನ್ನು ಚುಚ್ಚುವ ನಾರ್ಸಿಸಿಸ್ಟಿಕ್ (ಹಿಂಸಾ) ಗುಣದವರಿದ್ದಾರೆ. ಚಾರ್ಮ್ ಆಗಿದ್ದಾರೆಂದು ಹಿಂದೆ ಹೋದರೆ ನಿಮ್ಮ ಚರ್ಮವನ್ನು ಸಿಗರೇಟು ಸುಡುವ ಆಶ್ ಟ್ರೇ (ಬೂದಿ ಭರಣಿ) ರೀತಿ ಬಳಸಿಕೊಳ್ಳುವ ರಾಕ್ಷಸರು ಇರುತ್ತಾರೆ.
ಪ್ರೀತಿ-ಪ್ರೇಮಕ್ಕಿಂತ ಬದುಕು ಮುಖ್ಯ
ದಯವಿಟ್ಟು ಎಚ್ಚರವಾಗಿರಿ. ಪ್ರೀತಿ–ಪ್ರೇಮಕ್ಕಿಂತ ಜೀವಂತ ಬದುಕು ಮುಖ್ಯ. ಹದಿಹರೆಯಕ್ಕೆ ಕಾಲಿಟ್ಟ ಕೂಡಲೇ ಸುತ್ತಲಿನ ಗೆಳೆಯ-ಗೆಳತಿಯರ ಪ್ರೇಮ ಪ್ರಪಂಚವನ್ನು ನೋಡಿ ಮರುಳಾಗಬೇಡಿ. ಈ ವಯಸ್ಸು ಪ್ರೀತಿ–ಪ್ರೇಮ, ಕಾಮ, ಗರ್ಭ, ಗರ್ಭಪಾತಕ್ಕೆಂದು ಇರುವುದಲ್ಲ. ಯಾವನೋ ಬಂದು ‘ಐ ಲವ್ ಯು’ ಎಂದ ಕೂಡಲೇ ಮೈಮನ ಒಪ್ಪಿಸಿ ಕೂರಬೇಡಿ. ತಾಳ್ಮೆ ಇರಲಿ. ಯಾರು ಸರಿ, ಯಾರು ತಪ್ಪು ಎಂದು ತಿಳಿಯುವ ವಯಸ್ಸೂ ಅದಲ್ಲ. ಅಥವಾ ಆ ಕ್ಷಣಕ್ಕೆ ಅಂಥ ವಿವೇಚನೆಯ ಮನಸ್ಸೂ ಇರುವುದಿಲ್ಲ.
ಪ್ರೀತಿ–ಪ್ರೇಮದ ವಿನಂತಿಗೆ ಮಾರು ಹೋಗಬೇಡಿ. ಅಪ್ಪ-ಅಮ್ಮನ ಬಳಿ ಅಥವಾ ಆತ್ಮೀಯ ಹಿರಿಯರ ಬಳಿ ಮಾತಾಡಿ, ವಿಷಯ ತಿಳಿಸಿ. ಓದಿಗೆಂದು ನಿಮ್ಮನ್ನು ನಂಬಿ ನಿಮ್ಮನ್ನು ಕಾಲೇಜಿಗೋ ಶಾಲೆಗೋ ಕಳಿಸಿರುವ ತಂದೆ ತಾಯಿ ನಿಮ್ಮ ನಿಸ್ತೇಜ ಬದುಕನ್ನು ಹೇಗೆ ನೋಡಿಯಾರು? ಅವರಿಗೋಸ್ಕರ ಅಲ್ಲವಾದರೂ ನಿಮ್ಮ ಬದುಕಿನ ನೆಮ್ಮದಿಗಾಗಿಯಾದರೂ ಅವಸರ ಬೇಡ. ಸಾವಧಾನವಿರಲಿ.
ಗುಲಾಬಿ ಕೊಟ್ಟವರೆಲ್ಲಾ ಗುಲಾಬಿಯ ಮನಸೇ ಹೊಂದಿರಬೇಕಿಲ್ಲ. ಮುಳ್ಳುಗಳ ಜಾಲವೇ ಇದ್ದೀತು ಹುಷಾರು.
ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990

ವಿಭಾಗ